ದಂತೇವಾಡ (ಜೂನ್ 09); ಆದಿವಾಸಿ ಯುವತಿಯ ಮೇಲೆ ಮೃಗೀಯ ಅತ್ಯಾಚಾರ ನಡೆಸಿ ಕೊಂದು, ನಂತರ ಮಾವೋವಾದಿಯಾಗಿದ್ದ ಯುವತಿ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾಳೆ ಎಂದು ಭದ್ರತಾ ಪಡೆಗಳು ಘೋಷಿಸಿದ್ದಾರೆ ಎಂದು ಆರೋಪಿಸ ಲಾಗಿದೆ. ಛತ್ತೀಸಗಡದ ಬಿಜಾಪುರ ಜಿಲ್ಲೆಯ ನೀರಂ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಬಸ್ತರ್ ಪ್ರದೇಶದಲ್ಲಿ ಇಂತಹ ಘಟನೆಗಳು ಹೊಸ ಪ್ರಕರಣವಲ್ಲ ಎನ್ನಲಾಗಿದೆ. ಈ ಹಿಂದೆ ಬಿಜೆಪಿಯ ಹಿಂಸಾತ್ಮಕ ಆಡಳಿತದಿಂದ ಮುಕ್ತವಾಗಲು ರಾಜ್ಯದ ಜನಸಾಮಾನ್ಯರು ಭಾರಿ ಬಹುಮತದಿಂದ ಕಾಂಗ್ರೆಸ್ ಅನ್ನು ಅಧಿಕಾರ ನೀಡಿದ್ದಾರೆ. ಆದರೆ ಆಡಳಿತ ಪಕ್ಷ ಕಾಂಗ್ರೆಸ್ ನೀಡಿದ ರಾಜಕೀಯ ಭರವಸೆಗಳನ್ನು ಅದರ ನಾಯಕರು ಈಗ ಮರೆತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇ 30ರ ರಾತ್ರಿ 11- 12ರ ನಡುವೆ, 24 ವರ್ಷದ ಆದಿವಾಸಿ ಯುವತಿ ಪೈಕೆ ವೆಕ್ಕೊ, ತಾಯಿ ಸುಕ್ಕಿ ವೆಕ್ಕೊ ಸೇರಿದಂತೆ ಇನ್ನೊಬ್ಬರ ಕುಟುಂದ ಸದಸ್ಯರ ಜೊತೆ ತಮ್ಮ ಮನೆಯ ಅಂಗಳದಲ್ಲಿ ಮಲಗಿದ್ದರು. ಮನೆ ಸುತ್ತುವರೆದ ಜಿಲ್ಲಾ ಮೀಸಲು ಕಾವಲುಗಾರ ಪಡೆಯ ಸಿಬ್ಬಂದಿ ಅಂಗಳಕ್ಕೆ ಪ್ರವೇಶಿಸಿ ಪೈಕೆ ಮೇಲೆ ಹಲ್ಲೆ ನಡೆಸಿದ್ದಾರೆ. ಆಕೆಯ ರಕ್ಷಣೆಗೆ ಹೋದ ಕುಟುಂಬ ಸದಸ್ಯರನ್ನು ಭೀಕರವಾಗಿ ಥಳಿಸಲಾಗಿತು. ನಂತರ ಯುವತಿಯನ್ನು ಸಿಬ್ಬಂದಿ ಕಾಡಿಗೆ ಎಳೆದೊಯ್ದಿದ್ದಾರೆ.
ಡಿಜಿಆರ್ ಸದಸ್ಯರು ರಾಜ್ಯ ಭದ್ರತಾ ಪಡೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದ ರಿಂದ, ಪೈಕೆ ಅವರನ್ನು ಬಂಧಿಸಿರಬಹುದು ಎಂದು ಭಾವಿಸಿದ ಆಕೆಯ ಪೋಷಕರು ಮತ್ತು ನೆರೆಹೊರೆಯವರು ಮೇ 31 ರಂದು ದಂತೇವಾಡ ಜೈಲಿಗೆ ಹೋಗಿದ್ದಾರೆ. ನಂತರ ನೆಲಾಸ್ನರ್ ಪೊಲೀಸ್ ಠಾಣೆಯಲ್ಲಿ ಮಾವೋವಾದಿ ಎಂಬ ಕಾರಣಕ್ಕೆ ಪೈಕೆ ಅವರನ್ನು ‘ಎನ್‌ಕೌಂಟರ್’ನಲ್ಲಿ ಕೊಲ್ಲಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿ ಪೈಕೆ ಅವರ ಮೃತ ದೇಹವನ್ನು ನೋಡಿದ ಪೋಷಕರು ಮತ್ತು ಸಂಬಂಧಿಕರು, ಆಕೆಯ ಮೇಲೆ ಅತ್ಯಾಚಾರ ನಡೆಸಿ, ಡಿಜಿಆರ್ ಸಿಬ್ಬಂದಿ ಆಕೆಯ ದೇಹವನ್ನು ತೀವ್ರವಾಗಿ ವಿರೂಪಗೊಳಿಸಿದ್ದಾರೆ. ಸಂತ್ರಸ್ತೆಯ ಪೋಷಕರು ಮತ್ತು ಪ್ರದೇಶದ ಇತರ ಸ್ಥಳೀಯ ಆದಿವಾಸಿಗಳು ಪೈಕೆ ಯಾವುದೇ ಮಾವೋವಾದಿ ಬಣಕ್ಕೆ ಸೇರಿಲ್ಲ ಮತ್ತು ಆಕೆಯ ಹತ್ಯೆಯನ್ನು ಎನ್‌ಕೌಂಟರ್ ಎಂದು ತಪ್ಪಾಗಿ ನಿರೂಪಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ ಎಂದಿರುವ ಸ್ಥಳೀಯ ಗುಂಪು ನ್ಯಾಯಕ್ಕಾಗಿ ಒತ್ತಾಯಿಸುತ್ತಿದೆ. ಐಪಿಸಿಯ ಸೆಕ್ಷನ್ 302 (ಕೊಲೆ), 316 (ಅತ್ಯಾಚಾರ) ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿ ಭದ್ರತಾ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿದೆ.
ಜಿಲ್ಲಾ ಮೀಸಲು ಕಾವಲುಗಾರರು ಅಂದರೆ ಡಿಜಿಆರ್ ಎಂಬುದು ಒಂದು ಮಿಲಿಟಂಟ್ ಗುಂಪು, ಆದಿವಾಸಿಗಳ ವಿರುದ್ಧ ಆದಿವಾಸಿಗಳನ್ನು ಎತ್ತಿ ಕಟ್ಟಲು ಕಾಂಗ್ರೆಸ್ ಆಡಳಿತ ಮಾಡಿರುವ ಸೃಷ್ಟಿ ಇದಾಗಿದೆ. ಇದು ಶರಣಾದ ಮಾವೋವಾದಿಗಳು ಮತ್ತು ಹಳ್ಳಿಗಳ ಮಾವೋವಾದಿ ವಿರೋಧಿಗಳನ್ನು ಒಳಗೊಂಡಿದೆ.
ಇದನ್ನೂ ಓದಿ: Trip to Mars: ಮಂಗಳ ಗ್ರಹಕ್ಕೆ ಒಂದು ರೌಂಡ್ ಹೋಗಿ ಬರೋಕೆ ಎಷ್ಟು ಟೈಂ ಬೇಕಾಗುತ್ತೆ?
ವಾಸ್ತವವಾಗಿ, ಡಿಜಿಆರ್ ತಂಡವನ್ನು ಬಿಜೆಪಿಯ ಆಳ್ವಿಕೆಯಲ್ಲಿನ ಸಾಲ್ವಾ ಜುಡಮ್‌ಗೆ ಹೋಲಿಸಲಾಗಿದೆ. ಡಿಜಿಆರ್ ಸದಸ್ಯರು ಬಹುತೇಕ ಆದಿವಾಸಿಗಳೇ ಆಗಿದ್ದಾರೆ. ಮೃತ ಸಂತ್ರಸ್ಥ ಯುವತಿಯ ಸಾವಿಗೆ ನ್ಯಾಯ ಬೇಕು ಎಂದು ಸ್ಥಳೀಯ ಆದಿವಾಸಿಗಳು ಪ್ರತಿಭಟನೆ ನಡೆಸಿ, ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ