ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ದಲಿತ ಯುವತಿ ಇಂದು ಸಾವು

ಏಮ್ಸ್ ಆಸ್ಪತ್ರೆ

ಏಮ್ಸ್ ಆಸ್ಪತ್ರೆ

ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ನಾಲ್ವರು ವ್ಯಕ್ತಿಗಳಿಂದ ಗ್ಯಾಂಗ್ ರೇಪ್​ಗೊಂಡಿದ್ದ ದಲಿತ ಯುವತಿ ಇಂದು ಸಾವನ್ನಪ್ಪಿದ್ದಾಳೆ. ಅತ್ಯಾಚಾರದಿಂದಾಗಿ ನಾಲಗೆ ಕತ್ತರಿಸಿಕೊಂಡು, ಕೈ ಕಾಲು ಸ್ವಾಧೀನ ಕಳೆದುಕೊಂಡಿದ್ದ ಈ ಯವತಿ ಜೀವನ್ಮರಣ ಹೋರಾಟದಲ್ಲಿ ಸೋಲುಂಡಿದ್ದಾಳೆ.

  • News18
  • 4-MIN READ
  • Last Updated :
  • Share this:

ನವದೆಹಲಿ(ಸೆ. 29): ಎರಡು ವಾರಗಳ ಹಿಂದೆ ಉತ್ತರ ಪ್ರದೇಶದ ಹಾಥ್ರಸ್ ಜಿಲ್ಲೆಯಲ್ಲಿ ನಾಲ್ವರು ದುಷ್ಕರ್ಮಿಗಳಿಂದ ಗ್ಯಾಂಗ್ ರೇಪ್ ಆಗಿದ್ದ 19 ವರ್ಷದ ದಲಿತ ಯುವತಿ ಇಂದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಹಲವು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದ ಈ ಯುವತಿ ಇಂದು ಬೆಳಗ್ಗೆ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು. ಜವಾಹರಲಾಲ್ ನೆಹರೂ ಮೆಡಿಕಲ್ ಆಸ್ಪತ್ರೆಯಿಂದ ನಿನ್ನೆಯಷ್ಟೇ ಈಕೆಯನ್ನು ಏಮ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ, ಇಲ್ಲೂ ಆಕೆಯ ಆರೋಗ್ಯ ಸುಧಾರಣೆ ಕಾಣಲಿಲ್ಲ.


ಹಾಥ್​ರಸ್ ಜಿಲ್ಲೆ ಈ ಯುವತಿ ಸೆಪ್ಟೆಂಬರ್ 14ರಂದು ತನ್ನ ತಾಯಿ ಜೊತೆ ಹೊಲಕ್ಕೆ ಹೋಗಿದ್ದಳು. ಆದರೆ, ದಿಢೀರನೇ ನಾಪತ್ತೆಯಾಗಿದ್ದಳು. ಹುಡುಕಾಡಿದಾಗ ಈಕೆ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ನಾಲ್ವರು ದುರುಳರು ಈಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಸರಿಯಾಗಿ ಸಹಕರಿಸಲಿಲ್ಲವೆಂದು ಈಕೆಯನ್ನು ಕತ್ತು ಹಿಸುಕಿ ಕೊಲ್ಲಲೂ ಯತ್ನಿಸಿದ್ದರು. ಈ ನರಳಾಟದಲ್ಲಿ ಆಕೆ ತನ್ನ ನಾಲಗೆಯನ್ನೇ ಹಲ್ಲಿನಿಂದ ಕಚ್ಚಿಕೊಂಡು ಗಂಭೀರ ಗಾಯ ಮಾಡಿಕೊಂಡಿದ್ದಳು. ನಂತರ ಈಕೆಯನ್ನು ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಈಕೆಯ ಎರಡೂ ಕಾಲುಗಳು ನಿಷ್ಕ್ರಿಯಗೊಂಡಿದ್ದವು. ಈಕೆಯ ಕೈಗಳೂ ಸ್ವಲ್ಪಮಟ್ಟಿಗೆ ಸ್ವಾಧೀನ ಕಳೆದುಕೊಂಡಿದ್ದವು. ಈಕೆಯನ್ನು ವೆಂಟಿಲೇಟರ್​ನಲ್ಲಿಟ್ಟು ಬದುಕಿಸುವ ಪ್ರಯತ್ನಗಳು ನಡೆದಿದ್ದವು. ಆದರೆ ಅಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ನಿನ್ನೆ ಸೋಮವಾರ ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆದುತರಲಾಗಿತ್ತು. ಆದರೆ, ಇಲ್ಲಿಯೂ ಆರೋಗ್ಯ ಸುಧಾರಣೆ ಕಾಣದೆ ಇಂದು ಇಹಲೋಕ ತ್ಯಜಿಸಿದ್ದಾಳೆ.


ಇದನ್ನೂ ಓದಿ: ಹೆಂಡತಿ ಮೇಲೆ ಅಮಾನುಷ ಹಲ್ಲೆ ಮಾಡಿದ ಎಡಿಜಿಪಿ; ವಿಡಿಯೋ ವೈರಲ್


ಈಕೆಯ ಮೇಲೆ ಅತ್ಯಾಚಾರ ಎಸಗಿದ ನಾಲ್ವರು ಆರೋಪಿಗಳನ್ನ ಸಂದೀಪ್, ರಾಮು, ಲವಕುಶ್ ಮತ್ತು ರವಿ ಎಂದು ಗುರುತಿಸಲಾಗಿದೆ. ಪೊಲೀಸರು ಈ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಇವರ ವಿರುದ್ಧ ಐಪಿಸಿ ಸೆಕ್ಷನ್ 376ಡಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶೀಘ್ರ ವಿಚಾರಣೆ ನಡೆಸುವಂತೆ ಕೋರ್ಟ್​​ನಲ್ಲಿ ಮನವಿ ಮಾಡಲಾಗಿದೆ.


ಇದೇ ವೇಳೆ, ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರು ಈ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನ ರಕ್ಷಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ಧಾರೆ. ದೆಹಲಿ ಸರ್ಕಾರದ ಸಚಿವ ರಾಜೇಂದ್ರ ಪಾಲ್ ಗೌತಮ್ ಹಾಗೂ ಆಮ್ ಆದ್ಮಿ ಮುಖಂಡ ಸೌರಭ್ ಭಾರದ್ವಜ್ ಅವರು ಉತ್ತರ ಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಉತ್ತುಂಗದಲ್ಲಿವೆ ಎಂದು ಟೀಕಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ದಲಿತ ಮತ್ತು ಬ್ರಾಹ್ಮಣ ಸಮುದಾಯದವರ ವಿರುದ್ಧ ಅಪರಾಧ ಹೆಚ್ಚುತ್ತಿವೆ. ಈ ಸಮುದಾಯಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಠಾಕೂರ್ ಸಮುದಾಯದವರಿಗೆ ಮಾತ್ರ ಮುಖ್ಯಮಂತ್ರಿಗಳು ಪ್ರಾಶಸ್ತ್ಯ ನೀಡುತ್ತಿದ್ದಾರೆ ಎಂದು ಭಾರದ್ವಾಜ್ ಆಪಾದನೆ ಮಾಡಿದ್ಧಾರೆ.


ಇದನ್ನೂ ಓದಿ: Sabarimala: ನವೆಂಬರ್ 16ರಿಂದ ಶಬರಿಮಲೆ ಯಾತ್ರೆ ಆರಂಭ; ಹೊಸ ನಿಯಮಗಳೇನು? ಇಲ್ಲಿದೆ ಮಾಹಿತಿ


ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲೇ ಅತಿ ಹೆಚ್ಚು ಜಾತಿ ಸಂಬಂಧಿತ ಅಪರಾಧ ಪ್ರಕರಣಗಳು ನಡೆದಿವೆ ಎಂದು ಇತ್ತೀಚಿನ ಸಮೀಕ್ಷೆ ಹೇಳಿದೆ. ಇಂಥ ಪ್ರಕರಣಗಳನ್ನ ನಿಗ್ರಹಿಸಲು ಸರ್ಕಾರ ವಿಶೇಷ ಕ್ರಮಗಳನ್ನ ಕೈಗೊಳ್ಳಬೇಕು ಎಂದು ರಾಜೇಂದ್ರ ಪಾಲ್ ಗೌತಮ್ ಒತ್ತಾಯಿಸಿದ್ಧಾರೆ.

First published: