ಹೈದ್ರಾಬಾದ್ (ಡಿ. 24): ದಲಿತ ಯುವತಿಯನ್ನು ಆಕೆಯ ಪ್ರಿಯಕರನೇ ದಾರುಣವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. ಸ್ನೇಹಲತಾ ಸಾವನ್ನಪ್ಪಿದ ಯುವತಿ. ಧರ್ಮವರಂನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಗುತ್ತಿಗೆ ನೌಕರರಾಗಿ ಈಕೆ ಕಾರ್ಯನಿರ್ವಹಿಸುತ್ತಿದ್ದರು. ಬೆಳಗ್ಗೆ ಪ್ರತಿನಿತ್ಯದಂತೆ ಕಚೇರಿಗೆ ಹೊರಟ ಸ್ನೇಹಲತಾ ಸಂಜೆ ಮನೆಗೆ ಮರಳಿರಲಿಲ್ಲ. ಆಕೆ ಫೋನ್ ಕೂಡ ಸ್ವೀಚ್ ಆಫ್ ಬರುತ್ತಿತ್ತು. ಇದರಿಂದ ಗಾಬರಿಗೊಂಡ ಆಕೆಯ ಪೋಷಕರು ಅನಂತರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಬುಧವಾರ ಡಿ. 23ರಂದು ಆಕೆ ಶವವಾಗಿ ಪತ್ತೆಯಾಗಿದ್ದಾಳೆ. ಸ್ನೇಹಲತಾ ಹತ್ಯೆಗೆ ಆಕೆಯ ಗೆಳೆಯರಾದ ರಾಜೇಶ್ ಮತ್ತು ಕಾರ್ತಿಕ್ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ರಾಜೇಶ್ ಪ್ರೀತಿಯ ನೆಪದಲ್ಲಿ ಸ್ನೇಹಲತಾಗೆ ಕಿರುಕುಳ ನೀಡುತ್ತಿದ್ದ ಎಂದು ಕೂಡ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಮಂಗಳವಾರ ಸಂಜೆ ಕಚೇರಿ ಮುಗಿದ ಬಳಿಕ ಸ್ನೇಹಲತಾಳನ್ನು ರಾಜೇಶ್ ಧರ್ಮವರಂನ ಬಲನಪಲ್ಲಿ ಬಳಿಯ ಹೊಲಕ್ಕೆ ಕರೆದೊಯ್ದು, ಗಂಟಲು ಸೀಳಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಹತ್ಯೆ ಬಳಿಕ ಸಾಕ್ಷ್ಯ ಮರೆ ಮಾಚಲು ಆಕೆಯ ದೇಹ ಹಾಗೂ ಆಕೆಯ ಬಳಿಯಿದ್ದ ಕೆಲ ಬ್ಯಾಂಕ್ ಪೇಪರ್ಗಳನ್ನು ಸುಟ್ಟಿಹಾಕಿದ್ದಾನೆ. ಈ ಹತ್ಯೆಯಲ್ಲಿ ಆಕೆ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಸಾಕ್ಷ್ಯ ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.
ಈ ಹತ್ಯೆ ಬಳಿಕ ಮನೆಗೆ ತೆರಳಿದ ರಾಜೇಶ್ ತನ್ನ ಸ್ನೇಹಿತ ಕಾರ್ತಿಕ್ನೊಂದಿಗೆ ಕುಡಿದು ಪಾರ್ಟಿ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಪ್ರಕರಣ ಕುರಿತು ದೂರು ದಾಖಲಿಸಿಕೊಂಡಿದ್ದು, ತನಿಖೆ ಶುರುಮಾಡಲಾಗಿದೆ.
ಇದನ್ನು ಓದಿ: ವೈಕುಂಠ ಏಕಾದಶಿ ಸಂಭ್ರಮ: ಇದೇ ಮೊದಲ ಬಾರಿ 10 ದಿನ ವೈಕುಂಠ ದ್ವಾರ ದರ್ಶನಕ್ಕೆ ಅವಕಾಶ
ಆ್ಯಸಿಡ್ ದಾಳಿ:
ಇದೇ ವೇಳೆ ತೆಲಂಗಾಣದ ಜಗಿಟಿಯಲ್ ಜಿಲ್ಲೆಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ. ಇಲ್ಲಿನ ಇಬ್ರಾಹಿಂ ಪಟ್ಟಣಂನ ತಿಮ್ಮಪ್ಪೂರು ತಾಂಡಾದಲ್ಲಿ ಈ ಘಟನೆ ನಡೆದಿದೆ. ಭೂಕ್ಯ ಸ್ವಾತಿ ಸಂತ್ರಸ್ತ ಮಹಿಳೆ. ಈಕೆ ಐದು ವರ್ಷಗಳ ಹಿಂದೆ ರವಿ ಎಂಬಾಂತನನ್ನು ಮದುವೆಯಾಗಿದ್ದಳು. ಕಳೆದ ಆರು ತಿಂಗಳ ಹಿಂದೆ ರವಿ ಸಾವನ್ನಪ್ಪಿದ್ದ. ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ ಸ್ವಾತಿ ಇತ್ತೀಚೆಗೆ ತಿಮ್ಮಾಪುರಕ್ಕೆ ಭೇಟಿ ನೀಡಿದ್ದಳು. ಬುಧವಾರ ಮೆಟ್ಟಪಳ್ಳಿಯಲ್ಲಿ ಕೆಲಸಕ್ಕಾಗಿ ಹೋಗುತ್ತಿದ್ದ ಸಂದರ್ಭದಲ್ಲಿ ಮೂವರು ಅಪರಿಚಿತರು ಈ ದುಷ್ಕೃತ್ಯ ನಡೆಸಿದ್ದಾರೆ. ಇದರಿಂದ ಸ್ವಾತಿ ಮುಖದ ಬಲಭಾಗ ತೀವ್ರಗಾಯಗಳಿಂದ ಸುಟ್ಟಿದೆ.
ತಕ್ಷಣಕ್ಕೆ ಸ್ಥಳೀಯರು ಆಕೆಯ ಸಹಾಯಕ್ಕೆ ಆಗಮಿಸಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ