ಉತ್ತರಪ್ರದೇಶದಲ್ಲಿ ಮತ್ತೊಂದು ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ; ಹಣೆಗೆ ಗನ್ ಇಟ್ಟು ಹೇಯ ಕೃತ್ಯ!
ಉತ್ತರಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ದಲಿತ ಮಹಿಳೆಯೊಬ್ಬರನ್ನು ಮಾಜಿ ಗ್ರಾಮದ ಮುಖ್ಯಸ್ಥ ಸೇರಿದಂತೆ ಇಬ್ಬರು ವ್ಯಕ್ತಿಗಳು ಗನ್ ಪಾಯಿಂಟ್ನಲ್ಲಿ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಉತ್ತರಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉತ್ತರಪ್ರದೇಶದಲ್ಲಿ ಸಾಲು ಸಾಲು ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿದ್ದು, ಈ ಅತ್ಯಾಚಾರದ ಕ್ರೌರ್ಯತೆಗೆ ಇಡೀ ದೇಶವೇ ಬೆಚ್ಚಿಬೀಳುವಂತಾಗಿದೆ. ಇತ್ತೀಚೆಗೆ ಹತ್ರಾಸ್ ಎಂಬಲ್ಲಿ ದಲಿತ ಯುವತಿಯನ್ನು ಕೆಲವು ಮೇಲ್ಜಾತಿಯ ಜನ ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು. ಇದಾದ ಒಂದೇ ವಾರಕ್ಕೆ ಝಾನ್ಸಿ ಎಂಬಲ್ಲಿ ಕಾಲೇಜು ಆವರಣದಲ್ಲೇ ಶಾಲಾ ಬಾಲಕಿಯನ್ನು ಅತ್ಯಾಚಾರ ಮಾಡಲಾಗಿತ್ತು. ಈ ಎರಡೂ ಪ್ರಕರಣಗಳು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದ್ದವು. ಭಾರೀ ಜನಾಕ್ರೋಶಕ್ಕೂ ಕಾರಣವಾಗಿತ್ತು. ಆದರೆ, ಈ ಪ್ರಕರಣಗಳು ಇನ್ನೂ ತನಿಖೆಯ ಹಂತದಲ್ಲಿರುವಾಗಲೇ ಉತ್ತರಪ್ರದೇಶದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ದಲಿತ ಮಹಿಳೆಯಯೊಬ್ಬರ ಹಣೆಗೆ ಗನ್ ಇಟ್ಟು ಗನ್ ಪಾಯಿಂಟ್ನಲ್ಲಿ ಹೆದರಿಸಿ ಅತ್ಯಾಚಾರವೆಸಗಲಾಗಿದೆ ಎಂದು ಪೊಲೀಸ್ ವರದಿಗಳು ಹೇಳುತ್ತಿವೆ.
ಉತ್ತರಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ದಲಿತ ಮಹಿಳೆಯೊಬ್ಬರನ್ನು ಮಾಜಿ ಗ್ರಾಮದ ಮುಖ್ಯಸ್ಥ ಸೇರಿದಂತೆ ಇಬ್ಬರು ವ್ಯಕ್ತಿಗಳು ಗನ್ ಪಾಯಿಂಟ್ನಲ್ಲಿ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. "ಈ ಘಟನೆ ಒಂದು ವಾರದ ಹಿಂದೆಯೇ ನಡೆದಿತ್ತು, ಆದರೆ ಭಯದಿಂದಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿರಲಿಲ್ಲ. ಭಾನುವಾರ ಕೊನೆಗೂ ಸಾಮೂಹಿಕ ಅತ್ಯಾಚಾರದ ಬಗ್ಗೆ ದೂರು ದಾಖಲಾಗಿದೆ" ಎಂದು ಪೊಲೀಸ್ ವರಿಷ್ಠಾಧಿಕಾರಿ (ಕಾನ್ಪುರ್ ದೇಹತ್) ಕೇಶವ್ ಕುಮಾರ್ ಚೌಧರಿ ತಿಳಿಸಿದ್ದಾರೆ.
ಸಂತ್ರಸ್ತೆಯ ಪೋಷಕರು ಸಲ್ಲಿಸಿದ ದೂರಿನ ಪ್ರಕಾರ, "22 ವರ್ಷದ ಮಹಿಳೆ ಒಬ್ಬಂಟಿಯಾಗಿರುವಾಗ ಆರೋಪಿ ತನ್ನ ಸಹಚರರ ಜೊತೆಗೆ ಮನೆಗೆ ನುಗ್ಗಿದ್ದಾನೆ. ನಂತರ ಹಣೆಗೆ ಗನ್ ಇಟ್ಟು ಹೆದರಿಸಿ ಎಲ್ಲರೂ ಅತ್ಯಾಚಾರವೆಸಗಿದ್ದಾರೆ. ಅಲ್ಲದೆ, ಈ ಕುರಿತು ಯಾರಿಗಾದರೂ ಹೇಳಿದರೆ ಮನೆಯಲ್ಲಿರುವ ಎಲ್ಲರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿ ಹೊರಟುಹೋಗಿದ್ದಾರೆ. ಇದೇ ಕಾರಣಕ್ಕೆ ಆಕೆ ಹೆದರಿ ಯಾರಿಗೂ ವಿಚಾರವನ್ನು ಹೇಳಿರಲಿಲ್ಲ" ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆಸಂಬಂಧಿಸಿದಂತೆ ಪೊಲೀಸರು ಐಪಿಸಿ ಮತ್ತು ಪರಿಶಿಷ್ಟ ಜಾತಿ-ಬುಡಕಟ್ಟು (ದೌರ್ಜನ್ಯ ತಡೆ) ಕಾಯ್ದೆ 1989 ರ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಆರೋಪಿಗಳು ಪರಾರಿಯಾಗಿದ್ದು, ಅವರನ್ನು ಪತ್ತೆ ಹಚ್ಚಲು ಹೆಚ್ಚುವರಿ ಎಸ್ಪಿ ನೇತೃತ್ವದ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಕಾನ್ಪುರ್ ದೇಹತ್) ಕೇಶವ್ ಕುಮಾರ್ ಚೌಧರಿ ತಿಳಿಸಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ