ಕಲಬುರ್ಗಿ(ಡಿ.22): ತೊಗರಿಯ ಕಣಜ ಕಲಬುರ್ಗಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ತೊಗರಿ ಪ್ರೌಢಾವಸ್ಥೆಗೆ ಬಂದಿದ್ದು, ಕಟಾವು ಮಾಡಲೇಬೇಕಾಗಿದೆ. ಇಂತಹ ಸಂದರ್ಭದಲ್ಲಿಯೇ ಗ್ರಾಮ ಪಂಚಾಯ್ತಿ ಚುನಾವಣೆ ಬಂದಿರೋದ್ರಿಂದಾಗಿ ಎಲ್ಲರ ಚಿತ್ತ ಅದರತ್ತ ನೆಟ್ಟಿದೆ. ಚುನಾವಣೆಗೆ ಇಳಿದ ಅಭ್ಯರ್ಥಿಗಳು ಹಣ ಕೊಟ್ಟು ಜನರನ್ನು ಪ್ರಚಾರಕ್ಕೆ ಕರೆದೊಯ್ಯುತ್ತಿದ್ದಾರೆ. ಡಾಬಾಗಳಲ್ಲಿ ಊಟ ಇತ್ಯಾದಿ ವ್ಯವಸ್ಥೆಗಳನ್ನೂ ಮಾಡುತ್ತಿದ್ದಾರೆ. ಇದರಿಂದಾಗಿ ದುಡಿಮೆಗೆಂದು ಹೊಲದ ಕಡೆ ಮುಖ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಗ್ರಾಮ ಪಂಚಾಯ್ತಿ ಚುನಾವಣೆಯಿಂದ ತೊಗರಿ ಬೆಲೆಗಾರರು ತತ್ತರಿಸುವಂತಾಗಿದೆ.
ಕಲಬುರ್ಗಿ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯುತ್ತಿದೆ. ಇಂದು ಮೊದಲ ಹಂತದ ಚುನಾವಣೆಗೆ ಮತದಾನ ನಡೆದರೆ, ಡಿಸೆಂಬರ್ 27ಕ್ಕೆ ಎರಡನೆಯ ಹಂತದ ಮತದಾನ ನಡೆಯಲಿದೆ. ತೊಗರಿಯ ಕಟಾವು ಮಾಡೋ ವೇಳೆಯಲ್ಲಿಯೇ ಚುನಾವಣೆ ಬಂದಿರೋದರಿಂದಾಗಿ ಕೃಷಿ ಚಟುಟವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮವಾಗಲಾರಂಭಿಸಿದೆ.
ಭಾರತದಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಪತ್ತೆಯಾಗಿಲ್ಲ; ಆತಂಕ ಬೇಡ ಎಂದ ತಜ್ಞರು
ಗ್ರಾಮೀಣ ಪ್ರದೇಶದಲ್ಲಿ ಚುನಾವಣಾ ರಂಗು ಕಾವೇರಿದೆ. ಲೋಕಸಭೆ, ವಿಧಾನ ಪರಿಷತ್ ಗಿಂತಲೂ ಹೆಚ್ಚಿನ ಪ್ರಚಾರದ ಅಬ್ಬರ ನಡೆದಿದೆ. ಬಹಿರಂಗ ಸಭೆಗಳು ನಡೆಯುತ್ತಿಲ್ಲ ಅನ್ನೋದು ಬಿಟ್ಟರೆ ನೂರಾರು ಜನ ಜೊತೆಗೂಡಿ ಮನೆ ಮನೆಗೆ ತೆರಳಿ ಮನವಿ ಮಾಡ್ತಿರೋ ದೃಶ್ಯಗಳನ್ನು ಗ್ರಾಮೀಣ ಪ್ರದೇಶದಲ್ಲಿ ಕಾಣುತ್ತೇವೆ. ಇಂತಹ ಚುನಾವಣಾ ಅಬ್ಬರ ಕೃಷಿ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿವೆ. ಗ್ರಾಮೀಣ ಪ್ರದೇಶದ ಬಹುತೇಕ ಜನ ಪ್ರಚಾರದಲ್ಲಿ ತೊಡಗಿಕೊಂಡಿರೋದ್ರಿಂದ ಹೊಲಗಳಿಗೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲಿಯೂ ಕಲಬುರ್ಗಿ ಜಿಲ್ಲೆಯ ಜನ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಜಿಲ್ಲೆಯ ಬಹುತೇಕ ಕಡೆ ತೊಗರಿ ಬೆಳೆದು ನಿಂತಿದೆ. ತೊಗರಿ ಒಣಗಿ ನಿಂತಿದ್ದರೂ ಕಟಾವು ಮಾಡಲಾರದ ಸ್ಥಿತಿ ರೈತರದ್ದಾಗಿದೆ. ಗ್ರಾಮ ಪಂಚಾಯ್ತಿ ಚುನಾವಣೆಯಿಂದಾಗಿ ತೊಗರಿ ಕಟಾವಿಗೆ ಕೃಷಿ ಕಾರ್ಮಿಕರು ಸಿಗದಂತಾಗಿದ್ದಾರೆ ಎಂದು ಮರ್ತೂರು ಗ್ರಾಮದ ರೈತ ನಜೀರ್ ಅಲವತ್ತುಕೊಂಡಿದ್ದಾನೆ.
ಪ್ರಚಾರಕ್ಕೆಂದು ಬರೋ ಜನರಿಗೆ 300 ರಿಂದ 500 ರೂಪಾಯಿವರೆಗೂ ಹಣ ನೀಡಲಾಗುತ್ತಿದೆ. ಜೊತೆಗೆ ಹೋಟೆಲ್ ಗಳಲ್ಲಿ ಚಹ, ಉಪಹಾರ ಉಚಿತ. ಇದಲ್ಲದೇ ರಾತ್ರಿಯ ವೇಳೆಗೆ ಡಾಬಾಗಳಲ್ಲಿ ಊಟ, ಮದ್ಯ ಇತ್ಯಾದಿಗಳ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಹೀಗಾಗಿ ಹಲವಾರು ಜನ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದಾರೆ. ತೊಗರಿ ರಾಶಿ ಮಾಡೋದು ಹೇಗೆಂಬ ಪ್ರಶ್ನೆ ಎದುರಾಗಿದೆ.
ಕೆಲವೊಬ್ಬರು ಯಂತ್ರಗಳ ಮೊರೆ ಹೋಗಿದ್ದರೆ, ಮತ್ತೆ ಕೆಲವರು ತಮ್ಮ ಹೊಲದಲ್ಲಿ ತಾವೇ ಕೆಲಸ ಮಾಡೋ ಪರಿಸ್ಥಿತಿ ನಿರ್ಮಾಣವಾಗಿದೆ. ತೊಗರಿ ರಾಶಿ ಮಾಡುವ ಸಂದರ್ಭದಲ್ಲಿಯೇ ಗ್ರಾಮ ಪಂಚಾಯ್ತಿ ಚುನಾವಣೆ ಬಂದಿರೋದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದು ಕೆಸರಟಗಿ ಗ್ರಾಮದ ರೈತ ಹುಣಚಪ್ಪ ಅಭಿಪ್ರಾಯಪಟ್ಟಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ