Cooking Oil Price Drop: ವಾರದಿಂದ ಇಳಿಕೆಯಾಗ್ತಿದೆ ಅಡುಗೆ ಎಣ್ಣೆ ಬೆಲೆ; ಈಗ 1 ಲೀಟರ್​ಗೆ ಎಷ್ಟಿದೆ ರೇಟು?

ಸೆಪ್ಟೆಂಬರ್ 11 ರಿಂದಲೇ ಈ ಕ್ರಮ ಜಾರಿಗೆ ಬಂದಿದ್ದು, ಇದರಿಂದ ದೈನಂದಿನ ಸಗಟು ಬೆಲೆಯಲ್ಲಿ ಖಾದ್ಯ ತೈಲಗಳ ಬೆಲೆ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ದೇಶದ ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಈ ವೇಳೆ ಕೇಂದ್ರ ಸರ್ಕಾರವು ವಿವಿಧ ಕ್ರಮಗಳ ಮೂಲಕ ಬೆಲೆಗಳನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆ ಒಂದು ವಾರದ ಹಿಂದೆ ಖಾದ್ಯ ತೈಲಗಳ(Edible Oil) ಮೇಲಿನ ದರ ಕಡಿಮೆ ಮಾಡಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡು ಪ್ರಮಾಣಿತ ಸುಂಕವನ್ನು ಕಡಿಮೆ ಮಾಡಿತ್ತು. ಇದರಿಂದ ದೈನಂದಿನ ಸಗಟು ಬೆಲೆಗಳಲ್ಲಿ ಖಾದ್ಯ ತೈಲ ದರ ಕಡಿಮೆಯಾಗಿದೆ ಎಂದು ಪಿಐಬಿ(PIB) ವರದಿ ಮಾಡಿದೆ. ಪಾಮ್‌ ಎಣ್ಣೆ(Palm Oil), ಸೂರ್ಯಕಾಂತಿ ಎಣ್ಣೆ(Sunflower Oil), ಎಳ್ಳೆಣ್ಣೆ(Seasame Oil), ತೆಂಗಿನ ಎಣ್ಣೆ(Coconut Oil), ಕಡಲೆಕಾಯಿ ಎಣ್ಣೆ(Ground Nut Oil), ವನಸ್ಪತಿ(Vanaspati) ಹಾಗೂ ಸೋಯಾ ಎಣ್ಣೆಯ(Soya Oil ) ದರ ಕಳೆದ ಒಂದು ವಾರದಿಂದ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.

ಎಲ್ಲಾ ರಾಜ್ಯಗಳು ಮತ್ತು ಖಾದ್ಯ ತೈಲ ಉದ್ಯಮ ಸಂಘಗಳೊಂದಿಗಿನ ಪರಸ್ಪರ ಚರ್ಚೆಯ ಆಧಾರದ ಮೇಲೆ, ಹೆಚ್ಚಿನ ಪಾರದರ್ಶಕತೆಯ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿತು. ಅಲ್ಲದೆ, ದೇಶದಲ್ಲಿ ವಾರಕ್ಕೊಮ್ಮೆ ಖಾದ್ಯ ತೈಲಗಳು/ಎಣ್ಣೆಬೀಜಗಳ ದಾಸ್ತಾನುಗಳನ್ನು ಮೇಲ್ವಿಚಾರಣೆ ಮಾಡುವ ಮುಂದಿನ ಕ್ರಮವಾಗಿ ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ವೆಬ್ ಪೋರ್ಟಲ್ ಅನ್ನು ರಚಿಸುತ್ತಿದೆ. ಈ ಪೋರ್ಟಲ್‌ಗೆ ಡೇಟಾವನ್ನು ಮಿಲ್ಲರ್‌ಗಳು, ರಿಫೈನರ್‌ಗಳು, ಸ್ಟಾಕಿಸ್ಟ್‌ಗಳು ಮತ್ತು ಸಗಟು ವ್ಯಾಪಾರಿಗಳು ಸಲ್ಲಿಸುತ್ತಾರೆ. ನ್ಯಾಯಯುತ ಬೆಲೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಚಿಲ್ಲರೆ ಬೆಲೆಯನ್ನು ಪ್ರದರ್ಶನ ಮಾಡಲು ನಿರ್ದೇಶನಗಳನ್ನು ನೀಡಿವೆ ಎಂದೂ ಪಿಐಬಿ ವರದಿ ಮಾಡಿದೆ.

ಕೇಂದ್ರ ಸರ್ಕಾರ ಸೆಪ್ಟೆಂಬರ್ 10, 2021ರಂದು ಖಾದ್ಯ ತೈಲ ಬೆಲೆಗಳನ್ನು ಇಳಿಕೆ ಮಾಡುವ ಸಲುವಾಗಿ ಪ್ರಮಾಣಿತ ಸುಂಕದ ದರವನ್ನು ಮತ್ತಷ್ಟು ಕಡಿಮೆ ಮಾಡಿದೆ. ಕಚ್ಚಾ ಪಾಮ್ ಎಣ್ಣೆ, ಕಚ್ಚಾ ಸೋಯಾಬೀನ್ ಎಣ್ಣೆಯ ಮೇಲಿನ ಶೇ. 2.5ರಷ್ಟು ಸುಂಕ ಕಡಿಮೆ ಮಾಡಲಾಗಿತ್ತು. ಅದೇ ರೀತಿ ಸಂಸ್ಕರಿಸಿದ ತಾಳೆ ಎಣ್ಣೆ, ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಪ್ರಮಾಣಿತ ದರವನ್ನು ಶೇ. 32.5ಕ್ಕೆ ಇಳಿಕೆ ಮಾಡಿದೆ. ಸೆಪ್ಟೆಂಬರ್ 11 ರಿಂದಲೇ ಈ ಕ್ರಮ ಜಾರಿಗೆ ಬಂದಿದ್ದು, ಇದರಿಂದ ದೈನಂದಿನ ಸಗಟು ಬೆಲೆಯಲ್ಲಿ ಖಾದ್ಯ ತೈಲಗಳ ಬೆಲೆ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ಪ್ಯಾಕ್ ಮಾಡಿದ ಪಾಮ್ ಆಯಿಲ್‌ನ ದೈನಂದಿನ ಸಗಟು ಬೆಲೆ ಶೇ. 2.50ರಷ್ಟು ಕಡಿಮೆಯಾಗಿದ್ದರೆ, ಎಳ್ಳೆಣ್ಣೆ ಬೆಲೆ ಶೇ. 2.08ರಷ್ಟು, ತೆಂಗಿನ ಎಣ್ಣೆ ಶೇ. 1.72, ಪ್ಯಾಕ್‌ ಮಾಡಲಾದ ಕಡಲೆಕಾಯಿ ಎಣ್ಣೆ ಶೇ. 1.38, ಪ್ಯಾಕ್‌ ಮಾಡಲಾದ ಸೂರ್ಯಕಾಂತಿ ಎಣ್ಣೆ ಶೇ. 1.30, ಪ್ಯಾಕ್‌ ಮಾಡಲಾದ ವನಸ್ಪತಿ ಶೇ. 0.71 ಹಾಗೂ ಪ್ಯಾಕ್‌ ಮಾಡಲಾದ ಸೋಯಾ ಎಣ್ಣೆಯ ದರ ಶೇ. 0.68 ರಷ್ಟು ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.

ಇದೇ ರೀತಿ, ಬೇಳೆ - ಕಾಳುಗಳ ಬೆಲೆಯೂ ಏರಿಕೆಯಾಗಿದ್ದು, ಕೇಂದ್ರ ಸರ್ಕಾರ ದ್ವಿದಳ ಧಾನ್ಯಗಳ ಬೆಲೆ ಇಳಿಕೆಗೂ ಕ್ರಮಗಳನ್ನು ಕೈಗೊಂಡಿದೆ.

ಅಡುಗೆ ಎಣ್ಣೆಯ ಶುದ್ಧತೆಯನ್ನು ಪರೀಕ್ಷಿಸುವುದು ಹೇಗೆ:

ನಿಮ್ಮ ಮನೆಯಲ್ಲಿ ಅಡುಗೆ ಮಾಡಲು ಬಳಸುವ ಎಣ್ಣೆ ಕಲಬೆರಕೆಯಾಗಿದೆಯೇ ಎಂದು ಪರೀಕ್ಷಿಸಲು ಇಚ್ಛಿಸಿದರೆ, ಎಫ್ಎಸ್ಎಸ್ಎಐ ಸೂಚಿಸಿದ ಈ ಸರಳ ವಿಧಾನವನ್ನು ಒಮ್ಮೆ ಮಾಡಿ ನೋಡಿ.

ನೀವು ಒಂದು ಬೌಲ್‌ನಲ್ಲಿ 2 ಮಿಲೀ ಲೀಟರ್ ಎಣ್ಣೆ ತೆಗೆದುಕೊಂಡು ಅದಕ್ಕೆ ಒಂದು ಚಮಚ ಹಳದಿ ಬೆಣ್ಣೆಯನ್ನು ಸೇರಿಸಿಕೊಳ್ಳಿರಿ. ಸ್ವಲ್ಪ ಸಮಯದ ನಂತರ ಎಣ್ಣೆಯ ಬಣ್ಣ ಬದಲಾಗದಿದ್ದರೆ, ಅದು ಶುದ್ಧವಾದ ಮತ್ತು ಬಳಕೆಗೆ ಸುರಕ್ಷಿತವಾದ ಎಣ್ಣೆ ಎಂದರ್ಥ. ಒಂದು ವೇಳೆ ಎಣ್ಣೆಯ ಬಣ್ಣವು ಕೆಂಪು ಬಣ್ಣಕ್ಕೆ ಬದಲಾದರೆ, ಆಗ ಆ ಎಣ್ಣೆಯು ಅಶುದ್ಧವಾಗಿದೆ ಮತ್ತು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಅರ್ಥ ಮಾಡಿಕೊಳ್ಳಬಹುದು.
Published by:Latha CG
First published: