ನವದೆಹಲಿ(ಡಿ. 03): ದೇಶದಲ್ಲಿ ಮಾರಾಟವಾಗುತ್ತಿರುವ ಜೇನುತುಪ್ಪದಲ್ಲಿ ಸಕ್ಕರೆಯ ಕಲಬೆರಕೆ ಆಗಿರುವ ಬಗ್ಗೆ ಪರಿಸರ ಸಂಸ್ಥೆ ಸಿಎಸ್ಇ ನಿನ್ನೆ ವರದಿ ಮಾಡಿತ್ತು. ಅದರಂತೆ ಬಹುತೇಕ ಟಾಪ್ ಬ್ರಾಂಡ್ಗಳು ಇಂಥ ಕಲಬೆರಕೆ ಜೇನುತುಪ್ಪ ತಯಾರಿಸುತ್ತಿರುವ ಬಗ್ಗೆ ಬೆಳಕು ಚೆಲ್ಲಿದ ಈ ವರದಿಯ ಸತ್ಯಾಸತ್ಯತೆ ಬಗ್ಗೆ ಡಾಬರ್, ಪತಂಜಲಿ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಶುದ್ಧ ಜೇನುತುಪ್ಪವನ್ನು ಮಾರುತ್ತಿರುವ ತಮ್ಮ ಸಂಸ್ಥೆಯ ಬ್ರಾಂಡ್ಗಳ ಹೆಸರಿಗೆ ಮಸಿ ಬಳಿಯುವ ಉದ್ದೇಶ ಈ ವರದಿಯಲ್ಲಿದೆ. ಭಾರತದ ಆಹಾರ ಮತ್ತು ಗುಣಮಟ್ಟ ಪ್ರಾಧಿಕಾರ ಎಫ್ಎಸ್ಎಸ್ಎಐ ನಿಗದಿಪಡಿಸಿದ ಮಾನದಂಡಗಳ ಅನುಸಾರ ಜೇನುತುಪ್ಪ ತಯಾರಿಸುತ್ತಿರುವುದಾಗಿ ಎಂದು ಈ ಸಂಸ್ಥೆಗಳು ಹೇಳಿಕೊಂಡಿವೆ.
“ನಮ್ಮ ಬ್ರಾಂಡ್ಗೆ ಮಸಿ ಬಳಿಯುವ ಉದ್ದೇಶ ಈ ವರದಿಗಳಲ್ಲಿವೆ. ಡಾಬರ್ ಹನಿ ಭಾರತೀಯ ಮೂಲಗಳಿಂದ ನಸರ್ಗಿಕವಾಗಿ ಸಂಗ್ರಹಿಸಿದ ಜೇನುತುಪ್ಪ ಹೊಂದಿದೆ. ಇದರಲ್ಲಿ ಹೆಚ್ಚುವರಿ ಸಕ್ಕರೆ ಅಥವಾ ಮತ್ತಿತರ ಕಲಬೆರಕೆಯನ್ನು ಮಾಡಲಾಗಿಲ್ಲ ಎಂದು ನಮ್ಮ ಗ್ರಾಹಕರಿಗೆ ಭರವಸೆ ನೀಡುತ್ತೇವೆ” ಎಂದು ಡಾಬರ್ ಸಂಸ್ಥೆಯ ವಕ್ತಾರರು ಹೇಳಿಕೆ ನೀಡಿದ್ದಾರೆ.
ಪತಂಜಲಿ ಆಯುರ್ವೇದ ಸಂಸ್ಥೆಯ ನಿರ್ವಾಹಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರೂ ಕೂಡ ಸಿಎಸ್ಇ ವರದಿಯ ಸಾಚಾತನವನ್ನು ಪ್ರಶ್ನೆ ಮಾಡಿದ್ದಾರೆ. “ಸಂಸ್ಕರಿತ ಜೇನುತುಪ್ಪಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ನೈಸರ್ಗಿಕ ಜೇನುತುಪ್ಪ ಉದ್ಯಮ ಮತ್ತು ಉತ್ಪಾದನಾ ಸಂಸ್ಥೆಗಳನ್ನ ಹೀಗಳೆಯಲಾಗುತ್ತಿದೆ. ಲಕ್ಷಾಂತರ ಗ್ರಾಮೀಣ ರೈತರು ಮತ್ತು ಜೇನುತುಪ್ಪ ಕೃಷಿಕರ ಬದಲು ಸಂಸ್ಕರಿತ ಹಾಗೂ ಕೃತಕ ಜೇನುತುಪ್ಪ ತಯಾರಕರನ್ನ ಬೆಳೆಸುವ ದೊಡ್ಡ ಸಂಚು ಇದು” ಎಂದು ಪತಂಜಲಿ ಸಂಸ್ಥೆಯ ಸಹ-ಸಂಸ್ಥಾಪಕರು ಆಪಾದಿಸಿದ್ದಾರೆ.
ಇದನ್ನೂ ಓದಿ: ಚಂದ್ರನ ಮೇಲೆ ಅಡಿ ಇಟ್ಟ ಚೀನಾದ ಚುಂಗು-5; ಚಂದ್ರನಲ್ಲಿ ನೆಲೆ ಸ್ಥಾಪಿಸುವ ಡ್ರ್ಯಾಗನ್ ದೇಶದ ಹೆಗ್ಗುರಿ
ಜೇನುತುಪ್ಪ ಮಾರುವ ಮತ್ತೊಂದು ಜನಪ್ರಿಯ ಬ್ರಾಂಡ್ ಝಂಡು ಕೂಡ ಈ ವರದಿಯನ್ನು ಅಲ್ಲಗಳೆದಿದೆ. ಸರ್ಕಾರದ ಎಫ್ಎಸ್ಎಸ್ಎಇ ನಿಗದಿಪಡಿಸಿದ ನೂರಕ್ಕೂ ಹೆಚ್ಚು ಮಾನದಂಡಗಳಿಗೆ ಬದ್ಧವಾಗಿ ನಾವು ಶೇ. 100ರಷ್ಟು ಶುದ್ಧ ಜೇನುತುಪ್ಪವನ್ನು ತಯಾರಿಸುತ್ತಿದ್ದೇವೆ ಎಂದು ಝಂಡು ಹನಿಯ ಒಡೆತನ ಹೊಂದಿರುವ ಇಮಾಮಿ ಗ್ರೂಪ್ ಸ್ಪಷ್ಟಪಡಿಸಿದೆ.
ದೇಶದಲ್ಲಿ ಜೇನುತುಪ್ಪ ಮಾರಾಟ ಮಾಡುತ್ತಿರುವ 13 ಬ್ರಾಂಡ್ಗಳ ಪೈಕಿ 10 ಬ್ರಾಂಡ್ಗಳ ಉತ್ಪನ್ನ ಕಲಬೆರಕೆಯಿಂದ ಕೂಡಿದೆ ಎಂದು ಸಿಎಸ್ಇ ಮೊನ್ನೆ ವರದಿ ಪ್ರಕಟಿಸಿತ್ತು. ಸಿಎಸ್ಇನ ಆಹಾರ ತಜ್ಞರು ಜೇನುತುಪ್ಪದ ಪರಿಶುದ್ಧತೆಯ ಪರೀಕ್ಷೆಗಾಗಿ ವಿವಿಧೆಡೆ ಹೆಕ್ಕಿದ 22 ಸ್ಯಾಂಪಲ್ಗಳ ಪೈಕಿ ಐದು ಮಾತ್ರ ಪಾಸಾಗಿವೆ. ಉಳಿದವುಗಳಲ್ಲಿ ಸಕ್ಕರೆಯ ಸಿರಪ್ ಅಂಶ ಇರುವುದು ವೇದ್ಯವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿತ್ತು. ಪತಂಜಲಿ, ಡಾಬರ್, ಬೈದ್ಯನಾಥ್, ಝಂಡು, ಹಿತಕಾರಿ, ಅಪಿಸ್ ಹಿಮಾಲಯ ಸಂಸ್ಥೆಯ ಜೇನುತುಪ್ಪಗಳು ಪರಿಶುದ್ಧತೆ ಪರೀಕ್ಷೆಯಲ್ಲಿ ವಿಫಲವಾಗಿವೆ. ಚೀನಾದಿಂದ ವಿಶೇಷವಾಗಿ ತಯಾರಿಸಲಾದ ಶುಗರ್ ಸಿರಪ್ಗಳನ್ನ ಭಾರತದಲ್ಲಿ ಜೇನುತುಪ್ಪಕ್ಕೆ ಬೆರಸಲಾಗುತ್ತಿದೆ ಎಂಬ ಆರೋಪವೂ ಕೆಲ ಕಡೆಯಿಂದ ಕೇಳಿಬಂದಿದೆ.
ಭಾರತದಲ್ಲಿ ಜೇನುತುಪ್ಪ ಉದ್ಯಮ ಸಾವಿರಾರು ಕೋಟಿ ಮೌಲ್ಯದ್ದಾಗಿದೆ. ಅಮೆರಿಕ, ಸೌದಿ ಸೇರಿದಂತೆ ಹಲವು ದೇಶಗಳಿಗೆ ಭಾರತಿಯ ಕಂಪನಿಗಳು ಜೇನುತುಪ್ಪವನ್ನು ರಫ್ತು ಮಾಡುತ್ತವೆ. ಮುಂದಿನ ದಿನಗಳಲ್ಲಿ ಜೇನುತುಪ್ಪ ಉದ್ಯಮ ಇನ್ನಷ್ಟು ಹುಲುಸಾಗಿ ಬೆಳೆಯುವ ನಿರೀಕ್ಷೆ ಇದೆ. 2025ರಷ್ಟರಲ್ಲಿ ಭಾರತದಲ್ಲಿ ಇದು 3 ಸಾವಿರ ಕೋಟಿ ರೂ ಉದ್ಯಮವಾಗಿ ಬೆಳಯಲಿದೆ ಎಂಬುದು ಮಾರುಕಟ್ಟೆ ತಜ್ಞರ ಅನಿಸಿಕೆ. ಈ ಹಿನ್ನೆಲೆಯಲ್ಲಿ ಭಾರತೀಯ ಜೇನುತುಪ್ಪ ಉದ್ಯಮಕ್ಕೆ ಹಿನ್ನಡೆ ತರುವ ಹುನ್ನಾರ ನಡೆದಿದೆ ಎಂದು ಡಾಬರ್, ಝಂಡು, ಪತಂಜಲಿ ಮೊದಲಾದ ದೇಶೀಯ ಸಂಸ್ಥೆಗಳು ಕಿಡಿಕಾರುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ