ಮುಂಬೈ (ಸೆಪ್ಟೆಂಬರ್ 05); ಸಾಮಾಜಿಕ ಹೋರಾಟಗಾರ ಚಿಂತಕ ನರೇಂದ್ರ ದಾಬೋಲ್ಕರ್ ಅವರನ್ನು 2013 ರಲ್ಲಿ ಪುಣೆಯಲ್ಲಿ ಕೆಲವು ಆಘಂತುಕರು ಗುಂಡಿಟ್ಟು ಹತ್ಯೆ ಮಾಡಿದ್ದರು. ಈ ಪ್ರಕರಣದ ತನಿಖೆಯನ್ನು ಕಳೆದ 8 ವರ್ಷಗಳಿಂದ ಸಿಬಿಐ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಕಳೆದ ಹಲವು ದಿನಗಳಿಂದ ನಿಂತ ನೀರಾಗಿದ್ದ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಇದೀಗ ಮರು ಜೀವ ಬಂದಿದ್ದು, ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಬೋಲ್ಕರ್ ಹತ್ಯೆ ಪ್ರಕರಣದ ಐವರು ಆರೋಪಿಗಳ ಮೇಲೆ ದೋಷರೋಪ ಪಟ್ಟಿ ಸಲ್ಲಿಸಲು ಪುಣೆ ವಿಶೇಷ ನ್ಯಾಯಾಲಯ ಸೆ.7ರಂದು ಆದೇಶ ಹೊರಡಿಸಲಿದೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ ಮೂಲದ ವಿಚಾರವಾದಿ, ಹೋರಾಟಗಾರ ನರೇಂದ್ರ ದಾಬೋಲ್ಕರ್ ಹತ್ಯೆಯಾಗಿ ಎಂಟು ವರ್ಷಗಳ ಬಳಿಕ, ಸನಾತನ ಸಂಸ್ಥೆಗೆ ಸೇರಿದ ಐವರ ಮೇಲೆ ಈ ಕ್ರಮ ಜರುಗಿಸಲಾಗುತ್ತಿದೆ. ಐವರು ಆರೋಪಿಗಳ ಮೇಲೆ ಕೊಲೆ, ಕ್ರಿಮಿನಲ್ ಪಿತೂರಿ, ಭಯೋತ್ಪಾದನೆ ಕೃತ್ಯದಲ್ಲಿ ಭಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ದೋಷಾರೋಪ ಸಲ್ಲಿಕೆಯಾಗಲಿದೆ. ಇಲ್ಲದೆ ದಾಬೋಲ್ಕರ್ ಮತ್ತು ಕರ್ನಾಟಕದ ಹಿರಿಯ ಪತ್ರಕರ್ತೆ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಗೂ ಸಹ ಸಂಬಂಧ ಇದೆ ಎನ್ನಲಾಗುತ್ತಿದೆ.
2014ರಲ್ಲಿ ದಾಬೋಲ್ಕರ್ ಹತ್ಯೆ ಪ್ರಕರಣ ಪುಣೆ ಪೊಲೀಸರಿಂದ ಸಿಬಿಐಗೆ ತನಿಖೆ ವರ್ಗಾವಣೆಯಾಗಿತ್ತು. ದಾಬೋಲ್ಕರ್ ಹತ್ಯೆಗೆ ಸಂಬಂಧಿಸಿದಂತೆ ಸನಾತನ ಸಂಸ್ಥೆಗೆ ಸಂಬಂಧಿಸಿದ ಐವರನ್ನು ಸಿಬಿಐ ಪೊಲೀಸರು ಬಂಧಿಸಿದ್ದರು.
ಹಂತಕರಾದ ಡಾ.ವೀರೇಂದ್ರಸಿನ್ಹಾ ತಾವಡೆ, ಸಚಿನ್ ಆಂದುರೆ, ಶರದ್ ಕಲಾಸ್ಕರ್, ವಕೀಲ ಸಂಜೀವ್ ಪುಣೇಕರ್, ಆತನ ಸಹಾಯಕ ವಿಕ್ರಮ್ ಭಾವೆ ಬಂಧನಕ್ಕೊಳಗಾಗಿದ್ದರು. ವಕೀಲ ಸಂಜೀವ್ ಪುಣೇಕರ್ ಮತ್ತು ವಿಕ್ರಮ್ ಭಾವೆ ಜಾಮೀನು ಮೇಲೆ ಹೊರಗಡೆ ಬಂದಿದ್ದರು. ಮೂವರು ಜೈಲಿನಲ್ಲಿದ್ದರು.
ಆಗಸ್ಟ್ 2013ರಲ್ಲಿ ಪುಣೆಯಲ್ಲಿ ಬೆಳಗಿನ ವಾಕಿಂಗ್ ವೇಳೆ ದಾಬೋಲ್ಕರ್ ಅವರ ಹತ್ಯೆ ಮಾಡಲಾಗಿತ್ತು. ಅದಾದ ನಂತರ ಗೋವಿಂದ ಪನ್ಸಾರೆ, ಎಂ.ಎಂ.ಕಲ್ಬುರ್ಗಿ ಮತ್ತು ಗೌರಿ ಲಂಕೇಶರ ಹತ್ಯೆಗಳಾಗಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ