ಬೆಂಗಳೂರು (ಮೇ 15): ಭಾರತದಲ್ಲಿ ಈ ವರ್ಷದ ಮೊದಲ ಚಂಡಮಾರುತ ಇಂದು ಸಂಜೆಯ ವೇಳೆಗೆ ಅಬ್ಬರಿಸಲಿದೆ. ಹೀಗಾಗಿ, ಕರ್ನಾಟಕ, ಕೇರಳ, ಗುಜರಾತ್, ಒರಿಸ್ಸಾದಲ್ಲಿ ನಿನ್ನೆ ಸಂಜೆಯಿಂದಲೇ ಮಳೆ ಶುರುವಾಗಿದೆ. ಈ ಚಂಡಮಾರುತಕ್ಕೆ ತೌಕ್ತೆ ಚಂಡಮಾರುತ ಎಂದು ಹೆಸರಿಡಲಾಗಿದೆ. ಇಂದಿನಿಂದ ಮೇ 17ರವೆರೆಗೆ ಚಂಡಮಾರುತದ ಪರಿಣಾಮ ಹೆಚ್ಚಾಗಿರಲಿದ್ದು, ಹಲವು ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ಕೇರಳದ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಂಡಮಾರುತದಿಂದ ಭಾರೀ ಮಳೆ ಉಂಟಾಗಿ ಅನಾಹುತಗಳು ಸೃಷ್ಟಿಯಾಗುವ ಸಾಧ್ಯತೆ ಇರುವುದರಿಂದ 50 ಎನ್‌ಡಿಆರ್‌ಎಫ್ ತಂಡಗಳನ್ನು ಕೇರಳ, ಕರ್ನಾಟಕ, ತಮಿಳುನಾಡು, ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ನಿಯೋಜನೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಟ್ವೀಟ್ ಮೂಲಕ ಕರೆ ನೀಡಿರುವ ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ, "ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ತೌಕ್ತೆ ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ಸಹಾಯಗಳನ್ನು ಒದಗಿಸುವಂತೆ" ಮನವಿ ಮಾಡಿ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
#CycloneAlert has been issued in Kerala, Maharashtra, Goa, Tamil Nadu, Gujarat and Karnataka. Cyclone Tauktae is already causing heavy rains in many areas.
I appeal to Congress workers to provide all possible assistance to those in need.
Please stay safe.
— Rahul Gandhi (@RahulGandhi) May 15, 2021
ಭಾರತ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಅರಬ್ಬಿ ಸಮುದ್ರದ ಮೇಲೆ ವಾಯುಭಾರ ಕುಸಿತ ಉಂಟಾಗಿದ್ದು, ಮೇ 16 ರ ಹೊತ್ತಿಗೆ ಕ್ರಮೇಣ ಪೂರ್ವ-ಮಧ್ಯ ಅರಬ್ಬಿ ಸಮುದ್ರದ ಮೇಲೆ ಚಂಡಮಾರುತವಾಗಿ ಬದಲಾಗಬಹುದು. ಮುಂದಿನ 12 ಗಂಟೆಗಳಲ್ಲಿ ಚಂಡಮಾರುತ ತೀವ್ರಗೊಳ್ಳುತ್ತದೆ ಎಂದಿದೆ.
ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತದ ಪರಿಣಾಮ ಉಂಟಾಗಲಿದೆ ಎಂದು 53 ತಂಡಗಳ ಪೈಕಿ 24 ತಂಡಗಳನ್ನು ಈ ಮೊದಲೇ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಉಳಿದ ತಂಡಗಳನ್ನು ಕಾರ್ಯಾಚಣೆಗೆ ಸಿದ್ಧವಾಗಿ ಇರಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಎಸ್.ಎನ್. ಪ್ರಧಾನ್ ಹೇಳಿದ್ದಾರೆ.
ಕರ್ನಾಟಕ, ಕೇರಳ, ಗೋವಾದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಕೇರಳದಲ್ಲಿ ಈಗಾಗಲೇ ಸುಮಾರು 200ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. 50 ಎನ್‌ಡಿಆರ್‌ಎಫ್ ತಂಡಗಳ ಪೈಕಿ ಈಗಾಗಲೇ 24 ತಂಡಗಳು ಸಜ್ಜಾಗಿದ್ದು, ಅಗತ್ಯವಿದ್ದಾಗ ಆಯಾ ರಾಜ್ಯಗಳಿಗೆ ಕಳುಹಿಸಲಾಗುವುದು. ಇಂದು ಸಂಜೆಯ ವೇಳೆಗೆ ಚಂಡಮಾರುತದ ಆರ್ಭಟ ಹೆಚ್ಚಾಗಲಿದೆ. ಮಲಪ್ಪುರಂನ ಪೊನ್ನಾನಿಯಲ್ಲಿ ಸುಮಾರು 50 ಮನೆಗಳಿಗೆ ನೀರು ನುಗ್ಗಿವೆ. ಕೊಡುಂಗಲ್ಲೂರಿನಲ್ಲಿ ಸುಮಾರು 100 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಕೇರಳದಲ್ಲಿ ನಿನ್ನೆ ಸುರಿದ ಮಳೆಯಿಂದ ಇಬ್ಬರು ಸಾವನ್ನಪ್ಪಿದ್ದಾರೆ.
ಚಂಡಮಾರುತದ ಹಿನ್ನೆಲೆಯಲ್ಲಿ ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗೇ, ಕೇರಳದ ತಿರುವನಂತಪುರಂ, ಕಾಸರಗೋಡು, ಕಣ್ಣೂರು, ವಯನಾಡ್, ಕೋಳಿಕೋಡ್, ಮಲಪ್ಪುರಂ, ಕೊಲ್ಲಂ, ಪಥನಾಂತಿಟ್ಟ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ಇದರ ಪ್ರಭಾವದಿಂದ ಕೇರಳ, ತಮಿಳುನಾಡು, ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಮೇ 17ರವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದು, ನಾಳೆ ಮತ್ತು 17ರಂದು ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ