• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Cyclone Tauktae: ತೌಕ್ತೆ ಚಂಡಮಾರುತದ ಆರ್ಭಟ; ಗುಜರಾತ್​ನಲ್ಲಿ ಭಾರೀ ಭೂಕುಸಿತ; ಮುಂಬೈನಲ್ಲಿ ಬಾರ್ಜ್​ ಮುಳುಗಿ 127 ಜನ ನಾಪತ್ತೆ

Cyclone Tauktae: ತೌಕ್ತೆ ಚಂಡಮಾರುತದ ಆರ್ಭಟ; ಗುಜರಾತ್​ನಲ್ಲಿ ಭಾರೀ ಭೂಕುಸಿತ; ಮುಂಬೈನಲ್ಲಿ ಬಾರ್ಜ್​ ಮುಳುಗಿ 127 ಜನ ನಾಪತ್ತೆ

ತೌಕ್ತೆ ಚಂಡಮಾರುತ

ತೌಕ್ತೆ ಚಂಡಮಾರುತ

Cyclone Tauktae: ತೌಕ್ತೆ ಚಂಡಮಾರುತದ ಆರ್ಭಟದಿಂದ ಮುಂಬೈನಲ್ಲಿ ನಿನ್ನೆ 273 ಜನರಿದ್ದ ಬಾರ್ಜ್ ಮುಳುಗಿದ ಪರಿಣಾಮ 127 ಜನರು ನಾಪತ್ತೆಯಾಗಿದ್ದು, 146 ಜನರನ್ನು ರಕ್ಷಿಸಲಾಗಿದೆ.

  • Share this:

ನವದೆಹಲಿ (ಮೇ 18): ಭಾರತಕ್ಕೆ ಈ ವರ್ಷದ ಮೊದಲ ಚಂಡಮಾರುತ ತೌಕ್ತೆ ಅಪ್ಪಳಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕರ್ನಾಟಕದಲ್ಲಿ ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಈಗಾಗಲೇ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆ ರಾತ್ರಿಯಿಂದ ಗುಜರಾತ್​ನಲ್ಲಿ ತೌಕ್ತೆ ಚಂಡಮಾರುತದ ಆರ್ಭಟ ಶುರುವಾಗಿದ್ದು, ಇಂದು ಮಧ್ಯಾಹ್ನದವರೆಗೆ ಅಬ್ಬರವಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಹಾರಾಷ್ಟ್ರದಲ್ಲೂ ಭಾರೀ ಮಳೆ ಕಾಣಿಸಿಕೊಂಡಿದ್ದು, ಮುಂಬೈನ ರಸ್ತೆಗಳೆಲ್ಲ ನದಿಗಳಂತಾಗಿ ಮರಗಳು ಕೊಚ್ಚಿಹೋಗುತ್ತಿರುವ ವಿಡಿಯೋಗಳು ವೈರಲ್ ಆಗಿವೆ.


ಗುಜರಾತ್​ನಲ್ಲಿ ಇದುವರೆಗೂ 2 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್​ ಮಾಡಲಾಗಿದೆ. ಅಹಮದಾಬಾದ್ ಏರ್​ಪೋರ್ಟ್​ ಸುತ್ತಲೂ ನೀರು ಆವರಿಸಿಕೊಂಡು, ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಗುಜರಾತ್​ನ ಬಹುತೇಕ ಎಲ್ಲ ಪ್ರಮುಖ ವಿಮಾನ ನಿಲ್ದಾಣಗಳೂ ಬಂದ್ ಆಗಿದೆ. ಗುಜರಾತ್​ನಲ್ಲಿ 1998ರ ನಂತರ ಕಳೆದ 23 ವರ್ಷಗಳಲ್ಲಿ ಉಂಟಾಗಿರುವ ಅತ್ಯಂತ ಭೀಕರ ಚಂಡಮಾರುತ ಇದು ಎನ್ನಲಾಗಿದೆ.



ಮಹಾರಾಷ್ಟ್ರದಲ್ಲಿ ತೌಕ್ತೆ ಚಂಡಮಾರುತದ ಅಬ್ಬರದಿಂದ 6ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮುಂಬೈನಲ್ಲಿ ನಿನ್ನೆ ಎರಡು ಬಾರ್ಜ್​ಗಳು ಸಮುದ್ರದಲ್ಲಿ ಮುಳುಗಿದ್ದು, ಇನ್ನೂ ಶೋಧ ಕಾರ್ಯಾಚರಣೆ ಮುಂದುವರೆದಿದೆ. 273 ಜನರಿದ್ದ ಬಾರ್ಜ್ ಮುಳುಗಿದ ಪರಿಣಾಮ 127 ಜನರು ನಾಪತ್ತೆಯಾಗಿದ್ದು, 146 ಜನರನ್ನು ರಕ್ಷಿಸಲಾಗಿದೆ. ಹವಾಮಾನ ವೈಪರೀತ್ಯದಿಂದ ರಕ್ಷಣಾ ಕಾರ್ಯಾಚರಣೆಗೂ ಸಮಸ್ಯೆಯಾಗಿದೆ.


ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಈಗಾಗಲೇ ತುರ್ತು ಕೆಲಸಗಳಿಗೆ 100 ತಂಡಗಳನ್ನು ಕೇರಳ, ಕರ್ನಾಟಕ, ತಮಿಳು ನಾಡು, ಗುಜರಾತ್, ಗೋವಾ ಮತ್ತು ಮಹಾರಾಷ್ಟ್ರ ಭಾಗಗಳಲ್ಲಿ ನಿಯೋಜಿಸಿದೆ. ಉತ್ತರ ವಾಯವ್ಯ ಭಾಗದತ್ತ ಗಂಟೆಗೆ 18 ಕಿಲೋ ಮೀಟರ್ ವೇಗದಲ್ಲಿ ಚಂಡಮಾರುತ ಬೀಸುತ್ತಿದ್ದು ಗಾಳಿಯ ವೇಗ 155ರಿಂದ 165 ಕಿಲೋ ಮೀಟರ್ ನಷ್ಟು ಇರಲಿದೆ.


ಚಂಡಮಾರುತದ ಪ್ರಭಾವದಿಂದ ಮಹಾರಾಷ್ಟ್ರ, ಗುಜರಾತ್​ನಲ್ಲಿ ಇಂದು ಮಳೆಯಾಗುತ್ತಿದೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ಹಗುರ ಗಾಳಿಯಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸೌರಾಷ್ಟ್ರ ಮತ್ತು ಕಚ್ ಒಳನಾಡು ಪ್ರದೇಶದ ಹಲವೆಡೆ ಅಧಿಕದಿಂದ ಕೂಡಿದ ಭಾರೀ ಮಳೆಯಾಗಲಿದೆ.


ತೌಕ್ತೆ ಚಂಡಮಾರುತದ ಅಬ್ಬರದಿಂದ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇದೇ 20ರವರೆಗೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಮೇ 20ರವರೆಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯಲ್ಲಿ ಗಾಳಿಯ ವೇಗ ಹೆಚ್ಚಿರುವ ಕಾರಣ ಮೀನುಗಾರರು ಕಡಲಿಗೆ ಇಳಿಯದಂತೆ ಇಲಾಖೆ ಎಚ್ಚರಿಕೆ ನೀಡಿದೆ.

Published by:Sushma Chakre
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು