Nivar Cyclone - ಪುದುಚೇರಿಯಲ್ಲಿ ನೆಲಕಪ್ಪಳಿಸಿದ ‘ನಿವಾರ್’ ಚಂಡಮಾರುತ; ಸಂಜೆಯವರೆಗೂ ತಮಿಳುನಾಡು ಜರ್ಝರಿತ

Nivar Cyclone Landfall - ಪುದುಚೇರಿಯ ಮರಕ್ಕಣಮ್ನ ಸಮೀಪ ನಿವಾರ್ ಚಂಡಮಾರುತದ ಮುಖ್ಯಭಾಗ ಅಪ್ಪಳಿಸಿದೆ. ಇವತ್ತು ಸಂಜೆಯವರೆಗೂ ತಮಿಳುನಾಡಿನಲ್ಲಿ ಭಾರೀ ಮಳೆ ಗಾಳಿ ರಾಚಲಿದೆ. ನಾಳೆ ಶುಕ್ರವಾರವೂ ಮಳೆ ಮುಂದುವರಿಯುವ ಸಾಧ್ಯತೆ ಇದೆ.

ನಿವಾರ್ ಚಂಡಮಾರುತ

ನಿವಾರ್ ಚಂಡಮಾರುತ

 • News18
 • Last Updated :
 • Share this:
  ಚೆನ್ನೈ(ನ. 26): ನಿವಾರ್ ಚಂಡಮಾರುತ ನಿನ್ನೆ ಬುಧವಾರ ರಾತ್ರಿ ಪುದುಚೇರಿ ಬಳಿ ನೆಲಕ್ಕಪ್ಪಳಿಸಿದೆ. ಚೆನ್ನೈ ನಗರದಿಂದ 115 ಕಿಮೀ ದಕ್ಷಿಣಕ್ಕೆ ಹಾಗೂ ಪುದುಚೇರಿಯಿಂದ 30 ಕಿಮೀ ಉತ್ತರಕ್ಕೆ ಇರುವ ಮರಕ್ಕಣಮ್ ಸಮೀಪ ಚಂಡಮಾರುತ ಅಪ್ಪಳಿಸಿದೆ. ಪರಿಣಾಮವಾಗಿ ಪುದುಚೇರಿ ಮತ್ತು ಅದರ ದಕ್ಷಿಣಕ್ಕಿರುವ ಕಡಲೂರಿನ ಕರಾವಳಿ ಪ್ರದೇಶಗಳಲ್ಲಿ ಭಾರೀ ವೇಗದಲ್ಲಿ ಮಾರುತದ ಆರ್ಭಟ ನಡೆದಿದೆ. ಭಾರೀ ಮಳೆ ಜೊತೆಗೆ 130 ಕಿಮೀ ವೇಗದ ಗಾಳಿ ಬೀಸುತ್ತಿದೆ. ಚೆನ್ನೈ ನಗರದಲ್ಲೂ ಭಾರೀ ಮಳೆ ಗಾಳಿ ಅಲ್ಲಲ್ಲಿ ಆಗಿದೆ. ಚಂಡಮಾರುತದ ಪರಿಣಾಮವಾಗಿ ಇವತ್ತು ಮಧ್ಯಾಹ್ನದವರೆಗೂ ತಮಿಳುನಾಡಿನ ಕೆಲವೆಡೆ ದೊಡ್ಡ ಪ್ರಮಾಣದಲ್ಲಿ ಮಳೆ ಗಾಳಿ ಇರಲಿದೆ. ನಾಳೆ ಶುಕ್ರವಾರದವರೆಗೂ ಮಳೆ ಮುಂದುವರಿಯಲಿದೆ.

  ತಮಿಳುನಾಡಿನಲ್ಲಿ ನಿವಾರ್ ಚಂಡಮಾರುತದ ಪರಿಣಾಮ ಎದುರಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಕೆಳ ಪ್ರದೇಶಗಳು ಹಾಗೂ ಅಸುರಕ್ಷಿತ ಕಟ್ಟಡಗಳಿಂದ ಜನರನ್ನು ತೆರವುಗೊಳಿಸಿ ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ. 13 ಲಕ್ಷ ಜನರಿಗೆ ಸುರಕ್ಷತೆ ಕಲ್ಪಿಸಬಲ್ಲ 4,733 ಪರಿಹಾರ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯವರೆಗೆ 28 ಸಾವಿರ ಮಕ್ಕಳು ಸೇರಿ 1.38 ಲಕ್ಷ ಜನರನ್ನ ಈ ಕೇಂದ್ರಗಳಿಗೆ ಕಳುಹಿಸಲಾಗಿದೆ.

  ರಕ್ಷಣಾ ಕಾರ್ಯಕ್ಕಾಗಿ ಭಾರತೀಯ ಸೇನೆಯಿಂದ ಎಂಟು ತಂಡಗಳು ಇವತ್ತು ಚೆನ್ನೈಗೆ ಬರುತ್ತಿವೆ. ಒಂದೊಂದು ತಂಡದಲ್ಲಿ 10 ಮಂದಿ ಇದ್ದಾರೆ. ಇದರ ಜೊತೆಗೆ ಇನ್ನೂ ಆರು ತಂಡಗಳು ತಿರುಚ್ಚಿಗೆ ಹೋಗುತ್ತಿವೆ. ಹಾಗೆಯೇ, ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಗಳೂ ಕೂಡ ತಮ್ಮ ಹಲವು ತಂಡಗಳನ್ನ ರಕ್ಷಣಾ ಕಾರ್ಯಕ್ಕಾಗಿ ತಮಿಳುನಾಡಿನಲ್ಲಿ ನಿಯೋಜಿಸಿವೆ.

  ಇದನ್ನೂ ಓದಿ: ಚೀನಾದ 43 ಅಪ್ಲಿಕೇಶನ್​ಗಳು ಬ್ಯಾನ್; ಭಾರತದ ಕ್ರಮ WTO ನಿಯಮಗಳ ಉಲ್ಲಂಘನೆ ಎಂದ ಡ್ರ್ಯಾಗನ್ ರಾಷ್ಟ್ರ

  ಈಗಾಗಲೇ ತಮಿಳುನಾಡು ಮತ್ತು ಪುದುಚೇರಿಯ ಪೂರ್ವ ಕರಾವಳಿ ಭಾಗದಲ್ಲಿ ಭೀಕರ ಮಳೆಗಾಳಿ ರಾಚುತ್ತಿದೆ. ಚೆನ್ನೈ, ಚೆಂಗಲ್​ಪಟ್ಟು, ತಿರುವಳ್ಳೂರು, ಕಡಲೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಚೆನ್ನೈನಲ್ಲಿ 16 ಸೆಂ.ಮೀ.ನಷ್ಟು ಮಳೆಯಾಗಿರುವುದು ದಾಖಲಾಗಿದೆ.

  ಮುನ್ನೆಚ್ಚರಿಕೆಯಾಗಿ ಚೆನ್ನೈ ಬಳಿ ಇರುವ ಚೇರಂಬರಂಬಾಕ್ಕಂ ಜಲಾಶಯದ ಗೇಟ್​ಗಳನ್ನ ತೆರೆದು ಅಡ್ಯಾರ್ ನದಿಗೆ ಹರಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಈ ಜಲಾಶಯದ ಗೇಟ್ ತೆರೆದು ನೀರು ಹರಿಸಿರುವುದು ಇದೇ ಮೊದಲ ಬಾರಿಯಾಗಿದೆ. ಹಾಗೆಯೇ, ಈ ಭಾಗಗಳಲ್ಲಿ ವಿಮಾನ, ರೈಲು ಸಂಚಾರವನ್ನ ನಿಲ್ಲಿಸಲಾಗಿದೆ. ಶಾಲಾ ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಲಾಗಿದೆ.

  ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಎರಡು ದಿನ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
  Published by:Vijayasarthy SN
  First published: