ನವದೆಹಲಿ(ಡಿ.02): ನಿವಾರ್ ಚಂಡಮಾರುತದ ಬಳಿಕ ಮತ್ತೊಂದು ಸೈಕ್ಲೋನ್ ಭಾರತಕ್ಕೆ ಅಪ್ಪಳಿಸಲು ಸಿದ್ದವಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬುರೇವಿ ಎಂಬ ಚಂಡಮಾರುತ ಎದ್ದಿದೆ. ಇದು ಡಿಸೆಂಬರ್ 4ರಂದು ಕನ್ಯಾಕುಮಾರಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಸಂಜೆ ತಿಳಿಸಿದೆ. ಒಂದು ವಾರದ ಅವಧಿಯಲ್ಲಿ ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ಸೃಷ್ಟಿಯಾದ ಎರಡನೇ ಚಂಡಮಾರುತ ಈ ಬುರೇವಿ ಆಗಿದೆ. ಈ ಮೊದಲು ನಿವಾರ್ ಚಂಡಮಾರುತ ತಮಿಳುನಾಡಿಗೆ ಅಪ್ಪಳಿಸಿ ಭಾರೀ ಮಳೆಯಾಗಿತ್ತು.
ಅರೇಬಿಯನ್ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ನವೆಂಬರ್ 23ರಂದು ಗಟಿ ಎಂಬ ಚಂಡಮಾರುತ ಸೃಷ್ಟಿಯಾಗಿತ್ತು. ಇದು ಸೋಮಾಲಿಯಾ ಕರಾವಳಿಗೆ ಅಪ್ಪಳಿಸಿತ್ತು. ಬಳಿಕ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ನಿವಾರ್ ಸೈಕ್ಲೋನ್ ಎದ್ದಿತ್ತು. ಇದು ನವೆಂಬರ್ 25ರಂದು ಕಾರೈಕಲ್ ಮತ್ತು ಪಾಂಡಿಚೇರಿಗೆ ಅಪ್ಪಳಿಸಿತ್ತು.
ಜಿಲ್ಲಾಡಳಿತದ ನಡೆ ಗ್ರಾಮಗಳ ಕಡೆ; ಮನೆ ಬಾಗಿಲಿಗೆ ಬಂದಿದೆ ಸರ್ಕಾರದ ಸೇವೆ
ಇನ್ನು, ಈಗ ಅಪ್ಪಳಿಸಲು ಸಿದ್ಧವಾಗಿರುವ ಬುರೇವಿ ಚಂಡಮಾರುತದ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಬುರೇವಿ ಚಂಡಮಾರುತ ಶ್ರೀಲಂಕಾದ ತ್ರಿನ್ಕೋಮಲೆ ನಗರ ಹಾಗೂ ತಮಿಳುನಾಡಿನ ಕನ್ಯಾಕುಮಾರಿಗೆ ಹೆಚ್ಚು ಅಪ್ಪಳಿಸಲಿದೆ. ಇದು ಮುಂದಿನ 12 ಗಂಟೆಗಳಲ್ಲಿ ತೀವ್ರವಾಗಲಿದೆ. ತ್ರಿನ್ಕೊಮಲೆಯನ್ನು ದಾಟಿ ಬರುವಾಗ ಅಂದರೆ ಇಂದು ಸಂಜೆ ಅಥವಾ ರಾತ್ರಿ ಈ ಬುರೇವಿ ಚಂಡಮಾರುತದ ಪ್ರಭಾವ ಹೆಚ್ಚಾಗಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈ ಬುರೇವಿ ಚಂಡಮಾರುತ ಡಿಸೆಂಬರ್ 4ರವರೆಗೆ ಗಂಟೆಗೆ 75-85 ಕಿ.ಮೀ.ವೇಗದಲ್ಲಿ ಬೀಸಲಿದೆ. ಇದು ಡಿ.4ರ ಬೆಳಗ್ಗೆ ಕನ್ಯಾಕುಮಾರಿ ಮತ್ತು ಪಂಬನ್ ಮೂಲಕ ಪಶ್ಚಿಮದ ಕಡೆಗೆ ಚಲಿಸಲಿದೆ ಎಂದು ಐಎಂಡಿ ಹೇಳಿದೆ.
ಇಂದು ಮತ್ತು ನಾಳೆ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ತಮಿಳುನಾಡಿನ ಕನ್ಯಾಕುಮಾರಿ, ತಿರುನೆಲ್ವೆಲಿ, ತೂತುಕುಡಿ ಮತ್ತು ತೆಂಕಾಸಿ ಜಿಲ್ಲೆಗಳಲ್ಲಿ ಹಾಗೂ ಕೇರಳದ ತಿರುವನಂತಪುರಂ, ಕೊಲ್ಲಂ, ಪತನಮ್ಹಿತ ಮತ್ತು ಅಲಪ್ಪುಜ್ಹ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ