• Home
  • »
  • News
  • »
  • national-international
  • »
  • Cyclone Arnab: ಬುರೇವಿ ಬೆನ್ನಲ್ಲೇ ತಮಿಳುನಾಡಿಗೆ ಅಪ್ಪಳಿಸಲಿದೆ ಅರ್ನಬ್ ಚಂಡಮಾರುತ!

Cyclone Arnab: ಬುರೇವಿ ಬೆನ್ನಲ್ಲೇ ತಮಿಳುನಾಡಿಗೆ ಅಪ್ಪಳಿಸಲಿದೆ ಅರ್ನಬ್ ಚಂಡಮಾರುತ!

ಚಂಡಮಾರುತ

ಚಂಡಮಾರುತ

Cyclone Arnab: ಅರ್ನಬ್ ಚಂಡಮಾರುತವೆಂಬುದು ಬಾಂಗ್ಲಾ ದೇಶಿಗರು ಹೊಸ ಚಂಡಮಾರುತಕ್ಕೆ ಇಟ್ಟಿರುವ ಹೆಸರು. ಅಂದಹಾಗೆ, ಈ ಚಂಡಮಾರುತ ಯಾವಾಗ ಅಪ್ಪಳಿಸಲಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

  • Share this:

ಚೆನ್ನೈ (ಡಿ. 7): ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಅಂಫಾನ್​, ನಿವಾರ್, ಬುರೇವಿ ಚಂಡಮಾರುತಗಳು ದಕ್ಷಿಣ ಭಾರತಕ್ಕೆ ಅಪ್ಪಳಿಸಿದ್ದವು. ಬುರೇವಿಯ ಆರ್ಭಟ ಇನ್ನೂ ತಮಿಳುನಾಡು, ಕೇರಳದಲ್ಲಿ ಮುಂದುವರೆಯುತ್ತಿರುವಾಗಲೇ ಇನ್ನೊಂದು ಚಂಡಮಾರುತ ಅಪ್ಪಳಿಸುವ ಸೂಚನೆ ಸಿಕ್ಕಿದೆ. ಕೆಲವೇ ದಿನಗಳಲ್ಲಿ ಹಿಂದೂ ಮಹಾಸಾಗರದಲ್ಲಿ ಅರ್ನಬ್ ಎಂಬ ಚಂಡಮಾರುತ ಅಬ್ಬರಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬುರೇವಿ ಚಂಡಮಾರುತದ ಹೊಡೆತಕ್ಕೆ ನಲುಗಿರುವ ತಮಿಳುನಾಡಿನ ಮೇಲೆ ಅರ್ನಬ್ ಚಂಡಮಾರುತವೂ ಅಪ್ಪಳಿಸಲಿದೆ ಎನ್ನಲಾಗಿದೆ.


ಈ ವರ್ಷ ಒಂದರ ಹಿಂದೊಂದು ಚಂಡಮಾರುತ ಅಪ್ಪಳಿಸುತ್ತಿದ್ದು, ಮುಂದಿನ ಸರದಿ ಅರ್ನಬ್ ಚಂಡಮಾರುತದ್ದಾಗಿದೆ. ಇದೇನಿದು, ಅರ್ನಬ್ ವ್ಯಕ್ತಿಯ ಹೆಸರವೇ? ಎಂದು ಅಚ್ಚರಿ ಪಡಬೇಡಿ. ಅರ್ನಬ್ ಚಂಡಮಾರುತವೆಂಬುದು ಬಾಂಗ್ಲಾ ದೇಶಿಗರು ಹೊಸ ಚಂಡಮಾರುತಕ್ಕೆ ಇಟ್ಟಿರುವ ಹೆಸರು. ಈ ಹೆಸರನ್ನು ಹಿಂದೂ ಮಹಾಸಾಗರದ ಆಸುಪಾಸಿನ ದೇಶಗಳು ಕೂಡ ಒಪ್ಪಿಕೊಂಡಿದ್ದು, ಹೊಸ ಚಂಡಮಾರುತಕ್ಕೆ ಅರ್ನಬ್ ಎಂದು ಹೆಸರಿಡಲಾಗಿದೆ.


ಅಂದಹಾಗೆ, ಈ ಚಂಡಮಾರುತ ಯಾವಾಗ ಅಪ್ಪಳಿಸಲಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಏಳಲಿರುವ ಚಂಡಮಾರುತಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. 13 ದೇಶಗಳು ಸಿದ್ಧಪಡಿಸಿರುವ ಚಂಡಮಾರುತದ ಪಟ್ಟಿಯಲ್ಲಿ ಅರ್ನಬ್ ಚಂಡಮಾರುತದ ಹೆಸರು ಕೂಡ ಇದೆ. ಭಾರತ, ಬಾಂಗ್ಲಾದೇಶ, ಮಾಲ್ಡೀವ್ಸ್​, ಮಯನ್ಮಾರ್, ಓಮನ್, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್, ಇರಾನ್, ಕತಾರ್, ಸೌದಿ ಅರೇಬಿಯ, ಯುಎಇ ದೇಶಗಳು ಈ ಪಟ್ಟಿಯನ್ನು ತಯಾರಿಸಿವೆ.


ಇದನ್ನೂ ಓದಿ: Eluru Mystery Disease: ಆಂಧ್ರ ಪ್ರದೇಶದ ಎಲೂರಿನಲ್ಲಿ ನಿಗೂಢ ರೋಗ ಪತ್ತೆ; ಓರ್ವ ಸಾವು, 290 ರೋಗಿಗಳು ಅಸ್ವಸ್ಥ


ಫನಿ, ವಾಯು, ಬುಲ್​ಬುಲ್, ಹಿಕ್ಕಾ, ಅಂಫಾನ್, ನಿಸರ್ಗ, ನಿವಾರ್, ಬುರೇವಿ ಚಂಡಮಾರುತಗಳ ಬಳಿಕ ಇದೀಗ ಅರ್ನಬ್ ಚಂಡಮಾರುತ ತಮಿಳುನಾಡಿಗೆ ಅಪ್ಪಳಿಸಲಿದೆ ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ. ಬುರೇವಿ ಚಂಡಮಾರುತದ ಹಾವಳಿಯಿಂದ ತಮಿಳುನಾಡಿನ ಕಡ್ಡಲೂರ್ ಜಿಲ್ಲೆಯಲ್ಲಿ 66,000ಕ್ಕೂ ಅಧಿಕ ಜನರನ್ನು ಈಗಾಗಲೇ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 5,000 ಜನರನ್ನು ರಾಮನಾಥಪುರಕ್ಕೆ ಸ್ಥಳಾಂತರಿಸಲಾಗಿದೆ.


ತಮಿಳುನಾಡಿನ ಕನ್ಯಾಕುಮಾರಿ, ತಿರುನೆಲ್ವೇಲಿ, ತೂತುಕುಡಿ, ರಾಮನಾಥಪುರಂ, ಸಿವಗಂಗೈ ಮತ್ತು ಕೇರಳದ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ ಭಾಗದಲ್ಲಿ ಭಾರೀ ಮಳೆಯಾಗಿತ್ತು. ಇದರಿಂದ ಕೇರಳದಲ್ಲೂ ಅನೇಕ ಕಡೆ ಮನೆಗಳು ಮುಳುಗಡೆಯಾಗಿವೆ. ಹೀಗಾಗಿ, ಇಂದು ಕೇರಳದ 4 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಕೇರಳದ ಪಥನಾಂತಿಟ್ಟ, ಎರ್ನಾಕುಲಂ, ಇಡುಕ್ಕಿ, ಮಲಪ್ಪುರಂ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.


ಇದನ್ನೂ ಓದಿ: Karnataka Weather: ಬೆಂಗಳೂರು, ಕರಾವಳಿ, ಮಲೆನಾಡು, ಮೈಸೂರು, ಹಾಸನ ಕೊಡಗಿನಲ್ಲಿ ಇಂದಿನಿಂದ 6 ದಿನ ಮಳೆ


ತಮಿಳುನಾಡಿನ ಕಡ್ಡಲೂರ್ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಗ್ರಾಮಗಳು ನೀರಿನಿಂದ ಮುಳುಗಡೆಯಾಗಿದೆ. ಮಳೆಯಿಂದ ಮೃತಪಟ್ಟವರ ಕುಟುಂಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಮನೆ ಹಾಗೂ ಜಾನುವಾರುಗಳನ್ನು ಕಳೆದುಕೊಂಡವರಿಗೆ ಕೂಡ ಪರಿಹಾರ ಘೋಷಿಸಲಾಗಿದೆ. ಹಸುವನ್ನು ಕಳೆದುಕೊಂಡವರಿಗೆ 30 ಸಾವಿರ ರೂ., ಕರುವಿಗೆ 16 ಸಾವಿರ ಹಾಗೂ ಮೇಕೆಯನ್ನು ಕಳೆದುಕೊಂಡವರಿಗೆ 3,000 ಪರಿಹಾರ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.


ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡು, ಕೇರಳದಲ್ಲಿ ಬುರೇವಿ ಚಂಡಮಾರುತ ಅಪ್ಪಳಿಸಿದೆ. ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಹಲವು ಭಾಗಗಳಲ್ಲಿ ಬುರೇವಿ ಚಂಡಮಾರುತದ ಪರಿಣಾಮದಿಂದ ಮಳೆಯಾಗುತ್ತಿದೆ. ಶ್ರೀಲಂಕಾದಿಂದ ತಮಿಳುನಾಡು, ಕೇರಳದ ಕರಾವಳಿಯನ್ನು ಪ್ರವೇಶಿಸಿದ್ದ ಈ ಚಂಡಮಾರುತದ ಪರಿಣಾಮದಿಂದ ತಮಿಳುನಾಡೊಂದರಲ್ಲೇ 7 ಜನರು ಸಾವನ್ನಪ್ಪಿದ್ದಾರೆ. ಉಗ್ರರೂಪ ತಾಳಿದ ಚಂಡಮಾರುತದ ಅಬ್ಬರಕ್ಕೆ ನೂರಾರು ಗ್ರಾಮಗಳು ಜಲಾವೃತವಾಗಿವೆ.

Published by:Sushma Chakre
First published: