HOME » NEWS » National-international » CYCLONE AMPHAN UPDATES SUPER CYCLONE MAY CREATE HAVOC AFTER MAKING LANDFALL ON MAY 20TH WARNS IMD SNVS

Cyclone Amphan – ನಾಳೆ ಸಂಜೆಯೊಳಗೆ ನೆಲಕ್ಕಪ್ಪಳಿಸಲಿರುವ ಚಂಡಮಾರುತ; ಒಡಿಶಾ, ಬಂಗಾಳ, ಈಶಾನ್ಯದಲ್ಲಿ ಭಾರೀ ಮಳೆ ಸಾಧ್ಯತೆ

ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಗಳ ನಡುವಿನ ಕರಾವಳಿ ತೀರದಲ್ಲಿ ಸುಂದರ್​ಬನ್ಸ್ ಸಮೀಪದಲ್ಲಿ ಚಂಡಮಾರುತ ಮೊದಲು ಅಪ್ಪಳಿಸುವ ಸಾಧ್ಯತೆ ಇದೆ.

news18-kannada
Updated:May 19, 2020, 2:38 PM IST
Cyclone Amphan – ನಾಳೆ ಸಂಜೆಯೊಳಗೆ ನೆಲಕ್ಕಪ್ಪಳಿಸಲಿರುವ ಚಂಡಮಾರುತ; ಒಡಿಶಾ, ಬಂಗಾಳ, ಈಶಾನ್ಯದಲ್ಲಿ ಭಾರೀ ಮಳೆ ಸಾಧ್ಯತೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಮೇ 19): ಪ್ರಚಂಡ ವೇಗದಲ್ಲಿ ದಾಂಗುಡಿ ಇಡುತ್ತಿರುವ ಇಂಫನ್ ಚಂಡಮಾರುತ ನಾಳೆ ಬುಧವಾರ ಮಧ್ಯಾಹ್ನ ಅಥವಾ ಸಂಜೆಯಷ್ಟರಲ್ಲಿ ಬಂಗಾಳ ಕೊಲ್ಲಿಯ ಕಡಲತೀರವನ್ನು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಭಾರೀ ಪ್ರಬಲವಾಗಿರುವ ಈ ಚಂಡಮಾರುತವು ನೆಲಕ್ಕಪ್ಪಳಿಸಿದ ಬಳಿಕ ತುಸು ದುರ್ಬಲವಾದರೂ ಗಂಟೆಗೆ 180 ಕಿಮೀ ವೇಗದಲ್ಲಿ ರೌದ್ರಾವತಾರ ತಾಳುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.

ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಗಳ ನಡುವಿನ ಕರಾವಳಿ ತೀರದಲ್ಲಿ ಸುಂದರ್​ಬನ್ಸ್ ಸಮೀಪದಲ್ಲಿ ಚಂಡಮಾರುತ ಮೊದಲು ಅಪ್ಪಳಿಸುವ ಸಾಧ್ಯತೆ ಇದೆ.  ಚಂಡಮಾರುತದಿಂದ ಸಾಕಷ್ಟು ಹಾನಿಯಾಗುವ ಅಪಾಯ ಇದೆ ಎಂದು ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ಇಲಾಖೆ ಕಟ್ಟೆಚ್ಚರ ನೀಡಿದೆ.

ಹಾಗೆಯೇ, ಚಂಡಮಾರುತದಿಂದ ಏನೇನು ಹಾನಿಯಾಗಬಹುದೆಂದು ಇಲಾಖೆಯು ಸರಣಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ‘ಚೀನಾದ ತಾಳಕ್ಕೆ ಕುಣಿದರೆ ಶಾಶ್ವತ ಅನುದಾನ ಕಡಿತ’ - ವಿಶ್ವ ಆರೋಗ್ಯ ಸಂಸ್ಥೆಗೆ ಟ್ರಂಪ್ ಎಚ್ಚರಿಕೆ

ಗಾಳಿಯಿಂದ ವಿವಿಧ ರೀತಿಯ ವಸ್ತುಗಳು ತೂರಿ ಬರಬಹುದು. ಸಾಕಷ್ಟು ಗುಡಿಸಲು ಮನೆಗಳು, ಚಾವಣಿ ಮನೆಗಳಿಗೆ ಧಕ್ಕೆಯಾಗಬಹುದು. ಅನೇಕ ಮನೆಗಳ ಛಾವಣಿಗಳೇ ಕಿತ್ತುಹೋಗಬಹುದು. ವಿದ್ಯುತ್ ಕಂಬಗಳು, ಮೊಬೈಲ್ ಟವರ್​ಗಳು ಬುಡಸಮೇತ ಕಿತ್ತುಹೋಗಬಹುದು. ಹಲವು ಕಡೆ ರಸ್ತೆ ಮತ್ತು ರೈಲು ಮಾರ್ಗಕ್ಕೆ ಧಕ್ಕೆಯಾಗಬಹುದು. ಬೆಳೆದು ನಿಂತ ರೈತರ ಬೆಳೆ ನಾಶವಾಗಬಹುದು. ತೆಂಗು, ಅಡಿಕೆಯಂತಹ ಮರಗಳೂ ಧರೆಗುರುಳಬಹುದು. ಲಂಗರು ಹಾಕಿ ನಿಲ್ಲಿಸಿದ ಹಡಗು, ದೋಣಿಗಳು ಮುರಿದುಬೀಳಬಹುದು ಎಂದು ಐಎಂಡಿ ಎಚ್ಚರಿಸಿದೆ.







ಪಶ್ಚಿಮ ಬಂಗಾಳದ ಡೀಘಾ ಪ್ರದೇಶದಲ್ಲಿ ಚಂಡಮಾರುತ ಅಡಿ ಇಡುವ ಸಾಧ್ಯತೆ ಇರುವುದರಿಂದ ಆ ಪಟ್ಟಣದಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗುತ್ತಿದೆ. ಈಗಾಗಲೇ 15 ಸಾವಿರ ಜನರನ್ನು ಪ್ರವಾಹ ಕೇಂದ್ರಗಳಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: ಅಮೆರಿಕಕ್ಕೆ ಭಾರತ ಸರಬರಾಜು ಮಾಡಿದ ಔಷಧಿಯನ್ನೇ ನಿತ್ಯ ಸೇವಿಸುತ್ತಿರುವ ಟ್ರಂಪ್

ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಚಂಡಮಾರುತದ ಪರಿಣಾಮ ಹೆಚ್ಚಿರಲಿದ್ದು, ಇಲ್ಲಿಯ ಕಡಲತೀರದಲ್ಲಿ ಯಾವುದೇ ಮೀನುಗಾರಿಕೆ ಚಟುವಟಿಕೆ ನಡೆದಂತೆ ಹವಾಮಾನ ಇಲಾಖೆ ಸೂಚಿಸಿದೆ. ಒಂದು ಅಂದಾಜು ಪ್ರಕಾರ 7 ಲಕ್ಷ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಲಿದೆ. ಒಡಿಶಾದ 12 ಕರಾವಳಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಇದೆ. ಎನ್​ಡಿಆರ್​ಎಫ್ ತಂಡಗಳು ಅನೇಕ ಕಡೆ ಜನರಿಗೆ ಜಾಗ್ರತೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಎಲ್ಲೆಲ್ಲಿ ಮಳೆ?
ಒಡಿಶಾದ ಉತ್ತರ ಭಾಗ, ಪಶ್ಚಿಮ ಬಂಗಾಳ, ಸಿಕ್ಕಿಂ ಸೇರಿದಂತೆ ಈಶಾನ್ಯ ರಾಜ್ಯಗಳ ಹಲವೆಡೆ ಮುಂದಿನ 2-3 ದಿನದಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಕೋಲ್ಕತಾ ಸೇರಿದಂತೆ ಬಂಗಾಳದ ಕರಾವಳಿ ಭಾಗದ ಕೆಲವೆಡೆ ಮಳೆಯ ರೌದ್ರಾವತಾರ ತಾರಕವಿರಲಿದೆ ಎಂದು ಐಎಂಡಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಸಿ ಗಾಳಿ ಎಚ್ಚರಿಕೆ?

ಈಗ ದೇಶದೆಲ್ಲೆಡೆ ಹೆಚ್ಚು ಬಿಸಿಲಿನ ವಾತಾವರಣ ಇಲ್ಲ. ಆದರೆ, ವಾಯವ್ಯ ಭಾಗದ ಕೆಳಹಂತದಲ್ಲಿ ಬೀಸುತ್ತಿರುವ ಗಾಳಿಯಿಂದಾಗಿ ಮುಂದಿನ ಕೆಲ ದಿನಗಳಲ್ಲಿ ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ರಾಜಸ್ಥಾನ, ಉತ್ತರ ಪ್ರದೇಶ, ತೆಲಂಗಾಣ, ಗುಜರಾತ್, ಆಂಧ್ರಪ್ರದೇಶಗಳಲ್ಲಿ ಬಿಸಿ ಗಾಳಿ ಪ್ರವಹಿಸಲಿದೆ ಎಂದೂ ಹವಾಮಾನ ಇಲಾಖೆ ಎಚ್ಚರಿಸಿದೆ.

First published: May 19, 2020, 2:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories