ಗುವಾಹಟಿ: ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತದಾನ ಮಾಡಿದ ಆರೋಪದ ಮೇಲೆ ಮಣಿಪುರದ ಕಾಂಗ್ರೆಸ್ ತನ್ನ ಪಕ್ಷದ ಇಬ್ಬರು ಶಾಸಕರಿಗೆ ಶೋ-ಕಾಸ್ ನೋಟಿಸ್ ನೀಡಿದೆ. ಶಾಸಕರಾದ ಒಕ್ರಮ್ ಹೆನ್ರಿ ಮತ್ತು ಆರ್ ಕೆ ಇಮೋ ಸಿಂಗ್ ಅಡ್ಡ ಮತದಾನ ಮಾಡಿದ್ದು ಇದೀಗ ಅವರಿಗೆ ನೋಟಿಸ್ ನೀಡಲಾಗಿದೆ.
ಶಾಸಕ ಒಕ್ರಮ್ ಹೆನ್ರಿ ಮಾಜಿ ಮುಖ್ಯಮಂತ್ರಿ ಒಕ್ರಮ್ ಇಬೋಬಿ ಸಿಂಗ್ ಅವರ ಸೋದರಳಿಯ. ಇವರು ಪ್ರಸ್ತುತ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕರಾಗಿದ್ದಾರೆ. ಇನ್ನೂ ಮತ್ತೋರ್ವ ಶಾಸಕರಾದ ಆರ್.ಕೆ. ಇಮೋ ಸಿಂಗ್ ಅವರು ಮಣಿಪುರದ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ಅವರ ಅಳಿಯ ಎಂದು ತಿಳಿದುಬಂದಿದೆ.
ಜೂನ್ 19ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಈ ಇಬ್ಬರೂ ಕಾಂಗ್ರೆಸ್ ಶಾಸಕರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಮತದಾನ ಮಾಡಿದ್ದರು. ಈ ಸಂಬಂಧ ನೊಟೀಸ್ ನೀಡಿರುವ ಮಣಿಪುರ ಕಾಂಗ್ರೆಸ್, “ಜೂನ್ 19 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಅಡ್ಡ-ಮತದಾನ ಮಾಡುವ ಮೂಲಕ ನೀವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ನಿರ್ಧಾರವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದೀರಿ. ನಮ್ಮ ಅಭ್ಯರ್ಥಿಯನ್ನು ಬೆಂಬಲಿಸುವ ಪಕ್ಷದ ತತ್ವವನ್ನು ನೀವು ಉಲ್ಲಂಘಿಸಿದ್ದೀರಿ.
ಇದಲ್ಲದೆ, ಮುಖ್ಯಮಂತ್ರಿಗಳ ಬಂಗಲೆಯಲ್ಲಿ ಆಯೋಜಿಸಲಾಗಿದ್ದ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಅಭ್ಯರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲೂ ಇಬ್ಬರು ಶಾಸಕರು ಭಾಗವಹಿಸಿದ್ದೀರಿ. ಇದು ಪಕ್ಷ ವಿರೋಧಿ ಚಟುವಟಿಕೆಯಾಗಿದೆ” ಎಂದು ನೊಟೀಸ್‌ನಲ್ಲಿ ತಿಳಿಸಲಾಗಿದೆ. ಅಲ್ಲದೆ, ಈ ನೊಟೀಸ್ ಪ್ರತಿಯನ್ನು ಮಾಧ್ಯಮಗಳಿಗೂ ನೀಡಲಾಗಿದೆ.
ಪಕ್ಷದ ಇಬ್ಬರು ಯುವ ಶಾಸಕರಿಗೆ ನೋಟಿಸ್‌ಗೆ ಸ್ಪಂದಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ. ರಾಜ್ಯಸಭಾ ಚುನಾವಣೆ ನಿಮಿತ್ತ ಮಣಿಪುರದಲ್ಲೂ ಬಿಜೆಪಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಮುಂದಾಗಿತ್ತು. ಹೀಗಾಗಿ ಪಕ್ಷಾಂತರ ಮಾಡಿದ್ದ 8 ಜನ ಕಾಂಗ್ರೆಸ್ ಶಾಸಕರನ್ನು ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಸ್ಪೀಕರ್ ಅನರ್ಹಗೊಳಿಸಿದ್ದರು. ಮಣಿಪುರ ಹೈಕೋರ್ಟ್ ಸ್ಪೀಕರ್ ತೀರ್ಪನ್ನು ಎತ್ತಿಹಿಡಿದಿತ್ತು.
ಇದನ್ನೂ ಓದಿ : ಕೊರೋನಾ ವಿರುದ್ಧದ ಹೋರಾಟಕ್ಕೆ ಹನುಮಾನ್ ಚಾಲಿಸಾ ಪಠಿಸಿ; ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸಲಹೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ