Sushma ChakreSushma Chakre
|
news18-kannada Updated:January 8, 2021, 3:27 PM IST
ಕ್ರೊಯೇಷ್ಯಾದಲ್ಲಿ ಭೂಕಂಪ
ನವದೆಹಲಿ (ಡಿ. 30): ಕ್ರೊಯೇಷ್ಯಾದಲ್ಲಿ ನಿನ್ನೆ ಸಂಜೆ ಪ್ರಬಲ ಭೂಕಂಪ ಸಂಭವಿಸಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಸಾವನ್ನಪ್ಪಿದವರಲ್ಲಿ 12 ವರ್ಷದ ಬಾಲಕಿಯೂ ಸೇರಿದ್ದಾಳೆ. ಭೂಕಂಪದಿಂದ ಬೃಹತ್ ಕಟ್ಟಡಗಳು ಕುಸಿದುಬಿದ್ದಿದ್ದು, ಜನರು ಆತಂಕದಿಂದ ಜೀವ ರಕ್ಷಣೆಗಾಗಿ ಪರದಾಡಿದರು. ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿದ್ದು, 46 ಕಿ.ಮೀ. ಪ್ರದೇಶದಲ್ಲಿ ಭೂಕಂಪ ಉಂಟಾಗಿದೆ.
ಕ್ರೊಯೇಷ್ಯಾದ ಆಗ್ನೇಯ ಭಾಗದಲ್ಲಿನ ಪೆಟ್ರಿಂಜ ಎಂಬಲ್ಲಿ ಭೂಕಂಪದಿಂದ ಅತಿಹೆಚ್ಚು ಹಾನಿ ಉಂಟಾಗಿದೆ. ನಿನ್ನೆ ಕ್ರೊಯೇಷ್ಯಾದಾದ್ಯಂತ ಭೂಕಂಪದ ಅನುಭವವಾಗಿದ್ದು, ನೆರೆಯ ರಾಷ್ಟ್ರಗಳಾದ ಸರ್ಬಿಯಾ, ಬೋಸ್ನಿಯಾ ಹಾಗೂ ದಕ್ಷಿಣ ಆಸ್ಟ್ರಿಯಾದಲ್ಲೂ ಭೂಮಿ ಕಂಪಿಸಿದೆ. ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರದಲ್ಲಿ 6.3 ತೀವ್ರತೆ ದಾಖಲಾಗಿದ್ದು, ಸೋಮವಾರವೂ 5.2 ತೀವ್ರತೆಯ ಭೂಕಂಪನವಾಗಿತ್ತು. ಈ ಘಟನೆಯಲ್ಲಿ ಪೆಟ್ರಿಂಜದ 12 ವರ್ಷದ ಬಾಲಕಿ ಸಾವನ್ನಪ್ಪಿದ್ದು, ಈ ನಗರದಲ್ಲಿ 25 ಸಾವಿರ ಜನರು ವಾಸವಾಗಿದ್ದರು. ಇದೇ ನಗರದ ಸುತ್ತಲಿನ ಹಳ್ಳಿಗಳ 6 ಜನರು ಕೂಡ ಭೂಕಂಪಕ್ಕೆ ಬಲಿಯಾಗಿದ್ದಾರೆ.
ಭೂಕಂಪದ ಬಳಿಕ 20ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅತ್ಯಂತ ಪ್ರಬಲ ಭೂಕಂಪ ಇದಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಹಳೆಯ ಕಟ್ಟಡಗಳಿಂದ ಜನರು ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಪ್ರತೀ ವರ್ಷ ಎಷ್ಟು ಹುಡುಗಿಯರ ಅಪಹರಣ, ಮತಾಂತರವಾಗುತ್ತಿದೆ ಗೊತ್ತಾ?
ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೆಟ್ರಿಂಜ ಮೇಯರ್ ಡಾರಿಂಕೋ ಡಂಬೋವಿಕ್, ಭೂಕಂಪದ ನಂತರ ನಮ್ಮ ನಗರ ಬಹುತೇಕ ನಾಶವಾಗಿದೆ. ಹಿರೋಶಿಮಾ ರೀತಿಯ ಪರಿಸ್ಥಿತಿ ಈಗ ಇಲ್ಲಿ ನಿರ್ಮಾಣವಾಗಿದೆ. ನಮ್ಮ ನಗರದಲ್ಲಿ ಅರ್ಧ ಭಾಗ ಸಂಪೂರ್ಣ ನಾಶವಾಗಿದೆ ಎಂದು ಹೇಳಿದ್ದಾರೆ. ಭೂಕಂಪದ ಬಳಿಕ ಕ್ರೊಯೇಷ್ಯಾದ ಪ್ರಧಾನಿ ಆ್ಯಂಡ್ರೆಜ್ ಪ್ಲೆಂಕೋವಿಕ್ ಮತ್ತು ಇತರೆ ಸಚಿವರು ಪೆಟ್ರಿಂಜಕ್ಕೆ ಭೇಟಿ ನೀಡಿ, ಭೂಕಂಪ ಸಂಭವಿಸಿದ ಸ್ಥಳವನ್ನು ಪರಿಶೀಲಿಸಿದ್ದಾರೆ. ಈ ಪ್ರದೇಶದ ಜನರನ್ನು ಅಕ್ಕಪಕ್ಕದ ಹೋಟೆಲ್, ಮತ್ತಿತರ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಪೆಟ್ರಿಂಜ ನಗರವೀ ರೆಡ್ ಜೋನ್ನಲ್ಲಿದೆ ಎಂದು ಪ್ರಧಾನಿ ಪ್ಲೆಂಕೋವಿಕ್ ತಿಳಿಸಿದ್ದಾರೆ.
ಕ್ರೊಯೇಷ್ಯಾದಲ್ಲಿ ಭೂಕಂಪ ಸಂಭವಿಸಿದ್ದರಿಂದ ಕ್ರೊಯೇಷ್ಯಾ ಗಡಿಯಲ್ಲಿರುವ ಸ್ಲೋವೇನಿಯಾದ ಪರಮಾಣು ವಿದ್ಯುತ್ ಸ್ಥಾವರವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published by:
Sushma Chakre
First published:
December 30, 2020, 10:13 AM IST