Chhattisgarh Congress Crisis| ಪಂಜಾಬ್ ಬೆನ್ನಿಗೆ ಛತ್ತೀಸ್ಗಢ ಕಾಂಗ್ರೆಸ್​ನಲ್ಲಿ ಬಿಕ್ಕಟ್ಟು, ಸಿಎಂ ಬದಲಾವಣೆಗೆ ಚಿತಾವಣೆ

ಭೂಪೇಶ್ ಬಘೇಲ್ ಸಿಎಂ ಆಗಿ ಎರಡೂವರೆ ವರ್ಷ ಪೂರ್ಣಗೊಳಿಸಿರುವುದರಿಂದ ಮುಂದಿನ 2.5 ವರ್ಷಗಳ ಅವಧಿಗೆ ಅಧಿಕಾರ ಹಂಚಿಕೆ ಸೂತ್ರದ ಪ್ರಕಾರ ನಾಯಕತ್ವ ಬದಲಾವಣೆ ಆಗಬೇಕು ಎಂದು ಒತ್ತಡ ಹೇರಲಾಗುತ್ತಿದೆ.

ಸಿಎಂ ಭೂಪೇಶ್ ಬಘೇಲ್.

ಸಿಎಂ ಭೂಪೇಶ್ ಬಘೇಲ್.

  • Share this:
ನವ ದೆಹಲಿ (ಅಕ್ಟೋಬರ್​. 02); ಪಂಜಾಬ್ ರಾಜಕೀಯ ಬೆಳವಣಿಗೆಗಳು (Punjab Political Developments) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಆ ಸಮಸ್ಯೆಗಳನ್ನು ಬಗೆಹರಿಸಲು ಹೈರಾಣವಾಗಿರುವ ಕಾಂಗ್ರೆಸ್ ಹೈಕಮಾಂಡಿಗೆ (Congress High Command) ಈಗ ಛತ್ತೀಸ್ಗಢದ (Chhattisgarh) ಸಮಸ್ಯೆ ಶುರುವಾಗಿದೆ. ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Chief Minister Bhupesh Baghel) ಅವರನ್ನು ಕೆಳಗಿಳಿಸುವಂತೆ ಅಲ್ಲಿನ ಬಂಡಾಯಗಾರರ ಗುಂಪು‌ (Rebel's group)  ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದೆ. ಇನ್ನೊಂದೆಡೆ ಭೂಪೇಶ್ ಬಘೇಲ್ ಅವರನ್ನೇ ಮುಂದುವರೆಸಬೇಕೆಂದು ಮತ್ತೊಂದು ಬಣ ಒತ್ತಡ ಹೇರುತ್ತಿದೆ. ಇದರಿಂದಾಗಿ ಪಂಜಾಬಿನಂತೆ ಛತ್ತೀಸ್ಗಢದ ವಿಷಯದಲ್ಲೂ ಕಾಂಗ್ರೆಸ್ ಹೈಕಮಾಂಡ್ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಛತ್ತೀಸ್ಗಢ ರಾಜಕೀಯದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಮುಖ್ಯಮಂತ್ರಿ ಭೂಪೇಶ್ ಬಘೇಲ್‌ ಪರ ಇರುವ ಸುಮಾರು 25 ಕಾಂಗ್ರೆಸ್ ಶಾಸಕರು (Congress MLAs) ನವದೆಹಲಿಗೆ (New Delhi) ದೌಡಾಯಿಸಿದ್ದಾರೆ. ಶನಿವಾರ ಇನ್ನೂ 15 ಶಾಸಕರು ರಾಷ್ಟ್ರ ರಾಜಧಾನಿಗೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿಯಲ್ಲಿ ಕ್ಯಾಂಪ್ ಮಾಡುತ್ತಿರುವ ಶಾಸಕರು ಛತ್ತೀಸ್ಗಢ ಕಾಂಗ್ರೆಸ್ ಉಸ್ತುವಾರಿ ಪಿ.ಎಲ್. ಪುನಿಯಾ (Chhattisgarh Congress in-charge PL Punia) ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ (AICC General Secretary K.C. Venugopal) ಅವರನ್ನು ಭೇಟಿ ಮಾಡಿ ಭೂಪೇಶ್ ಬಘೇಲ್‌ ಅವರನ್ನೇ ಮುಂದುವರೆಸುವಂತೆ ಒತ್ತಾಯಿಸಲಿದ್ದಾರೆ ಎಂದು ತಿಳಿದುಬಂದಿದೆ.

ದೆಹಲಿಯಲ್ಲಿ ಮೊಕ್ಕಾಂ ಹೂಡಿರುವ ಶಾಸಕರಲ್ಲಿ ಒಬ್ಬರಾದ ವಿನಯ್ ಜೈಸ್ವಾಲ್ ಅವರು ಮಾಧ್ಯಮಗಳಿಗೆ ಮಾತನಾಡುತ್ತಾ, '26 ಶಾಸಕರು ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿರುವುದು 'ವೈಯಕ್ತಿಕ ಭೇಟಿಗಾಗಿ' (Personal Visit). ನಾವು ಯಾವುದೇ ರೀತಿಯ ಶಕ್ತಿ ಪ್ರದರ್ಶನ ಮಾಡಲು ಅಥವಾ ರಾಜಕೀಯ ಮಾಡುವ ಉದ್ದೇಶಕ್ಕೆ ದೆಹಲಿಗೆ ಬಂದಿಲ್ಲ ಎಂದಿದ್ದಾರೆ.

ಆದರೆ ಕಳೆದ ಆಗಸ್ಟ್‌ ತಿಂಗಳಲ್ಲಿ ಶಾಸಕರ ತಂಡ ನವದೆಹಲಿಗೆ ಬಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪರ ಶಕ್ತಿ ಪ್ರದರ್ಶನ ಮಾಡಿದ್ದರಿಂದ ಈಗಲೂ ಅದೇ ಕಾರಣ ಇರಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಪಕ್ಷದ ಹೈಕಮಾಂಡ್ ಮೇಲೆ ಮತ್ತೊಮ್ಮೆ ಒತ್ತಡ ಹೇರಲು ಪ್ರಯತ್ನಿಸುತ್ತಿರಬಹುದು ಎಂದು ಹೇಳಲಾಗುತ್ತಿದೆ. ಈ ಬಾರಿ ಶಾಸಕರ ಜೊತೆ ಅಲ್ಲಿನ ಹಲವಾರು ಮೇಯರ್‌ಗಳು ಕೂಡ ಮುಖ್ಯಮಂತ್ರಿಗೆ ಬೆಂಬಲವನ್ನು ನೀಡಿ ದೆಹಲಿಗೆ ಆಗಮಿಸಿದ್ದಾರೆ.

ಆದರೆ, ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಹೈಕಮಾಂಡ್ ಮೇಲೆ ಒತ್ತಡ ಹೇರುವುದನ್ನು ನಿರಾಕರಿಸಿದ್ದಾರೆ. 'ಯಾರೂ ಎಲ್ಲಿಗೂ ಹೋಗಲು ಸಾಧ್ಯವಿಲ್ಲವೇ? ಅವರ ವೈಯಕ್ತಿಕ ಭೇಟಿಯನ್ನು ರಾಜಕೀಯ ಕನ್ನಡಕದ ಮೂಲಕ ನೋಡಬಾರದು' ಎಂದು ಬಘೇಲ್ ರಾಯಪುರದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ನಡುವೆ ರಾಜ್ಯ ಆರೋಗ್ಯ ಸಚಿವ ಟಿಎಸ್ ಸಿಂಗ್ ದಿಯೋ ಬಂಡಾಯ ಎದ್ದಿದ್ದಾರೆ. ಬಿಜೆಪಿ ಸೇರುತ್ತಾರೆ ಎಂಬ ವಿಷಯ ಚಾಲ್ತಿಯಲ್ಲಿದೆ.

ಸದ್ಯದ ಬೆಳವಣಿಗೆಗಳಿಂದ  ಛತ್ತೀಸ್ಗಢ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಮಾರ್ಕಮ್ (Chhattisgarh Congress Party President Mohan Markam) ಸಂದಿಗ್ಧತೆಯನ್ನು ಎದುರಿಸುತ್ತಿದ್ದಾರೆ. ನಾಯಕರ ಅಶಿಸ್ತು ಮತ್ತು ಪದೇ ಪದೇ ದೆಹಲಿ ಭೇಟಿಗಳ ಕುರಿತು ಮಾಧ್ಯಮಗಳು ಅವರನ್ನು ಪ್ರಶ್ನೆ ಮಾಡಿದಾಗ 'ಪಕ್ಷದ ನಾಯಕತ್ವ ಎಲ್ಲವನ್ನೂ ಗಮನಿಸುತ್ತಿದೆ. ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ಆಗಲಿದೆ. ಶಾಸಕರು ಅವರ ಅಭಿಪ್ರಾಯ ವ್ಯಕ್ತಪಡಿಸುವುದು ತಪ್ಪಲ್ಲ' ಎಂದು ಹೇಳಿದ್ದಾರೆ.

ಇದನ್ನೂ ಓದಿ: Amarinder Singh: ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾದ ಕ್ಯಾಪ್ಟನ್; ಸಿಧು ವಿರೋಧಿ ಬಣದ 'ಕೈ' ನಾಯಕರನ್ನ ಸೆಳೆಯುವ ಪ್ರಯತ್ನ!

ವಾಸ್ತವವಾಗಿ ಛತ್ತೀಸ್ಗಢದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪರ - ವಿರುದ್ಧ ಶೀತಲ ಸಮರ ಬಹಳ ದಿನಗಳಿಂದ ನಡೆಯುತ್ತಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಪಂಜಾಬಿನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ (Capt Amarinder Singh) ಅವರನ್ನು ಬದಲಿಸಿ ಚರಣ್ಜಿತ್ ಸಿಂಗ್ ಚನ್ನಿ (Charanjit Singh Channi) ಅವರನ್ನು ಮುಖ್ಯಮಂತ್ರಿ ಮಾಡಿದ ನಂತರ ಛತ್ತೀಸ್ಗಢದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಭೂಪೇಶ್ ಬಘೇಲ್ ಮುಖ್ಯಮಂತ್ರಿಯಾಗಿ ಇದೇ ಜೂನ್ ತಿಂಗಳಿಗೆ ಎರಡೂವರೆ ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದರಿಂದ ಮುಂದಿನ 2.5 ವರ್ಷಗಳ ಅವಧಿಗೆ ಅಧಿಕಾರ ಹಂಚಿಕೆ ಸೂತ್ರದ ಪ್ರಕಾರ ನಾಯಕತ್ವ ಬದಲಾವಣೆ ಆಗಬೇಕೆಂದು ಒತ್ತಡ ಹೇರಲಾಗುತ್ತಿದೆ ಎಂದು ತಿಳಿದುಬಂದಿದೆ.
Published by:MAshok Kumar
First published: