ಮಗಳ ಪಾಲಿಗೆ ಅಪ್ಪನೇ ಮೃತ್ಯು; 3 ವಾರಗಳ ನಂತರ ಬಯಲಾಯ್ತು ತೆಲಂಗಾಣ ಯುವತಿ ಕೊಲೆ ರಹಸ್ಯ

ಪಿಯುಸಿ ಓದುತ್ತಿದ್ದ ರಾಧಿಕಾ ಪೋಲಿಯೋದಿಂದ ಬಳಲುತ್ತಿದ್ದಳು. ಫೆ. 10ರಂದು ಆಕೆಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಕೇಸನ್ನು ಭೇದಿಸಲು 75 ಪೊಲೀಸರ ತಂಡವನ್ನು ರಚಿಸಲಾಗಿತ್ತು. 3 ವಾರಗಳ ಬಳಿಕ ಕೊನೆಗೂ ರಾಧಿಕಾಳ ಕೊಲೆಯ ರಹಸ್ಯ ಬಯಲಾಗಿದೆ.

ಆರೋಪಿಯೊಂದಿಗೆ ಹೈದರಾಬಾದ್ ಪೊಲೀಸರು

ಆರೋಪಿಯೊಂದಿಗೆ ಹೈದರಾಬಾದ್ ಪೊಲೀಸರು

  • Share this:
ಹೈದರಾಬಾದ್​ (ಮಾ. 3): ಕೆಲವು ದಿನಗಳ ಹಿಂದಷ್ಟೇ ತೆಲಂಗಾಣದ ಕರೀಂ ನಗರದಲ್ಲಿ 19 ವರ್ಷದ ಯುವತಿಯನ್ನು ದಾರುಣವಾಗಿ ಹತ್ಯೆ ಮಾಡಲಾಗಿತ್ತು. ಆ ಕೊಲೆ ಪ್ರಕರಣದ ಬೆನ್ನತ್ತಿದ ಪೊಲೀಸರು ಕೊಲೆಯಾದ ಯುವತಿಯ ಅಪ್ಪನನ್ನು ಬಂಧಿಸಿದ್ದಾರೆ. ಮಗಳ ವೈದ್ಯಕೀಯ ವೆಚ್ಚವನ್ನು ಭರಿಸಲಾಗದೆ ಅಪ್ಪನೇ ಆಕೆಯನ್ನು ಕೊಲೆ ಮಾಡಿರುವ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಮೂರು ವಾರಗಳ ಹಿಂದೆ ತೆಲಂಗಾಣದ 19 ವರ್ಷದ ಯುವತಿ ಮುಥಾ ರಾಧಿಕಾ ಎಂಬಾಕೆಯ ಕೊಲೆಯಾಗಿತ್ತು. ಈ ಹತ್ಯೆಯ ಹಿಂದಿನ ರಹಸ್ಯವನ್ನು ಭೇದಿಸಲು ಹೊರಟ ಪೊಲೀಸರಿಗೆ ಯಾವ ಸುಳಿವೂ ಸಿಕ್ಕಿರಲಿಲ್ಲ. 3 ವಾರಗಳ ಕಾಲ ಸತತವಾಗಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿದ 75 ಪೊಲೀಸರ ತಂಡಕ್ಕೆ ಕೊನೆಗೆ ಆಕೆಯ ಅಪ್ಪನ ಮೇಲೆ ಅನುಮಾನ ಬಲವಾಗಿತ್ತು. ತೆಲಂಗಾಣವನ್ನು ಬೆಚ್ಚಿಬೀಳಿಸಿದ್ದ ಈ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಆಕೆಯ ಅಪ್ಪನೇ ಮಗಳನ್ನು ಕೊಲೆ ಮಾಡಿರುವ ಆರೋಪಿ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ರಾಧಿಕಾಳನ್ನು ಕೊಲೆ ಮಾಡಿ, ಯಾವುದೇ ಸಾಕ್ಷ್ಯ ಸಿಗಬಾರದೆಂದು ನೀರಿನಿಂದ ತೊಳೆಯಲಾಗಿತ್ತು. ಈ ಕೇಸನ್ನು ಭೇದಿಸಲು ಜರ್ಮನ್ ತಂತ್ರಜ್ಞಾನವನ್ನು ಬಳಸಿದ ಪೊಲೀಸರು ಸಾಕ್ಷಿಗಳನ್ನು ಒಂದೊಂದಾಗಿ ಕಲೆಹಾಕಿದರು. ಆಗ ಆ ಎಲ್ಲ ಸಾಕ್ಷಿಗಳು ಯುವತಿಯ ತಂದೆಯ ಕಡೆಗೆ ಬೆರಳು ಮಾಡಿ ತೋರಿಸುತ್ತಿದ್ದವು.

ಇದನ್ನೂ ಓದಿ: ವಿದ್ಯಾರ್ಥಿನಿಯನ್ನು ಮಂಚಕ್ಕೆ ಕರೆದ ಶಿಕ್ಷಕ; ಸಲ್ಲಾಪದ ಫೋಟೋ ವೈರಲ್ ಆಗುತ್ತಿದ್ದಂತೆ ಕಾಮುಕ ಪರಾರಿ

ಪಿಯುಸಿ ಓದುತ್ತಿದ್ದ ರಾಧಿಕಾ ಪೋಲಿಯೋದಿಂದ ಬಳಲುತ್ತಿದ್ದಳು. ಫೆ. 10ರಂದು ಆಕೆಯ ಮನೆಯಲ್ಲಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಆಕೆಯ ಅಪ್ಪ-ಅಮ್ಮ ಇಬ್ಬರೂ ದಿನಗೂಲಿ ನೌಕರರಾಗಿದ್ದರು. ತಾವು ಕೆಲಸದಿಂದ ಸಂಜೆ ವಾಪಾಸ್​ ಬಂದಾಗ ಮಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದಳು ಎಂದು ಆಕೆಯ ಅಪ್ಪ-ಅಮ್ಮ ಗೋಳಾಡಿದ್ದರು.

ರಾಧಿಕಾಳ ಪೋಲಿಯೋ ಶಸ್ತ್ರಚಿಕಿತ್ಸೆಗೆ 6 ಲಕ್ಷ ಬೇಕಾಗಿತ್ತು. ಮಗಳ ವೈದ್ಯಕೀಯ ವೆಚ್ಚವನ್ನು ಭರಿಸಲಾಗದೆ ಆಕೆಯನ್ನು ಕೊಲೆ ಮಾಡಲು ಕೊಮುರಯ್ಯ ಯೋಚಿಸಿದ್ದ. ಅಡುಗೆಮನೆಯಲ್ಲಿದ್ದ ಚಾಕುವಿನಿಂದ ಮಗಳ ಕುತ್ತಿಗೆಯನ್ನು ಸೀಳಿ ಕೊಲೆ ಮಾಡಿದ್ದ ಆತ ನೀರಿನಿಂದ ಮನೆಯನ್ನು ತೊಳೆದು, ಬಟ್ಟೆಯಿಂದ ಮನೆಯನ್ನು ಒರೆಸಿದ್ದ. ನಂತರ ಯಾರಿಗೂ ಅನುಮಾನ ಬರಬಾರದೆಂದು ಹೆಂಡತಿಯ 3 ತೊಲೆ ಬಂಗಾರ, 99,000 ರೂ. ಹಣವನ್ನು ಕದ್ದು ಬಚ್ಚಿಟ್ಟಿದ್ದ. ಇದರಿಂದ ಹಣಕ್ಕಾಗಿ ಯಾರೋ ಮನೆಗೆ ನುಗ್ಗಿ ರಾಧಿಕಾಳನ್ನು ಕೊಲೆ ಮಾಡಿದ್ದಾರೆಂದು ಪೊಲೀಸರು ನಂಬುತ್ತಾರೆ ಎಂಬುದು ಆತನ ಉದ್ದೇಶವಾಗಿತ್ತು.

ಇದನ್ನೂ ಓದಿ: ಸಲಿಂಗಕಾಮಿಯ ಆಮಿಷಕ್ಕೆ ಬಲಿಯಾಗಿ ಮರ್ಮಾಂಗ ಕತ್ತರಿಸಿಕೊಂಡ ಮಂಡ್ಯ ವಿದ್ಯಾರ್ಥಿ

ಪೊಲೀಸರನ್ನು ಯಾಮಾರಿಸಿದ್ದ ಆರೋಪಿ:

ಮನೆ ಖಾಲಿ ಮಾಡಬೇಕೆಂದು ಸದಾ ಪೀಡಿಸುತ್ತಿದ್ದ ಮನೆಯ ಮಾಲೀಕನೇ ಈ ಕೊಲೆ ಮಾಡಿಸಿರಬಹುದು ಎಂದು ಕೊಮುರಯ್ಯ ಪೊಲೀಸರ ಬಳಿ ತನ್ನ ಅನುಮಾನ ವ್ಯಕ್ತಪಡಿಸಿದ್ದ. ಈ ಹಿನ್ನೆಲೆಯಲ್ಲಿ ಮನೆ ಮಾಲೀಕನನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಕೊಮುರಯ್ಯನ ಮೇಲೇ ಅನುಮಾನ ವ್ಯಕ್ತಪಡಿಸಿದ್ದ ಪೊಲೀಸರು ಆತನ ಮೇಲೆ ನಿಗಾ ಇರಿಸಿದ್ದರು. ಆಗ ಇದೊಂದು ಉದ್ದೇಶಪೂರ್ವಕವಾಗಿ ನಡೆದ ಕೊಲೆ ಎಂಬುದು ಖಚಿತವಾಗಿತ್ತು.

ಹೆಂಡತಿಯನ್ನು ಕೆಲಸಕ್ಕೆ ಬೇಗ ಕಳುಹಿಸಿದ್ದ ಕೊಮರಯ್ಯ ಮಗಳ ಕತ್ತು ಸೀಳಿ ಕೊಲೆ ಮಾಡಿದ್ದ. ನಂತರ ಮನೆ ಬಾಗಿಲು ಹಾಕಿಕೊಂಡು ಕೆಲಸಕ್ಕೆ ಹೋಗಿದ್ದ. ಸಂಜೆ ಹೆಂಡತಿ ಮನೆಗೆ ಬಂದ ನಂತರ ತಾನು ಬಂದಿದ್ದ. ಮಗಳ ಮೃತದೇಹವನ್ನು ನೋಡಿ ಗೋಳಿಡುತ್ತಾ, ಅತ್ತು ನಾಟಕವಾಡಿದ್ದ ಎಂಬುದು ವಿಚಾರಣೆ ವೇಳೆ ಬಯಲಾಗಿತ್ತು. ಹೈದರಾಬಾದ್​ ಪೊಲೀಸರು ಕೊಮರಯ್ಯನನ್ನು ಬಂಧಿಸಿದ್ದಾರೆ.

 
First published: