news18 Updated:February 24, 2021, 11:39 AM IST
ಸಾಂದರ್ಭಿಕ ಚಿತ್ರ
- News18
- Last Updated:
February 24, 2021, 11:39 AM IST
ಹಣದ ಆಮಿಷ, ಹುದ್ದೆಯ ಆಮಿಷ ಒಡ್ಡಿ ಮತಾಂತರ ಮಾಡುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಅಂತಹುದೇ ಒಂದು ಪ್ರಕರಣ ಇದೀಗ ಮಧ್ಯಪ್ರದೇಶದ ಖಜುರಾಹೊ ಬಳಿ ನಡೆದಿದೆ. ಮಿಷನರಿ ಸ್ಕೂಲ್ ಪ್ರಿನ್ಸಿಪಾಲ್ ಅವರು ತಮ್ಮ ಶಾಲೆಯ ಶಿಕ್ಷಕಿಯನ್ನು ಮತಾಂತರಕ್ಕೆ ಯತ್ನಿಸಿದ್ದಾರೆ ಎಂದು ಮಧ್ಯಪ್ರದೇಶದ 'ಧಾರ್ಮಿಕ ಸ್ವಾತಂತ್ರ್ಯ ವಿಧಿ 2020' ಅಡಿಯಲ್ಲಿ ಶಿಕ್ಷಕಿ ಮಂಗಳವಾರ ದೂರು ನೀಡಿದ್ದಾಳೆ. ಈ ದೂರಿನಲ್ಲಿ ಪ್ರಿನ್ಸಿಪಾಲ್ ಸಿಸ್ಟರ್ ಭಾಗ್ಯ ಅವರು ತಮ್ಮನ್ನು ಮತಾಂತರ ಆಗಲು ಕಿರುಕುಳ ಹಾಗೂ ಬಲವಂತ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಖುಜುರಾಹೋ ಹತ್ತಿರದ ಮಿಷನರಿ ಸ್ಕೂಲ್ ಪ್ರಿನ್ಸಿಪಾಲ್ ಆದ ಸಿಸ್ಟರ್ ಭಾಗ್ಯ ವಿರುದ್ಧ ಪೊಲೀಸರು ಇದೀಗ ದೂರು ದಾಖಲಿಸಿಕೊಂಡಿದ್ದಾರೆ. ಆದರೆ ಇನ್ನೂ ಅವರನ್ನು ಬಂಧಿಸಿಲ್ಲ ಎಂದು ಖುಜುರಾಹೋ ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರ್ ಸಂದೀಪ್ ಅವರು ತಿಳಿಸಿದ್ದಾರೆ.
ಈ ದೂರು ದಾಖಲಿಸಿದವರು ರೂಬಿ ಸಿಂಗ್ ಎನ್ನುವ ಶಿಕ್ಷಕಿ. ಇವರು ಇದೇ ಮಿಷನರಿ ಶಾಲೆಯಲ್ಲಿ ಕಳೆದ 4 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಅವರು ಕೆಳ ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದರು. ಶಾಲೆಯ ಪ್ರಿನ್ಸಿಪಾಲ್ ಸಿಸ್ಟರ್ ಭಾಗ್ಯ ಈ ವಿಷಯ ತಿಳಿದು, ಶಿಕ್ಷಕಿಯನ್ನು ಮತಾಂತರವಾಗುವಂತೆ ಒತ್ತಾಯ ಮಾಡಿದ್ದಾರೆ. ಅಲ್ಲದೇ, ಶಿಕ್ಷಕಿಯ ಧರ್ಮದ ಬಗ್ಗೆ ಕೆಳಮಟ್ಟದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಮತಾಂತರಕ್ಕೆ ಒಪ್ಪಿದರೆ ಶಿಕ್ಷಕಿಯ ಸಂಬಳ ಹೆಚ್ಚಳ ಮಾಡಿ, ಭಡ್ತಿ ನೀಡುತ್ತೇನೆ ಎಂದು ಆಮಿಷ ಒಡ್ಡಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
ಶಿಕ್ಷಕಿ ರೂಬಿ ಸಿಂಗ್ ಬಲವಂತದ ಈ ಮತಾಂತರವನ್ನು ನಿರಾಕರಿಸಿದಾಗ ಪ್ರಿನ್ಸಿಪಾಲ್ ಭಾಗ್ಯ ಅವರು ಶಿಕ್ಷಕಿಯ ಸಂಬಳವನ್ನು ನಿಲ್ಲಿಸಿದರು. ಅಲ್ಲದೇ ಅವರನ್ನು ಕೆಲಸದಿಂದ ತೆಗೆದು ಹಾಕಿದರು.
ಆದರೆ ಈ ಕುರಿತು ಮಧ್ಯಪ್ರದೇಶದ ಕ್ಯಾಥೊಲಿಕ್ ಚರ್ಚ್ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾರಿಯಾ ಸ್ಟೀಫನ್ ಬೇರೆಯದೇ ಪ್ರತಿಕ್ರಿಯೆ ನೀಡಿದ್ದಾರೆ. "ಪೋಷಕರು ಮತ್ತು ವಿದ್ಯಾರ್ಥಿಗಳಿಂದ ಶಿಕ್ಷಕಿ ರೂಬಿ ಸಿಂಗ್ ಸರಿಯಾಗಿ ಬೋಧನೆ ಮಾಡುವುದಿಲ್ಲ ಎಂದು ದೂರು ಬಂದಿದ್ದವು. ನಂತರ ಆಕೆಗೆ ಬೋಧನಾ ವಿಧಾನವನ್ನು ಸುಧಾರಿಸಿಕೊಳ್ಳಲು ಹೇಳಿದರೂ, ಸುಧಾರಿಸಿಕೊಳ್ಳಲಿಲ್ಲ. ಹೀಗಾಗಿ ನಾವು ಆಕೆಯನ್ನು ಕೆಲಸದಿಂದ ವಜಾ ಮಾಡಬೇಕಾಯಿತು," ಎನ್ನುತ್ತಾರೆ.
ನಿಜಕ್ಕೂ ಪ್ರಿನ್ಸಿಪಾಲ್ ಭಾಗ್ಯ ಅವರು ಶಿಕ್ಷಕಿ ರೂಬಿ ಸಿಂಗ್ ಅವರನ್ನು ಮತಾಂತರಕ್ಕೆ ಒತ್ತಾಯಿಸಿದ್ದರಾ? ಅಥವಾ ಕೆಲಸದಿಂದ ವಜಾ ಮಾಡಿರುವುದಕ್ಕೆ ಶಿಕ್ಷಕಿ ಈ ರೀತಿ ಆರೋಪಿಸಿ ಕೇಸ್ ದಾಖಲಿಸಿದ್ದಾಳಾ ಎನ್ನುವುದು ಪೊಲೀಸರ ತನಿಖೆಯಿಂದಲೇ ಗೊತ್ತಾಗಬೇಕಿದೆ.
Published by:
Sushma Chakre
First published:
February 24, 2021, 11:39 AM IST