Crime News: ಗಂಡನ ಶವವನ್ನು ಬೆಡ್​ರೂಂನಲ್ಲಿ ಬಚ್ಚಿಟ್ಟ ಹೆಂಡತಿ; 28 ಗಂಟೆ ಬಳಿಕ ಬಯಲಾಯ್ತು ಸತ್ಯ

Murder News: ಗಂಡ ಸಾವನ್ನಪ್ಪಿದ ವಿಷಯ ಗೊತ್ತಾದ ಮೇಲೆ ನೀರಜಳಿಗೆ ಆತಂಕ ಕಾಡಿತ್ತು. ಬೇರೆ ದಾರಿ ಕಾಣದೆ ಗಂಡನ ಶವವನ್ನು ಬಾಕ್ಸ್​ನಲ್ಲಿ ತುಂಬಿ, ಬೆಡ್​ರೂಂನಲ್ಲಿರುವ ಮಂಚದ ಕೆಳಗೆ ಇಟ್ಟಿದ್ದಳು. ಒಂದು ದಿನವಾದ ಬಳಿಕ ಗಂಡನ ಮೃತದೇಹ ವಾಸನೆ ಬರತೊಡಗಿತು.

Sushma Chakre | news18-kannada
Updated:September 24, 2020, 3:52 PM IST
Crime News: ಗಂಡನ ಶವವನ್ನು ಬೆಡ್​ರೂಂನಲ್ಲಿ ಬಚ್ಚಿಟ್ಟ ಹೆಂಡತಿ; 28 ಗಂಟೆ ಬಳಿಕ ಬಯಲಾಯ್ತು ಸತ್ಯ
ಸಾಂದರ್ಭಿಕ ಚಿತ್ರ
  • Share this:
ಜೈಪುರ (ಸೆ. 24): 'ಗಂಡ ಹೆಂಡತಿ ಜಗಳ ಉಂಡು ಮಲಗೋವರೆಗೆ' ಎಂಬ ಗಾದೆ ಮಾತೇ ಇದೆ. ಆದರೆ, ಎಲ್ಲರ ವಿಷಯದಲ್ಲೂ ಈ ಗಾದೆ ಮಾತು ನಿಜವಾಗುವುದಿಲ್ಲ. ಜೀವನಪೂರ್ತಿ ಜೊತೆಗಿರಬೇಕಾದ ಗಂಡನನ್ನು ಕೊಂದು, ತಾನು ಮಲಗೋ ಮಂಚದ ಕೆಳಗೆ ಆತನ ಶವವನ್ನು ಬಚ್ಚಿಟ್ಟಿದ್ದ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದ್ದು, ಇಂತಹ ಹೆಂಡತಿಯೂ ಇರುತ್ತಾಳಾ? ಎಂಬ ದಿಗ್ಭ್ರಮೆ ಮೂಡಿಸಿದೆ. ರಾಜಸ್ಥಾನದ ಜೈಪುರದ ಬಳಿ ಈ ಘಟನೆ ನಡೆದಿದೆ. ಗಂಡನನ್ನು ಕೊಲೆ ಮಾಡಿದ ಹೆಂಡತಿ ಸುಮಾರು 28 ಗಂಟೆಗಳ ಕಾಲ ಆ ಮೃತದೇಹವನ್ನು ತನ್ನ ಮಂಚದ ಕೆಳಗೆ ಬಾಕ್ಸ್​ನಲ್ಲಿ ಬಚ್ಚಿಟ್ಟಿದ್ದಳು.

28 ವರ್ಷದ ನೀರಜ ಎಂಬ ಮಹಿಳೆ ತನ್ನ 34 ವರ್ಷದ ಗಂಡ ನಿರ್ಮಲ್ ಸಿಂಗ್ ಎಂಬಾತನನ್ನು ಕೊಲೆ ಮಾಡಿದಾಕೆ. ಸಣ್ಣಪುಟ್ಟ ವಿಷಯಕ್ಕೆ ಇವರಿಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. 2 ದಿನಗಳ ಹಿಂದೆ ಕೂಡ ಇದೇ ರೀತಿ ಜಗಳವಾಗಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಗಂಡ-ಹೆಂಡತಿ ಇಬ್ಬರೂ ಕೈ ಮಿಲಾಯಿಸಿಕೊಂಡಿದ್ದರು. ಆಗ ಕೋಪದಿಂದ ನೀರಜ ಹಗ್ಗದಿಂದ ಗಂಡನ ಕುತ್ತಿಗೆ ಬಿಗಿದು, ಕೊಲೆ ಮಾಡಿದ್ದಳು.

ಗಂಡ ಸಾವನ್ನಪ್ಪಿದ ವಿಷಯ ಗೊತ್ತಾದ ಮೇಲೆ ನೀರಜಳಿಗೆ ಆತಂಕ ಕಾಡಿತ್ತು. ಬೇರೆ ದಾರಿ ಕಾಣದೆ ಗಂಡನ ಶವವನ್ನು ಬಾಕ್ಸ್​ನಲ್ಲಿ ತುಂಬಿ, ಬೆಡ್​ರೂಂನಲ್ಲಿರುವ ಮಂಚದ ಕೆಳಗೆ ಇಟ್ಟಿದ್ದಳು. ಒಂದು ದಿನವಾದ ಬಳಿಕ ಗಂಡನ ಮೃತದೇಹ ವಾಸನೆ ಬರತೊಡಗಿತು. ಆ ವಾಸನೆಯನ್ನು ಹೋಗಲಾಡಿಸುವುದು ಹೇಗೆಂದು ಆಕೆ ನಾನಾ ರೀತಿಯ ಪ್ರಯೋಗಗಳನ್ನು ಮಾಡಿದಳು. ಆದರೆ, ವಾಸನೆ ಎಲ್ಲೆಡೆ ಹರಡಲಾರಂಭಿಸಿತು. ಆಕೆಯ ಗಂಡ ಕೊಲೆಯಾದ ಮಾರನೇ ದಿನ ನಿರ್ಮಲ್ ಸಿಂಗ್​ನ ಸೋದರ ಅಶೋಕ್ ಸಿಂಗ್ ತನ್ನ ತಮ್ಮನನ್ನು ನೋಡಲು ಬಂದರು.

ಇದನ್ನೂ ಓದಿ: Shocking News: ಹುಟ್ಟುವ ಮಗುವಿನ ಲಿಂಗ ತಿಳಿಯಲು ಹೆಂಡತಿಯ ಹೊಟ್ಟೆಯನ್ನೇ ಸೀಳಿದ ಗಂಡ!

ಮನೆಗೆ ಬಂದ ಭಾವನನ್ನು ನೋಡಿ ಕಂಗಾಲಾದ ನೀರಜಳಿಗೆ ಏನು ಮಾಡುವುದೆಂದು ಗೊತ್ತಾಗಲಿಲ್ಲ. ಅಷ್ಟರಲ್ಲಿ ಬಾಕ್ಸ್​ನಿಂದ ಶವದ ವಾಸನೆ ಮನೆಯೆಲ್ಲ ಆವರಿಸಿತ್ತು. ಮನೆಯೆಲ್ಲ ದುರ್ನಾತ ಬರುತ್ತಿದ್ದುದರಿಂದ ಅಶೋಕ್ ಸಿಂಗ್​ ಏನಾಗಿದೆ ಎಂದು ನೀರಜಳನ್ನು ಕೇಳಿದರು. ಆದರೆ, ಆಕೆ ಅದಕ್ಕೆ ಸರಿಯಾದ ಉತ್ತರ ನೀಡಲಿಲ್ಲ. ನಿರ್ಮಲ್ ಸಿಂಗ್ ಎಲ್ಲಿ ಹೋಗಿದ್ದಾನೆಂಬ ಬಗ್ಗೆಯೂ ನೀರಜ ಸರಿಯಾಗಿ ಉತ್ತರ ಕೊಡದ ಕಾರಣದಿಂದ ಅಶೋಕ್ ಸಿಂಗ್​ಗೆ ಅನುಮಾನ ಉಂಟಾಯಿತು.

ತಕ್ಷಣ ಮನೆಯೆಲ್ಲ ಹುಡುಕಾಡಿದ ಆತನಿಗೆ ಬೆಡ್​ರೂಂನಲ್ಲಿರುವ ಮಂಚದ ಕೆಳಗೆ ಬಾಕ್ಸ್​ನಿಂದ ವಾಸನೆ ಬರುತ್ತಿರುವುದು ಗೊತ್ತಾಯಿತು. ಅದನ್ನು ಎಳೆದು, ತೆಗೆದು ನೋಡಿದಾಗ ನಿರ್ಮಲ್ ಸಿಂಗ್​ನ ಮೃತದೇಹವಿತ್ತು. ತಕ್ಷಣ ಪೊಲೀಸರಿಗೆ ಫೋನ್ ಮಾಡಿದ ಅಶೋಕ್ ಸಿಂಗ್ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಬಳಿಕ ಅಶೋಕ್ ಸಿಂಗ್ ಠಾಣೆಗೆ ತೆರಳಿ ನೀರಜಳ ವಿರುದ್ಧ ದೂರು ನೀಡಿದರು. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ನೀರಜಳನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ತಾನು ಕೊಲೆ ಮಾಡಿರುವುದಾಗಿ ನೀರಜ ಒಪ್ಪಿಕೊಂಡಿದ್ದಾಳೆ. ಪ್ರತಿದಿನ ರಾತ್ರಿ ನನ್ನ ಗಂಡ ನನಗೆ ಹೊಡೆದು, ಹಿಂಸೆ ನೀಡುತ್ತಿದ್ದ. ಆತನ ಕಾಟವನ್ನು ತಾಳಲಾರೆ ಕೊಲೆ ಮಾಡಿದೆ ಎಂದು ಹೇಳಿಕೆ ನೀಡಿದ್ದಾಳೆ.
ನಿರ್ಮಲ್ ಸಿಂಗ್ ಮತ್ತು ನೀರಜಾಗೆ ಅನೇಕ ವರ್ಷಗಳ ಹಿಂದೆ ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಅದರಂತೆಯೇ ಎರಡು ದಿನಗಳ ಹಿಂದೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಆ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು. ಈ ಘಟನೆ ನಡೆದಾಗ ಮಕ್ಕಳು ಮನೆಯಲ್ಲಿರಲಿಲ್ಲ ಎನ್ನಲಾಗಿದೆ.
Published by: Sushma Chakre
First published: September 24, 2020, 3:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading