HOME » NEWS » National-international » CRIME NEWS ODISHA WOMAN DUPES MULTIPLE GROOMS IN THE NAME OF MARRIAGE GET ARRESTED STG SCT

ಮದುವೆ ಹೆಸರಲ್ಲಿ ಅನೇಕ ಪುರುಷರಿಗೆ ವಂಚನೆ; ಹಣ ಸುಲಿಗೆ ಮಾಡೋದೇ ಈಕೆಯ ಬಿಸಿನೆಸ್!

ಈಗಾಗಲೇ 2 ಮದುವೆಯಾಗಿ ಇಬ್ಬರಿಗೆ ವಂಚಿಸಿದ್ದ ಎಲೀ 3ನೇ ಮದುವೆಯಾಗಲು ಹೋಗಿ ಖಾಕಿ ಕೈಗೆ ಸಿಕ್ಕಿಹಾಕಿಕೊಂಡಿದ್ದಾಳೆ. ಈಕೆ ಸಿಂಧುಮತಿ ಮುಂಡಾ, ಮಮತಾ ಜೈನ್ ಮತ್ತು ಮಮತಾ ಅಗರ್ವಾಲ್ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದಳು.

news18-kannada
Updated:February 24, 2021, 1:52 PM IST
ಮದುವೆ ಹೆಸರಲ್ಲಿ ಅನೇಕ ಪುರುಷರಿಗೆ ವಂಚನೆ; ಹಣ ಸುಲಿಗೆ ಮಾಡೋದೇ ಈಕೆಯ ಬಿಸಿನೆಸ್!
ಸಾಂದರ್ಭಿಕ ಚಿತ್ರ
  • Share this:
ಮದುವೆ ಹೆಸರಲ್ಲಿ ಬಹುಪುರುಷರಿಗೆ ಮೋಸ ಮಾಡಿದ್ದ ಮಹಿಳೆಯನ್ನು ಒಡಿಶಾದ ಕಾಲಹಂಡಿ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಅವಿವಾಹಿತರನ್ನೇ ಮುಖ್ಯ ಟಾರ್ಗೆಟ್ ಮಾಡುತ್ತಿದ್ದ ಮಹಿಳೆ ಮದುವೆಯಾಗುವುದಾಗಿ ನಂಬಿಸಿ ಹಣ ಸುಲಿಗೆ ಮಾಡಿ ಎಸ್ಕೇಪ್ ಆಗುತ್ತಿದ್ದಳು. ವಂಚಕಿಯ ವಿರುದ್ಧ 3ನೇ ಪತಿ ಸಲ್ಲಿಸಿದ ದೂರಿನ ಮೇರೆಗೆ ಆಕೆಯನ್ನು ಬಂಧಿಸಲಾಗಿದೆ. ಸುಲಿಗೆ ಮಾಡಲು ಈಕೆ ಮೋಸದಿಂದ ಮದುವೆಯಾಗಿ ಅನೇಕ ವ್ಯಕ್ತಿಗಳಿಗೆ ವಂಚಿಸಿರುವುದು ಬಹಿರಂಗವಾಗಿದೆ.

ಬಂಧಿತ ವಂಚಕಿಯನ್ನು ಎಲೀ ಮಹಂತಾ (32) ಎಂದು ಗುರುತಿಸಲಾಗಿದೆ. ಹಣಕ್ಕಾಗಿ ಮಾತ್ರವಲ್ಲದೇ ಈಕೆ ತನ್ನನ್ನು ಮದುವೆಯಾಗಬೇಕೆಂದು ಕೂಡ ಹಲವರಲ್ಲಿ ಬೇಡಿಕೆ ಇಟ್ಟಿದ್ದಳೆಂದು ತಿಳಿದುಬಂದಿದೆ. ಈಗಾಗಲೇ 2 ಮದುವೆಯಾಗಿ ಇಬ್ಬರಿಗೆ ವಂಚಿಸಿದ್ದ ಎಲೀ 3ನೇ ಮದುವೆಯಾಗಲು ಹೋಗಿ ಖಾಕಿ ಕೈಗೆ ಸಿಕ್ಕಿಹಾಕಿಕೊಂಡಿದ್ದಾಳೆ. ಈಕೆ ಸಿಂಧುಮತಿ ಮುಂಡಾ, ಮಮತಾ ಜೈನ್ ಮತ್ತು ಮಮತಾ ಅಗರ್ವಾಲ್ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಸುಂದರ್‌ಗಢ ಜಿಲ್ಲೆಯ ರಘುನಾಥಪಾಲಿಯಲ್ಲಿರುವ ಜಲ್ಡಾ ನಿವಾಸಿಯಾಗಿರುವ ಎಲೀ ಮೊದಲು ಕುಮುದಾಬಂಧು ಪಟೇಲ್ ಅವರನ್ನು ವಿವಾಹವಾಗಿದ್ದಳು. ಆದರೆ ದುರದೃಷ್ಟವಶಾತ್ ಪಟೇಲ್ ಸಾವನ್ನಪ್ಪಿದ್ದರು. ಅವರ ನಿಧನದ ಬಳಿಕ ಎಲೀ ಮತ್ತೆ ಮರುಮದುವೆಯಾದಳು. 2013ರಲ್ಲಿ ಆಕೆ ರಾಜೇಂದ್ರ ದಾಸ್ ಅವರೊಂದಿಗೆ ಸಪ್ತಪದಿ ತುಳಿದಿದ್ದಳು. ಆದರೆ ಕೆಲವೇ ದಿನಗಳಲ್ಲಿ ಆತನಿಂದ ಎಲೀ ಪ್ರತ್ಯೇಕವಾದಳು. ರಾಜೇಂದ್ರ ದಾಸ್ ಭಾರಿ ಮೊತ್ತದ ಹಣ ನೀಡಿದ್ದರಿಂದ ಆಕೆ ಆತನನ್ನು ತೊರೆದಿದ್ದಳು. ಬಳಿಕ ಆಕೆ ತನ್ನ ಸಂಬಂಧಿಕರೊಂದಿಗೆ ಛತ್ತೀಸ್ ಗಢದ ಸಾರಂಗಢ ಗ್ರಾಮದಲ್ಲಿ ವಾಸಿಸುತ್ತಿದ್ದಳು.

ಇದನ್ನೂ ಓದಿ: ಕರ್ನಾಟಕ ಗಡಿ ಪ್ರವೇಶಕ್ಕೆ ನಿರ್ಬಂಧ ಹೇರಿಲ್ಲ; ಕೇರಳ ಸಿಎಂ ಆರೋಪಕ್ಕೆ ಸಚಿವ ಡಾ. ಸುಧಾಕರ್ ಸ್ಪಷ್ಟನೆ

2020ರ ಜೂನ್‌ನಲ್ಲಿ ಬಿರ್ಬಲ್ ಶರ್ಮಾ ಎಂಬುವರು ಬಿಕಾಶ್ ಜೈನ್ ಎಂಬಾತನಿಗೆ ವಿವಾಹ ಪ್ರಸ್ತಾಪವೊಂದನ್ನು ಇಟ್ಟಿದ್ದರು. ಬಿಕಾಶ್ ಪೋಷಕರು ತಮ್ಮ ಪುತ್ರನ ಮದುವೆ ಮಾಡಿಸುವ ವಿಚಾರದಲ್ಲಿ ಹತಾಶರಾಗಿದ್ದೆಂದು ಬಿರ್ಬಲ್ ಶರ್ಮಾ ತಿಳಿದುಕೊಂಡಿದ್ದ. ಹೀಗಾಗಿಯೇ ಬಿಕಾಶ್ ಮದುವೆ ಮಾಡಿಸಲು 4 ಲಕ್ಷ ರೂ. ಹಣ ನೀಡುವಂತೆ ಆತನ ಕುಟುಂಬಸ್ಥರ ಬಳಿ ಬೇಡಿಕೆ ಇಟ್ಟಿದ್ದ. ಇದಕ್ಕೆ ಬಿಕಾಶ್ ಕುಟುಂಬಸ್ಥರು ಕೂಡ ಒಪ್ಪಿಕೊಂಡಿದ್ದರು ಎಂದು ಮದನ್ಪುರದ ರಾಂಪುರ್ ಪೊಲೀಸ್ ಠಾಣೆಯ ಐಐಸಿ ಜಯದೇವ್ ತಾರಿನಿ ಹೇಳಿದ್ದಾರೆ.

ಮಮತಾ ಅಗರ್ವಾಲ್ ಎಂದು ಪರಿಚಯಿಸಿಕೊಂಡಿದ್ದ ಎಲೀ ನಕಲಿ ಪೋಷಕರು ಮತ್ತು ಸಂಬಂಧಿಕರೊಂದಿಗೆ ಜೈನ್ ಕುಟುಂಬದ ಜೊತೆ ಮದುವೆ ಮಾತುಕತೆ ನಡೆಸಿದ್ದಳು. ಬಳಿಕ 2020ರ ಜೂನ್ 28ರಂದು ಎಲೀ ಮತ್ತು ಬಿಕಾಶ್ ವಿವಾಹ ನಡೆಯಿತು. ಮದುವೆ ಬಳಿಕ ಎಲೀ ವಿಲಕ್ಷಣವಾಗಿ ವರ್ತಿಸಲು ಪ್ರಾರಂಭಿಸಿದ್ದಳು. ಈ ಬಗ್ಗೆ ಅನುಮಾನಗೊಂಡ ಬಿಕಾಶ್ ಆಕೆಯ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದ. ಬಳಿಕ ಎಲೀ ಬೇರೆ ಬೇರೆ ಹೆಸರಿನಲ್ಲಿ ಹಲವು ಆಧಾರ್ ಕಾರ್ಡ್ ಗಳನ್ನು ಹೊಂದಿರುವುದು ಹಾಗೂ 30 ಸಾವಿರ ರೂ. ಹಣ ಇರುವುದು ಬಿಕಾಶ್ ಗೆ ಗೊತ್ತಾಗಿತ್ತು.
ಇದರ ಬಗ್ಗೆ ಪ್ರಶ್ನಿಸಿದಾಗ ಎಲೀಯ ಅಸಲಿ ಮುಖ ಬಿಕಾಶ್ ಗೆ ಪರಿಚಯವಾಗಿತ್ತು. ನಿನ್ನಿಂದ ದೂರವಾಗಬೇಕೆಂದರೆ ನನಗೆ 5 ಲಕ್ಷ ರೂ. ಹಣ ನೀಡಬೇಕೆಂದು ಬಿಕಾಶ್ ಗೆ ಎಲೀ ಹೇಳಿದ್ದಳು. ಬಳಿಕ ಜೈನ್ ಕುಟುಂಬಸ್ಥರು ಮದನ್ಪುರದ ರಾಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಎಲೀಯನ್ನು ಪೊಲೀಸರು ಬಂಧಿಸಿದರು. ಸದ್ಯ ಎಲೀ ಯಾರ್ಯಾರಿಗೆ ವಂಚಿಸಿದ್ದಾಳೆಂಬುದರ ಬಗ್ಗೆ ಪೊಲೀಸರು ಎಲ್ಲಾ ಕೋನಗಳಲ್ಲಿಯೂ ತನಿಖೆ ಕೈಗೊಂಡಿದ್ದಾರೆ. ಬಿಕಾಶ್ ಬಳಿಕ ಆಕೆ ಇನ್ನೊಂದು ಮದುವೆ ಮಾಡಿಕೊಳ್ಳಲು ಪ್ಲ್ಯಾನ್ ಮಾಡಿದ್ದಳೇ ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
Published by: Sushma Chakre
First published: February 24, 2021, 1:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories