HOME » NEWS » National-international » CRIME NEWS MUMBAI WOMAN BETRAYS 73 YEAR OLD MAN WITH PROMISE OF MARRIAGE AND LOOTS RS 1 CRORE STG SCT

Crime News: ಮದುವೆಯ ಆಮಿಷವೊಡ್ಡಿ ಮುಂಬೈ ಮಹಿಳೆಯಿಂದ 73 ವರ್ಷದ ವ್ಯಕ್ತಿಗೆ 1 ಕೋಟಿ ವಂಚನೆ

Mumbai Crime: ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ 73 ವರ್ಷದ ವ್ಯಕ್ತಿಗೆ 1.3 ಕೋಟಿ ರೂ. ವಂಚಿಸಿದ್ದಾಳೆ. ಆತನನ್ನು ಮದುವೆಯಾಗುವುದಾಗಿ ಮತ್ತು ವೃದ್ಧಾಪ್ಯದಲ್ಲಿ ಆ ವ್ಯಕ್ತಿಯನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ ನಂತರ ಮಹಿಳೆ ಹಣ ಪಡೆದುಕೊಂಡಿದ್ದಳು.

news18-kannada
Updated:March 8, 2021, 1:55 PM IST
Crime News: ಮದುವೆಯ ಆಮಿಷವೊಡ್ಡಿ ಮುಂಬೈ ಮಹಿಳೆಯಿಂದ 73 ವರ್ಷದ ವ್ಯಕ್ತಿಗೆ 1 ಕೋಟಿ ವಂಚನೆ
ಸಾಂದರ್ಭಿಕ ಚಿತ್ರ
  • Share this:
ಮುಂಬೈ (ಮಾ. 8): ಮದುವೆಯಾಗುವುದಾಗಿ ಹೇಳಿ ವಂಚಿಸುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿರುತ್ತದೆ. ವಂಚನೆ ಮಾಡುವವರ ಪೈಕಿ ಪುರುಷರೇ ಹೆಚ್ಚು. ಆದರೆ, ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ವೃದ್ಧರೊಬ್ಬರನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ಮಹಿಳೆ ವಂಚಿಸಿದ್ದಾಳೆ. ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ 73 ವರ್ಷದ ವ್ಯಕ್ತಿಗೆ 1.3 ಕೋಟಿ ರೂ. ವಂಚಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಆತನನ್ನು ಮದುವೆಯಾಗುವುದಾಗಿ ಮತ್ತು ವೃದ್ಧಾಪ್ಯದಲ್ಲಿ ಆ ವ್ಯಕ್ತಿಯನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ ನಂತರ ಮಹಿಳೆ ಹಣ ಪಡೆದುಕೊಂಡಿದ್ದಳು ಎನ್ನಲಾಗಿದೆ.

ಈ ಸಂಬಂಧ ಶಾಲಿನಿ ಸಿಂಗ್ ಎಂಬ ಮಹಿಳೆ ವಿರುದ್ಧ ಮುಂಬೈನ ಮಲಾಡ್‌ನ ಮಾಲ್ವಾನಿ ನಿವಾಸಿ ಜೆರೋನ್‌ ಡಿಸೋಜಾ ಅಂಧೇರಿ ಪೊಲೀಸರಿಗೆ ಎಫ್‌ಐಆರ್ ದಾಖಲಿಸಿದ್ದಾರೆ. ಮದುವೆಯ ನೆಪದಲ್ಲಿ ಆ ಮಹಿಳೆ ತನ್ನೊಂದಿಗೆ ಸ್ನೇಹ ಬೆಳೆಸಿದ್ದರು. ನಂತರ 1 ಕೋಟಿ ರೂಪಾಯಿಗಿಂತ ಹೆಚ್ಚು ಹಣವನ್ನು ವಂಚಿಸಿದ್ದಾರೆಂದು ಡಿಸೋಜಾ ಡಿಸೆಂಬರ್ 2020 ರಲ್ಲಿ ದೂರು ಸಲ್ಲಿಸಿದ್ದರು. ಈ ಸಂಬಂಧ ಇತ್ತೀಚೆಗೆ ಪ್ರಕರಣ ದಾಖಲಾಗಿದೆ.

ಕಳೆದ ವರ್ಷ ಶಾಲಿನಿ ಸಿಂಗ್‌, 73 ವರ್ಷದ ಡಿಸೋಜಾರನ್ನು ಪ್ರಪೋಸ್‌ ಮಾಡಿದ್ದರು ಮತ್ತು ಆ ಹಣವನ್ನು ವ್ಯವಹಾರ ಪ್ರಾರಂಭಿಸಲು ಹೂಡಿಕೆ ಮಾಡುವುದಾಗಿ ತಿಳಿಸಿದ್ದರು. ಅಲ್ಲದೆ, ಅದರಿಂದ ಬಂದ ಲಾಭವನ್ನು ಇಬ್ಬರೂ ಸಮಾನವಾಗಿ ಹಂಚಿಕೊಳ್ಳೋಣ ಎಂದೂ ಹೇಳಿಕೊಂಡಿದ್ದಳೆಂದು ಡಿಸೋಜಾ ದೂರು ನೀಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿರುವ ಬಗ್ಗೆ ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಇದನ್ನೂ ಓದಿ: ಜಾತಕ ಬದಲಿಸಿ ಮದುವೆ ಮಾಡಿದ್ದಕ್ಕೆ ಹೆಂಡತಿಗೆ ವಿಚ್ಛೇದನಕ್ಕೆ ಮುಂದಾದ ಗಂಡ; ಬಾಂಬೆ ಹೈಕೋರ್ಟ್ ಹೇಳಿದ್ದೇನು?

2010 ರಲ್ಲಿ ಡಿಸೋಜಾ ಮುಂಬೈನ ಸಾಂಟಾಕ್ರೂಜ್‌ ದೇಶೀಯ ವಿಮಾನ ನಿಲ್ದಾಣದ ಬಳಿಯಲ್ಲಿದ್ದ ತನ್ನ ತಂದೆಯ ಜಮೀನನ್ನು ಮಾರಾಟ ಮಾಡಿದ್ದರು. ಈ ಪೈಕಿ ಮಾರಾಟದ ಬೆಲೆಯ ಶೇಕಡಾ 20 ರಷ್ಟು ಹಣ ಅಂದರೆ 2 ಕೋಟಿ ರೂ. ಪಡೆದುಕೊಂಡಿದ್ದರು. ಅಂತಿಮವಾಗಿ, ಅವರು ಆ ಹಣವನ್ನು ಶಾಲಿನಿ ಸಿಂಗ್‌ ಕೆಲಸ ಮಾಡುತ್ತಿದ್ದ ಖಾಸಗಿ ಬ್ಯಾಂಕಿನಲ್ಲಿ ನಾಲ್ಕು ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಿದ್ದರು.

2019ರಲ್ಲಿ ವೃದ್ಧ ಸ್ಥಿರ ಠೇವಣಿಗಳ ಮೇಲಿನ ಬಡ್ಡಿಯ ಮೂಲಕ ದೊಡ್ಡ ಮೊತ್ತ ಪಡೆದುಕೊಂಡರು. ''ನಂತರ ಡಿಸೋಜಾ ಜೊತೆ ಶಾಲಿನಿ ಸಿಂಗ್ ಸ್ನೇಹ ಬೆಳೆಸಿದರು ಮತ್ತು ಶೀಘ್ರದಲ್ಲೇ ಇಬ್ಬರೂ ರೆಸ್ಟೋರೆಂಟ್‌ಗಳಲ್ಲಿ ಭೇಟಿಯಾಗಲು ಪ್ರಾರಂಭಿಸಿದರು" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹಿಂದೂಸ್ತಾನ್‌ ಟೈಮ್ಸ್‌ ವರದಿಯ ಪ್ರಕಾರ ತಿಳಿಸಿದ್ದಾರೆ.

ಹಣ ಪಡೆದುಕೊಂಡ ಬಳಿಕ ಮಹಿಳೆ ಪರಾರಿ:ಇನ್ನು, 1.3 ಕೋಟಿ ರೂ. ಹಣ ಪಡೆದುಕೊಂಡ ನಂತರ ಮಹಿಳೆ ಶಾಲಿನಿ ಸಿಂಗ್, ಡಿಸೋಜಾ ಅವರೊಂದಿಗಿನ ಸಂಪರ್ಕವನ್ನು ಕಡಿತಗೊಳಿಸಿದರು ಮತ್ತು ಹಣದೊಂದಿಗೆ ಆಕೆ ತನ್ನ ಹಳ್ಳಿಗೆ ಓಡಿಹೋಗಿ ಬೇರೊಬ್ಬರನ್ನು ಮದುವೆಯಾದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಬಳಿಕ, ತಾನು ಮೋಸ ಹೋಗಿದ್ದೇನೆಂದು ಅರಿತುಕೊಂಡ ಡಿಸೋಜಾ, ಅಂಧೇರಿ ಪೊಲೀಸರಿಗೆ ದೂರು ನೀಡಿದರು.

ರಾಷ್ಟ್ರ ರಾಜಧಾನಿಯಲ್ಲಿ ವೃದ್ಧೆಗೆ ವಂಚನೆ:
ಇದೇ ರೀತಿ, ದೆಹಲಿಯ ನೆಹರೂ ವಿಹಾರ್‌ನಲ್ಲಿ ವೃದ್ಧೆಯೊಬ್ಬರಿಗೆ ಕಾಲೇಜಿಗೆ ಹೋಗುತ್ತಿದ್ದ ಯುವತಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಹಣದ ವ್ಯವಹಾರ ಮತ್ತು ಮೊಬೈಲ್ ವ್ಯಾಲೆಟ್‌ ಬಳಕೆಗೆ ನೆರೆಹೊರೆಯ ಯುವತಿಯ ಸಹಾಯ ಕೋರಲಾಗಿತ್ತು. ಆ ಯುವತಿ 2019ರ ನವೆಂಬರ್ ಮತ್ತು 2020ರ ಮಾರ್ಚ್ ನಡುವೆ 2,38,000 ರೂ.ಗಳನ್ನು ವಂಚಿಸಿದ್ದಕ್ಕಾಗಿ ಯುವತಿಯನ್ನು ಬಂಧಿಸಲಾಗಿದೆ. ಅನಧಿಕೃತ ವಹಿವಾಟಿನ ಬಗ್ಗೆ ವೃದ್ಧೆಯ ಪುತ್ರ ಅರಿತುಕೊಂಡು ದೆಹಲಿ ಉತ್ತರ ಜಿಲ್ಲೆಯ ಸೈಬರ್ ಸೆಲ್‌ಗೆ ಎಫ್‌ಐಆರ್ ದಾಖಲಿಸಿದ್ದರು.

ಹೊಸ ಡೆಬಿಟ್‌ ಕಾರ್ಡ್ ತೆಗೆದುಕೊಂಡಿದ್ದ ಮಹಿಳೆಯನ್ನು ಎಟಿಎಂಗೆ ಕರೆದುಕೊಂಡು ಹೋಗಿದ್ದ ಯುವತಿ, ಎಟಿಎಂ ಬಳಕೆ ಮಾಡುವುದನ್ನು ಹೇಳಿಕೊಡುವ ನೆಪದಲ್ಲಿ ಪಿನ್ ನಂಬರ್‌ ತಿಳಿದುಕೊಂಡು ಈ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ.
Published by: Sushma Chakre
First published: March 8, 2021, 1:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories