Sushma ChakreSushma Chakre
|
news18-kannada Updated:January 19, 2021, 11:49 AM IST
ಸಾಂದರ್ಭಿಕ ಚಿತ್ರ
ಭೂಪಾಲ್ (ಜ. 19): 'ಹೆತ್ತವರಿಗೆ ಹೆಗ್ಗಣವೂ ಮುದ್ದು' ಎಂಬ ಗಾದೆ ಮಾತಿದೆ. ಆದರೆ, ಮಧ್ಯಪ್ರದೇಶದಲ್ಲೊಬ್ಬಳು ತಾಯಿ ತಾನು ಹೆತ್ತ ಕಂದಮ್ಮನನ್ನೇ ಕುರಿ ಎಂದುಕೊಂಡು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾಳೆ! ಈ ಮೂಲಕ 'ಕೆಟ್ಟ ಮಕ್ಕಳಾದರೂ ಇರಬಹುದು ಆದರೆ ಕೆಟ್ಟ ತಾಯಿ ಇರಲಾರಳು' ಎಂಬ ಮಾತನ್ನು ಆಕೆ ಸುಳ್ಳು ಮಾಡಿದ್ದಾಳೆ. ಅಷ್ಟಕ್ಕೂ ತನ್ನದೇ ಹಸುಗೂಸನ್ನು ಕೊಚ್ಚಿ ಕೊಲ್ಲಲು ಕಾರಣವಾದರೂ ಏನು? ಎಂಬ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ...
ಮಧ್ಯಪ್ರದೇಶದ ಅಶೋಕ ನಗರ ಜಿಲ್ಲೆಯ ರಶ್ಮಿ ಲೋಧಿ ಎಂಬ ಮಹಿಳೆ 8 ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದಳು. ಚುರಾರಿ ಎಂಬ ಗ್ರಾಮದ ರಶ್ಮಿ ಶನಿವಾರ ಬೆಳಗ್ಗೆ ತನ್ನ 8 ತಿಂಗಳ ಮಗುವಿನೊಂದಿಗೆ ಮನೆಯಿಂದ ಹೊರಗೆ ಹೋದವಳು ಆ ಮಗುವನ್ನು ರಸ್ತೆಯಲ್ಲಿಟ್ಟು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾಳೆ. ಈ ಬಗ್ಗೆ ಆಕೆಯ ಮನೆಯವರೇ ಪೊಲೀಸರಿಗೆ ದೂರು ನೀಡಿದ್ದಾರೆ.
ರಶ್ಮಿ ಶನಿವಾರ ಮಧ್ಯಾಹ್ನ ತನ್ನ ಮಗುವಿನೊಂದಿಗೆ ಮನೆಯಿಂದ ಹೊರಗೆ ಹೋಗಿದ್ದಳು. ಸುಮಾರು ಒಂದೆರಡು ಗಂಟೆಯ ನಂತರ ವಾಪಾಸ್ ಮನೆಗೆ ಬಂದ ಆಕೆಯ ಕೈಯಲ್ಲಿ ರಕ್ತಸಿಕ್ತವಾದ ಮಗುವಿತ್ತು. ನಾವೆಲ್ಲರೂ ಗಾಬರಿಯಿಂದ ಮಗುವನ್ನು ಎತ್ತಿಕೊಂಡು ನೋಡಿದರೆ ಅದರ ಹೊಟ್ಟೆಗೆ ಕೊಡಲಿಯಿಂದ ಹೊಡೆದಿರುವುದು ಗೊತ್ತಾಯಿತು. ಏನಾಯಿತೆಂದು ರಶ್ಮಿಯ ಬಳಿ ಕೇಳಿದಾಗ 'ಇದು ನನ್ನ ಮಗುವಲ್ಲ, ಇದೊಂದು ಕುರಿ. ಈ ಕುರಿಯನ್ನು ನಾನು ಬಲಿ ಕೊಟ್ಟಿದ್ದೇನೆ' ಎಂದು ಹೇಳಿದಳು. ಆಕೆಯ ವರ್ತನೆಯಿಂದ ನಮಗೆ ಗಾಬರಿಯಾಗಿ ಪೊಲೀಸರಿಗೆ ದೂರು ನೀಡಿದೆವು ಎಂದು ರಶ್ಮಿಯ ಮನೆಯವರು ತಿಳಿಸಿದ್ದಾರೆ.
ಇದನ್ನೂ ಓದಿ: Crime News: ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ; ಗರ್ಭಪಾತ ಮಾಡಿಸುವಂತೆ ಒತ್ತಾಯ
2 ವರ್ಷಗಳ ಹಿಂದೆ ಲಕ್ಷ್ಮಣ ಲೋಧಿ ಎಂಬುವವರನ್ನು ಮದುವೆಯಾಗಿದ್ದ ರಶ್ಮಿ ಇಂದೋರ್ನಲ್ಲಿ ವಾಸವಾಗಿದ್ದಳು. 2 ತಿಂಗಳ ಹಿಂದೆ ತನ್ನ ಮಗುವಿನೊಂದಿಗೆ ಆಕೆ ತವರುಮನೆಗೆ ಬಂದಿದ್ದಳು. ಶನಿವಾರ ಮನೆಯಿಂದ ಹೊರಟ ರಶ್ಮಿ ಜೊತೆಗೊಂದು ಸಣ್ಣ ಕೊಡಲಿಯನ್ನೂ ತೆಗೆದುಕೊಂಡು ಹೋಗಿದ್ದಳು. ಹೆದ್ದಾರಿಯ ಮಧ್ಯೆ ಮಗುವನ್ನು ಮಲಗಿಸಿ, ಕೊಡಲಿಯಿಂದ ಅದರ ಹೊಟ್ಟೆ, ಕುತ್ತಿಗೆಯನ್ನು ಕೊಚ್ಚಿ ಕೊಲೆ ಮಾಡಿದ್ದಾಳೆ. ಪೊಲೀಸರು ನಡೆಸಿರುವ ಪ್ರಾಥಮಿಕ ತನಿಖೆಯ ಪ್ರಕಾರ, ರಶ್ಮಿ ಕೆಲವು ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಆಕೆ ಮನಶಾಸ್ತ್ರಜ್ಞರ ಬಳಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದಳು. ಅದೇ ಕಾರಣದಿಂದ ತನ್ನ ಗಂಡು ಮಗುವನ್ನು ಕುರಿಯೆಂದು ಭಾವಿಸಿ, ಬಲಿ ಕೊಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ತನ್ನ ಹಸುಗೂಸನ್ನು ತಾನೇ ಕೊಲೆ ಮಾಡಿದ ರಶ್ಮಿಯ ವರ್ತನೆಯಿಂದ ಆಕೆಯ ಮನೆಯವರು ಗಾಬರಿಯಾಗಿದ್ದರು. ಮೊದಲು ಈ ವಿಷಯವನ್ನು ಮುಚ್ಚಿಹಾಕಲು ನೋಡಿದರು. ಬೇರೆಯವರಿಗೆ ಇದು ಗೊತ್ತಾದರೆ ರಶ್ಮಿಯನ್ನು ಹುಚ್ಚಿ ಎಂದುಕೊಳ್ಳುತ್ತಾರೆಂದು ಆಕೆಯ ಅಮ್ಮನೇ ಮಗುವಿನ ಶವವನ್ನು ಬಟ್ಟೆಯಲ್ಲಿ ಸುತ್ತಿ ಆಸ್ಪತ್ರೆಗೆ ಕೊಂಡೊಯ್ದರು. ಮಗುವನ್ನು ಮಂಚದ ಮೇಲೆ ಮಲಗಿಸಿದ್ದಾಗ ಚೂಪಾದ ವಸ್ತುವಿನ ಮೇಲೆ ಬಿದ್ದು ಗಾಯವಾಗಿದೆ ಎಂದು ಅವರು ಆಸ್ಪತ್ರೆಯಲ್ಲಿ ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು ಆ ಮಗು ಈಗಾಗಲೇ ಸತ್ತುಹೋಗಿದೆ ಎಂದು ತಿಳಿಸಿದರು. ಮಗುವಿನ ಶವವನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು. ಆದರೆ, ರಶ್ಮಿಯ ತಂದೆ ಜಾನಕಿಪ್ರಸಾದ್ ಹೀಗೆ ವಿಷಯವನ್ನು ಮುಚ್ಚಿಡಲು ಒಪ್ಪಲಿಲ್ಲ. ಹೀಗಾಗಿ, ಭಾನುವಾರ ಬೆಳಗ್ಗೆ ಪೊಲೀಸ್ ಠಾಣೆಗೆ ಬಂದ ಅವರು ನಡೆದ ಘಟನೆಯನ್ನು ವಿವರಿಸಿದರು. ಬಳಿಕ, ಆ ಮಗುವನ್ನು ಕೊಂದ ಕೊಡಲಿಯನ್ನು ಪೊಲೀಸರು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Published by:
Sushma Chakre
First published:
January 19, 2021, 11:49 AM IST