ಭೂಪಾಲ್ (ಜು. 1): ಪ್ರೇಯಸಿಯೊಂದಿಗೆ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದ 35 ವರ್ಷದ ವ್ಯಕ್ತಿಯೊಬ್ಬ ಆಕೆಯನ್ನು ಕೊಂದು, ವಿಷಯ ಬಯಲಾಗಬಾರದು ಎಂದು ಅಡುಗೆಮನೆಯಲ್ಲೇ ಹೂತು ಹಾಕಿದ್ದಾನೆ. ಮಧ್ಯಪ್ರದೇಶದಲ್ಲಿ ಈ ಶಾಕಿಂಗ್ ಘಟನೆ ನಡೆದಿದೆ. ಆತ ಮಾಡಿದ ಸಣ್ಣ ತಪ್ಪಿನಿಂದ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.
ಮಧ್ಯಪ್ರದೇಶದ ಗಧಾ ಗ್ರಾಮದ ಮಹಿಳೆಯೊಬ್ಬಳು ನಾಪತ್ತೆಯಾಗಿದ್ದಾಳೆ ಎಂದು ಭಾನುವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಕೆಯ ಮನೆಯವರು ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ಶುರು ಮಾಡಿದ ಪೊಲೀಸರು ಆಕೆಯ ಪ್ರಿಯಕರನನ್ನು ವಿಚಾರಣೆ ಮಾಡಿದರು. ಆದರೆ, ಆತ ತನಗೇನೂ ಗೊತ್ತಿಲ್ಲ ಎಂದು ತಡಬಡಾಯಿಸಿದಾಗ ಅನುಮಾನಗೊಂಡ ಪೊಲೀಸರು ಆತನ ಮನೆಯಲ್ಲಿ ಹುಡುಕಾಟ ನಡೆಸಿದರು. ಅಲ್ಲಿ ಯಾವ ಸಾಕ್ಷಿಗಳೂ ದೊರೆಯಲಿಲ್ಲ. ಆದರೆ, ಆ ಮನೆಯ ಅಡುಗೆ ಮನೆಯನ್ನು ನೋಡಿದ ಪೊಲೀಸರಿಗೆ ಸಂಶಯವೊಂದು ಮೂಡಿತ್ತು.
ಪೇಂಟಿಂಗ್ನಿಂದ ಬಯಲಾಯ್ತು ಸತ್ಯ:
ಆ ಯುವಕನ ಇಡೀ ಮನೆಯಲ್ಲಿ ಎಲ್ಲವೂ ಸರಿಯಾಗೇ ಇತ್ತು. ಆದರೆ, ಆತನ ಅಡುಗೆಮನೆಯ ಪೇಂಟಿಂಗ್ ಮಾತ್ರ ಇನ್ನೂ ಹಸಿ ಹಸಿಯಾಗಿತ್ತು. ಅಡುಗೆಮನೆಗೆ ಮಾತ್ರ ಹೊಸದಾಗಿ ಪೇಂಟಿಂಗ್ ಮಾಡಿರುವುದನ್ನು ನೋಡಿದ ಪೊಲೀಸರಿಗೆ ಅನುಮಾನ ಉಂಟಾಯಿತು. ಅಲ್ಲದೆ, ಆ ಮನೆಯ ಬೇರಾವ ರೂಮಿನಲ್ಲೂ ಆ ಪೇಂಟಿಂಗ್ ರೀತಿಯ ಬಣ್ಣ ಬಳಿದಿರಲಿಲ್ಲ. ಇಡೀ ಮನೆಯ ಪೇಂಟಿಂಗ್ ಒಂದು ರೀತಿಯಲ್ಲಿದ್ದರೆ ಅಡುಗೆ ಮನೆಯ ಪೇಂಟಿಂಗ್ ಮಾತ್ರ ಬೇರೆ ಬಣ್ಣದ್ದಾಗಿತ್ತು.
ಇದರಿಂದ ಅನುಮಾನಗೊಂಡ ಪೊಲೀಸ್ ಅಧಿಕಾರಿ ತಮ್ಮ ಠಾಣೆಯ ಸಿಬ್ಬಂದಿಯನ್ನು ಕರೆಸಿ, ಆ ಅಡುಗೆಮನೆಯ ಜಾಗವನ್ನು ಅಗೆಯಲು ಹೇಳಿದರು. ಆಗ ಅಲ್ಲಿ ಮಹಿಳೆಯ ಮೃತದೇಹ ಸಿಕ್ಕಿತ್ತು!
ಅಷ್ಟಕ್ಕೂ ಆಗಿದ್ದೇನು?:
45 ವರ್ಷದ ಶಾಂತಿ ಮಲ್ಲಾ ಎಂಬ ಮಹಿಳೆ ತನಗಿಂತ ಚಿಕ್ಕವನಾದ 35 ವರ್ಷದ ಬಾಯ್ಫ್ರೆಂಡ್ ರಾಮರಾಜ್ ಮಂಜಿ ಎಂಬಾತನ ಜೊತೆ ವಾಸವಾಗಿದ್ದಳು. ಆತನೊಂದಿಗೆ ಲಿವ್- ಇನ್ ರಿಲೇಷನ್ಶಿಪ್ನಲ್ಲಿದ್ದ ಶಾಂತಿ ತನ್ನ ಮನೆಯವರ ವಿರೋಧದ ನಡುವೆಯೂ ಆತನ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದಳು. ಶನಿವಾರ ಸಣ್ಣ ವಿಚಾರಕ್ಕೆ ಅವರಿಬ್ಬರ ನಡುವೆ ಜಗಳ ನಡೆದಿತ್ತು. ಮನೆಯ ಸುತ್ತಮುತ್ತಲಿನವರಿಗೆ ಕೂಡ ಈ ಗಲಾಟೆ ಕೇಳಿತ್ತು. ಒಂದು ಗಂಟೆಗೂ ಹೆಚ್ಚು ಕಾಲ ಅವರಿಬ್ಬರು ಜಗಳವಾಡಿದ್ದರು. ಅದರ ಮಾರನೇ ದಿನದಿಂದಲೇ ಶಾಂತಿ ನಾಪತ್ತೆಯಾಗಿದ್ದಳು.
ಇದನ್ನೂ ಓದಿ: Karnataka Weather Today: ಮಲೆನಾಡು, ಕರಾವಳಿ ಸೇರಿ ರಾಜ್ಯಾದ್ಯಂತ ಇಂದು ಮಳೆಯ ಆರ್ಭಟ
ಮಗಳು ಮನೆಗೂ ಬಾರದೆ, ಫೋನ್ ಕರೆಗೂ ಸಿಗದ ಕಾರಣ ಗಾಬರಿಯಾದ ಆಕೆಯ ಮನೆಯವರು ರಾಮರಾಜ್ ಬಳಿ ವಿಚಾರಿಸಿದ್ದರು. ಆದರೆ, ಆತ ಅಲ್ಲಿಗೂ ಆಕೆ ಬಂದಿಲ್ಲವೆಂದು ಹೇಳಿದ್ದ. ಹೀಗಾಗಿ, ಅವರು ಪೊಲೀಸರಿಗೆ ದೂರು ನೀಡಿದ್ದರು.
ಜಗಳವಾಡುವಾಗ ಕೋಪದಿಂದ ಚಾಕುವಿನಿಂದ ಶಾಂತಿಗೆ ಚುಚ್ಚಿದ್ದ ರಾಮರಾಜ್ ಆಕೆಯನ್ನು ಕೊಲೆ ಮಾಡಿದ್ದ. ಆಕೆ ಸತ್ತುಹೋಗಿದ್ದಾಳೆ ಎಂದು ಗೊತ್ತಾಗುತ್ತಿದ್ದಂತೆ ಶಾಕ್ ಆದ ಆತ ತಾನು ಸಿಕ್ಕಿಹಾಕಿಕೊಳ್ಳಬಹುದು ಎಂಬ ಭಯದಿಂದ ಆ ಹೆಣವನ್ನು ಸಾಗಿಸಲು ನೋಡಿದ್ದ. ಆದರೆ, ಅಕ್ಕಪಕ್ಕದಲ್ಲೇ ಮನೆಗಳು ಇದ್ದುದರಿಂದ ಯಾರಾದರೂ ನೋಡಬಹುದು ಎಂದು ಹೆದರಿದ್ದ. ಕೊನೆಗೆ ತನ್ನ ಮನೆಯಲ್ಲೇ ಪ್ರೇಯಸಿಯ ಹೆಣವನ್ನು ಹೂತುಹಾಕಲು ನಿರ್ಧರಿಸಿದ್ದ. ಅದಕ್ಕಾಗಿ ಮನೆಯ ಹಿಂಭಾಗದಲ್ಲಿದ್ದ ಅಡುಗೆ ಮನೆಯ ನೆಲವನ್ನು ಅಗೆದು ರಾತ್ರೋರಾತ್ರಿ ಆಕೆಯ ಶವವನ್ನು ಹುಗಿದಿಟ್ಟು ಮತ್ತೆ ಮೇಲೆ ಗಾರೆ ಮಾಡಿದ್ದ. ಬಳಿಕ, ಯಾರಿಗೂ ಗೊತ್ತಾಗಬಾರದು ಎಂದು ಮಾರನೇ ದಿನ ಬೆಳಗ್ಗೆ ಅಂಗಡಿಯಲ್ಲಿ ಸಿಕ್ಕ ಪೇಂಟಿಂಗ್ ತಂದು ಅಡುಗೆಮನೆಗೆ ಬಣ್ಣ ಬಳಿದಿದ್ದ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ