ಕೆಲವೊಮ್ಮೆ ನಾವು ಮಾಡುವ ತಪ್ಪು ಯಾರಿಗೂ ಗೊತ್ತಾಗಲು ಸಾಧ್ಯವೇ ಇಲ್ಲ ಎಂದುಕೊಂಡು ತಪ್ಪುಗಳನ್ನು ಮಾಡಿಬಿಡುತ್ತೇವೆ. ಅದೇನೋ 'ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗೋದಿಲ್ಲ ಅಂದುಕೊಂಡಿತ್ತಂತೆ' ಅನ್ನೋ ಗಾದೆ ಇದೆಯಲ್ಲ ಹಾಗೇ!. ಆದರೆ, ಕೊಲೆಗಾರ್ತಿ ಮೊಬೈಲ್ನಲ್ಲಿದ್ದ ಗೂಗಲ್ ಸರ್ಚ್ ಹಿಸ್ಟರಿ ತೆಗೆದು ನೋಡಿದಾಗ ಕೊಲೆಯ ರಹಸ್ಯ ಬಯಲಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಕತೆ ಯಾವ ಸಿನಿಮಾ ಕತೆಗೂ ಕಡಿಮೆಯೇನಿಲ್ಲ!
ನನ್ನ ಗಂಡನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಖೇದಿಪುರದ ಮಹಿಳೆಯೊಬ್ಬಳು ಪೊಲೀಸ್ ಸ್ಟೇಷನ್ಗೆ ಫೋನ್ ಮಾಡಿದ್ದಳು. ಪೊಲೀಸರು ಆ ಮನೆಗೆ ಹೋಗಿ ನೋಡಿದಾಗ ಅಮೀರ್ ಎಂಬ ವ್ಯಕ್ತಿಯೊಬ್ಬ ಹೆಣವಾಗಿ ಬಿದ್ದಿದ್ದ. ರೂಮಿನ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಎಲ್ಲವನ್ನೂ ಗಮನಿಸಿದ ಪೊಲೀಸರು ಯಾರೋ ಮನೆಯನ್ನು ದರೋಡೆ ಮಾಡಲು ಬಂದವರು ಹಣ, ಒಡವೆಯನ್ನೆಲ್ಲ ದೋಚಿ ಆತನನ್ನು ಕೊಲೆ ಮಾಡಿರಬಹುದು ಎಂದು ಅಂದಾಜಿಸಿದ್ದರು. ಅಲ್ಲಿಗೆ ಕೊಲೆಗಾರರ ಪ್ಲಾನ್ ಅರ್ಧ ಸಕ್ಸಸ್ ಆಗಿತ್ತು.
ಆದರೆ, ತನಿಖೆ ನಡೆಸಿದ್ದ ಪೊಲೀಸರಿಗೆ ತಮ್ಮ ಊಹೆಯೇ ನಿಜವೆಂದು ನಂಬಲು ಸಾಧ್ಯವಿರಲಿಲ್ಲ. ಅಲ್ಲಿ ತಮಗೆ ಗೊತ್ತಿಲ್ಲದ್ದು ಬೇರೇನೋ ನಡೆದಿದೆ ಎಂಬ ಅನುಮಾನ ಪೊಲೀಸರನ್ನು ಕಾಡಿತ್ತು. ಆ ಅನುಮಾನದ ಬೆನ್ನು ಹತ್ತಿದ ಪೊಲೀಸರಿಗೆ ಕೊನೆಗೂ ನಿರಾಸೆಯಾಗಲಿಲ್ಲ! ಅಮೀರ್ ಕೊಲೆಗೂ 'ಮಂಚ'ಕ್ಕೂ ಸಂಬಂಧವಿದೆ ಎಂಬುದು ಅವರಿಗೆ ಗೊತ್ತಾಗಿತ್ತು. ಅಷ್ಟಕ್ಕೂ ಏನಿದು ಕೊಲೆಯ ರಹಸ್ಯ? ಅಂತ ಯೋಚಿಸ್ತಿದೀರಾ?
ಇದನ್ನೂ ಓದಿ: Viral Video: ಮೀನಿನ ಹೊಟ್ಟೆಯಲ್ಲಿತ್ತು ಓಪನ್ ಮಾಡದ ವಿಸ್ಕಿ ಬಾಟಲ್; ಶಾಕ್ ಆದ ಮೀನುಗಾರ!
ಪೊಲೀಸರಿಗೆ ಆ ಕೊಲೆಯ ಹಿಂದೆ ಬೇರೆ ಯಾರದೋ ಕೈವಾಡವಿದೆ ಎಂದು ಅನುಮಾನ ಬಂದಕೂಡಲೆ ಮೊದಲು ನೆನಪಾಗಿದ್ದು ಕೊಲೆಯಾದ ವ್ಯಕ್ತಿಯ ಹೆಂಡತಿ. ಆದರೆ, ಆಕೆಯೇ ಫೋನ್ ಮಾಡಿ ತನ್ನ ಗಂಡ ಕೊಲೆಯಾಗಿದ್ದಾನೆ ಎಂದು ಧೈರ್ಯವಾಗಿ ಹೇಳಿದ್ದರಿಂದ ಮತ್ತು ಆಕೆಯ ನಡವಳಿಕೆಯಲ್ಲಿ ಭಯ ಇಲ್ಲದ ಕಾರಣ ಪೊಲೀಸರಿಗೆ ಗೊಂದಲ ಉಂಟಾಗಿತ್ತು. ಆ ಮನೆಯೊಳಗೆ ಬೇರಾರೋ ಬಂದು ಕೊಲೆ ಮಾಡಿರುವ ಸಾಧ್ಯತೆ ಕಡಿಮೆ ಎಂದು ತಿಳಿದುಕೊಂಡ ಪೊಲೀಸರಿಗೆ ಇದರ ಹಿಂದೆ ಮನೆಯವರ ಕೈವಾಡವಿರುವುದು ಖಾತರಿಯಾಗಿತ್ತು.
ಅಮೀರ್ ಹೆಂಡತಿ ತಬಸಂ ಬಳಿ ಈ ಬಗ್ಗೆ ವಿಚಾರಿಸಿದಾಗ 'ನಾನು, ನನ್ನ ಗಂಡ ಬಹಳ ಅನ್ಯೋನ್ಯವಾಗಿದ್ದೆವು. ನಮ್ಮ ನಡುವೆ ಯಾವ ಭಿನ್ನಾಭಿಪ್ರಾಯವೂ ಇರಲಿಲ್ಲ. ನಾನೇಕೆ ಆತನನ್ನು ಕೊಲೆ ಮಾಡಲಿ? ಇದರಿಂದ ನನಗೂ ಶಾಕ್ ಆಗಿದೆ' ಎಂದು ಕಣ್ಣೀರು ಹಾಕಿದ್ದಳು. ಆದರೆ, ಆಕೆಯ ಮಾತಿನ ಮೇಲೆ ಪೊಲೀಸರಿಗೆ ನಂಬಿಕೆ ಬಂದಿರಲಿಲ್ಲ.
ಆಕೆಯ ಫೋನ್ ಅನ್ನು ವಶಕ್ಕೆ ಪಡೆದ ಪೊಲೀಸರು ಆಕೆಯ ಕಾಲ್ ಡೀಟೇಲ್ಸ್, ಗೂಗಲ್ ಸರ್ಚ್ ಹಿಸ್ಟರಿಯನ್ನೆಲ್ಲ ತೆಗೆದು ನೋಡಿದಾಗ ಆಕೆಯೇ ಕೊಲೆಗಾರ್ತಿ ಎಂಬುದು ಖಚಿತವಾಗಿತ್ತು. ಇರ್ಫಾನ್ ಎಂಬ ಯುವಕನ ಜೊತೆ ನಿಕಟ ಸಂಪರ್ಕದಲ್ಲಿದ್ದ ಅಮೀರ್ನ ಹೆಂಡತಿ ತಬಸಂ ಆತನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಅಮೀರ್ ಮನೆಯಲ್ಲಿ ಇಲ್ಲದಿದ್ದಾಗ ಅವರಿಬ್ಬರೂ ಲೈಂಗಿಕ ಸಂಪರ್ಕ ನಡೆಸುತ್ತಿದ್ದರು. ಮಹಾರಾಷ್ಟ್ರದಲ್ಲಿ ಕೆಲಸದಲ್ಲಿದ್ದ ಅಮೀರ್ ಕೊರೋನಾ ಬಳಿಕ ವರ್ಕ್ ಫ್ರಂ ಹೋಂ ಇದ್ದುದರಿಂದ ವಾಪಾಸ್ ಮನೆಗೆ ಬಂದಿದ್ದ. ಇದರಿಂದ ಇರ್ಫಾನ್ ಮತ್ತು ತಬಸಂ ದೇಹಿಕವಾಗಿ ಸೇರಲು ಸಾಧ್ಯವಾಗುತ್ತಿರಲಿಲ್ಲ. ತಮ್ಮಿಬ್ಬರ ಸಂಬಂಧ ಅಮೀರ್ಗೆ ಗೊತ್ತಾದರೆ ಕುಟುಂಬದವರಿಗೆಲ್ಲ ಗೊತ್ತಾಗುತ್ತದೆ ಎಂದು ಹೆದರಿದ ತಬಸಂ ತನ್ನ ಪ್ರೇಮಿ ಇರ್ಫಾನ್ ಜೊತೆ ಸೇರಿ ಗಂಡನನ್ನು ಕೊಲೆ ಮಾಡಲು ನಿರ್ಧರಿಸಿದಳು. ಆದರೆ, ಪೊಲೀಸರಿಗೆ ಅನುಮಾನ ಬಾರದ ಹಾಗೆ ಯಾವ ರೀತಿ ಕೊಲೆ ಮಾಡಬೇಕೆಂಬುದೇ ಅವರಿಗೆ ದೊಡ್ಡ ತಲೆನೋವಾಗಿತ್ತು.
ಇದನ್ನೂ ಓದಿ: Love Story: ಪಕ್ಕದ ಮನೆಯಲ್ಲೇ 11 ವರ್ಷ ಗುಟ್ಟಾಗಿ ಸಂಸಾರ; ಕೇರಳದಲ್ಲೊಂದು ವಿಚಿತ್ರ ಲವ್ ಸ್ಟೋರಿ!
ಆಗ ಅವರಿಬ್ಬರ ಸಹಾಯಕ್ಕೆ ಬಂದಿದ್ದು ಗೂಗಲ್!. ಹೌದು, ಕೊಲೆ ಮಾಡುವುದು ಹೇಗೆ, ಕೊಲೆ ಮಾಡುವ ವಿಧಾನಗಳು ಯಾವುವು, ಹಗ್ಗದಿಂದ ಕೈ-ಕಾಲುಗಳನ್ನು ಕಟ್ಟಿಹಾಕುವುದು ಹೇಗೆ, ಮೃತದೇಹವನ್ನು ಸಾಗಿಸುವುದು ಹೇಗೆ ಎಂಬುದರಿಂದ ಹಿಡಿದು, ಬೆರಳಚ್ಚುಗಳನ್ನು ಅಳಿಸುವುದು ಹೇಗೆಂಬ ಕುರಿತು ತಬಸಂ ಗೂಗಲ್ನಲ್ಲಿ ಸರ್ಚ್ ಮಾಡಿದ್ದಳು. ಹಲವು ದಿನಗಳ ಕಾಲ ಗೂಗಲ್ ಸರ್ಚ್ ಮಾಡಿ, ತಯಾರಿ ನಡೆಸಿ, ಗಂಡನ ಕೊಲೆಗೆ ಮುಹೂರ್ತ ಫಿಕ್ಸ್ ಮಾಡಿದ್ದಳು.
ಅಸ್ತಮಾ ರೋಗಿಯಾಗಿದ್ದ ಅಮೀರ್ನನ್ನು ಯಾವ ರೀತಿ ಸಾಯಿಸಬಹುದು ಎಂಬುದನ್ನು ಗೂಗಲ್ನಿಂದ ತಿಳಿದುಕೊಂಡ ತಬಸಂ ಆತನ ಅಸ್ತಮಾ ಔಷಧಿಯ ಜಾಗದಲ್ಲಿ ಬೇರೆ ಔಷಧವನ್ನು ಇಟ್ಟಳು. ಇದರಿಂದ ಆತನ ಉಸಿರಾಟದ ತೊಂದರೆ ದಿನೇದಿನೆ ಜಾಸ್ತಿಯಾಗುತ್ತಿತ್ತು. ಆ ದಿನ ಅಮೀರ್ ಉಸಿರಾಟದ ತೊಂದರೆಯಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಮನೆಯೊಳಗೆ ಎಂಟ್ರಿ ಕೊಟ್ಟ ಇರ್ಫಾನ್ ತನ್ನ ಪ್ರೇಯಸಿ ತಬಸಂ ಜೊತೆ ಸೇರಿ ಅಮೀರ್ನ ಕೈ, ಕಾಲುಗಳನ್ನು ಸ್ಕಾರ್ಫ್ನಿಂದ ಕಟ್ಟಿದರು. ಬಳಿಕ ಇರ್ಫಾನ್ ಅಮೀರ್ ತಲೆಗೆ ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದ. ನಂತರ ಮನೆಯಲ್ಲಿದ್ದ ಚಿನ್ನಾಭರಣ, ಹಣವನ್ನು ಬ್ಯಾಗ್ನಲ್ಲಿ ಹಾಕಿಕೊಂಡು ಅಲ್ಲಿಂದ ಕಾಲು ಕಿತ್ತಿದ್ದ.
ಇದರಿಂದ ಪೊಲೀಸರು ದರೋಡೆಗಾಗಿ ನಡೆದ ಕೊಲೆಯೆಂದು ನಿರ್ಧರಿಸುತ್ತಾರೆ ಎಂಬುದು ಅವರಿಬ್ಬರ ಪ್ಲಾನ್ ಆಗಿತ್ತು. ಆದರೆ, ತಬಸಂ ಮೊಬೈಲ್ನಲ್ಲಿದ್ದ ಸರ್ಚ್ ಹಿಸ್ಟರಿಯಿಂದ ಅವರ ಪ್ಲಾನ್ ತಲೆಕೆಳಗಾಯಿತು. ಮಾಡಿದ ತಪ್ಪಿಗೆ ಇದೀಗ ಅವರಿಬ್ಬರೂ ಜೈಲು ಸೇರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ