ಮುರಳೀಧರನ್ ಜೀವನಕಥೆ ಆಧರಿತ ‘800’ ಸಿನಿಮಾ ಮತ್ತು ಲಂಕಾ ಯಾತನಾಮಯ ದಿನಗಳು

ಮುರಳೀಧರನ್ ಬಯೋಪಿಕ್ '800' ಸಿನಿಮಾದ ಪೋಸ್ಟರ್

ಮುರಳೀಧರನ್ ಬಯೋಪಿಕ್ '800' ಸಿನಿಮಾದ ಪೋಸ್ಟರ್

ಬ್ರಿಟಿಷರ ಕಾಲದಲ್ಲಿ ತಮಿಳುನಾಡಿನಿಂದ ಲಂಕಾಗೆ ಕೂಲಿಗಳಾಗಿ ಹೋಗಿದ್ದ ಭಾರತೀಯ ತಮಿಳರ ಬಗ್ಗೆ ಲಂಕಾದ ಸ್ಥಳೀಯ ತಮಿಳರಿಗೆ ಯಾವಾಗಲೂ ಅಸಡ್ಡೆ. ಹೀಗಾಗಿ, ಮುತ್ತಯ್ಯ ಮುರಳೀಧರನ್ ಅವರ ಜನಪ್ರಿಯತೆಯನ್ನು ಅಲ್ಲಿನ ತಮಿಳರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

 • News18
 • 3-MIN READ
 • Last Updated :
 • Share this:

  ಬೆಂಗಳೂರು: ನಿವೃತ್ತ ಕ್ರಿಕೆಟಿಗ ಹಾಗೂ ಸ್ಪಿನ್ ಗಾರುಡಿಗ ಮುತ್ತಯ್ಯ ಮುರಳೀಧರನ್ ಅವರಿಗೆ ವಿವಾದ ಹೊಸದೇನಲ್ಲ. ಜೀವನುದುದ್ದಕ್ಕೂ ಉಳಿಪೆಟ್ಟು ತಿಂದು ಅದ್ಭುತ ಶಿಲೆಯಾದವರು ಅವರು. ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಆದಾಗ ಅವರ ಬೌಲಿಂಗ್ ಕ್ರಮವನ್ನು ಪ್ರಶ್ನಿಸಲಾಯಿತು. ವಿಶ್ವ ಕ್ರಿಕೆಟ್​ನಿಂದ ಅವರು ಹೇಳ ಹೆಸರಿಲ್ಲದಂತೆ ಕಣ್ಮರೆಯಾಗಿಬಿಡುವ ಅಪಾಯವೂ ಇತ್ತು. ಆದರೆ, ತಮ್ಮ ಅತೀವ ಛಲ ಮತ್ತು ಛಾತಿಯಿಂದ ಅವರು ಎಲ್ಲವನ್ನೂ ಎದುರಿಸಿ ಮೆಟ್ಟಿ ನಿಂತು ಮಹಾನ್ ಸಾಧನೆ ಮಾಡಿದರು. ಅವರ ‘ದೂಸ್ರಾ’ ಬೌಲಿಂಗ್ ವಿಶ್ವ ಕ್ರಿಕೆಟ್​ನಲ್ಲಿ ಬೆಸೆದುಹೋಗಿದೆ. 1996ರ ವಿಶ್ವಕಪ್ ವಿಜೇತ ಶ್ರೀಲಂಕಾ ತಂಡದ ನಾಯಕರಾಗಿದ್ದ ಹಾಗೂ ಲಂಕಾ ಕ್ರಿಕೆಟ್​ಗೆ ಜಗಮನ್ನಣೆ ಸಿಗಲು ಪ್ರಮುಖ ಕಾರಣಕರ್ತರಲ್ಲೊಬ್ಬರಾಗಿದ್ದ ಅರ್ಜುನ ರಣತುಂಗ ಅವರ ಅವಿರತ ಬೆಂಬಲದಿಂದಾಗಿ ಇಂದು ಮುತ್ತಯ್ಯ ಮುರಳೀಧರನ್ ಎಂಬ ಕ್ರಿಕೆಟ್ ದಂತಕಥೆ ವಿಶ್ವ ಕ್ರಿಕೆಟ್ ಲೋಕದಲ್ಲಿ ಛಾಪು ಮೂಡಿಸಲು ಸಾಧ್ಯವಾಗಿದ್ದು.


  ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಮುತ್ತಯ್ಯ ಮುರಳೀಧರನ್ ಅವರನ್ನು ಶ್ರೀಲಂಕಾದ ಉತ್ತರ ಪ್ರಾಂತ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡುವ ಪ್ರಸ್ತಾಪ ಇದ್ದದ್ದು ನಿಮಗೆ ನೆನಪಿರಬೇಕು. ಮುರಳಿಯನ್ನು ರಾಜ್ಯಪಾಲರನ್ನಾಗಿ ಮಾಡಲಾಗುತ್ತದೆ ಎಂಬ ಸುದ್ದಿ ಕೇಳಿಬರುತ್ತಿದ್ದಂತೆಯೇ ಪ್ರತಿಭಟನೆಗಳು ದುತ್ತೆಂದು ಎದ್ದಿದ್ದವು. ಉತ್ತರ ಪ್ರಾಂತ್ಯ ತಮಿಳರ ಪ್ರಾಬಲ್ಯ ಇರುವ ಪ್ರದೇಶ. ಮುರಳೀಧರನ್ ಕೂಡ ತಮಿಳಿಗ. ಆದರೂ ಪ್ರತಿಭಟನೆಗಳು ವ್ಯಕ್ತವಾಗಲು ಅದರದ್ದೇ ಕಾರಣಗಳಿದ್ದವು. ತಮಿಳು ಪ್ರತ್ಯೇಕತಾವಾದಿ ಈಳಂ ಯುದ್ಧದ ವೇಳೆ ಲಂಕನ್ನರಿಂದ ತಮಿಳು ಜನರ ನರಮೇಧವಾಯಿತು ಎಂಬ ಆರೋಪ ಇದೆ. ಮುರಳೀಧರನ್ ಅವರು ಆರೋಪವನ್ನು ಒಮ್ಮೆ ತಳ್ಳಿಹಾಕಿದ್ದರು. ಇದು ಲಂಕಾ ತಮಿಳರನ್ನು ಉಗ್ರವಾಗಿ ಕೆರಳಿಸಿದೆ. ತಮಿಳರ ಕೋಪ ವ್ಯಕ್ತವಾದ ಬಳಿಕ ಮುರಳೀಧರನ್ ಅವರನ್ನು ರಾಜ್ಯಪಾಲರನ್ನಾಗಿ ಮಾಡುವ ನಿರ್ಧಾರದಿಂದ ಹಿಂದಕ್ಕೆ ಸರಿಯಲಾಯಿತು.


  ಈಗ ಮುರಳಿ ಸುತ್ತ ಆವರಿಸಿರುವ ವಿವಾದ “800” ಎಂಬ ಸಿನಿಮಾ. ಇದು ಅವರ ಜೀವನದ ಕಥೆ ಆಧಾರಿತ ತಮಿಳು ಚಿತ್ರ. ಖ್ಯಾತ ನಟ ವಿಜಯ್ ಸೇತುಪತಿ ಅವರು ಮುರಳಿ ಪಾತ್ರ ನಿರ್ವಹಿಸುತ್ತಿದ್ದ ಸಿನಿಮಾ ಇದು. ಆದರೆ, ಇಲ್ಲಿಯೂ ಪ್ರತಿಭಟನೆಗಳು ವ್ಯಕ್ತವಾಗಿ ಕೊನೆಗೆ ವಿಜಯ್ ಸೇತುಪತಿ ಈ ಸಿನಿಮಾವನ್ನ ಕೈಬಿಟ್ಟಿದ್ದಾರೆ. ಶ್ರೀಲಂಕಾ ಎಂಬ ದ್ವೀಪ ರಾಷ್ಟ್ರದ ಬಗ್ಗೆ ಗೊತ್ತಿರುವ ಜನರಿಗೆ ಈ ವಿವಾದದ ಹಿಂದೆ ಎಂಥ ಸಂಕೀರ್ಣ ಸಂಗತಿಗಳು ಅಡಗಿವೆ ಎಂಬುದು ಅರಿವಿರುತ್ತದೆ.


  ಮುತ್ತಯ್ಯ ಮುರಳೀಧರನ್ ಭಾರತೀಯ ತಮಿಳ. ಶ್ರೀಲಂಕಾದಲ್ಲಿ ಅವರನ್ನ ಮಲಯಾಹ ತಮಿಳ ಎಂದು ಕರೆಯುತ್ತಾರೆ. ಈ ತಮಿಳರು ತಮ್ಮನ್ನು ತಾವು ಭಾರತೀಯ ತಮಿಳ ಎಂದು ಕರೆಸಿಕೊಳ್ಳಲು ಇಷ್ಟಪಡುವುದಿಲ್ಲ. ಮಲಯಾಹ ಎಂದರೆ ಗುಡ್ಡಗಾಡು ದೇಶ ಎಂದರ್ಥ. ಹಿಲ್ ಸ್ಟೇಷನ್​ಗಳು ಸಮೃದ್ಧವಾಗಿರುವ ಶ್ರೀಲಂಕಾ ಇಲ್ಲಿ ಗುಡ್ಡಗಾಡು ದೇಶ. ಶ್ರೀಲಂಕಾದ ನಯನಮನೋಹರ ಗುಡ್ಡ ಪ್ರದೇಶಗಳಲ್ಲಿರುವ ಚಹಾ ತೋಟಗಳಲ್ಲಿ ಈ ತಮಿಳರು ಕೂಲಿ ಕೆಲಸ ಮಾಡುತ್ತಾರೆ.


  ಇದನ್ನೂ ಓದಿ: vijay sethupathi: ಮುತ್ತಯ್ಯ ಮುರಳೀಧರನ್​ ಜೀವನಾಧಾರಿತ 800 ಸಿನಿಮಾದಿಂದ ಹೊರ ನಡೆದ ವಿಜಯ್​ ಸೇತುಪತಿ


  ಶ್ರೀಲಂಕಾದಲ್ಲಿ ಎರಡು ವರ್ಗದ ತಮಿಳರು ಇದ್ದಾರೆ. ಒಂದು ವರ್ಗ ಲಂಕಾ ತಮಿಳರಾದರೆ, ಮತ್ತೊಂದು ವರ್ಗ ಭಾರತೀಯ ತಮಿಳರು. ಲಖನ್ ತಮಿಳರು ಶ್ರೀಲಂಕಾದ ಉತ್ತರ ಮತ್ತು ಪೂರ್ವ ಭಾಗದಲ್ಲಿ ಪ್ರಮುಖವಾಗಿದ್ದು, ಇಲ್ಲಿಯ ಮೂಲನಿವಾಸಿಗಳೆನಿಸಿದ್ಧಾರೆ. ಇನ್ನು, ಭಾರತೀಯ ತಮಿಳರು ದಕ್ಷಿಣ ಭಾರತದಿಂದ, ಅದರಲ್ಲೂ ತಮಿಳುನಾಡಿನಿಂದ ಲಂಕಾಗೆ ಕಳೆದ ಶತಮಾನದಲ್ಲಿ ವಲಸೆ ಹೋದವರಾಗಿದ್ದಾರೆ. ಲಂಕಾ ಬ್ರಿಟಿಷರ ವಶದಲ್ಲಿದ್ದಾಗ ಕಾಫಿ ಮತ್ತು ಚಹಾ ತೋಟಗಳಲ್ಲಿ ಕೆಲಸ ಮಾಡಲು ಇವರನ್ನು ತಮಿಳುನಾಡಿನಿಂದ ಲಂಕಾಗೆ ಸಾಗಿಸಲಾಗಿತ್ತು.


  ತಮಿಳುನಾಡಿನಲ್ಲಿರುವ ತಮ್ಮ ಊರಿನಲ್ಲಿ ಕಿತ್ತು ತಿನ್ನವ ಬಡತನ, ಹೀನ ಜಾತಿ ಎಂಬ ಅವಹೇಳನದಿಂದ ತಪ್ಪಿಸಿಕೊಳ್ಳಲು 19 ಮತ್ತು 20ನೇ ಶತಮಾನದಲ್ಲಿ ಲಂಕಾಗೆ ಹಡಗು ಹತ್ತಿ ಹೊರಟಿದ್ದರು. ಅವರದ್ದೆಲ್ಲಾ ಕರುಣಾಜನಕ ಕಥೆ. ಗುಡ್ಡಗಳ ಹಾದಿಯಲ್ಲಿ ಮೃತಪಟ್ಟವರೆಷ್ಟೋ ಗೊತ್ತಿಲ್ಲ. 1948ರಲ್ಲಿ ಶ್ರೀಲಂಕಾಗೆ (ಅಂದಿನ ಸಿಲೋನ್ ದೇಶ) ಸ್ವಾತಂತ್ರ್ಯ ದೊರೆತಾಗ ಈ ಭಾರತೀಯ ತಮಿಳರು ಅಕ್ಷರಶಃ ಅನಾಥರಾಗಿ ಹೋದರು. ಸ್ವತಂತ್ರ ಲಂಕಾದಲ್ಲಿ ಇವರಿಗೆ ಪೌರತ್ವ ಸಿಗಲಿಲ್ಲ. ಇದ್ದುದ್ದರಲ್ಲಿ ಉತ್ತಮ ಶಿಕ್ಷಣ ಉತ್ತಮ ಜೀವನ ಹಾಗೂ ರಾಜಕೀಯ ಪ್ರಾಬಲ್ಯ ಹೊಂದಿದ್ದ ಸ್ಥಳೀಯ ಲಂಕನ್ ತಮಿಳರು ಈ ಭಾರತೀಯ ಮೂಲದ ತಮಿಳರ ಬವಣೆಗಳಿಗೆ ಸ್ಪಂದಿಸದೆ ಅಲಕ್ಷಿಸಿದರು. ಕೆಲ ಇತಿಹಾಸತಜ್ಞರ ಪ್ರಕಾರ, ಸಿಂಹಳಿ ಬೌದ್ಧರು ಮತ್ತು ಲಂಕನ್ ತಮಿಳರಿಗೆ ಈ ಭಾರತೀಯ ತಮಿಳುರು ಬೇಡವಾಗಿಹೋಗಿದ್ದರು.


  ಜಾತಿ ಮತ್ತು ವರ್ಗ ಆಧಾರಿತ ಲಂಕಾ ಸಮಾಜದಲ್ಲಿ ತಮಿಳರು ತುಚ್ಛರೆನಿಸಿಬಿಟ್ಟಿದ್ದರು. ಶಿಕ್ಷಣ ಇಲ್ಲ, ಹಣ ಇಲ್ಲ, ಕೊನೆಗೆ ಪೌರತ್ವವೂ ಇಲ್ಲದ ಭಾರತೀಯ ತಮಿಳರು ಆ ದ್ವೀಪ ರಾಷ್ಟ್ರದಲ್ಲಿ ಕೆಡುಗಾಲಗಳನ್ನೇ ಹೆಚ್ಚಾಗಿ ಕಾಣಬೇಕಾಯಿತು. 60ರ ದಶಕದಲ್ಲಿ ಲಾಲಬಹದೂರ್ ಶಾಸ್ತ್ರಿ ಮತ್ತು ಸಿರಿಮಾವೊ ಬಂಡಾರನಾಯಿಕೆ ಮಾಡಿಕೊಂಡ ಒಪ್ಪಂದದ ಪ್ರಕಾರ ಲಂಕಾದಿಂದ ಅರ್ಧಕರ್ಧ ಭಾರತೀಯ ತಮಿಳರನ್ನು ಕುರಿಮಂದೆಗಳಂತೆ ಹಡುಗಿನಲ್ಲಿ ತುಂಬಿಸಿಕೊಂಡು ಭಾರತದ ಅವರ ತವರೂರುಗಳಿಗೆ ತಂದು ಬಿಡಲಾಯಿತು.


  ಲಂಕಾ ಅಧ್ಯಕ್ಷ ಚಂದ್ರಿಕಾ ಬಂಡಾರನಾಯಿಕೆ ಕುಮಾರತುಂಗ ಅವರ ಆಡಳಿತದ ಅವಧಿಯಲ್ಲಿ, ಅಂದರೆ 2000ರಲ್ಲಿ ಇನ್ನುಳಿದ ತಮಿಳರಿಗೆ ಲಂಕಾದ ಪೌರತ್ವ ನೀಡಲಾಯಿತು. ಸೌಮ್ಯಮೂರ್ತಿ ತೊಂಡಮಾನ್ ಅವರಂತಹ ಭಾರತೀಯ ತಮಿಳು ಮುಖಂಡರ ಪ್ರಯತ್ನಗಳ ಫಲಶೃತಿ ಅದಾಗಿತ್ತು.


  ಮೂರು ದಶಕಗಳ ಕಾಲ ನಡೆದ ಈಳಂ ಯುದ್ಧದಲ್ಲಿ ಭಾರತೀಯ ತಮಿಳರಿಗೆ ಎಲ್ಲರೂ ಕಂಟಕಪ್ರಾಯರೇ ಆಗಿ ಹೋಗಿದ್ದರು. ಬಹುಸಂಖ್ಯಾತ ಸಿಂಹಳಿ ಬೌದ್ಧರಿಗೆ ಸದಾ ಕಾಲ ಭಾರತೀಯ ತಮಿಳರ ದೇಶನಿಷ್ಠೆ ಬಗ್ಗೆ ಅನುಮಾನಗಳೇ ಇದ್ದವು. ಇನ್ನೊಂದೆಡೆ ಈಳಂ ಯುದ್ಧದಲ್ಲಿ ತಮಗೆ ಬೆಂಬಲ ನೀಡುತ್ತಿಲ್ಲವೆಂದು ಭಾರತೀಯ ತಮಿಳರನ್ನು ದ್ರೋಹಿಗಳೆಂದು ಲಂಕನ್ ತಮಿಳರೂ ಕುದ್ದುಹೋಗಿದ್ದರು.


  ಇಂಥ ಸಂಘರ್ಷ ಕಾಲಘಟ್ಟದಲ್ಲಿ ಮುತ್ತಯ್ಯ ಮುರಳೀಧರನ್ ಲಂಕಾದ ಮಧ್ಯಭಾಗದಲ್ಲಿರುವ ಗುಡ್ಡ ಪ್ರದೇಶಗಳಲ್ಲಿ ಜನಿಸಿದರು. ಬೇರೆ ತಮಿಳರಿಗೆ ಹೋಲಿಸದರೆ ಅವರದ್ದು ಅಷ್ಟೇನೂ ಬಡಸ್ತನದ ಕುಟುಂಬವಾಗಿರಲಿಲ್ಲ. ಆದರೆ, ಸಿಂಹಳಿ ದುಷ್ಕರ್ಮಿಗಳು ಅವರ ತಂದೆಯ ಕಾರ್ಖಾನೆಯನ್ನ ಎರಡು ಬಾರಿ ಸುಟ್ಟುಹಾಕಿದ್ದರು. ಹಲವು ಬಾರಿ ಅವರು ಜೀವನದ ಮರುಹುಟ್ಟು ಪಡೆಯಬೇಕಾಯಿತು. ಹದಿಹರೆಯದ ಪ್ರಾಯಕ್ಕೆ ಬರುವವರೆಗೂ ಮುರಳೀ ಇವೆಲ್ಲಾ ಸಂಕಷ್ಟಗಳನ್ನ ನೋಡುತ್ತಾ ಬೆಳೆದಿದ್ದರು.


  ಭಾರತೀಯ ತಮಿಳ ಅಥವಾ ಮಲಯಾಹ ತಮಿಳನೊಬ್ಬ ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗನಾಗಿದ್ದಾನೆ ಎಂಬ ಸತ್ಯವನ್ನ ಲಂಕಾದ ಸ್ಥಳೀಯ ತಮಿಳರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹಲವರು ಅಭಿಪ್ರಾಯಡುತ್ತಾರೆ. ಈ ಮುರಳಿ ಬಯೋಪಿಕ್ ವಿವಾದದಲ್ಲಿ ಅವರ ಆ ಈರ್ಷ್ಯೆ ಗಾಢವಾಗಿ ವ್ಯಕ್ತವಾಗುತ್ತಿದೆ.


  ದ ಹಿಂದೂ ಪತ್ರಿಕೆಯಲ್ಲಿ ಲಂಕಾ ಸಂಬಂಧಿತ ಸುದ್ದಿಗಳನ್ನ ಬರೆಯುತ್ತಿದ್ದ ಹಿರಿಯ ಪತ್ರಕರ್ತ ಆರ್.ಕೆ. ರಾಧಾಕೃಷ್ಣನ್ ಅವರು, “ನಾನು ಇದನ್ನ ಮತ್ತೆ ಹೇಳಬಯಸುತ್ತೇನೆ. ಲಂಕಾದ ಉತ್ತರ ಪ್ರಾಂತ್ಯಗಳ ತಮಿಳರು ಗುಡ್ಡಗಾಡು ತಮಿಳರನ್ನು ಮನುಷ್ಯರೆಂದು ಯಾವತ್ತೂ ಭಾವಿಸಿಯೇ ಇಲ್ಲ. ಲಂಡನ್, ಪ್ಯಾರಿ ಮತ್ತು ಟೊರಾಂಟೋದಿಂದ ಟಿವಿ ಶೋಗಳಿಗೆ ಬರುವ ಉತ್ತರ ಲಂಕಾ ತಮಿಳರು ಮುರಳಿಯನ್ನ ವಿಶ್ವದ ಅತ್ಯಂತ ಜನಪ್ರಿಯ ತಮಿಳ ಎಂಬ ಸತ್ಯವನ್ನ ಎಂದೂ ಒಪ್ಪುವುದಿಲ್ಲ” ಎಂದು ಕಹಿಸತ್ಯವನ್ನ ಟ್ವೀಟ್ ಮಾಡಿದ್ದಾರೆ.


  ಶ್ರೀಲಂಕಾದ ಖ್ಯಾತ ಕ್ರಿಕೆಟ್ ಬರಹಗಾರ ಆಂಡ್ರ್ಯೂ ಫಿಡೆಲ್ ಫರ್ನಾಂಡೋ ಅವರು ತಮ್ಮ “ಗ್ರೋಯಿಂಗ್ ಅಪ್ ವಿತ್ ಮುರಳಿ” ಎಂಬ ಪ್ರಬಂಧದಲ್ಲಿ ಹೀಗೆ ಬರೆದಿದ್ದಾರೆ: “1977ರಲ್ಲಿ ಮುರಳಿ ಐದು ವರ್ಷದ ಪ್ರಾಯದವರಾಗಿದ್ದಾಗ ಅವರ ತಂದೆಯ ಮೇಲೆ ತಮಿಳು ವಿರೋಧಿ ಗುಂಪು ಹಲ್ಲೆ ಎಸಗಿತು. ಅವರ ಕುಟುಂಬದ ಬಿಸ್ಕತ್ ಕಾರ್ಖಾನೆಯನ್ನ ಸುಟ್ಟು ಹಾಕಲಾಯಿತು. ಲಂಕಾದ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಸೇರಿದ ಕುಟುಂಬ ಅದಾಗಿತ್ತು ಎಂಬುದು ಆ ಸಿಂಹಳಿ ಗಲಭೆಕೋರರಿಗೆ ಅರಿವಾಗಲಿಲ್ಲ. ಪ್ರತ್ಯೇಕತಾವಾದಿ ಸಂಘಟನೆ ರಚಿಸಿರುವ ಉತ್ತರ ಮತ್ತು ಪೂರ್ವಭಾಗದ ತಮಿಳರು ಕೆಳ ಜಾತಿಯ ಹಾಗೂ ಈಚೆಗೆ ವಲಸೆ ಬಂದ ಈ ಗುಡ್ಡಗಾಡು ತಮಿಳರನ್ನು ಹೀನವಾಗಿ ಕಾಣುತ್ತಾರೆ ಎಂಬ ವಿಚಾರವೂ ಈ ಗಲಭೆಕೋರರ ಮನಸ್ಸನ್ನ ಕರಗಿಸಲಿಲ್ಲ”.


  ಈ ಮೇಲಿನ ಪ್ಯಾರಾದಲ್ಲಿ ಎಲ್ಲವೂ ವಿಶದವಾಗಿದೆ. ಮುರಳಿಯಂತಹ ಅನರ್ಘ್ಯ ರತ್ನವನ್ನು ಕೊಡುಗೆಯಾಗಿ ನೀಡಿದ ಲಂಕಾದ ಗುಡ್ಡದ ತಮಿಳರು ಈಗ ಅಲ್ಲಿ ಎಂಥ ತ್ರಿಶಂಕು ಪರಿಸ್ಥಿತಿಯಲ್ಲಿ ಇದ್ದಾರೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ತಿಳಿಸುತ್ತದೆ.


  - ಡಿ.ಪಿ. ಸತೀಶ್

  Published by:Vijayasarthy SN
  First published: