ಭಯೋತ್ಪಾದನೆಯಿಂದ ನಿಮ್ಮನ್ನು ಸೋಲಿಸಲಾಗದು: ಶ್ರೀಲಂಕಾಗೆ ನರೇಂದ್ರ ಮೋದಿ ಅಭಯ

ಏಪ್ರಿಲ್ 21ರಂದು ಶ್ರೀಲಂಕಾದ ಚರ್ಚ್ ಮತ್ತು ಹೋಟೆಲ್​ಗಳ ಮೇಲೆ ಉಗ್ರರು ದಾಳಿ ನಡೆಸಿ 250ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದ್ದರು. ದಾಳಿಗೆ ತುತ್ತಾಗಿದ್ದ ಸಂತ ಆ್ಯಂಥೋನಿ ಚರ್ಚ್​ಗೆ ಮೋದಿ ಭೇಟಿ ನೀಡಿದರು.

news18
Updated:June 9, 2019, 6:22 PM IST
ಭಯೋತ್ಪಾದನೆಯಿಂದ ನಿಮ್ಮನ್ನು ಸೋಲಿಸಲಾಗದು: ಶ್ರೀಲಂಕಾಗೆ ನರೇಂದ್ರ ಮೋದಿ ಅಭಯ
ಲಂಕಾದ ಸೇಂಟ್ ಆ್ಯಂಟೋನೀಸ್ ಚರ್ಚ್​ನಲ್ಲಿ ನರೇಂದ್ರ ಮೋದಿ
  • News18
  • Last Updated: June 9, 2019, 6:22 PM IST
  • Share this:
ಕೊಲಂಬೋ(ಜೂನ್ 09): ಇತ್ತೀಚೆಗೆ ಸರಣಿ ಬಾಂಬ್ ಸ್ಫೋಟಕ್ಕೆ ತುತ್ತಾಗಿದ್ದ ಶ್ರೀಲಂಕಾಗೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ನೆರವು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಯ ನೀಡಿದರು. ಮಾಲ್ಡೀವ್ಸ್ ದೇಶದ ಪ್ರವಾಸದಲ್ಲಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತು ಶ್ರೀಲಂಕಾಗೆ ಭೇಟಿ ಇತ್ತರು. ಈ ವೇಳೆ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರನ್ನು ಭೇಟಿ ಮಾಡಿದ ನರೇಂದ್ರ ಮೋದಿ, ಲಂಕಾದ ಒಳಿತಿಗೆ ಭಾರತ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಕಳೆದ 10 ದಿನದಲ್ಲಿ ಲಂಕಾ ಅಧ್ಯಕ್ಷರನ್ನು ಮೋದಿ ಭೇಟಿ ಮಾಡಿದ್ದು ಇದು ಎರಡನೇ ಬಾರಿ. BIMSTEC ಸಭೆಯ ವೇಳೆ ಅವರು ಮೈತ್ರಿಪಾಲ ಅವರನ್ನು ಭೇಟಿಯಾಗಿ ಮಾತನಾಡಿದ್ದರು. ಹಾಗೆಯೇ, ಲಂಕಾದಲ್ಲಿ ಉಗ್ರ ದಾಳಿ ಆದ ಬಳಿಕ ನರೇಂದ್ರ ಮೋದಿ ಅವರು ಆ ದೇಶಕ್ಕೆ ಭೇಟಿ ಮಾಡಿದ ಮೊದಲ ವಿದೇಶೀ ನಾಯಕರೂ ಆಗಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮುಗಿಯದ ಹಿಂಸಾಚಾರ; ಟಿಎಂಸಿ-ಬಿಜೆಪಿ ನಡುವೆ ಮತ್ತೆ ಘರ್ಷಣೆ, ಮೂವರು ಬಲಿ

ಮಳೆಯ ನಡುವೆ ಅಧ್ಯಕ್ಷರ ಕಾರ್ಯಾಲಯಕ್ಕೆ ಬಂದ ನರೇಂದ್ರ ಮೋದಿ ಅವರಿಗೆ ಮೈತ್ರಿಪಾಲ ಅವರೇ ಖುದ್ದಾಗಿ ಛತ್ರಿಯ ಆಸರೆ ಒದಗಿಸಿದರು. ಈ ವೇಳೆ, ಸಮಾಧಿ ಬುದ್ಧನ ಪ್ರತಿಮೆಯ ಪ್ರತಿಕೃತಿಯನ್ನು ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದರು. ಕ್ರಿಸ್ತಶಕ ಐದನೇ ಶತಮಾನದ ಆಸುಪಾಸಿನ ಸಂದರ್ಭದಲ್ಲಿ ಬುದ್ಧ ಧ್ಯಾನಸ್ಥರಾಗಿರುವ ಮೂಲ ವಿಗ್ರಹವು ಲಂಕಾದ ಅತ್ಯಮೂಲ್ಯ ಆಸ್ತಿಗಳಲ್ಲೊಂದೆನಿಸಿದೆ. ಇದರ ಪ್ರತಿಕೃತಿಯನ್ನು ಬಿಳಿ ತೇಗ ಮರದಿಂದ ಕೆತ್ತಲಾಗಿದೆ.

Narendra Modi and Maitripala Srisena
ಧ್ಯಾನಸ್ಥ ಬುದ್ಧನ ಪ್ರತಿಕೃತಿಯನ್ನು ಮೋದಿಗೆ ಉಡುಗೊರೆಯಾಗಿ ನೀಡಿದ ಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ


ಇದಕ್ಕೂ ಮುನ್ನ, ಲಂಕಾದಲ್ಲಿ ಉಗ್ರ ದಾಳಿಗೊಳಗಾದ ಚರ್ಚ್​ಗಳ ಪೈಕಿ ಒಂದಾದ ಸೇಂಟ್ ಆ್ಯಂಟೋನಿಸ್​ಗೆ ಪ್ರಧಾನಿ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಮೋದಿ, ಉಗ್ರ ದಾಳಿಯಿಂದ ಲಂಕನ್ನರನ್ನು ವಿಚಲಿತಗೊಳಿಸಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ: ಕಾಶ್ಮೀರ ಶಾಂತಿ ಮಾತುಕತೆಗೆ ಒತ್ತಾಯ; ಭಾರತಕ್ಕೆ ಎರಡನೇ ಬಾರಿ ಪತ್ರ ಬರೆದಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್!“ಶ್ರೀಲಂಕಾ ಮತ್ತೆ ತಲೆ ಎತ್ತಿ ನಿಲ್ಲುತ್ತೆನ್ನುವ ವಿಶ್ವಾಸ ನನಗಿದೆ. ಭಯೋತ್ಪಾದನೆಯ ಹೇಡಿತನದ ಕೃತ್ಯಗಳು ಲಂಕಾದ ಉತ್ಸಾಹವನ್ನು ಕುಂದಿಸಲಾರವು. ಶ್ರೀಲಂಕಾ ಜನರ ಭಾವನೆಗೆ ಭಾರತ ಬೆಂಬಲವಾಗಿ ನಿಲ್ಲುತ್ತದೆ” ಎಂದು ಮೋದಿ ಅಭಯ ಹಸ್ತ ಚಾಚಿದರು.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಲಂಕಾದ ವಿಪಕ್ಷ ನಾಯಕ ಹಾಗೂ ಮಾಜಿ ಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸ ಅವರನ್ನು ಭೇಟಿಯಾಗಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ಮಾಡಿದರು. ಲಂಕಾದಲ್ಲಿ ಎಲ್​ಟಿಟಿಇ ಸಂಘಟನೆಯನ್ನು ಅಂತ್ಯಗೊಳಿಸಿದ ಕೀರ್ತಿ ರಾಜಪಕ್ಸ ಅವರದ್ದಾಗಿದೆ. ಇನ್ನು, ಲಂಕಾದಲ್ಲಿ ತಮಿಳು ಸಮುದಾಯದ ರಾಜಕೀಯ ಸಂಘಟನೆಯಾದ ತಮಿಳ್ ನ್ಯಾಷನಲ್ ಅಲಯನ್ಸ್​ನ ನಿಯೋಗವೊಂದು ಮೋದಿ ಅವರನ್ನು ಭೇಟಿ ಮಾಡಿತು.

ಇದನ್ನೂ ನೋಡಿ: ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ದ್ವೀಪ ರಾಷ್ಟ್ರ ಮಾಲ್ಡೀವ್ಸ್​ ಬಗ್ಗೆ ನಿಮಗೆಷ್ಟು ಗೊತ್ತು?

ಲಂಕಾಗೆ ಬರುವ ಮುನ್ನ ನಿನ್ನೆ ಪ್ರಧಾನಿ ಮೋದಿ ಅವರು ಮಾಲ್ಡೀವ್ಸ್ ದೇಶಕ್ಕೆ ಭೇಟಿ ನೀಡಿದ್ದರು. ಅ ವೇಳೆ, ಆ ದೇಶದೊಂದಿಗೆ ಹಲವು ಪ್ರಮುಖ ಒಪ್ಪಂದಗಳಿಗೆ ಮೋದಿ ಸಹಿ ಹಾಕಿದರು. ಕರಾವಳಿ ರೇಡಾರ್ ವ್ಯವಸ್ಥೆ ಹಾಗೂ ಮಿಲಿಟರಿ ತರಬೇತಿ ಕೇಂದ್ರಗಳನ್ನು ಮೋದಿ ಉದ್ಘಾಟಿಸಿದರು.

ಭಾರತದ ಈ ನೆರೆಯ ರಾಷ್ಟ್ರಗಳ ಮೇಲೆ ಚೀನಾ, ಅಮೆರಿಕದ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರ ಭೇಟಿಯು ಗಮನಾರ್ಹವಾಗಿದೆ. ಮೋದಿ ಅವರು ಲಂಕಾದಿಂದ ನೇರವಾಗಿ ತಿರುಪತಿಗೆ ಬಂದು ಅಲ್ಲಿಂದ ರಾಜಧಾನಿ ನವದೆಹಲಿಗೆ ತೆರಳಿದ್ದಾರೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:June 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ