ನವ ದೆಹಲಿ (ಜನವರಿ 16; ವಿಶ್ವದ ಅತಿದೊಡ್ಡ ಕೊರೋನಾ ಲಸಿಕೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಇಂದು ಒಂದೇ ದಿನದಲ್ಲಿ ದೇಶದ ವಿವಿಧ ಮೂಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಮಾರು 3 ಲಕ್ಷ ಆರೋಗ್ಯ ಮತ್ತು ಪೌರ ಕಾರ್ಮಿಕರು ಸೇರಿದಂತೆ ಮುಂಚೂಣಿ ಕಾರ್ಮಿಕರಿಗೆ ಕೋವಿಡ್-19 ಲಸಿಕೆ ನೀಡಲು ಉದ್ದೇಶಿಸಲಾಗಿದೆ. ಸಾರ್ವಜನಿಕವಾಗಿ ಲಸಿಕೆ ನೀಡುವ ಮುನ್ನ ಲಸಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ದೂರದರ್ಶನದ ಮೂಲಕ ಈ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, "ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಭಾರತ ಈವರೆಗೆ 3 ಕೋಟಿ ಲಸಿಕೆಯನ್ನು ಸಿದ್ಧಪಡಿಸಿದೆ. ಜಗತ್ತಿನಲ್ಲಿ ಎಷ್ಟೋ ದೇಶಗಳಲ್ಲಿ 3 ಕೋಟಿಗಿಂತ ಕಡಿಮೆ ಜನರಿರುವ ದೇಶವಿದೆ. ಆದರೆ, ಭಾರತ ತನ್ನ ಮೊದಲ ಹೆಜ್ಜೆಯಲ್ಲೇ ಈ ಪ್ರಮಾಣದ ಲಸಿಕೆಯನ್ನು ಸಿದ್ದಪಡಿಸಿದೆ. ಹೀಗಾಗಿ ಲಸಿಕೆಯ ಸಂಶೋಧನೆಗೆ ಕಾರಣರಾದ ವಿಜ್ಞಾನಿಗಳಿಗೆ ಧನ್ಯವಾದಗಳು" ಎಂದು ಮೋದಿ ತಿಳಿಸಿದ್ದಾರೆ.
"ಸೀರಮ್ ಇನ್ಸ್ಟಿಟ್ಯೂಟ್ ಹಾಗೂ ಆಕ್ಸ್ಫರ್ಡ್-ಅಸ್ಟ್ರಾನ್ಜೆನೆಕಾ ತಯಾರಿಸಿರುವ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್- ಐಸಿಎಂಆರ್ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್, ಈ ಎರಡು ಲಸಿಕೆಗಳನ್ನು ತುರ್ತು ಬಳಕೆಗಾಗಿ ಉಪಯೋಗಿಸಲು ಅನುಮತಿ ನೀಡಲಾಗಿದೆ. ಭಾರತದಲ್ಲಿ ತಯಾರಾಗುತ್ತಿರುವ ಈ ಎರಡೂ ಲಸಿಕೆಗಳು ದೇಶವು ಸ್ವಾವಲಂಬನೆಯ ಹಾದಿಯಲ್ಲಿ ಹೇಗೆ ಮುಂದುವರಿಯುತ್ತಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ" ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
"ಈ ಲಸಿಕೆಯನ್ನು ಎರಡು ಬಾರಿ ತೆಗೆದುಕೊಳ್ಳಬೇಕು. ಮೊದಲ ಮತ್ತು ಎರಡನೆಯ ಲಸಿಕೆಯ ನಡುವೆ ಸುಮಾರು ಒಂದು ತಿಂಗಳ ಅಂತರವನ್ನು ಇಡಲಾಗುತ್ತದೆ. ಎರಡನೇ ಡೋಸ್ ನಂತರ ಕೇವಲ 2 ವಾರಗಳ ನಂತರ, ನಿಮ್ಮ ದೇಹವು ವೈರಸ್ ವಿರುದ್ಧ ಅಗತ್ಯವಾದ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ. ಎರಡೂ ಬಾರಿ ಒಂದೇ ಲಸಿಕೆಯನ್ನು ಪಡೆಯಬೇಕು. ಸರ್ಕಾರವು ಅನುಮೋದಿಸಿರುವ ಈ ಲಸಿಕೆಗಳು ಪಶ್ಚಿಮ ರಾಷ್ಟ್ರಗಳಲ್ಲಿ ಬಳಸುತ್ತಿರುವ ಪರ್ಯಾಯಗಳಿಗಿಂತ ಅಗ್ಗವಾದ ಲಸಿಕೆಯಾಗಿದೆ" ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಇದನ್ನೂ ಓದಿ: Covid-19 Vaccine: ಕೊರೋನಾ ಲಸಿಕೆ ಅಭಿಯಾನಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ; ಆರೋಗ್ಯ ಕಾರ್ಯಕರ್ತರಿಗೆ ಮೊದಲ ಆದ್ಯತೆ
ಇದೇ ಸಂದರ್ಭದಲ್ಲಿ ಫಿಜರ್-ಬಯೋಎನ್ಟೆಕ್ ಮತ್ತು ಮಾಡರ್ನಾ ಅಭಿವೃದ್ಧಿಪಡಿಸಿರುವ ವಿದೇಶಿ ಲಸಿಕೆಗಳ ಉದಾಹರಣೆ ನೀಡಿರುವ ಪ್ರಧಾನಿ ಮೋದಿ, "ಈ ಲಸಿಕೆಯನ್ನು ಒಬ್ಬರಿಗೆ ನೀಡಲು ಸುಮಾರು 5,000 ರೂ. ವೆಚ್ಚವಾಗುತ್ತವೆ ಮತ್ತು -70 ಡಿಗ್ರಿ ಸೆಲ್ಸಿಯಸ್ನ ತಾಪಮಾನದಲ್ಲಿ ಸಂಗ್ರಹಿಸಬೇಕಾಗುತ್ತದೆ, ಇದರಿಂದಾಗಿ ಲಾಜಿಸ್ಟಿಕ್ಸ್ ಕಠಿಣವಾಗುತ್ತದೆ. ಆದರೆ, ಭಾರತೀಯ ಲಸಿಕೆಗಳು ಅಗ್ಗವಾಗಿವೆ ಮತ್ತು ವಿಶ್ವದಲ್ಲೇ ಅತ್ಯುತ್ತಮವಾದವುಗಳಾಗಿವೆ. ಅಲ್ಲದೆ, ಇವುಗಳನ್ನು ಸುಲಭದಲ್ಲಿ ಸಂಗ್ರಹಿಸಲು ಸೂಕ್ತವಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
"ಲಸಿಕೆಗಳಿಗೆ ಸಂಬಂಧಿಸಿದ ವದಂತಿಗಳಿಗೆ ಜನ ಬಲಿಯಾಗಬಾರದು. ಎರಡು ಲಸಿಕೆಗಳ ದತ್ತಾಂಶವನ್ನು ಅವರು ತೃಪ್ತಿಪಡಿಸಿದ ನಂತರ ಡಿಜಿಸಿಐ ಇದಕ್ಕೆ ಅನುಮೋದನೆ ನೀಡಿದೆ. ಆದ್ದರಿಂದ ವದಂತಿಗಳಿಂದ ದೂರವಿರಿ. ನಮ್ಮ ಲಸಿಕೆ ಅಭಿವರ್ಧಕರು ಜಾಗತಿಕ ವಿಶ್ವಾಸಾರ್ಹತೆಯನ್ನು ಹೊಂದಿದ್ದಾರೆ. ಜಾಗತಿಕವಾಗಿ ಶೇ.60 ರಷ್ಟು ಮಕ್ಕಳಿಗೆ ನೀಡಲಾಗುವ ಜೀವ ಉಳಿಸುವ ಲಸಿಕೆಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ" ಎಂದು ಅವರು ಹೇಳಿದ್ದಾರೆ.
"ಮೊದಲಿಗೆ ಆರೋಗ್ಯ ಕಾರ್ಯಕರ್ತರು, ಕೊರೋನಾ ವಾರಿಯರ್ಸ್ಗೆ ಕೊರೋನಾ ಲಸಿಕೆ ನೀಡಲು ಆದ್ಯತೆ ನೀಡಲಾಗಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು. ದೇಶದ 1 ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ಇಂದಿನಿಂದ ಲಸಿಕೆ ನೀಡಲಾಗುವುದು. ನಂತರ 50 ವರ್ಷ ದಾಟಿದವರಿಗೆ ಲಸಿಕೆ ನೀಡಲು ನಿರ್ಧಾರ ಮಾಡಲಾಗಿದೆ. ಮುಂದಿನ 10 ದಿನದೊಳಗೆ ಮೊದಲ ಹಂತದ ಅಭಿಯಾನ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ" ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ