ಕೋವಿಡ್​ ಅಬ್ಬರ: NEET PG 2021 ಮುಂದೂಡಿದ ಕೇಂದ್ರ

ಇದೇ ಏಪ್ರಿಲ್​ 18ರಂದು NEET PG​ ಪರೀಕ್ಷೆಗಳನ್ನು ನಿಗದಿಸಲಾಗಿತ್ತು. ಈಗ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ನಿರ್ಧರಿಸಿ ತಿಳಿಸಲಾಗುವುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ದೇಶದಲ್ಲಿ ಎರಡನೇ ಅಲೆ ಕೊರೋನಾ ಸೋಂಕು ಏರಿಕೆ ಹಾದಿ ತುಳಿದಿದೆ. ದಿನದಿಂದ ದಿನಕ್ಕೆ ರಾಜ್ಯಗಳಲ್ಲಿ ದಾಖಲೆ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರುಗತಿ ಕಾಣುತ್ತಿದೆ. ಇದೇ ಹಿನ್ನಲೆ ಈಗಾಗಲೇ 10ನೇ ತರಗತಿ CBSE ಬೋರ್ಡ್ ಪರೀಕ್ಷೆ ರದ್ದು ಮಾಡಲಾಗಿದೆ. ಹಾಗೆಯೇ 12ನೇ ತರಗತಿ ಪರೀಕ್ಷೆಗಳ ದಿನಾಂಕ ಮುಂದೂಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆಯುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET PG 2021​​) ಅನ್ನು ಮುಂದೂಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್​ ತಿಳಿಸಿದ್ದಾರೆ. ಯುವ ವೈದ್ಯಕೀಯ ವಿದ್ಯಾರ್ಥಿಗಳ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ಟ್ವೀಟ್​ ಮೂಲಕ ತಿಳಿಸಿದ್ದಾರೆ.

  ಇದೇ ಏಪ್ರಿಲ್​ 18ರಂದು NEET PG​ ಪರೀಕ್ಷೆಗಳನ್ನು ನಿಗದಿಸಲಾಗಿತ್ತು. ಈಗ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ನಿರ್ಧರಿಸಿ ತಿಳಿಸಲಾಗುವುದು ಎಂದಿದ್ದಾರೆ.  ಕೇಂದ್ರ ಸರ್ಕಾರ ಈ ನಿರ್ಧಾರ ಪ್ರಕಟಿಸುವ ಮುನ್ನವೇ ಈ ಕೋವಿಡ್​ ಹಿನ್ನಲೆ ಪರೀಕ್ಷೆಯನ್ನು ಮುಂದೂಡಬೇಕು ಎಂದು ಅಭ್ಯರ್ಥಿಗಳು ಸುಪ್ರೀಂ ಕೋರ್ಟ್​ ಕದ ತಟ್ಟಿದ್ದರು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕೋವಿಡ್​ ಸೋಂಕಿತರಿಗೆ ಚಿಕಿತ್ಸೆಯಲ್ಲಿ ತೊಡಗಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಅಲ್ಲದೇ ಜನವರಿಯಲ್ಲಿ ಪರೀಕ್ಷೆ ಮುಂದೂಡಿದಾಗ ದೇಶದಲ್ಲಿ ಕೊರೋನಾ ಹೆಚ್ಚಿನ ಅಪಾಯ ಮಟ್ಟದಲ್ಲಿರಲಿಲ್ಲ ಎಂದು ತಿಳಿಸಿದ್ದಾರೆ.

  ಪ್ರಸ್ತುತ ದೇಶದಲ್ಲಿ ಕೋವಿಡ್​ ಸೋಂಕು ತೀವ್ರಗತಿಯಲ್ಲಿದ್ದು, ವೈದ್ಯರ ಕೊರತೆ ಎದುರಾಗಿದೆ, ಇಂತಹ ಸಂದರ್ಭದಲ್ಲಿ ಪರೀಕ್ಷೆ ಅಧಿಸೂಚನೆ ಹೊರಡಿಸಿರುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಈ ಹಿನ್ನಲೆ ಮುಂದೂಡುವಂತೆ ಮನವಿ ಮಾಡಲಾಗಿತ್ತು.

  ಎಂಬಿಬಿಎಂ ಪದವಿ ಪಡೆದ ವೈದ್ಯಕೀಯ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗಾಗಿ ನಡೆಸುವ ಪರೀಕ್ಷೆ ಇದಾಗಿದೆ. ಎಂಎಸ್​, ಎಂಡಿ ಕೋರ್ಸ್​ಗಳನ್ನು ಪಡೆಯಲು ಈ ಪರೀಕ್ಷೆಯನ್ನು ರಾಷ್ಟ್ರ ಮಟ್ಟದಲ್ಲಿ ನಡೆಸಲಾಗುವುದು. ಈ ಮೊದಲು ಈ ಪರೀಕ್ಷೆಯನ್ನು ಜನವರಿಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೊವೀಡ್​ ಸೋಂಕಿನ ಹಿನ್ನಲೆ ಏಪ್ರಿಲ್​ 18ಕ್ಕೆ ಮುಂದೂಡಲಾಗಿತ್ತು. ಈಗ ಮತ್ತೊಮ್ಮೆ ಈ ಪರೀಕ್ಷೆಯನ್ನು ಮುಂದೂಡಲಾಗಿದೆ.
  Published by:Seema R
  First published: