ಕೊರೋನಾ ಸೋಂಕು ತಗುಲಿದ್ದ ಬ್ಯಾಂಕ್ ಉದ್ಯೋಗಿಗೆ ರಜೆ ನೀಡದ ಕಾರಣ, ಆತ ಆಕ್ಸಿಜನ್ ಸಿಲಿಂಡರ್ ಜೊತೆಗೆ ಬ್ಯಾಂಕಿಗೆ ಆಗಮಿಸಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಅರವಿಂದ್ ಕುಮಾರ್ ಬೊಕಾರೊದಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್(Punjab National Bank-PNB)ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳಲು ರಜೆ ಕೇಳಿದ್ದರು. ಆದರೆ ಅರವಿಂದ್ ಕುಮಾರ್ ಮೇಲಾಧಿಕಾರಿಗಳು ರಜೆ ನೀಡದೆ ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಬೇರೆ ದಾರಿ ಕಾಣದ ಅರವಿಂದ್ ಆಕ್ಸಿಜನ್ ಸಿಲಿಂಡರ್ನ ಸಹಾಯದಿಂದ ಉಸಿರಾಡುತ್ತಾ ಬ್ಯಾಂಕ್ಗೆ ಆಗಮಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದೆ.
ಇವರು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಅರವಿಂದ್ ಕುಟುಂಬಸ್ಥರು ಬ್ಯಾಂಕ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಜೆ ನೀಡಿಲ್ಲವಾದ್ದರಿಂದ ಕೆಲಸಕ್ಕೆ ರಾಜೀನಾಮೆ ಕೊಡಿ ಎಂದು ನಾವು ಹೇಳಿದ್ದೆವು. ಆದರೆ ಬ್ಯಾಂಕ್ನವರು ಸಂಬಳ ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದರು ಎಂದು ಆರೋಪಿಸಿದ್ದಾರೆ.
ಆದರೆ ಅರವಿಂದ್ ಆರೋಪವನ್ನು ಪಿಎನ್ಬಿ(PNB) ಬ್ಯಾಂಕ್ನ ಮುಖ್ಯಸ್ಥರು ತಳ್ಳಿಹಾಕಿದ್ದಾರೆ. ನಾವು ಅವರಿಗೆ ರಜೆ ಕೊಡುವುದನ್ನು ನಿರಾಕರಿಸಿಲ್ಲ. ಬ್ಯಾಂಕ್ ಹೆಸರಿಗೆ ಮಸಿ ಬಳಿಯಲು ಅರವಿಂದ್ ಈ ರೀತಿ ನಾಟಕ ಮಾಡುತ್ತಿದ್ದಾರೆ. ಅರವಿಂದ್ ತನ್ನ ಎನ್ಪಿಎ ಲೋನ್ ಅಕೌಂಟ್ಸ್ ಬಗ್ಗೆ ತನಿಖೆ ಎದುರಿಸುತ್ತಿದ್ದಾರೆ. ಹೀಗಾಗಿ ಈ ತನಿಖೆಯಿಂದ ತಪ್ಪಿಸಿಕೊಳ್ಳಲು, ಬ್ಯಾಂಕಿಗೆ ಕೆಟ್ಟ ಹೆಸರು ತರಲು ಈ ರೀತಿಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಘಟನೆ ಕುರಿತಾದ ವಿಡಿಯೋದಲ್ಲಿ, ಅರವಿಂದ್ ಕುಮಾರ್ ಆಕ್ಸಿಜನ್ ಸಿಲಿಂಡರ್ ಜೊತೆಗೆ ತನ್ನ ಹೆಂಡತಿ ಮತ್ತು ಮಗನ ಬೆಂಬಲದೊಂದಿಗೆ ಬಹಳ ಆಯಾಸದಿಂದ ಬ್ಯಾಂಕಿಗೆ ಬರುವ ದೃಶ್ಯ ಸೆರೆಯಾಗಿದೆ.
ಈ ಘಟನೆ ಪಿಎನ್ಬಿಯ ಸೆಕ್ಟರ್ 4ನೇ ಶಾಖೆಯಲ್ಲಿ ಮಂಗಳವಾರ ನಡೆದಿದೆ. ಕುಮಾರ್ನ ಕುಟುಂಬಸ್ಥರು ಘಟನೆಯ ಕುರಿತಾದ ದೃಶ್ಯವನ್ನು ಚಿತ್ರೀಕರಣ ಮಾಡಿ, ಸೋಷಿಯಲ್ ಮೀಡಿಯಾಗೆ ಹರಿಯಬಿಟ್ಟಿದ್ದಾರೆ. ಕುಮಾರ್ ತನ್ನ ಮೇಲಾಧಿಕಾರಿಯ ಕ್ಯಾಬಿನ್ಗೆ ಹೋಗುವ ಹಾಗೂ ಅಲ್ಲಿ ಅವರ ಜೊತೆ ವಾದ ಮಾಡುವ ದೃಶ್ಯವೂ ವಿಡಿಯೋದಲ್ಲಿದೆ ಎಂದು ಪಿಎನ್ಬಿ ಆರೋಪಿಸಿದೆ.
ಸೋಂಕು ಶ್ವಾಸಕೋಶಕ್ಕೆ ತಗುಲಿರುವುದರಿಂದ ನಾನು ಸಂಪೂರ್ಣವಾಗಿ ಚೇತರಿಸಿಕೊಳ್ಳಲು 3 ತಿಂಗಳ ಕಾಲಾವಕಾಶ ಬೇಕೆಂದು ವೈದ್ಯರು ಹೇಳಿದ್ದಾರೆ. ಆದರೆ ಇವರು ನನಗೆ ರಜೆ ಕೊಡುತ್ತಿಲ್ಲ. ಇದು ಕಿರುಕುಳವಲ್ಲದೇ ಮತ್ತೇನು? ಎಂದು ಕುಮಾರ್ ಪ್ರಶ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ