Covid-19 Vaccine: ಭಾರತದಲ್ಲಿ ಮಿತಿ ಮೀರಿದ ಕೊರೋನಾ ಲಸಿಕೆಗಳ ಕೊರತೆ; ಇಂದು ಆರೋಗ್ಯ ಸಚಿವರ ಸಭೆಯಲ್ಲಿ ‌ಸಿಗಲಿದೆಯಾ ಪರಿಹಾರ?

Coronavirus Vaccination: ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ನೇತೃತ್ವದಲ್ಲಿ ಮಧ್ಯಾಹ್ನ 1 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಸಭೆಯಲ್ಲಿ ಕರ್ನಾಟಕ, ದೆಹಲಿ, ಮಹಾರಾಷ್ಟ್ರ, ರಾಜಸ್ಥಾನ, ಕೇರಳ ಮತ್ತು ತಮಿಳುನಾಡು ಆರೋಗ್ಯ ಸಚಿವರು ಪಾಲ್ಗೊಳ್ಳಲಿದ್ದಾರೆ.

ಸಚಿವ ಡಾ. ಹರ್ಷವರ್ಧನ್

ಸಚಿವ ಡಾ. ಹರ್ಷವರ್ಧನ್

  • Share this:
ನವದೆಹಲಿ, ಮೇ 13: ಭಾರತದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಅದನ್ನು ನಿಯಂತ್ರಿಸಬೇಕು ಎಂದು ಮೇ 1ರಿಂದ ಆರಂಭವಾದ ಮೂರನೇ ಹಂತದ ಲಸಿಕೆ ಹಾಕುವ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ವಿಫಲವಾಗಿದೆ.‌ ಈಗಾಗಲೇ ಕರ್ನಾಟಕ, ದೆಹಲಿ ಮತ್ತಿತರ ರಾಜ್ಯಗಳು ಮೂರನೇ ಹಂತದ ಲಸಿಕೆ ಹಾಕುವ ಕಾರ್ಯಕ್ರಮವನ್ನು ರದ್ದು ಮಾಡಿವೆ. ಈ ಹಿನ್ನೆಲೆಯಲ್ಲಿ ಇಂದು ಆರೋಗ್ಯ ಸಚಿವರ ಸಭೆ ನಡೆಯಲಿದೆ.

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ನೇತೃತ್ವದಲ್ಲಿ ಮಧ್ಯಾಹ್ನ 1 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಸಭೆಯಲ್ಲಿ ಕರ್ನಾಟಕ, ದೆಹಲಿ, ಮಹಾರಾಷ್ಟ್ರ, ರಾಜಸ್ಥಾನ, ಕೇರಳ ಮತ್ತು ತಮಿಳುನಾಡು ಆರೋಗ್ಯ ಸಚಿವರು ಪಾಲ್ಗೊಳ್ಳಲಿದ್ದಾರೆ. ನಿನ್ನೆ (ಮೇ 12) ಇದೇ ರೀತಿ ಲಸಿಕೆ ಹಾಕುವ ಪ್ರಮಾಣ ತುಂಬಾ ಕಡಿಮೆ ಇದ್ದ ರಾಜ್ಯಗಳ ಆರೋಗ್ಯ ಸಚಿವರ ಜೊತೆ ಸಭೆ ನಡೆಸಲಾಗಿತ್ತು. ಇಂದಿನ‌ ಸಭೆಯಲ್ಲಿ ಮೇಲಿನ‌ ಎಂಟು ರಾಜ್ಯಗಳಲ್ಲಿ ಕೊರೋನಾ ಲಸಿಕೆ ಹಾಕುವ ಅಭಿಯಾನ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಸಮಾಲೋಚನೆ ಆಗಲಿದೆ.

ಆದರೆ, ಈಗಾಗಲೇ ಕರ್ನಾಟಕ, ದೆಹಲಿ ಮತ್ತಿತರ ರಾಜ್ಯಗಳು ಮೂರನೇ ಹಂತದ ಲಸಿಕೆ ಹಾಕುವ ಕಾರ್ಯಕ್ರಮವನ್ನು ಅಧಿಕೃತ ಆದೇಶ ಮೂಲಕ ರದ್ದು ಮಾಡಿವೆ‌. ಇನ್ನು ಕೆಲವು ಕಡೆ ಲಸಿಕೆಗಳ ಕೊರತೆಯಿಂದ ಅಭಿಯಾನ ಕುಂಟುತ್ತಾ ಸಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನ‌ ಸಭೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುತ್ತಿರುವ ಲಸಿಕೆ ಪ್ರಮಾಣ ಹೆಚ್ಚಿಸುವಂತೆ ಕೇಳಲಾಗುತ್ತದೆ.

ಕರ್ನಾಟಕದಲ್ಲಿ ಲಸಿಕೆ ಅಭಿಯಾನ ರದ್ದು ಮಾಡಿರುವ ರಾಜ್ಯದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರಿಗೆ ಮಾಹಿತಿ ನೀಡಲಿದ್ದಾರೆ. ಜೊತೆಗೆ ರಾಜ್ಯಕ್ಕೆ ಅಗತ್ಯ ಇರುವ ಲಸಿಕೆಗಳ ಪ್ರಮಾಣದ ಬಗ್ಗೆಯೂ ತಿಳಿಸಿಕೊಡಲಿದ್ದಾರೆ. ಈ ಚರ್ಚೆಯ ಬಳಿಕವಾದರೂ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಲಸಿಕೆ ಸಿಗಲಿದೆಯೋ ಅಥವಾ ಇದು ಕೇಂದ್ರ ಸರ್ಕಾರ ನೆಪಮಾತ್ರಕ್ಕೆ ಸಭೆ ನಡೆಸುತ್ತಿದೆಯೋ ಎಂಬುದು ಸಂಜೆ ವೇಳೆಗೆ ಗೊತ್ತಾಗಲಿದೆ‌.

ಮೇ. 1 ರಂದು ಆರಂಭ ಆಗಬೇಕಿದ್ದ 18-44 ವರ್ಷದವರ ಲಸಿಕೆ ಅಭಿಯಾನವನ್ನು ಲಸಿಕೆ ಕೊರತೆ ಕಾರಣಕ್ಕೆ ಮೇ 10 ರಿಂದ ಶುರು ಮಾಡಲಾಯಿತು‌. ಆದರೆ ಮೇ 10ರಿಂದ ಅಭಿಯಾನ ನಡೆಸುವುದಕ್ಕೂ ಕೇಂದ್ರ ಸರ್ಕಾರ ಲಸಿಕೆಗಳನ್ನು ಪೂರೈಸಿಲ್ಲ. ಪರಿಣಾಮವಾಗಿ ಜನರು ಲಸಿಕೆ ಪಡೆಯಲು ಮುಗಿ ಬೀಳುತ್ತಿದ್ದಾರೆ.‌ ಲಸಿಕಾ ಕೇಂದ್ರಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ಇಕ್ಕಟ್ಟಿಗೆ ಸಿಲುಕಿರುವ ರಾಜ್ಯ ಬಿಜೆಪಿ ಸರ್ಕಾರ ಮತ್ತೊಮ್ಮೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಮುಂದೂಡಿದೆ.

ಬುಧವಾರ 3,62,727 ಪ್ರಕರಣಗಳು ಪತ್ತೆಯಾಗಿವೆ. ಡಿಸ್ಚಾರ್ಜ್ ಆದವರು 3,52,181 ಜನ. ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,37,03,665ಕ್ಕೆ ಏರಿಕೆ ಆಗಿದೆ.‌ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದೆ. ಬುಧವಾರ  4,120 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,58,317ಕ್ಕೆ ಏರಿಕೆ ಆಗಿದೆ.
Published by:Sushma Chakre
First published: