news18-kannada Updated:January 16, 2021, 7:57 AM IST
ಕೊರೋನಾ ಲಸಿಕೆ
ನವದೆಹಲಿ (ಜ. 16): ಇಡೀ ವಿಶ್ವವನ್ನೇ ಕಂಗೆಡಿಸಿದ್ದ ಅಪಾಯಕಾರಿ ಕೊರೋನಾ ವೈರಸ್ ಸುಮಾರು 1 ವರ್ಷಗಳಿಂದ ತನ್ನ ಅಟ್ಟಹಾಸವನ್ನು ನಡೆಸುತ್ತಿದೆ. ಈ ಮಹಾಮಾರಿಗೆ ಔಷಧ ಪತ್ತೆಹಚ್ಚಲಾಗಿದ್ದು, ಇಂದಿನಿಂದ ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನ ಆರಂಭವಾಗಲಿದೆ. ಇಂದು ಬೆಳಿಗ್ಗೆ 10.30ಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ದೇಶಾದ್ಯಂತ 3,006 ಲಸಿಕಾ ವಿತರಣಾ ಕೇಂದ್ರಗಳ ನಿರ್ಮಾಣ ಮಾಡಲಾಗಿದೆ. ಪ್ರತಿ ಕೇಂದ್ರದಲ್ಲೂ ಪ್ರತಿದಿನ 100 ಜನರಿಗೆ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ವಿತರಣೆ ಮಾಡಲಾಗುವುದು. ಒಟ್ಟಾರೆ, 1.65 ಕೋಟಿ ಕೋವಿಡ್ ಡೋಸ್ಗಳನ್ನು ಕೇಂದ್ರ ಸರ್ಕಾರ ಖರೀದಿಸಿದೆ.
ಇಂದು ಬೆಳಗ್ಗೆ 10.30ಕ್ಕೆ ಕೋ-ವಿನ್ ಆ್ಯಪ್ ಉದ್ಘಾಟನೆ ಮಾಡುವ ಮೂಲಕ ದೇಶದ 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಮುಂಚೂಣಿಯ ಕಾರ್ಯಕರ್ತರಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಬಳಿಕ, ಆಯ್ದ ಲಸಿಕೆ ಫಲಾನುಭವಿಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಸಂವಾದ ನಡೆಸಲಿದ್ದಾರೆ. ಇಂದಿನಿಂದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎಂಬ 2 ರೀತಿಯ ಕೊರೋನಾ ಲಸಿಕೆಗಳನ್ನು ನೀಡಲಾಗುತ್ತದೆ. ಈಗಾಗಲೇ ನೋಂದಣಿ ಮಾಡಿಕೊಂಡವರಿಗೆ ಲಸಿಕೆ ನೀಡಲಾಗುತ್ತದೆ.
ಇದನ್ನೂ ಓದಿ: ಇಂದು ರಾಜ್ಯಾದ್ಯಂತ ಕೊರೋನಾ ಲಸಿಕೆ ವಿತರಣೆ; 237 ಕಡೆ ಕೋವಿಶೀಲ್ಡ್, 6 ಕಡೆ ಕೋವ್ಯಾಕ್ಸಿನ್
ಮೊದಲಿಗೆ ಆರೋಗ್ಯ ಕಾರ್ಯಕರ್ತರು, ಕೊರೋನಾ ವಾರಿಯರ್ಸ್ಗೆ ಕೊರೋನಾ ಲಸಿಕೆ ನೀಡಲು ಆದ್ಯತೆ ನೀಡಲಾಗಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು. ದೇಶದ 1 ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ಇಂದಿನಿಂದ ಲಸಿಕೆ ನೀಡಲಾಗುವುದು. ನಂತರ 50 ವರ್ಷ ದಾಟಿದವರಿಗೆ ಲಸಿಕೆ ನೀಡಲು ನಿರ್ಧಾರ ಮಾಡಲಾಗಿದೆ. ಮುಂದಿನ 10 ದಿನದೊಳಗೆ ಮೊದಲ ಹಂತದ ಅಭಿಯಾನ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಶೇ. 10ರಷ್ಟು ಲಸಿಕೆಗಳನ್ನು ಮೀಸಲು ಡೋಸ್ಗಳೆಂದು ತೆಗೆದಿರಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ನಿಗದಿಗಿಂತ ಹೆಚ್ಚು ಜನರಿಗೆ ಲಸಿಕೆ ಹಾಕದಿರುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ. ಕ್ರಮೇಣವಾಗಿ ಲಸಿಕೆ ವಿತರಣಾ ಕೇಂದ್ರಗಳನ್ನು ಹೆಚ್ಚಿಸಲು ಚಿಂತಿಸಲಾಗಿದೆ.
ದೇಶಾದ್ಯಂತ ಇಂದು ಕೊರೋನಾ ವ್ಯಾಕ್ಸಿನೇಷನ್ ಆರಂಭವಾಗಲಿದೆ. ಕರ್ನಾಟಕದಲ್ಲೂ ಲಸಿಕಾ ಅಭಿಯಾನಕ್ಕೆ ಆರೋಗ್ಯ ಇಲಾಖೆ ರೆಡಿಯಾಗಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 6 ಲಸಿಕಾ ಕೇಂದ್ರಗಳಲ್ಲಿ ಇಂದಿನಿಂದ ವ್ಯಾಕ್ಸಿನ್ ನೀಡಲಾಗುತ್ತದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 5 ಲಸಿಕಾ ಕೇಂದ್ರಗಳಲ್ಲಿ ಕೊರೋನಾ ಲಸಿಕೆ ನೀಡಲಾಗುತ್ತದೆ. ಸರ್ಕಾರಿ ಹಾಗೂ ಖಾಸಗಿ ಮೆಡಿಕಲ್ ಕಾಲೇಜಿನಲ್ಲೂ ಲಸಿಕೆ ನೀಡಲಾಗುತ್ತದೆ.
Published by:
Sushma Chakre
First published:
January 16, 2021, 7:57 AM IST