ಮಾಸ್ಕ್​ ಧರಿಸದಿದ್ದರೆ ದಂಡ ಜೊತೆಗೆ ಕೊರೋನಾ ಕೇಂದ್ರಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷೆ; ಗುಜರಾತ್​ ಹೈಕೋರ್ಟ್​

ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್​ ಧರಿಸದೆ ನಿರ್ಲಕ್ಷ್ಯ ವಹಿಸುವ ಮೂಲಕ ಕೊರೋನಾ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಯು 5 ರಿಂದ 15 ದಿನಗಳವರೆಗೆ, ದಿನಕ್ಕೆ 4 ರಿಂದ 6 ಗಂಟೆಗಳ ಕಾಲ ಸಮುದಾಯ ಸೇವೆ ಮಾಡಬೇಕಾಗುತ್ತದೆ ಎಂದು ಗುಜರಾತ್​ ಹೈಕೋರ್ಟ್​ ಎಚ್ಚರಿಕೆ ನೀಡಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಅಹಮದಾಬಾದ್ (ನವೆಂಬರ್​ 02); ದೇಶದಲ್ಲಿ ಅತಿಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪೈಕಿ ಗುಜರಾತ್​ ಸಹ ಒಂದು. ನಮಸ್ತೆ ಟ್ರಂಪ್ ಕಾರ್ಯಕ್ರಮದ ನಂತರ ಗುಜರಾತ್​ನಲ್ಲಿ ಕೊರೋನಾ ಪೀಡಿತರ ಸಂಖ್ಯೆ ಗಣನೀಯವಾಗಿ ಏರುತ್ತಲೇ ಇದೆ. ಈಗಾಗಲೇ ಗುಜರಾತ್​ನಲ್ಲಿ 2 ಲಕ್ಷಕ್ಕೂ ಅಧಿಕ ಸೋಂಕಿತರು ಇದ್ದಾರೆ ಎಂದು ವರದಿಯಾಗಿದೆ. ಆದರೂ ಜನ ಮಾಸ್ಕ್​ ಧರಿಸದೆ ಓಡಾಡುತ್ತಿರುವುದು ಅಲ್ಲಿನ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಮಾಸ್ಕ್ ಧರಿಸದೆ ಓಡಾಡುವವರ ದಂಡದ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಅಹಮದಾಬಾದ್​ ಹೈಕೋರ್ಟ್​, "ಮಾಸ್ಕ್​ ಧರಿಸದೆ ನಿರ್ಲಕ್ಷ್ಯ ವಹಿಸುವವರಿಗೆ ದಂಡದ ಜೊತೆಗೆ ಕೊರೋನಾ ಸಮುದಾಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿ" ಎಂದು ಸರ್ಕಾರಕ್ಕೆ ಶಿಫಾರಸು ಮಾಡುವ ಮೂಲಕ ಇಡೀ ದೇಶದ ಗಮನ ಸೆಳೆದಿದೆ.

  ಈ ಕುರಿತು ಮಹತ್ವದ ತೀರ್ಪು ನೀಡಿರುವ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಜೆ.ಬಿ. ಪಾರ್ಡಿವಾಲಾ ಅವರಿದ್ದ ದ್ವಿಸದಸ್ಯ ನ್ಯಾಯಪೀಠ, "ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್​ ಧರಿಸದೆ ನಿರ್ಲಕ್ಷ್ಯ ವಹಿಸುವ ಮೂಲಕ ಕೊರೋನಾ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಯು 5 ರಿಂದ 15 ದಿನಗಳವರೆಗೆ, ದಿನಕ್ಕೆ 4 ರಿಂದ 6 ಗಂಟೆಗಳ ಕಾಲ ಸಮುದಾಯ ಸೇವೆ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರ ಇದನ್ನು ಕಡ್ಡಾಯಗೊಳಿಸುವಂತೆ ಹೈಕೋರ್ಟ್​ ಶಿಫಾರಸು ಮಾಡುತ್ತಿದೆ. ಇಂತಹ ಶಿಕ್ಷೆಗಳಿಂದ ಮಾತ್ರ ಕೊರೋನಾವನ್ನು ನಿಯಂತ್ರಿಸುವುದು ಸಾಧ್ಯ" ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ.

  ಇದನ್ನೂ ಓದಿ : ಜೈಲಿಗೆ ಹೋಗಿ ಬಂದರೂ ಯಡಿಯೂರಪ್ಪನವರಿಗೆ ಬುದ್ಧಿ ಬಂದಿಲ್ಲ; ವಾಟಾಳ್ ನಾಗರಾಜ್​ ವಾಗ್ದಾಳಿ

  ಜೊತೆಗೆ, "ನಿಯಮ ಉಲ್ಲಂಘಿಸಿದವರಿಗೆ ನೀಡಲಾಗುವ ಕೆಲಸಗಳು, ವೈದ್ಯಕೀಯೇತರ ಸ್ಪರೂಪದ್ದಾಗಿರಬೇಕು. ಸ್ವಚ್ಛತಾ ಕಾರ್ಯ, ಮನೆ ಕೆಲಸ, ಅಡುಗೆ ಮಾಡುವುದು ಮತ್ತು ಬಡಿಸಲು ಸಹಾಯ ಮಾಡುವುದು, ದಾಖಲೆ ತಯಾರಿಕೆ, ದತ್ತಾಂಶ ಸಂಗ್ರಹಣೆ ಇತ್ಯಾದಿ ಕೆಲಸಗಳನ್ನು ನೀಡಬೇಕು" ಎಂದು ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.

  ಕೊರೋನಾ ಸಂಬಂಧಿತ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸುವುದನ್ನು ಮುಂದುವರಿಸಲಾಗುವುದು ಎಂದಿರುವ ನ್ಯಾಯಪೀಠ, ಸಮುದಾಯ ಕೇಂದ್ರಗಳಲ್ಲಿ ಸೇವೆಯನ್ನು ಶಿಕ್ಷೆಯಾಗಿ ವಿಧಿಸುವ ನೀತಿಯನ್ನು ತರಲು ಗುಜರಾತ್ ಸರ್ಕಾರಕ್ಕೆ ಆದೇಶಿಸಿದೆ. ಅಲ್ಲದೆ, ಈ ಪ್ರಸ್ತಾವನೆಯನ್ನು ಕಾರ್ಯಗತಗೊಳಿಸಲು ಸರ್ಕಾರ ಬಯಸಿದೆ ಆದರೆ ಅದನ್ನು ಜಾರಿಗೊಳಿಸುವುದು ಒಂದು ಸವಾಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
  Published by:MAshok Kumar
  First published: