ಹರಿಯಾಣ (ಆಗಸ್ಟ್ 30); ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಯ ವಿರುದ್ಧ ದೇಶದ ರೈತರು ಕಳೆದ 10 ತಿಂಗಳಿನಿಂದ ಸತತ ಹೋರಾಟದಲ್ಲಿ ತೊಡಗಿದ್ದಾರೆ. ಇನ್ನೂ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರ ಹೋರಾಟ ಇನ್ನೂ ಉಗ್ರವಾಗೇ ಇದೆ. ಈ ನಡುವೆ ಇಂದು ಬಿಜೆಪಿ ನಡೆಸುತ್ತಿರುವ ಸಭೆಯ ವಿರುದ್ಧ ಪ್ರತಿಭಟಿಸಲು ಕರ್ನಾಲ್ ಕಡೆಗೆ ತೆರಳುತ್ತಿದ್ದ ರೈತರ ಗುಂಪಿನ ಮೇಲೆ, ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಹರಿಯಾಣ ಪೊಲೀಸರು ಆಗಸ್ಟ್ 28 ರಂದು ಲಾಠಿಚಾರ್ಚ್ ನಡೆಸಿದ್ದರು. ಈ ಲಾಠಿಚಾರ್ಚ್ನಲ್ಲಿ ಅನೇಕ ರೈತರು ಗಾಯಗೊಂಡಿದ್ದರು. ಆದರೆ. ಈ ಲಾಠಿಚಾರ್ಚ್ನಲ್ಲಿ "ಹರಿಯಾಣದ ಪ್ರತಿಭಟನಾ ನಿರತ ರೈತರ ತಲೆ ಬುರುಡೆ ಒಡೆಯಿರಿ ಎಂದು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆಗಿರುವ ಆಯುಷ್ ಸಿನ್ಹಾ ಆದೇಶ ನೀಡಿದ್ದರು" ಎಂಬ ಸುದ್ದಿ ಸದ್ದು ಮಾಡುತ್ತಲೇ, ಈ ಬಗ್ಗೆ ಕಿಡಿಕಾರಿರುವ ರೈತ ನಾಯಕ ರಾಕೇಶ್ ಟಿಕಾಯತ್, "ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಆಯುಷ್ ಸಿನ್ಹಾ ಓರ್ವ ಸರ್ಕಾರಿ ತಾಲಿಬಾನ್ ಕಮಾಂಡರ್" ಎಂದು ಕಿಡಿ ಕಾರಿದ್ದಾರೆ.
ಶನಿವಾರ ಹರಿಯಾಣದ ಕರ್ನಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಅಮಾನುಷವಾಗಿ ಲಾಠಿ ಚಾರ್ಜ್ ನಡೆಸಿದ್ದಾರೆ. ಲಾಠಿ ಚಾರ್ಜ್ ಆದ ನಂತರ ವಿಡಿಯೊವೊಂದು ವೈರಲ್ ಆಗಿದ್ದು, ಅದರಲ್ಲಿ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆಗಿರುವ ಆಯುಷ್ ಸಿನ್ಹಾ ಪ್ರತಿಭಟನಾಕಾರರ ತಲೆಬುರುಡೆ ಒಡೆಯಲು ಪೊಲೀಸ್ ಸಿಬ್ಬಂದಿಗಳಿಗೆ ಆದೇಶ ನೀಡುತ್ತಿರುವುದನ್ನು ಕಾಣಬಹುದು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಕಿಸಾನ್ ಯೂನಿಯನ್ ಟಿಕಾಯತ್ ಬಣದ ರೈತ ನಾಯಕ ರಾಕೇಶ್ ಟಿಕಾಯತ್, "ನಿನ್ನೆ ಒಬ್ಬ ಅಧಿಕಾರಿ(ಪೊಲೀಸರಿಗೆ ರೈತರ ತಲೆಯ ಮೇಲೆ ಹೊಡೆಯಲು ಆದೇಶಿಸಿದರು. ಅವರು ನಮ್ಮನ್ನು ಖಲಿಸ್ತಾನಿಗಳು ಎಂದು ಕರೆಯುತ್ತಾರೆ. ನೀವು ನಮ್ಮನ್ನು ಖಲಿಸ್ತಾನಿ ಮತ್ತು ಪಾಕಿಸ್ತಾನಿ ಎಂದು ಕರೆದರೇ, ನಾವು ಸರ್ಕಾರಿ ತಾಲಿಬಾನಿ ದೇಶವನ್ನು ಆಕ್ರಮಿಸಿಕೊಂಡಿದೆ ಎಂದು ಹೇಳುತ್ತೇವೆ. ಅವರು ಸರ್ಕಾರಿ ತಾಲಿಬಾನಿಗಳು. ಅಧೀಕಾರಿ ಸರ್ಕಾರಿ ತಾಲಿಬಾನ್ ಕಮಾಂಡರ್" ಎಂದು ಆಕ್ರೋಶ ಹೊರಹಾಕಿದ್ದಾರೆ.
"ಇದು ತುಂಬಾ ಸರಳ ಮತ್ತು ಸ್ಪಷ್ಟವಾಗಿದೆ. ಯಾರು ಎಲ್ಲಿಂದ ಬಂದರೂ, ಯಾರೊಬ್ಬರೂ ಬ್ಯಾರಿಕೇಡ್‌ನಿಂದ ಮುಂದೆ ಹೋಗಬಾರದು. ಒಂದು ವೇಳೆ ಬಂದರೆ ಅವರ ಬುರುಡೆಯನ್ನು ಒಡೆಯಿರಿ. ಯಾವುದೇ ಸೂಚನೆ ಅಥವಾ ನಿರ್ದೇಶನದ ಅಗತ್ಯವಿಲ್ಲ. ನಮ್ಮಲ್ಲಿ ಸಾಕಷ್ಟು ಪೊಲೀಸ್ ಪಡೆಯಿದೆ" ಎಂದು ಕರ್ನಾಲ್‌ನಲ್ಲಿ ಪ್ರತಿಭಟನಾ ನಿರತ ರೈತರನ್ನು ನಿಭಾಯಿಸಲು ನಿಯೋಜಿಸಲಾದ ಪೊಲೀಸರಿಗೆ ಅಧಿಕಾರಿ ಆಯುಷ್ ಸಿನ್ಹಾ ಹೇಳಿದ್ದಾರೆ.
ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಭಾಗವಹಿಸಿದ್ದ ಸಭೆಯನ್ನು ವಿರೋಧಿಸಿ ರೈತರು ಕರ್ನಾಲ್ ಬಳಿಯ ಬಸ್ತಾರಾ ಟೋಲ್ ಪ್ಲಾಜಾದಲ್ಲಿ ಜಮಾಯಿಸಿದ್ದರು. ಈ ವೇಳೆ ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ರಕ್ತಸಿಕ್ತವಾಗಿರುವ ದೇಹಗಳೊಂದಿಗೆ, ಗಂಭೀರ ಗಾಯಗೊಂಡಿರುವ ಹಲವಾರು ರೈತರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ