ನವದೆಹಲಿ: ಭಾರೀ ಕುತೂಹಲ ಮೂಡಿಸಿರುವ ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದೆ. ಯಾರಿಗೆ ಒಲಿಯುತ್ತೆ ದಿಲ್ಲಿ? ಎಂಬ ಪ್ರಶ್ನೆಗೆ ಉತ್ತರ ಸಿಗಲು ಬಹಳ ಕಾಯಬೇಕಾಗಿಲ್ಲ. ಇನ್ನು ಕೆಲವೇ ಗಂಟೆಗಳಲ್ಲಿ ಸುಳಿವು ಸಿಗಲಾರಂಭಿಸಿರುತ್ತದೆ. ಇಂದು ಬೆಳಿಗ್ಗೆ 8 ಗಂಟೆಗೆ ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭ. ಅಬ್ಬಬ್ಬ ಅಂದರೆ ಮಧ್ಯಾಹ್ನದೊಳಗೆ ಪೂರ್ಣ ಫಲಿತಾಂಶ. ಆಗ ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಇರುವ 672 ಅಭ್ಯರ್ಥಿಗಳ ಭವಿಷ್ಯ ಏನೂ ಅಂತಾ ಗೊತ್ತಾಗಲಿದೆ.
ಸರಿಸುಮಾರು ಒಂದೂವರೆ ಕೋಟಿ ಜನ ಚಲಾಯಿಸಿರುವ ಮತ ಎಣಿಸಲು 27 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ರಾಷ್ಟ್ರೀಯ ನೋಂದಣಿ ಕಾಯಿದೆ ತಂದಿರುವುದರಿಂದ ಆತಂಕಕಾರಿ ವಾತಾವರಣ ನಿರ್ಮಾಣವಾಗಿದ್ದು, ಎಲ್ಲೆಡೆ ಭಾರೀ ಬಂದೋಬಸ್ತ್ ಮಾಡಲಾಗಿದೆ.
ಎಲ್ಲಾ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷವೇ ಮತ್ತೆ ಗೆಲ್ಲುತ್ತೇ ಎಂದು ಹೇಳುತ್ತಿದ್ದರೂ ಬಿಜೆಪಿ ನಾಯಕರ ಭರವಸೆ ಮಾತ್ರ ಕರಗಿಲ್ಲ. 'ಶಾಕಿಂಗ್ ರಿಸಲ್ಟ್' ಬರುತ್ತೆ ನೋಡುತ್ತಿರಿ ಎಂಬ ಶಾಕಿಂಗ್ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ಭಯಗೊಂಡಿರುವ ಆಮ್ ಆದ್ಮಿ ಪಕ್ಷದ ನಾಯಕರು, ಬಿಜೆಪಿಯಿಂದ ಇವಿಎಂ ತಿರುಚುವ ಕೆಲಸ ಆಗಬಹುದು. ಬಿಜೆಪಿ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಹಾಳುಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಮೇಲೆ ಆರೋಪ ಮಾಡಿ ಅಥವಾ ಅನುಮಾನ ವ್ಯಕ್ತಪಡಿಸಿ ಅಷ್ಟಕ್ಕೆ ಕೈ ಕಟ್ಟಿ ಕುಳಿತಿಲ್ಲ ಆಮ್ ಆದ್ಮಿ ಪಕ್ಷ. ಮತದಾನ ಮುಗಿದ ಕೆಲವೇ ಗಂಟೆಗಳಲ್ಲಿ ಸಭೆ ನಡೆಸಿದ ಸಿಎಂ ಅರವಿಂದ ಕೇಜ್ರಿವಾಲ್, ಇವಿಎಂ ಇರುವ ಸ್ಟ್ರಾಂಗ್ ರೂಂಗಳನ್ನು ಕಾಯಲು ತಮ್ಮ ಪಕ್ಷದ ಕಾರ್ಯಕರ್ತರನ್ನು ನಿಯೋಜಿಸಿದ್ದಾರೆ.
ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಕೂಡ ಆಮ್ ಆದ್ಮಿ ಪಕ್ಷವೇ ಮತ್ತೊಮ್ಮೆ ಜಯಭೇರಿ ಸಾಧಿಸಲಿದೆ. ಅಭಿವೃದ್ಧಿ ಮಂತ್ರ ಪಠಿಸುತ್ತಿರುವ ಕೇಜ್ರಿವಾಲ್ ಅವರೇ ಮುಂದಿನ ಐದು ವರ್ಷ ಮುಖ್ಯಮಂತ್ರಿಯಾಗಲಿದ್ದಾರೆ. ಆಪ್ ಎದುರು ಮತ್ತೊಮ್ಮೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಧೂಳೀಪಟವಾಗಲಿವೆ ಎಂದು ಭವಿಷ್ಯ ನುಡಿದಿವೆ. ವಿವಿಧ ಸಂಸ್ಥೆಗಳ ಮತದಾನೋತ್ತರ ಸಮೀಕ್ಷೆಗಳು ಹೀಗಿವೆ..
ಇದನ್ನು ಓದಿ: ಗೃಹ ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಓಮರ್ ಅಬ್ದುಲ್ಲಾ ಸಹೋದರಿ
ಎಬಿಪಿ–ಸಿ ವೋಟರ್ ಸಮೀಕ್ಷೆ
ಎಎಪಿ: 49-63
ಬಿಜೆಪಿ: 5-19
ಕಾಂಗ್ರೆಸ್: 0
ಟೈಮ್ಸ್ ನೌ–ಐಪಿಎಸ್ಒಎಸ್ ಸಮೀಕ್ಷೆ
ಎಎಪಿ: 47
ಬಿಜೆಪಿ: 23
ಕಾಂಗ್ರೆಸ್: 0
ಜನ್ ಕಿ ಬಾತ್
ಎಎಪಿ: 55
ಬಿಜೆಪಿ: 15
ಕಾಂಗ್ರೆಸ್: 0
ನ್ಯೂಸ್ ಎಕ್ಸ್
ಎಎಪಿ: 55
ಬಿಜೆಪಿ: 14
ಕಾಂಗ್ರೆಸ್: 1
ಸುದರ್ಶನ್ ನ್ಯೂಸ್
ಎಎಪಿ: 42
ಬಿಜೆಪಿ: 26
ಕಾಂಗ್ರೆಸ್: 2
ಇಂಡಿಯಾ ನ್ಯೂಸ್ ನೇಷನ್
ಎಎಪಿ: 55
ಬಿಜೆಪಿ: 14
ಕಾಂಗ್ರೆಸ್: 1
ಇಂಡಿಯಾ ಟಿವಿ
ಎಎಪಿ: 44
ಬಿಜೆಪಿ: 26
ಕಾಂಗ್ರೆಸ್ :0
ರಿಪಬ್ಲಿಕ್ ಟಿವಿ
ಎಎಪಿ: 48-61
ಬಿಜೆಪಿ: 9-21
ಕಾಂಗ್ರೆಸ್: 01
ಟಿವಿ 9-ಭಾರತ್ ವರ್ಷ್- ಸಿಸಿರೋ
ಎಎಪಿ: 54
ಬಿಜೆಪಿ: 15
ಕಾಂಗ್ರೆಸ್: 01
ಎಲ್ಲಾ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷ ಮತ್ತೆ ದೆಹಲಿಯ ಚುಕ್ಕಾಣಿ ಹಿಡಿಯಲಿದೆ ಅಂತಾನೇ ಹೇಳಿವೆ. ಕೆಲವೊಮ್ಮೆ ಸಮೀಕ್ಷೆಗಳು ಸುಳ್ಳಾಗಿವೆ. ಅಂತಿಮವಾಗಿ ದೆಹಲಿಯಲ್ಲಿ ಏನಾಗುತ್ತೆ ಎಂಬುದು ಇನ್ನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ