• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಕೋವಿಡ್ ನಿಯಂತ್ರಿಸಲು ಪಶ್ಚಿಮ ಬಂಗಾಳ ಸರ್ಕಾರ ವಿಫಲ; ಕೊಲ್ಕತ್ತಾ ರಾಜಭವನದ ಮುಂದೆ ಕುರಿಗಳ ಪ್ರತಿಭಟನೆ!

ಕೋವಿಡ್ ನಿಯಂತ್ರಿಸಲು ಪಶ್ಚಿಮ ಬಂಗಾಳ ಸರ್ಕಾರ ವಿಫಲ; ಕೊಲ್ಕತ್ತಾ ರಾಜಭವನದ ಮುಂದೆ ಕುರಿಗಳ ಪ್ರತಿಭಟನೆ!

ಕೊಲ್ಕತ್ತಾ ರಾಜಭವನದ ಎದುರು ಕುರಿಗಳ ಪ್ರತಿಭಟನೆ

ಕೊಲ್ಕತ್ತಾ ರಾಜಭವನದ ಎದುರು ಕುರಿಗಳ ಪ್ರತಿಭಟನೆ

ಕೋಲ್ಕತಾ ನಾಗರೀಕ್ ಮಂಚದ ವಕ್ತಾರರು ಕುರಿ ಕಾಯುವವರೊಟ್ಟಿಗೆ ರಾಜ್ಯಪಾಲರ ಹೌಸ್‌ನ ಉತ್ತರ ಗೇಟ್ ಬಳಿ ಕುರಿ ಮಂದೆ ತಂದು ನಿಲ್ಲಿಸಿದ್ದಾರೆ. ಈ ಘಟನೆ ಕಂಡು ಪೊಲೀಸರು ದಿಗ್ಭ್ರಮೆಗೊಂಡರು.

  • Share this:

ಕೊಲ್ಕತ್ತಾ (ಮೇ 20): ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊರೊನಾವನ್ನು ನಿಯಂತ್ರಿಸುವಲ್ಲಿ ಅಧಿಕಾರದಲ್ಲಿರುವವರು ಸೋತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಸಂಘಟನೆಯೊಂದು ಮಂಗಳವಾರ ಕೋಲ್ಕತ್ತಾದ ರಾಜ್ ಭವನದ ಮುಂದೆ ಕುರಿಗಳ ಹಿಂಡಿನೊಟ್ಟಿಗೆ ಪ್ರತಿಭಟನೆ ನಡೆಸಿದೆ. ಕೋಲ್ಕತಾ ನಾಗರೀಕ್ ಮಂಚದ ವಕ್ತಾರರು ಕುರಿ ಕಾಯುವವರೊಟ್ಟಿಗೆ ರಾಜ್ಯಪಾಲರ ಹೌಸ್‌ನ ಉತ್ತರ ಗೇಟ್ ಬಳಿ ಕುರಿ ಮಂದೆ ತಂದು ನಿಲ್ಲಿಸಿದ್ದಾರೆ. ಪೊಲೀಸರು ಬರುವ 5 - 7 ನಿಮಿಷಗಳ ಮುಂಚೆ ಆ ಗುಂಪು ಅಲ್ಲಿಯೇ ನಿಂತಿತ್ತು. ಈ ಘಟನೆ ಕಂಡು ಪೊಲೀಸರು ಮೊದಲಿಗೆ ದಿಗ್ಭ್ರಮೆಗೊಂಡರು. ಆ ನಂತರ ಪೊಲೀಸರು ಚಳವಳಿಗಾರರನ್ನು ಮತ್ತು ಕುರಿಗಳನ್ನು ಭದ್ರತಾ ಸ್ಥಳದಿಂದ ದೂರಕ್ಕೆ ಕಳುಹಿಸಿದರು.


ಇನ್ನು ಮಂಗಳವಾರ ರಾಜ್ಯಪಾಲ ಜಗದೀಪ್ ಧಂಕರ್ ಅವರ ಹುಟ್ಟು ಹಬ್ಬವೂ ಇತ್ತು. ನಾಗರೀಕ್ ಮಂಚ ವಕ್ತಾರರು ಮಾತನಾಡಿ, 'ಈಗ ಕೊರೊನಾ ಸಮಸ್ಯೆ ಹೆಚ್ಚಾಗಿದ್ದು, ಈ ಸಾಂಕ್ರಾಮಿಕದ ಸಮಯದಲ್ಲಿ ಜನರು ಒಟ್ಟಿಗೆ ಸೇರಲು ಅನುಮತಿ ಇಲ್ಲ. ಅಲ್ಲದೇ ಈ ಪ್ರದೇಶದಲ್ಲಿ ನಿಷೇಧದ ಆದೇಶಗಳೂ ಇದೆ' ಎಂದಿದ್ದಾರೆ.


ಅಲ್ಲದೇ 'ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇದ್ದೂ, ಕೋವಿಡ್ ರೋಗಿಗಳಿಗೆ ಹಾಸಿಗೆಯ ಕೊರತೆಯುಂಟಾಗುತ್ತಿದೆ. ಜನರು ವೈದ್ಯಕೀಯ ಸೌಲಭ್ಯ ಸಿಗದೇ ಸಾಯುತ್ತಿದ್ದಾರೆ. ಆದರೆ ರಾಜ್ಯಪಾಲ ಜಗದೀಪ್ ಧಂಕರ್ ಅವರು ಜನರ ನೆರವಿಗೆ ನಿಂತಿಲ್ಲ. ಕೊರೊನಾ ನಿರ್ಮೂಲನೆಗೆ ಕ್ರಮ ಕೈಗೊಂಡಿಲ್ಲ' ಎಂದು ವಕ್ತಾರರು ಹೇಳಿದ್ದಾರೆ. ಅಲ್ಲದೇ 'ರಾಜ್ಯಪಾಲರು ಬೇರೆಲ್ಲಾ ವಿಷಯಗಳ ಬಗ್ಗೆ ಗಮನಹರಿಸುತ್ತಿದ್ದಾರೆ ಹೊರತು ಕೋವಿಡ್ 19 ಬಗ್ಗೆ ಚಿಂತಿಸುತ್ತಿಲ್ಲ' ಎಂದಿದ್ದಾರೆ.


ಕೊಲ್ಕತ್ತಾ ನಾಗರೀಕ್ ಮಂಚ ಸಂಘವೂ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧವನ್ನು ಹೊಂದಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.


ಈ ಘಟನೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಅನುಪಮ್ ಹಾಜ್ರಾ ಅವರು ಮಾತನಾಡಿದ್ದಾರೆ. 'ರಾಜ ಭವನದ ಹೊರಗೆ ರಾಜ್ಯದ ಮೊದಲ ನಾಗರಿಕನ ವಿರುದ್ಧ ಇಂತಹ ಅಸಹ್ಯಕರ ವರ್ತನೆ ಬಂಗಾಳದ ಬಗ್ಗೆ ಸಣ್ಣ ನೋಟವನ್ನು ಕಲ್ಪಿಸಿಕೊಟ್ಟಿದೆ' ಎಂದಿದ್ದಾರೆ. ಆಡಳಿತದ ತೃಣಮೂಲ ಕಾಂಗ್ರೆಸ್ ವಕ್ತಾರ ಕುನಾಲ್ ಘೋಷ್ ಅವರು ಮಾತನಾಡಿ 'ಈ ಘಟನೆಯ ಹಿಂದೆ ಯಾರಿದ್ದಾರೆ. ಅಲ್ಲದೇ ಇಂತಹ ಆಲೋಚನೆ ಬಂದಿದ್ದು ಹೇಗೆ? ಎನ್ನುವುದು ನಮಗೆ ತಿಳಿದಿಲ್ಲ' ಎಂದಿದ್ದಾರೆ.


'ಕೊರೊನಾ ಮಾರ್ಗಸೂಚಿ ಉಲ್ಲಂಘಿಸಬೇಡಿ. ಶಾಂತವಾಗಿರಿ ಎಂದು ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇವೆ' ಎಂದು ಘೋಷ್ ಅವರು ಹೇಳಿದರು.


ಕೊರೊನಾ ಸಮಸ್ಯೆಯಿಂದ ಪ್ರತಿನಿತ್ಯ ಸಾವಿನ ಸಂಖ್ಯೆ ಏರುತ್ತಿದೆ. ರಾಜಕೀಯ ನಾಯಕರು ಈ ಸಂದರ್ಭದಲ್ಲಿ ತಮ್ಮ ಕ್ಷೇತ್ರಗಳಿಗೆ ಇಳಿದು ಕಾರ್ಯ ನಿರ್ವಹಿಸಬೇಕಾದ ಸವಾಲಿನ ಸಮಯವಿದು. ಉನ್ನತ ಸ್ಥಾನ-ಮಾನದಲ್ಲಿರುವವರು ಸಾಮಾನ್ಯ ಜನರ ನೋವಿಗೆ ಸ್ಪಂದಿಸುತ್ತಾರೆ ಎನ್ನುವ ಸಣ್ಣ ಆಶಯ ಜನರಲ್ಲಿ ಇದ್ದೇ ಇರುತ್ತದೆ. ಆದರೆ ಈ ಸಂದರ್ಭದಲ್ಲಿ ಸೂಕ್ತ ಪ್ರತಿಕ್ರಿಯೆ ಸಿಗದ ಕಾರಣ ತಮಗೆ ತಿಳಿದ ರೀತಿಯಲ್ಲಿ ಜನರು ಪ್ರತಿಭಟಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಯಕರು ಕೂಡ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ.

Published by:Sushma Chakre
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು