ಕೊರೋನಾ ಎಫೆಕ್ಟ್; ತೆಲಂಗಾಣದ ಎಲ್ಲ ಉದ್ಯೋಗಿ, ಚುನಾಯಿತ ಜನಪ್ರತಿನಿಧಿಗಳ ವೇತನ ಕಡಿತ
ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಪ್ರಗತಿ ಭವನದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಹಣಕಾಸು ಪರಿಸ್ಥಿತಿ ಬಗ್ಗೆ ಸಭೆ ನಡೆಸಿದರು. ಸುದೀರ್ಘ ಚರ್ಚೆಯ ಬಳಿಕ ಉದ್ಯೋಗಿಗಳ ವೇತನ ಕಡಿತದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು. ಈ ಬಗ್ಗೆ ಮುಖ್ಯಮಂತ್ರಿ ಕಾರ್ಯಾಲಯದಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.
ಹೈದರಾಬಾದ್: ದಿನದಿಂದ ದಿನಕ್ಕೆ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ಮಾರಕ ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಸೇರಿ ಆಯಾ ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಸೋಂಕಿನಿಂದಾಗಿ ಇಡೀ ದೇಶವನ್ನು ಏಪ್ರಿಲ್ 14ರವರೆಗೆ ಲಾಕ್ಡೌನ್ ಮಾಡಿರುವುದರಿಂದ ದೇಶದ ಅರ್ಥ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೀಗಾಗಿ ಉದ್ಯೋಗಿಗಳ ವೇತನ ಕಡಿತಕ್ಕೆ ತೆಲಂಗಾಣ ಸರ್ಕಾರ ನಿರ್ಧಾರ ಮಾಡಿದೆ.
ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಪ್ರಗತಿ ಭವನದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಹಣಕಾಸು ಪರಿಸ್ಥಿತಿ ಬಗ್ಗೆ ಸಭೆ ನಡೆಸಿದರು. ಸುದೀರ್ಘ ಚರ್ಚೆಯ ಬಳಿಕ ಉದ್ಯೋಗಿಗಳ ವೇತನ ಕಡಿತದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು. ಈ ಬಗ್ಗೆ ಮುಖ್ಯಮಂತ್ರಿ ಕಾರ್ಯಾಲಯದಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.
ಮುಖ್ಯಮಂತ್ರಿ, ಕ್ಯಾಬಿನೆಟ್ ಸಚಿವರು, ವಿಧಾನ ಪರಿಷತ್ ಸದಸ್ಯರು, ವಿಧಾನಸಭಾ ಸದಸ್ಯರು, ನಿಗಮ ಮಂಡಳಿಗಳ ಅಧ್ಯಕ್ಷರ ವೇತನವನ್ನು ಶೇ.75ರಷ್ಟು ಕಡಿತಕ್ಕೆ ಸರ್ಕಾರ ನಿರ್ಧರಿಸಿದೆ.
ಅಖಿತ ಭಾರತ ಸೇವೆಗಳಾದ ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳ ವೇತನದಲ್ಲಿ ಶೇ.60ರಷ್ಟು ಕಡಿತ
ಎಲ್ಲ ವರ್ಗದ ಉದ್ಯೋಗಿಗಳ ಸಂಬಳದಲ್ಲಿ ಶೇ.50ರಷ್ಟು ಕಡಿತ
ನಾಲ್ಕನೇ ದರ್ಜೆಯ ಉದ್ಯೋಗಿಗಳು, ಹೊರಗುತ್ತಿಗೆ ಮತ್ತು ಗುತ್ತಿಗೆ ಉದ್ಯೋಗಿಗಳ ವೇತನದಲ್ಲಿ ಶೇ.10ರಷ್ಟು ಕಡಿತ
ಎಲ್ಲ ನಿವೃತ್ತ ಉದ್ಯೋಗಿಗಳ ಪಿಂಚಣಿಯಲ್ಲಿ ಶೇ.50ರಷ್ಟು ಕಡಿತ.
ನಾಲ್ಕನೇ ದರ್ಜೆಯ ನಿವೃತ್ತ ಉದ್ಯೋಗಿಗಳ ಪಿಂಚಣಿಯಲ್ಲಿ ಶೇ.10ರಷ್ಟು ಕಡಿತ.
ಎಲ್ಲಾ ಸಾರ್ವಜನಿಕ ವಲಯದ ನಿಗಮದ ನೌಕರರು ಮತ್ತು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನವಾಗಿ ಸರ್ಕಾರದ ಅನುದಾನವನ್ನು ಕಡಿತಗೊಳಿಸಲಾಗುತ್ತದೆ.
ಕೊರೋನಾ ವೈರಸ್ ರಾಜ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜಾಗರೂಕವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಸಿಎಂ ಕಾರ್ಯಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಉದ್ಯೋಗಿಗಳ ಸಂಬಳ ಕಡಿತದ ಬಗ್ಗೆ ಸಿಎಂ ಕೆ.ಚಂದ್ರಶೇಖರ್ ರಾವ್ ಅವರು ನೆನ್ನೆಯೇ ಸುಳಿವು ನೀಡಿದ್ದರು. ಲಾಕ್ಡೌನ್ನಿಂದಾಗಿ ಸರ್ಕಾರ ಪ್ರತಿತಿಂಗಳಿಗೆ 12 ಸಾವಿರ ಕೋಟಿ ನಷ್ಟ ಅನುಭವಿಸಲಿದೆ. ಪ್ರತಿಯೊಂದನ್ನು ನಿರ್ಬಂಧಿಸಲಾಗಿದೆ. ನಾವು ಎಲ್ಲಾ ಶಾಸಕರು, ಸಚಿವರು ವೇತನ ಕಡಿತ ಮಾಡಲಿದ್ದೇವೆ. ಅಗತ್ಯ ಬಿದ್ದರೆ ಉದ್ಯೋಗಿಗಳ ವೇತನವನ್ನು ಕಡಿತ ಮಾಡುವುದಾಗಿ ಹೇಳಿದ್ದರು.