ದಿಲ್ಲಿ ಪೋಸ್ಟ್ | ಪ್ರಿಯಾಂಕಾ ಗಾಂಧಿ ಬಂಗಲೆ ಬಿಡಿಸಿ ಬುಡಕ್ಕೆ ತಂದುಕೊಂಡ ಬಿಜೆಪಿ, ಕುತೂಹಲಕಾರಿ ಬಿಹಾರ ಚುನಾವಣೆ!

ಪ್ರಿಯಾಂಕಾ ಗಾಂಧಿ ಅವರ ವಿಷಯದಲ್ಲಿ ಬಿಜೆಪಿ ಅಂದುಕೊಂಡಿದ್ದೆ ಒಂದು, ಆಗುತ್ತಿರುವುದೇ ಇನ್ನೊಂದು. ಬಿಹಾರದ ಬೆಳವಣಿಗೆ ಇನ್ನೊಂದು ತರಹದ್ದು, ಮಧ್ಯಪ್ರದೇಶದ ಬೆಳವಣಿಗೆ ಮತ್ತೊಂದು ತರಹದ್ದು‌. ಇವುಗಳ ಬಗ್ಗೆ ನ್ಯೂಸ್ 18 ದೆಹಲಿ ಪ್ರತಿನಿಧಿ ಧರಣೀಶ್ ಬೂಕನಕೆರೆ ಈ ವಾರದ 'ದಿಲ್ಲಿ ಪೋಸ್ಟ್' ಕಾಲಂನಲ್ಲಿ ಬರೆದಿದ್ದಾರೆ.

ದಿಲ್ಲಿ ಪೋಸ್ಟ್

ದಿಲ್ಲಿ ಪೋಸ್ಟ್

  • Share this:
ಎಂಥದೇ ಪ್ರತಿಕೂಲ ಪರಿಸ್ಥಿತಿ ಬಂದರೂ ಪುಟಿದೆದ್ದು ನಿಲ್ಲಬೇಕು. ಅದನ್ನೇ ತನ್ನ ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳಬೇಕು. ಆಗ ಮಾತ್ರ ರಾಜಕಾರಣದಲ್ಲಿ ಯಶಸ್ಸು ಪಡೆಯಲು ಸಾಧ್ಯ. ಈಗ ನೋಡಿ ಪ್ರಿಯಾಂಕಾ ಗಾಂಧಿ ಅವರಿಗೆ ಕೇಂದ್ರ ಸರ್ಕಾರ ದೆಹಲಿಯ ಲೋಧಿ ಎಸ್ಟೇಟ್​ನಲ್ಲಿದ್ದ ಮನೆ ಖಾಲಿ ಮಾಡುವಂತೆ ನೋಟೀಸ್ ನೀಡಿದೆ. ಇದನ್ನೇ ನೆಪ ಮಾಡಿಕೊಂಡು ಪ್ರಿಯಾಂಕಾ ಗಾಂಧಿ ಲಖ್ನೋ ಕಡೆ ಮುಖ ಮಾಡಿ ನಿಂತಿದ್ದಾರೆ. ಉತ್ತರ ಪ್ರದೇಶದ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಿಯಾಂಕಾ ಗಾಂಧಿ ಲಖ್ನೋಗೆ ಬರುತ್ತಿರುವುದರಿಂದ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಖುಷಿಯೋ ಖುಷಿ.

ಮುಂದಿನ ವಿಧಾನಸಭಾ ಚುನಾವಣೆಗೆ ಸ್ವತಃ ಮುಖ್ಯಮಂತ್ರಿ ಅಭ್ಯರ್ಥಿ ಅಂತಾ ಬಿಂಬಿಸಿಕೊಳ್ಳಬೇಕು. ಯೋಗಿ ಆದಿತ್ಯನಾಥ್ ಗೆ ಪರ್ಯಾಯವಾದ ನಾಯಕತ್ವ ನೀಡಬೇಕು. ಚುನಾವಣೆ ವೇಳೆಗೆ ಹವಾ ಸೃಷ್ಟಿಸುವ ದೃಷ್ಟಿಯಿಂದ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಉಸ್ತುವಾರಿ ಕೂಡ ಆಗಿರುವ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲೇ ಠಿಕಾಣಿ ಹೂಡಲು ನಿರ್ಧರಿಸಿದ್ದರು. ಅದಕ್ಕಾಗಿ ಲಖ್ನೋದಲ್ಲಿ ವಾಸ ಇರಬೇಕು ಎಂಬ ನಿಶ್ಚಯ ಮಾಡಿದ್ದರು. ವಾಸ್ತವ್ಯ ಹೂಡಲು ಕಾಂಗ್ರೆಸ್ ಹಿರಿಯ ನಾಯಕಿ ಶೀಲಾ ಕೌಲ್ ಅವರಿದ್ದ ಬಂಗಲೆಯನ್ನೂ ಗುರುತಿಸಿದ್ದರು‌. ಅದರ ನವೀಕರಣದ ಕೆಲಸ ಕೂಡ ನಡೆಯುತ್ತಿತ್ತು‌‌. ಈಗ ಕೇಂದ್ರ ಸರ್ಕಾರದ ಕ್ಯಾತೆ ವಿಷಯ ತೆಗೆದುಕೊಂಡು ಲಖ್ನೋಗೆ ಶಿಫ್ಟ್ ಆಗುತ್ತಿದ್ದಾರೆ. ಸದ್ಯ ಮನೆ ಖಾಲಿ ಮಾಡಿಸಿದ ವಿಷಯವನ್ನು ಬಿಜೆಪಿಯ ದ್ಚೇಷದ ರಾಜಕಾರಣ ಎಂದು ಹೇಳಲಾಗುತ್ತಿದೆ‌. ಮುಂದೆ ಇದು ಉತ್ತರ ಪ್ರದೇಶದ ಚುನಾವಣಾ ವಿಷಯದ ಸಂದರ್ಭದಲ್ಲೂ ಚರ್ಚೆ ಆಗುತ್ತೆ. ಸ್ವಲ್ಪ ಮಟ್ಟಿಗಾದರೂ ಸಿಂಪಥಿ ಗೈನ್ ಆಗುತ್ತೆ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.

ದಲಿತರತ್ತ ಕಾಂಗ್ರೆಸ್ ಚಿತ್ತ

ಉತ್ತರ ಪ್ರದೇಶದ ದಲಿತರು ಈಗ ಕವಲು ದಾರಿಯಲ್ಲಿದ್ದಾರೆ. ದಲಿತರಲ್ಲಿರುವ ಉಪ ಪಂಗಡಗಳಲ್ಲಿ ಎಲ್ಲವೂ ಮಾಯಾವತಿಯವರ ಪರವಾಗಿಲ್ಲ. ಜೊತೆಗೆ ನಿರಂತರವಾದ ಸೋಲು ಅವರನ್ನು ಕಂಗೆಡಿಸಿದೆ‌. ಚದುರಿರುವ ದಲಿತರನ್ನು ಕಾಂಗ್ರೆಸ್ ಕಡೆ ಸೆಳೆಯಬೇಕೆಂಬುದು ಪ್ರಿಯಾಂಕಾ ಗಾಂಧಿ ಅವರ ಪ್ಲಾನ್.  ದಲಿತರನ್ನು ಸೆಳೆಯುವ ವಿಷಯದಲ್ಲಿ ಅವರು ಭೀಮ್ ಆರ್ಮಿ ನಾಯಕ ಚಂದ್ರಶೇಖರ್ ಆಜಾದ್ ಅವರೊಂದಿಗೂ ಚರ್ಚಿಸಿದ್ದಾರೆ ಎನ್ನಲಾಗಿದೆ. ಚಂದ್ರಶೇಖರ್ ಆಜಾದ್ ಮೇಲೆ ಹಲ್ಲೆ ಆಗಿದ್ದಾಗ ಪ್ರಿಯಾಂಕಾ ಗಾಂಧಿ ಹೋಗಿ ಮಾತನಾಡಿಸಿಕೊಂಡು ಬಂದಿದ್ದರು. ಅವರ ಬಂಧನವಾದಾಗ ಬಿಡುಗಡೆಗೂ ಒತ್ತಾಯಿಸಿದ್ದರು‌. ಪ್ರಿಯಾಂಕಾ ಗಾಂಧಿ ಮತ್ತು ಚಂದ್ರಶೇಖರ್ ಆಜಾದ್ ಜೊತೆಯಾಗುತ್ತಿರುವುದು ಮಾಯಾವತಿ ಅವರನ್ನು ವಿಚಲಿತರನ್ನಾಗಿ ಮಾಡಿದೆ. ಅದೇ ಕಾರಣಕ್ಕೆ ಅವರು ಇತ್ತೀಚೆಗೆ ಪ್ರಿಯಾಂಕಾ ಗಾಂಧಿ ಅವರ ಮೇಲೆ ಮುಗಿಬೀಳುತ್ತಿದ್ದಾರೆ. 'ಮಾಯಾವತಿ  ಬಿಜೆಪಿ ವಕ್ತಾರರಂತೆ ಬದಲಾಗಿದ್ದಾರೆ' ಎಂದು ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ.

ಯೋಗಿ ಆದಿತ್ಯನಾಥ್ ಗೆ ಪೀಕಲಾಟ

ಕೇಂದ್ರದ ಬಿಜೆಪಿ ನಾಯಕರು ಪ್ರಿಯಾಂಕಾ ಗಾಂಧಿಗೆ ಸರಿಯಾದ ಪಾಠ ಕಲಿಸಿದೆವು ಎಂದು ಬೀಗುತ್ತಿದ್ದಾರೆ. ಆದರೆ ಉತ್ತರ ಪ್ರದೇಶದ ನಾಯಕರಿಗೆ ಪೀಕಲಾಟ ಶುರುವಾಗಿದೆ. ಇಷ್ಟು ದಿನ ಪ್ರಿಯಾಂಕಾ ಗಾಂಧಿ ಅವರದು ಗೆಸ್ಟ್ ಅಪಿಯರೆನ್ಸ್ ಇರುತ್ತಿತ್ತು. ಅದರಿಂದ ಸಮಸ್ಯೆ ಆಗುತ್ತಿರಲಿಲ್ಲ‌. ಈಗ ಅವರು ಉತ್ತರ ಪ್ರದೇಶದಲ್ಲೇ ಬಂದು ಠಿಕಾಣಿ ಹೂಡಿದರೆ ಹೆಚ್ಚು ನಷ್ಟ ಆಗಬಹುದು. ಅದರಲ್ಲೂ ಆಡಳಿತ ವಿರೋಧಿ ಅಲೆಯನ್ನು ಪ್ರಿಯಾಂಕಾ ಗಾಂಧಿ ಬಡಿದೆಬ್ಬಿಸಬಹುದು ಎಂಬ ಭಯ ಶುರುವಾಗಿದೆಯಂತೆ.

ಶಿವರಾಜ ಸಿಂಗ್ ಚೌಹಾಣ್ ಬಿಟ್ಟು ಸಿಂಧ್ಯಗೆ ಮಣೆ

ಕರ್ನಾಟಕದ ರೀತಿ ಮಧ್ಯಪ್ರದೇಶದಲ್ಲೂ ಇರುವ ಸರ್ಕಾರ ಕೆಡವಿ ಹೊಸ ಸರ್ಕಾರ ರಚಿಸಿತ್ತು ಬಿಜೆಪಿ. ಇಲ್ಲಿ ಸಂಪುಟ ವಿಸ್ತರಣೆ ಮಾಡಲು ಯಡಿಯೂರಪ್ಪ ಏದುಸಿರು ಬಿಟ್ಟಂತೆ ಶಿವರಾಜಸಿಂಗ್ ಚೌವಾಹ್ ಕೂಡ ಪರಿತಪಿಸಿದರು. ಅವರು ಸಂಪುಟ ವಿಸ್ತರಣೆಗೆ ಅವಕಾಶ ಕೊಡಿ ಅಂತಾ ದೆಹಲಿ ನಾಯಕರ ಮುಂದೆ ಎಷ್ಟೇ ಗೋಗರೆದರೂ ಜಪ್ಪಯ್ಯ ಎಂದಿರಲಿಲ್ಲ ದಿಲ್ಲಿ ದೊರೆಗಳು. ಕಡೆಗೆ ಕೊರೋನಾದಿಂದ ಅದೇನು ಆಗುತ್ತೋ ಆಗಲಿ, ನನ್ನ ಬೆಂಬಲಿಗರನ್ನು ಮಂತ್ರಿ ಮಾಡಿ ಎಂದು ಜ್ಯೋತಿರಾಧಿತ್ಯ ಸಿಂಧ್ಯ ಧಮಕಿ ಹಾಕುತ್ತಿದ್ದಂತೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ರಾಜಕೀಯದಲ್ಲಿ ಯಾವಾಗ ಏನಾಗುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ ಎನ್ನುವುದು ಇದಕ್ಕೆ ಇರಬೇಕು.

ಇದನ್ನು ಓದಿ: ದಿಲ್ಲಿ ಪೋಸ್ಟ್ | ಚೀನಾ ವಿರುದ್ಧ ಕುರಿಗಳೊಂದಿಗೆ ಪ್ರತಿಭಟನೆ ಮಾಡಿದ್ದ ವಾಜಪೇಯಿ; 18 ಸಲ ಕ್ಸಿ ಜಿನ್‌ ಪಿಂಗ್ ಭೇಟಿ ಮಾಡಿರುವ ಮೋದಿ!

ಕುತೂಹಲಕಾರಿ ಬಿಹಾರಿ ಚುನಾವಣೆ

ಕೊರೋನೋತ್ತರದಲ್ಲಿ ನಡೆಯುವ ಮೊದಲ ಮಹಾ ಚುನಾವಣೆ ಬಿಹಾರ ವಿಧಾನಸಭೆಯದ್ದು. ಇದು ಒಂದು ರೀತಿಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಪ್ರಧಾನಿ ಮೋದಿಗೂ ಅಗ್ನಿಪರೀಕ್ಷೆ. ನಿತೀಶ್ ಕುಮಾರ್ ಅವರಿಗೆ ರಾಜಕೀಯ ಅಸ್ತಿತ್ವದ ಪ್ರಶ್ನೆ. ಕೊರೋನಾ ಮತ್ತು ಚೀನಾ ಗಡಿ ಸಮಸ್ಯೆಯನ್ನು ನಿಭಾಯಿಸಿದ ಬಗ್ಗೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಕಾರಣಕ್ಕೆ ಮೋದಿಗೆ ಮಹತ್ವದ ಚುನಾವಣೆ. ಈ ನಡುವೆ ಕೊರೋನಾ ರೋಗಿಗಳಿಗೆ ಪೊಸ್ಟಲ್ ಬ್ಯಾಲೆಟ್ ಗೆ ಅವಕಾಶ ಕೊಡಲಾಗುತ್ತದೆಯಂತೆ. ಮುಂದೆ ಕೊರೋನಾ ಪರಿಸ್ಥಿತಿ ಹೇಗಿರುತ್ತದೆ ಎಂಬುದರ ಮೇಲೆ ಚುನಾವಣೆ ಹೇಗೆ ನಡೆಯುತ್ತದೆ ಎಂದು ನಿರ್ಧಾರವಾಗುತ್ತದೆ‌. ಹೇಗೆ ಎಂಬ ಕುತೂಹಲ ಈಗಿನಿಂದಲೇ ಶುರುವಾಗಿದೆ.
Published by:HR Ramesh
First published: