ಮಧ್ಯಪ್ರದೇಶ: ಹನಮಂತನ (Lord Hanuman) ಮುಂದೆ ದೇಹದಾರ್ಢ್ಯ (Bodybuilding) ಸ್ಪರ್ಧೆ ಏರ್ಪಡಿಸಿರುವುದು ವಿವಾದವನ್ನುಂಟು ಮಾಡಿದೆ. ಕೇವಲ ದೇಹದಾರ್ಢ್ಯ ಸ್ಪರ್ಧೆ ಏರ್ಪಡಿಸಿದ್ದರೆ ಯಾವುದೇ ವಿವಾದವಾಗುತ್ತಿರಲಿಲ್ಲ. ಆದರೆ ಬ್ರಹ್ಮಚಾರಿಯಾದ ಹನುಮಂತ ಪೋಸ್ಟರ್ ಮುಂದೆ ಮಹಿಳಾ ದೇಹದಾರ್ಢ್ಯ ಸ್ಪರ್ಧೆಯನ್ನು ಆಯೋಜನೆ ಮಾಡಿರುವುದು ಟೀಕೆಗೆ ಕಾರಣವಾಗಿದೆ. ಮಧ್ಯಪ್ರದೇಶದ (Madhya Pradesh) ರತ್ಲಾಮ್ನಲ್ಲಿ ಮಹಿಳಾ ದೇಹದಾರ್ಢ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ಭಾಗವಹಿಸಿದ್ದ ಮಹಿಳೆಯರೂ ದೇಹದಾರ್ಢ್ಯ ಸ್ಪರ್ಧೆಗೆ ತೊಡುವ ಬಿಕಿನಿ ಬಟ್ಟೆಯನ್ನು ತೊಟ್ಟು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಆದರೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಹನುಮಂತನ ಫೋಟೋವನ್ನು ಇಟ್ಟಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ (Congress) ಆಕ್ಷೇಪ ವ್ಯಕ್ತಪಡಿಸಿದ್ದು, ಯಾವಾಗಲೂ ಹನುಮಾನ್ ಚಾಲೀಸಾ (Hanuman Chalisa) ಹೇಳುವಂತೆ ಆಂದೋಲನ ನಡೆಸುವ ಬಿಜೆಪಿ (BJP) ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿ ಕಾರಿದೆ.
ಗಂಗಾಜಲ ಸಿಂಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು
ಮಧ್ಯಪ್ರದೇಶದಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯೊಂದರಲ್ಲಿ ಮಹಿಳಾ ದೇಹದಾರ್ಢ್ಯ ಪಟುಗಳು ಹನುಮಂತನ ಮೂರ್ತಿಯ ಮುಂದೆ ಪೋಸ್ ನೀಡಿರುವುದರಿಂದ ವಿವಾದ ಭುಗಿಲೆದ್ದಿದೆ. ಹನುಮಂತನಿಗೆ ಅವಮಾನವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಭಾರತೀಯ ಜನತಾ ಪಕ್ಷ (ಬಿಜೆಪಿ) ಆಯೋಜಿಸಿದ್ದ ದೇಹದಾರ್ಢ್ಯ ಸ್ಪರ್ಧೆ ನಡೆದ ಸ್ಥಳದಲ್ಲಿ ಶುದ್ಧೀಕರಣ ಮಾಡಿದ್ದಾರೆ. ಇದರ ಭಾಗವಾಗಿ ಗಂಗಾಜಲ ಸಿಂಪಡಿಸುವುದರ ಜೊತೆಗೆ ಹನುಮಾನ್ ಚಾಲೀಸಾ ಪಠಿಸಿದ್ದಾರೆ. ಬ್ರಹ್ಮಚಾರಿ ದೇವತೆ ಮುಂದೆ ಇಂತಹ ಕಾರ್ಯಕ್ರಮ ಮಾಡಿರುವುದು ದೇವರಿಗೆ ಅವಮಾನ ಮಾಡಿದಂತೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ಷಮೆ ಕೋರಲು ಒತ್ತಾಯ
ದೇಹದಾರ್ಢ್ಯ ಸ್ಪರ್ಧೆಯಲ್ಲಿನ ಡ್ರೆಸ್ ಕೋಡ್ ಬಗ್ಗೆ ವಿವಾದ ಭುಗಿಲೆದ್ದಿದೆ. ಈ ಕಾರ್ಯಕ್ರಮವು ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದೆ ಮತ್ತು ಆಯೋಜಕರ ನಡೆಯಿಂದ ಹನುಮಂತನಿಗೆ ಅವಮಾನವಾಗಿದೆ. ಕೂಡಲೇ ಆಯೋಜಕರು ಹಿಂದೂಗಳ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಬಿಜೆಪಿ ತನ್ನನ್ನು ರಾಮಭಕ್ತ ಪಕ್ಷ ಎಂದು ಕರೆದುಕೊಳ್ಳುತ್ತದೆ, ಮತ್ತೊಂದೆಡೆ ಅದರ ನಾಯಕರು ಹನುಮಂತನನ್ನು ಅವಮಾನಿಸುತ್ತಿದ್ದಾರೆ. ಹಿಂದೂ ದೇವತೆಯನ್ನು ಅವಮಾನಿಸಿದ್ದಕ್ಕಾಗಿ ಬಿಜೆಪಿ ನಾಯಕರು ಕ್ಷಮೆಯಾಚಿಸಬೇಕು ಎಂದು ಮಧ್ಯ ಪ್ರದೇಶದ ರಾಜ್ಯ ಕಾಂಗ್ರೆಸ್ ಮಾಧ್ಯಮ ಉಸ್ತುವಾರಿ ಕೆ.ಕೆ.ಮಿಶ್ರಾ ಅವರು ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಸಾಥ್
ಈ ಕಾರ್ಯಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸ್ಥಳೀಯ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಹನುಮಾನ್ ಚಾಲೀಸಾ ಪಠಿಸಿದರು. ಕೆಲ ಸ್ಥಳೀಯ ಬಿಜೆಪಿ ಮುಖಂಡರೂ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹನಮಂತನಿಗೆ ಅವಮಾನಿಸಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಬಿಜೆಪಿ ತಿರುಗೇಟು
ರಾಜ್ಯ ಬಿಜೆಪಿ ವಕ್ತಾರ ಹಿತೇಶ್ ವಾಜಪೇಯಿ, ಕಾಂಗ್ರೆಸ್ ನಾಯಕರಿಗೆ ಮಹಿಳೆಯರು ಕ್ರೀಡೆಯಲ್ಲಿ ಸಾಧನೆ ಮಾಡುವುದನ್ನು ನೋಡಲು ಇಷ್ಟವಿಲ್ಲ. ಕುಸ್ತಿ, ಜಿಮ್ನಾಸ್ಟಿಕ್ ಅಥವಾ ಈಜು ಸ್ಪರ್ಧೆಯಲ್ಲಿ ಮಹಿಳೆಯರು ಭಾಗವಹಿಸುವುದನ್ನು ಕಾಂಗ್ರೆಸ್ಸಿಗರು ನೋಡುವುದಿಲ್ಲ, ಏಕೆಂದರೆ ಅವರೊಳಗಿನ ದೆವ್ವ ಇದನ್ನು ನೋಡಿ ಎಚ್ಚರಗೊಳ್ಳುತ್ತದೆ. ಅವರು ಆಟದ ಮೈದಾನದಲ್ಲಿ ಮಹಿಳೆಯರನ್ನು ಕೊಳಕು ಕಣ್ಣುಗಳಿಂದ ನೋಡುತ್ತಾರೆ, ಅವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ