Farmers Protest: ರೈತ ಹೋರಾಟದ ಹಿಂದೆ ಪಾಕ್-ಚೀನಾ ಕೈವಾಡವಿದೆ; ಕೇಂದ್ರ ಸಚಿವ ರಾವ್​​​ಸಾಹೇಬ್ ಧನ್ವೆ ವಿವಾದಾತ್ಮಕ ಹೇಳಿಕೆ

ದೆಹಲಿಯಲ್ಲಿ ಹೋರಾಡುತ್ತಿರುವ ರೈತರಿಗೆ ಚೀನಾ ಮತ್ತು ಪಾಕಿಸ್ತಾನದ ಕೈವಾಡವಿದೆ. ಅಲ್ಲಿಂದ ಹಣ ಸರಬರಾಜು ಆಗುತ್ತಿದೆ ಎಂದು ಕೇಂದ್ರ ಸಚಿವ ರಾಬ್​ಸಾಹೇಬ್ ಧನ್ವೆ ಆರೋಪಿಸಿದ್ದಾರೆ.

ಸಚಿವ ರಾವ್​ಸಾಹೇಬ್ ಧನ್ವೆ.

ಸಚಿವ ರಾವ್​ಸಾಹೇಬ್ ಧನ್ವೆ.

  • Share this:
    ನವ ದೆಹಲಿ (ಡಿಸೆಂಬರ್​ 10); ಕೇಂದ್ರ ಸರ್ಕಾರ ಜಾರಿ ತಂದಿರುವ ನೂತನ ಮೂರು ಕೃಷಿ ಕಾಯ್ದೆಯ ವಿರುದ್ಧ ಇಡೀ ದೇಶದ ರೈತ ಸಮುದಾಯ ಕಳೆದ 15 ದಿನಗಳಿಂದ ಸತತ ಹೋರಾಟ ನಡೆಸುತ್ತಿದೆ. ರೈತರ ದೆಹಲಿ ಚಲೋ ಚಳುವಳಿ ಇಡೀ ವಿಶ್ವದ ಗಮನ ಸೆಳೆದಿದೆ. ಇದರ ಬೆನ್ನಿಗೆ ಎಲ್ಲಾ ರಾಜ್ಯದಲ್ಲೂ ರೈತ ಹೋರಾಟ ಕಾವು ಪಡೆಯುತ್ತಿದೆ. ಈ ನಡುವೆ ಸರ್ಕಾರ ಮತ್ತು ರೈತರ ನಡುವಿನ 5 ಸುತ್ತಿನ ಮಾತುಕತೆ ವಿಫಲವಾಗಿದೆ. ಆದರೆ, ಇಂತಹ ಸಂದರ್ಭದಲ್ಲಿ ಕೇಂದ್ರ ಸಚಿವರೊಬ್ಬರು ರೈತರನ್ನು ಹಂಗಿಸುವ ಮಾತುಗಳನ್ನಾಡಿದ್ದು ರೈತ ಸಮುದಾಯ ಮತ್ತಷ್ಟು ಆಕ್ರೋಶಕ್ಕೆ ಒಳಗಾಗಿದೆ. ರೈತ ಹೋರಾಟದ ಬಗ್ಗೆ ಕಿಡಿಕಾರಿರುವ ಸಚಿವ ರಾವ್​ಸಾಹೇಬ್​ ಧನ್ವೆ, "ದೆಹಲಿಯಲ್ಲಿ ಹೋರಾಡುತ್ತಿರುವ ರೈತರಿಗೆ ಚೀನಾ ಮತ್ತು ಪಾಕಿಸ್ತಾನದ ಕೈವಾಡವಿದೆ. ಅಲ್ಲಿಂದ ಹಣ ಸರಬರಾಜು ಆಗುತ್ತಿದೆ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಚಿವರ ಈ ಹೇಳಿಕೆಯ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಸಿಖ್‌ ಗುರುದ್ವಾರಗಳು ಮತ್ತು ಶಿವಸೇನೆ ಇದು ನಾಚಿಕೆಗೇಡಿನ ವಿಷಯ ಎಂದು ಕಿಡಿಕಾರಿದೆ.

    ಕೇಂದ್ರ ಸಚಿವ ರಾವ್​ಸಾಹೇಬ್​ ಧನ್ವೆ ಹೇಳಿಕೆಗೆ ಕಿಡಿಕಾರಿರುವ ಶಿವಸೇನೆ ನಾಯಕ ಮತ್ತು ಸಂಸದ ಸಂಜಯ್​ ರಾವತ್​, "ರೈತರ ಆಂದೋಲನದ ಹಿಂದೆ ಚೀನಾ ಅಥವಾ ಪಾಕಿಸ್ತಾನದ ಕೈವಾಡವಿದೆ ಎಂದು ಕೇಂದ್ರ ಸಚಿವರಿಗೆ ಮಾಹಿತಿ ಇದ್ದರೆ, ರಕ್ಷಣಾ ಸಚಿವರು ತಕ್ಷಣ ಚೀನಾ ಮತ್ತು ಪಾಕ್ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕು. ಸಶಸ್ತ್ರ ಪಡೆಗಳ ಅಧ್ಯಕ್ಷರು, ಪ್ರಧಾನಿ, ಗೃಹಸಚಿವರು ಈ ವಿಷಯವನ್ನು ಗಂಭೀರವಾಗಿ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು" ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

    ಇನ್ನು ಕೇಂದ್ರ ಸಚಿವರ ಈ ಹೇಳಿಕೆಯನ್ನು ದೆಹಲಿ ಸಿಖ್ ಗುರುದ್ವಾರ ಆಡಳಿತ ಮಂಡಳಿ ಖಂಡಿಸಿದ್ದು, "ರೈತರು ಹಲವು ದಿನಗಳಿಂದ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದಾರೆ ಮತ್ತು ಕೇಂದ್ರ ಸರ್ಕಾರ ಅವರಿಗೆ ನ್ಯಾಯ ಕೊಡಲು ವಿಫಲವಾಗಿದೆ. ದೇಶಕ್ಕಾಗಿ ಆಹಾರ ಬೆಳೆಯುವ ಮತ್ತು ತಮಗಾಗಿ ಹೋರಾಡುವ ರೈತರನ್ನು, ದೇಶಕ್ಕಾಗಿ ಪ್ರಾಣ ನೀಡುತ್ತಿರುವ ಅವರ ಮಕ್ಕಳನ್ನು ದೇಶದ್ರೋಹಿಗಳಂತೆ ಚಿತ್ರಿಸಬೇಡಿ" ಎಂದು ಆಡಳಿತ ಮಂಡಳಿ ಅಧ್ಯಕ್ಷ ಮಂಜಿಂಧರ್ ಸಿಂಗ್ ತಿಳಿಸಿದ್ದಾರೆ.

    ಇದನ್ನೂ ಓದಿ : New Parliament Building: ನೂತನ ಸಂಸತ್ ಭವನದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ

    ಕೇಂದ್ರ ಸಚಿವ ರಾವ್‌ಸಾಹೇಬ್‌ ಧನ್ವೆ ಮಹಾರಾಷ್ಟ್ರದಲ್ಲಿ ಆರೋಗ್ಯ ಕೇಂದ್ರವೊಂದನ್ನು ಉದ್ಘಾಟನೆ ಮಾಡುವ ವೇಳೆ "ರೈತರ ಹೋರಾಟದ ಹಿಂದೆ ಕೆಲ ರಾಷ್ಟ್ರಗಳ ಪಿತೂರಿಯಿದೆ. ಈ ಹಿಂದೆ ಮುಸ್ಲಿಮರು ಸಹ ಸಿಎಎ, ಎನ್‌ಆರ್‌ಸಿ ಹೆಸರಿನಲ್ಲಿ ದೇಶವನ್ನು ದಿಕ್ಕುತಪ್ಪಿಸಲು ನೋಡಿದ್ದರು" ಎಂದು ಆರೋಪಿಸಿದ್ದರು.

    ಇನ್ನು ನಿನ್ನೆ ನಡೆದ ರೈತರು-ಕೇಂದ್ರ ಸಚಿವರ ನಡುವಿನ ಸಭೆಯಲ್ಲಿ "ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿದ್ದ ಪ್ರಸ್ತಾಪವನ್ನು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (AIKSCC) ತಿರಸ್ಕರಿಸಿದ್ದು, ರೈತರ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದೆ" ಎಂದು ವರದಿಯಾಗಿದೆ.
    Published by:MAshok Kumar
    First published: