• Home
  • »
  • News
  • »
  • national-international
  • »
  • Congress Crisis: ಶೀಘ್ರವೇ ಕಾಂಗ್ರೆಸ್ ಕಾರ್ಯಕಾರಣಿ ಸಭೆ, ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆ

Congress Crisis: ಶೀಘ್ರವೇ ಕಾಂಗ್ರೆಸ್ ಕಾರ್ಯಕಾರಣಿ ಸಭೆ, ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆ

ಸೋನಿಯಾ ಗಾಂಧಿ

ಸೋನಿಯಾ ಗಾಂಧಿ

ಕಾರ್ಯಕಾರಣಿ ಸಭೆಯಲ್ಲಿ ಸದ್ಯ ಚುನಾವಣೆ ನಡೆದ ಐದೂ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿಗಳಿಗೆ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ತಕ್ಷಣವೇ ರಾಜೀನಾಮೆ ಕೊಡುವಂತೆ ಸೂಚಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

  • Share this:

ನವದೆಹಲಿ, (ಮಾ.‌ 11): ಉತ್ತರ ಪ್ರದೇಶ, ಉತ್ತರಖಂಡಾ, ಗೋವಾ, ಪಂಜಾಬ್ ಹಾಗೂ ಮಣಿಪುರ ವಿಧಾನಸಭಾ ಚುನಾವಣೆಗಳಲ್ಲಿ (Assembly Elections) ದಯನೀಯವಾಗಿ ಸೋಲು ಕಂಡಿರುವ ಕಾಂಗ್ರೆಸ್ (Congress) ಈಗ ಆತ್ಮಾವಲೋಕೋನ ಮಾಡಿಕೊಳ್ಳಲು ಮುಂದಾಗಿದೆ. ಈ‌ ಹಿನ್ನಲೆಯಲ್ಲಿ ಶೀಘ್ರವೇ ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ (AICC President Sonia Gandhi) ಅವರು ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ (Congress Working Committee) ಸಭೆ ಕರೆಯಲಿದ್ದು ಸಭೆಯಲ್ಲಿ ಪ್ರಸಕ್ತ ಸೋಲಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.


ತಲೆಕೆಳಗಾದ ಕೈ ಲೆಕ್ಕಾಚಾರ
ಉತ್ತರ ಪ್ರದೇಶ, ಉತ್ತರಖಂಡಾ, ಗೋವಾ, ಪಂಜಾಬ್ ಹಾಗೂ ಮಣಿಪುರ ವಿಧಾನಸಭಾ ಚುನಾವಣೆಗಳ ಪೈಕಿ ಕಾಂಗ್ರೆಸ್ ಉತ್ತರಖಂಡಾದಲ್ಲಿ ಗೆಲ್ಲಬಹುದು ಎಂದುಕೊಂಡಿತ್ತು. ಗೋವಾದಲ್ಲಿ ಸರ್ಕಾರ ರಚನೆಗೆ ಬೇಕಾದ 21 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದಿದ್ದರೂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ವಿಶ್ವಾಸ ಹೊಂದಿತ್ತು. ಪ್ರಮುಖವಾಗಿ ಉತ್ತರ ಪ್ರದೇಶದಲ್ಲಿ ಖುದ್ದು ಪ್ರಿಯಾಂಕಾ ಗಾಂಧಿ ಅವರೇ ಉಸ್ತುವಾರಿ ವಹಿಸಿಕೊಂಡು ನಿರಂತರವಾಗಿ ಪ್ರಚಾರ ಮಾಡಿದ ಕಾರಣಕ್ಕೆ ಈ ಬಾರಿ ಹೆಚ್ಚಿನ ಸೀಟುಗಳನ್ನು ಗಳಿಸಬಹುದು.‌ ಕಡೆಪಕ್ಷ ಮತಗಳಿಕೆಯ ಪ್ರಮಾಣವಾದರೂ ಹೆಚ್ಚಾಗಬಹುದು ಎಂದುಕೊಂಡಿತ್ತು. ಆದರೆ ಯಾವೊಂದು ಲೆಕ್ಕಾಚಾರವೂ ಕೈಗೂಡಿಲ್ಲ. ಆದುದರಿಂದ ಪಕ್ಷವು ಆತ್ಮಾವಲೋಕ ಮಾಡಿಕೊಂಡು ಕಠಿಣ ಕ್ರಮ ಜರುಗಿಸುವ ಚಿಂತನೆಯಲ್ಲಿದೆ ಎಂದು ಹೇಳಲಾಗುತ್ತಿದೆ.


ಇದನ್ನು ಓದಿ:  ಚುನಾವಣಾ ಗೆಲುವಿನ ಬಳಿಕ ತವರಿಗೆ ಬಂದ ಪ್ರಧಾನಿಗೆ ಅದ್ಧೂರಿ ಸ್ವಾಗತ


ತಪ್ಪಿತಸ್ಥರಿಗೆ ಶಿಕ್ಷೆ
ನಿನ್ನೆ (ಮಾರ್ಚ್ 10) ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು 'ಸೋಲಿನ ಹಿನ್ನೆಲೆಯಲ್ಲಿ ಶೀಘ್ರವೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಸಭೆ ಕರೆಯಲಿದ್ದಾರೆ. ಸಭೆಯಲ್ಲಿ ಸೋಲಿಗೆ ಕಾರಣಗಳನ್ನು‌ ಹುಡುಕಲಾಗುವುದು ಎಂದು ಹೇಳಿದ್ದರು.


ಈಗ ಬರುತ್ತಿರುವ ಮಾಹಿತಿಗಳ ಪ್ರಕಾರ ಸಭೆಯಲ್ಲಿ ಸದ್ಯ ಚುನಾವಣೆಯಲ್ಲಿ ಸೋತಿರುವ ಐದೂ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿಗಳಿಗೆ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ತಕ್ಷಣವೇ ರಾಜೀನಾಮೆ ಕೊಡುವಂತೆ ಸೂಚಿಸುವ ಸಾಧ್ಯತೆ ಇದೆ. ಇದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಪ್ರಿಯಾಂಕಾ ಗಾಂಧಿ ಅವರಿಗೂ ಅನ್ವಯಿಸುತ್ತದೆ. ಈ ಮೂಲಕ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷೆ ನೀಡುವ ಪರಿಪಾಠ ಆರಂಭಿಸಲಾಗುತ್ತದೆ ಎಂದು ತಿಳಿದುಬಂದಿದೆ.


ಇದನ್ನು ಓದಿ: ಅಮೆರಿಕದಲ್ಲಿ ದುಬಾರಿಯಾಯ್ತು ಪೆಟ್ರೋಲ್​ ಬೆಲೆ, ಆದರೂ ಭಾರತಕ್ಕಿಂತ ಅಗ್ಗ


ಆಮೂಲಾಗ್ರ ಬದಲಾವಣೆ ಬಗ್ಗೆ ಚರ್ಚೆ
2024ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಎಐಸಿಸಿ ಮಟ್ಟದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕೆಂಬ ಪ್ರಸ್ತಾಪ ಮಂಡಿಸಲಾಗುತ್ತದೆ. ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡುವುದು ಸೇರಿದಂತೆ ಕೆಲವು ಪ್ರಧಾನ ಕಾರ್ಯದರ್ಶಿಗಳನ್ನು ಜವಾಬ್ದಾರಿಯಿಂದ ಮುಕ್ತಿಗೊಳಿಸಿ ಕೆಲವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.


ಕರ್ನಾಟಕದ ಬಗ್ಗೆ ಚರ್ಚೆ
ಕಾರ್ಯಕಾರಣಿ ಸಭೆಯಲ್ಲಿ 2023ಕ್ಕೆ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆ ವಿಷಯವೂ ಪ್ರಧಾನವಾಗಿ ಪ್ರಸ್ತಾಪವಾಗಲಿದೆ. ಪಂಜಾಬಿನಲ್ಲಿ ಮುಖ್ಯಮಂತ್ರಿಯಾಗಿದ್ದ ಚರಣಜಿತ್ ಸಿಂಗ್ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಡುವಿನ‌ ಶೀತಲ ಸಮರವೇ ಸೋಲಿಗೆ ಕಾರಣವಾಗಿದ್ದು ಇದೇ ರೀತಿ ಕರ್ನಾಟಕದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಕಲಹ ಉಂಟಾಗದಂತೆ ನೋಡಿಕೊಳ್ಳಬೇಕು ಎಂಬ ಬಗ್ಗೆಯೂ ಚರ್ಚೆಯಾಗಲಿದೆ. ಸಭೆಯ ಬಳಿಕ ಇಬ್ಬರಿಗೂ ಖಡಕ್ ಎಚ್ಚರಿಕೆ ನೀಡುವ ಸಾಧ್ಯತೆ ಇದೆ. ಅಲ್ಲದೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರನ್ನು ಬದಲಿಸಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರನ್ನೂ ನಿಯಂತ್ರಿಸಬಲ್ಲ ಹಿರಿಯರಿಗೆ ಹೊಣೆಗಾರಿಕೆ ನೀಡುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ.

Published by:Seema R
First published: