ಆಂತರಿಕ ಚುನಾವಣೆ ನಡೆಯದಿದ್ದರೆ ಇನ್ನೂ 50 ವರ್ಷ ಕಾಂಗ್ರೆಸ್‌ಗೆ ವಿರೋಧ ಪಕ್ಷದ ಸ್ಥಾನವೇ ಗತಿ; ಗುಲಾಂ ನಬಿ ಆಜಾದ್

ಪಕ್ಷದಲ್ಲಿ ಆಂತರಿಕವಾಗಿ ಚುನಾಯಿತ ವ್ಯಕ್ತಿ ಎಲ್ಲರ ಬೆಂಬಲದೊಂದಿಗೆ ಪಕ್ಷವನ್ನು ಮುನ್ನಡೆಸಿದರೆ ಪಕ್ಷದ ಭವಿಷ್ಯ ಉತ್ತಮವಾಗಿರುತ್ತದೆ. ಇಲ್ಲದಿದ್ದರೆ ಮುಂದಿನ 50 ವರ್ಷಗಳ ಕಾಲ ವಿರೋಧ ಪಕ್ಷದಲ್ಲೇ ಕುಳಿತಿರಬೇಕಾಗುತ್ತದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಎಚ್ಚರಿಕೆ ನೀಡಿದ್ದಾರೆ.

ಗುಲಾಂ ನಬಿ ಆಜಾದ್

ಗುಲಾಂ ನಬಿ ಆಜಾದ್

 • Share this:
  ನವ ದೆಹಲಿ (ಆಗಸ್ಟ್‌ 28); ಪ್ರಜಾಪ್ರಭುತ್ವದ ನಿಯಮದಂತೆ ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಯದಿದ್ದರೆ, ಕಾಂಗ್ರೆಸ್‌ ಪಕ್ಷ ಇನ್ನೂ 50 ವರ್ಷಗಳ ಕಾಲ ವಿರೋಧ ಪಕ್ಷದ ಸ್ಥಾನದಲ್ಲೇ ಇರಬೇಕಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಎಚ್ಚರಿಕೆ ನೀಡಿದ್ದಾರೆ.

  ಕಾಂಗ್ರೆಸ್‌ ಪಕ್ಷದಲ್ಲಿ ಕಳೆದ ಹಲವು ದಿನಗಳಿಂದ ಒಳಬೇಗುದಿ ಹೆಚ್ಚುತ್ತಲೇ ಇದೆ. ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಪೂರ್ಣ ಪ್ರಮಾಣದ ನಾಯಕರಿಗಾಗಿ ದ್ವನಿ ಗಟ್ಟಿಯಾಗುತ್ತಲೇ ಇದೆ. ಸೋನಿಯಾ ಗಾಂಧಿ ಹಂಗಾಮಿ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರೂ ಸಹ ಪೂರ್ಣ ಪ್ರಮಾಣದ ನಾಯಕನಿಗಾಗಿ ಚುನಾವಣೆ ನಡೆಯಬೇಕು ಎಂಬುದು ಪಕ್ಷದ ಹಿರಿಯ ನಾಯಕರ ಒತ್ತಾಯ.

  ಅಲ್ಲದೆ, ಚುನಾವಣೆಗಾಗಿ ಒತ್ತಾಯಿಸಿ ಹೈಕಮಾಂಡ್‌ಗೆ ಪತ್ರಬರೆದ ಭಿನ್ನಮತೀಯ ನಾಯಕರ ಪೈಕಿ ಗುಲಾಂ ನಬಿ ಆಜಾದ್‌ ಸಹ ಒಬ್ಬರು. ಈ ಸಂಬಂಧ ನಡೆದ ಸಭೆ ಸಹ ಹಲವಾರು ಗೊಂದಲಗಳಿಗೆ ಕಾರಣವಾಗಿತ್ತು.

  ಗುಲಾಂ ನಬಿ ಆಜಾದ್ ಸೇರಿದಂತೆ ಹಿರಿಯ ನಾಯಕರ ಪತ್ರ ಕಾಂಗ್ರೆಸ್‌ನಲ್ಲಿ ದೊಡ್ಡ ಕ್ಷೋಭೆಗೆ ಕಾರಣವಾದ ಬೆನ್ನಿಗೆ ಅಂದರೆ ನಿನ್ನೆ,”ನೇರವಾಗಿ ನೇಮಕಗೊಳ್ಳುವ ಕಾಂಗ್ರೆಸ್‌ ಪಕ್ಷದ ರಾಷ್ಟ್ರಾಧ್ಯಕ್ಷರಿಗೆ ಪಕ್ಷದಲ್ಲಿ ಶೇ.1ರಷ್ಟು ಬೆಂಬಲವೂ ಇಲ್ಲದೆಯೂ ಇರಬಹುದು” ಎಂದು ಹೇಳಿಕೆ ನೀಡುವ ಮೂಲಕ ಹೈಕಮಾಂಡ್‌ ನಾಯಕರನ್ನು ಕೆಣಕಿದ್ದ ಆಜಾದ್‌ ಇಂದು, “ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಯದೆ ಇದ್ದರೆ ಇನ್ನೂ 50 ವರ್ಷಗಳಾದರೂ ಕಾಂಗ್ರೆಸ್‌ ವಿರೋಧ ಪಕ್ಷದಲ್ಲೇ ಕುಳಿತಿರಬೇಕಾಗುತ್ತದೆ” ಎಂದು ಕಟು ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ.

  ಈ ಕುರಿತು ತಮ್ಮ ಅಭಿಪ್ರಾಯವನ್ನು ಹೊರಹಾಕಿರುವ ಆಜಾದ್, “ಪಕ್ಷದಲ್ಲಿ ಆಂತರಿಕವಾಗಿ ಚುನಾಯಿತ ವ್ಯಕ್ತಿ ಎಲ್ಲರ ಬೆಂಬಲದೊಂದಿಗೆ ಪಕ್ಷವನ್ನು ಮುನ್ನಡೆಸಿದರೆ ಪಕ್ಷದ ಭವಿಷ್ಯ ಉತ್ತಮವಾಗಿರುತ್ತದೆ. ಇಲ್ಲದಿದ್ದರೆ ಮುಂದಿನ 50 ವರ್ಷಗಳ ಕಾಲ ವಿರೋಧ ಪಕ್ಷದಲ್ಲೇ ಕುಳಿತಿರಬೇಕಾಗುತ್ತದೆ.

  ಇದನ್ನೂ ಓದಿ : ‘ಪದವಿ ಪರೀಕ್ಷೆಯಿಲ್ಲದೆ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಪಾಸ್​​ ಮಾಡಲು ಸಾಧ್ಯವಿಲ್ಲ‘ - ಸುಪ್ರೀಂಕೋರ್ಟ್​

  ಏಕೆಂದರೆ, ನಾಯಕನೊಬ್ಬ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧ್ಯಕ್ಷ ಹುದ್ದೆಗೆ ಏರಿದರೆ ಆತನ ಬೆನ್ನಿಗೆ ಕನಿಷ್ಟ ಶೇ.51 ರಷ್ಟು ಜನ ಪಕ್ಷದಲ್ಲಿ ಬೆಂಬಲಕ್ಕೆ ನಿಲ್ಲುತ್ತಾರೆ. ಅವರ ವಿರುದ್ಧ ನಿಲ್ಲುವ ಇತರೆ ಅಭ್ಯರ್ಥಿಗಳು ಶೇ.10 ರಿಂದ 15ರಷ್ಟು ಮಾತ್ರ ಮತಗಳಿಸುತ್ತಾರೆ. ಹೀಗಾಗಿ ಅತಿಹೆಚ್ಚು ಮತಪಡೆದು ಗೆಲುವು ಸಾಧಿಸುವ ನಾಯಕ ಇಡೀ ಪಕ್ಷವನ್ನು ಮತ್ತಷ್ಟು ಆತ್ಮವಿಶ್ವಾಸದೊಂದಿಗೆ ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಂಡು ಮುನ್ನಡೆಸಲು ಅನುಕೂಲವಾಗುತ್ತದೆ. ಇದರಿಂದ ಪಕ್ಷಕ್ಕೂ ಒಳಿತಾಗುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

  ಆದರೆ, ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ಅಭಿಪ್ರಾಯವನ್ನು ಪಕ್ಷದ ಹೈಕಮಾಂಡ್‌ ಹೇಗೆ ಸ್ವೀಕರಿಸಲಿದೆ? ಚುನಾವಣೆ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆಯಾ? ಅಥವಾ ನೇರವಾಗಿ ವ್ಯಕ್ತಿಯೊಬ್ಬರನ್ನು ಉನ್ನತ ಹುದ್ದೆಗೆ ನೇಮಕ ಮಾಡಲಿದೆಯಾ? ಎಂಬುದನ್ನು ಕಾದು ನೋಡಬೇಕಿದೆ.
  Published by:MAshok Kumar
  First published: