ಸಿಎಎ ವಿಚಾರದಲ್ಲಿ ವಿರೋಧ ಪಕ್ಷಗಳು ಪಾಕಿಸ್ತಾನ್ ಭಾಷೆಯಲ್ಲಿ ಮಾತನಾಡುತ್ತಿವೆ; ಸಂಸತ್​ನಲ್ಲಿ ಹರಿಹಾಯ್ದ ಮೋದಿ

ಕಾಶ್ಮೀರ ಕೇವಲ ಭೂಮಿಯಲ್ಲ ಅದು ಭಾರತದ ಮುಕಟ ಮಣಿ, ಅಂದು ಕಾಶ್ಮೀರ ವಿಚಾರದಲ್ಲಿ ತೊಡಕಾಗಿದ್ದ ಕಾಂಗ್ರೆಸ್ ಇಂದು ಸಿಎಎ ವಿರುದ್ಧವೂ ರಾಜಕೀಯ ಪ್ರೇರಿತ ಪ್ರತಿಭಟನೆ ನಡೆಸುತ್ತಿದೆ. ಸಿಎಎ ವಿರುದ್ಧ ತುಕಡೆ ತುಕಡೆ ಗ್ಯಾಂಗ್ ಪ್ರತಿಭಟಿಸಲಿ ತೊಂದರೆ ಇಲ್ಲ. ಆದರೆ, ಜನರಿಗೆ ಕಷ್ಟವಾಗದಂತೆ ಪ್ರತಿಭಟಿಸಲಿ ಎಂದು ಪ್ರಧಾನಿ ಮೋದಿ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.

ನರೇಂದ್ರ ಮೋದಿ

ನರೇಂದ್ರ ಮೋದಿ

  • Share this:
ನವ ದೆಹಲಿ (ಫೆಬ್ರವರಿ 06); ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿಚಾರದಲ್ಲಿ ವಿರೋಧ ಪಕ್ಷಗಳು ಹಿಂದೂ-ಮುಸ್ಲಿಂ ದ್ವೇಷದ ಆರೋಪ ಮಾಡುತ್ತಿವೆ. ಅಲ್ಲದೆ, ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಸಂಸತ್​ನಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡುವ ವೇಳೆ ವಿರೋಧ ಪಕ್ಷಗಳ ಮೇಲೆ ಟೀಕಾ ಪ್ರಹಾರ ನಡೆಸಿರುವ ಅವರು, “ವಿಪಕ್ಷಗಳಿಗೆ ಕೇವಲ ಮುಸ್ಲಿಮರು ಮಾತ್ರ ಬೇಕು. ಆದರೆ, ನಮಗೆ ಭಾರತೀಯ ಮುಸ್ಲಿಮರಷ್ಟೇ ಬೇಕು. ಇದೇ ಕಾರಣಕ್ಕೆ ಸಿಎಎ ಜಾರಿಗೆ ತಂದಿದ್ದೇವೆ. ಆದರೆ, ಈ ಕಾಯ್ದೆಯನ್ನು ವಿರೋಧಿಸುವ ಭರದಲ್ಲಿ ವಿರೋಧ ಪಕ್ಷಗಳು ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿವೆ, ಜನರಲ್ಲಿ ಕಾಲ್ಪನಿಕ ಭಯವನ್ನು ಸೃಷ್ಟಿಸುತ್ತಿವೆ” ಎಂದು ಕಿಡಿಕಾರಿದ್ದಾರೆ.

“ಕಾಂಗ್ರೆಸ್ ಸಂವಿಧಾನದ ಹೆಸರಿನಲ್ಲಿ ಏನೆಲ್ಲಾ ಮಾಡಿದೆ? ಎಂಬುದು ನಮಗೆ ಗೊತ್ತಿದೆ. ಅವರು ಮಾಡಿರುವ ಓಟ್ ಬ್ಯಾಂಕ್ ರಾಜಕಾರಣದಿಂದಲೇ ಇಂದು ಇಡೀ ದೇಶ ನಷ್ಟ ಅನುಭವಿಸುವಂತಾಗಿದೆ. ನಾವು ಜಮ್ಮು ಕಾಶ್ಮೀರದಲ್ಲಿ ಸಂವಿಧಾನ ಜಾರಿ ಮಾಡಿದ್ದೇವೆ. ಆದರೆ, ಸರ್ಕಾರದ ಈ ನಡೆಯನ್ನು ಸಂವಿಧಾನ ವಿರೋಧಿ ಎಂದು ಕಾಂಗ್ರೆಸ್ ಟೀಕಿಸಿತ್ತು. ಕಲಂ 377 ರದ್ಧತಿಗೆ ತೊಡಕಾಗಿತ್ತು. ಇವರಿಗೆ 1975ರಲ್ಲಿ ಸಂವಿಧಾನ ನೆನಪಾಗಲಿಲ್ಲವೇ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕಾಶ್ಮೀರ ಕೇವಲ ಭೂಮಿಯಲ್ಲ ಅದು ಭಾರತದ ಮುಕಟ ಮಣಿ, ಅಂದು ಕಾಶ್ಮೀರ ವಿಚಾರದಲ್ಲಿ ತೊಡಕಾಗಿದ್ದ ಕಾಂಗ್ರೆಸ್ ಇಂದು ಸಿಎಎ ವಿರುದ್ಧವೂ ರಾಜಕೀಯ ಪ್ರೇರಿತ ಪ್ರತಿಭಟನೆ ನಡೆಸುತ್ತಿದೆ. ಸಿಎಎ ವಿರುದ್ಧ ತುಕಡೆ ತುಕಡೆ ಗ್ಯಾಂಗ್ ಪ್ರತಿಭಟಿಸಲಿ ತೊಂದರೆ ಇಲ್ಲ. ಆದರೆ, ಜನರಿಗೆ ಕಷ್ಟವಾಗದಂತೆ ಪ್ರತಿಭಟಿಸಲಿ” ಎಂದು ಟಾಂಗ್ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಸಂಪ್ರದಾಯವೆಂಬಂತೆ ಮಾಜಿ ಪ್ರಧಾನಿ ದಿವಂಗತ ಜವಹರ್ ಲಾಲ್ ನೆಹರೂ ವಿರುದ್ಧವೂ ಹರಿಹಾಯ್ದ ಅವರು, “ಕೆಲವರಿಗೆ ಕೇವಲ ತಾನು ಪ್ರಧಾನಿಯಾಗಬೇಕು ಎಂದಿತ್ತು. ಇದೇ ಕಾರಣಕ್ಕೆ ಅವರು ದೇಶವನ್ನು ಇಬ್ಭಾಗ ಮಾಡಿದ್ದರು. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದಾಗ ನೆಹರೂ ಏನನ್ನೂ ಹೇಳಿಲ್ಲ.  ಅವರು ಮೌನವಾಗಿದ್ದರು” ಎಂದು ನೆಹರೂ ವಿರುದ್ಧ ಕಿಡಿಕಾರಿದ್ದಾರೆ.

“ಅಸ್ಸಾಂ ಮುಖ್ಯಮಂತ್ರಿಗೆ ಅಂದು ನೆಹರು ಪತ್ರ ಬರೆದಿದ್ದರು. ಮುಸ್ಲಿಂ ವಲಸಿಗರನ್ನು ಪತ್ತೆ ಹಚ್ಚಲು ಹೇಳಿದ್ದರು. ಪೂರ್ವ ಪಾಕಿಸ್ತಾನದಲ್ಲಿನ ದೌರ್ಜನ್ಯವನ್ನು ಪ್ರಶ್ನಿಸಿದ್ದ ಅವರು ಅಗತ್ಯ ಬಿದ್ದರೆ ಕಾನೂನನ್ನು ಬದಲಿಸಿ ಎಂದು ಹೇಳಿದ್ದರು. ಅವರಿಗೆ ಹಿಂದೂ ರಾಷ್ಟ್ರ ಮಾಡಬೇಕು ಎಂಬ ಉದ್ದೇಶ ಇತ್ತೇ? ನೆಹರೂಗೆ ಹಿಂದೂ ಮುಸ್ಲಿಂ ಭೇದವಿತ್ತೇ? ಅಂದು ಅವರು ಹೇಳಿದ್ದನ್ನೇ ಇಂದು ನಾವು ಮಾಡುತ್ತಿದ್ದೇವೆ” ಎಂದು ಸಿಎಎ ಕಾನೂನನ್ನು ಪ್ರಧಾನಿ ನರೇಂದ್ರ ಮೋದಿ ಸಮರ್ಥಿಸಿಕೊಂಡಿದ್ದಾರೆ

ಇದನ್ನೂ ಓದಿ : ಶೇ. 5.15ರ ರಿಪೋ ದರ ಉಳಿಸಿಕೊಂಡ ಆರ್​ಬಿಐ; ಶೇ. 6ರ ಜಿಡಿಪಿ ದರದ ಅಂದಾಜು

 
First published: