3 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಗೆಲುವು; ಲೋಕಸಭೆಯಲ್ಲಿ ಬಿಜೆಪಿಯತ್ತ ಒಲವು- ಸಮೀಕ್ಷೆ

news18
Updated:August 14, 2018, 8:29 AM IST
3 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಗೆಲುವು;  ಲೋಕಸಭೆಯಲ್ಲಿ ಬಿಜೆಪಿಯತ್ತ ಒಲವು- ಸಮೀಕ್ಷೆ
news18
Updated: August 14, 2018, 8:29 AM IST
ನ್ಯೂಸ್​18 ಕನ್ನಡ

ಈ ವರ್ಷಾಂತ್ಯದಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಅನುಭವಿಸಲಿದೆ ಎಂದು ಈಗಾಗಲೇ ಹೊರಬಿದ್ದಿರುವ ಸಿವೋಟರ್​ ಮತ್ತು ಎಬಿಪಿ ನ್ಯೂಸ್​ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಹೀಗಾಗಿ, ಕಾಂಗ್ರೆಸ್​ಗೆ ಈ ಮೂರು ರಾಜ್ಯಗಳ ಗೆಲುವು ಹೆಚ್ಚಿನ ಬಲ ತುಂಬಲಿದೆ ಎನ್ನಲಾಗುತ್ತಿದೆ.

ಸದ್ಯಕ್ಕೆ ದೇಶದಲ್ಲಿರುವ ಮೋದಿಯ ಅಲೆಯಿಂದಾಗಿ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಈ ನಷ್ಟವನ್ನು ತುಂಬಿಕೊಳ್ಳುವ ಸಾಧ್ಯತೆಗಳಿವೆ ಎಂದು ಕೂಡ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಈ ಸಮೀಕ್ಷೆಯ ಪ್ರಕಾರ, ಮೂರು ರಾಜ್ಯಗಳಲ್ಲಿಯೂ ಕಾಂಗ್ರೆಸ್​ ಸ್ಪಷ್ಟ ಬಹುಮತ ಹೊಂದುವ ಮೂಲಕ ಅಧಿಕಾರಕ್ಕೆ ಬರಲಿದೆ. ಮಧ್ಯಪ್ರದೇಶದಲ್ಲಿ 230ಕ್ಕೆ 117 ಸ್ಥಾನ, ಛತ್ತೀಸ್​ಗಢದಲ್ಲಿ 90ರಲ್ಲಿ 54 ಸ್ಥಾನ ಹಾಗೂ ರಾಜಸ್ಥಾನದಲ್ಲಿ 200ಕ್ಕೆ 130 ಸ್ಥಾನಗಳನ್ನು ಕಾಂಗ್ರೆಸ್​ ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಸಿವೋಟರ್​ ಮತ್ತು ಎಬಿಪಿ ನ್ಯೂಸ್​ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 28,000 ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಬೇರೆ ಬೇರೆ ಮನೋಭಾವದ, ಉದ್ಯೋಗದವರನ್ನು ಸಮೀಕ್ಷೆಯಲ್ಲಿ ಒಳಗೊಳ್ಳಲಾಗಿದೆ. ದೇಶದ ಉನ್ನತ ಸ್ಥಾನಕ್ಕೆ ಈ ಬಾರಿಯೂ ಜನ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡುವುದಾಗಿ ಸಮೀಕ್ಷೆಯಲ್ಲಿ ಹೇಳಿದ್ದಾರೆ. ಎರಡನೇ ಆಯ್ಕೆಯಾಗಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರಿದ್ದಾರೆ.

ರಾಜಸ್ಥಾನದಲ್ಲಿ ಕಾಂಗ್ರೆಸ್​ಗೆ ಲಾಭ:
ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಅತ್ಯಂತ ದೊಡ್ಡ ಲಾಭವಾಗಲಿದೆ. ಕಾಂಗ್ರೆಸ್​ಗೆ ಶೇ. 51 ಮತಗಳು ಲಭಿಸಲಿದ್ದು, ಬಿಜೆಪಿ ಶೇ. 37ರಷ್ಟು ಮತಗಳನ್ನು ಪಡೆಯಲಿದೆ. 2013ರ ಚುನಾವಣೆಯಲ್ಲಿ ಬಿಜೆಪಿ 163 ಸೀಟುಗಳನ್ನು ಹೊಂದುವ ಮೂಲಕ ರಾಜಸ್ಥಾನದಲ್ಲಿ ಜಯಭೇರಿ ಬಾರಿಸಿತ್ತು. ಅದು ಈ ಬಾರಿ ಉಲ್ಟಾ ಆಗಲಿದೆ ಎಂದು ಸಮೀಕ್ಷೆ ತಿಳಿಸಿದೆ.
Loading...

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 47 ಸೀಟುಗಳನ್ನು ಪಡೆಯಲಿದ್ದು, ಕಾಂಗ್ರೆಸ್​ ಶೇ. 43 ಸೀಟುಗಳನ್ನು ಗೆಲ್ಲಲಿದೆ. ಶೇ.55ರಷ್ಟು ಜನರು ಎರಡನೇ ಅವಧಿಗೂ ಮೋದಿ ಅವರೇ ಪ್ರಧಾನಿಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಶೇ. 42 ಸೀಟು ಮತ್ತು ಬಿಜೆಪಿಗೆ ಶೇ. 40 ಸೀಟುಗಳು ದೊರೆಯಲಿವೆ ಎನ್ನಲಾಗಿದೆ. ಇಲ್ಲಿ ಕೂಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳು ಲಭಿಸಲಿವೆ. ಕಾಂಗ್ರೆಸ್​ಗೆ ಶೇ. 39 ಮತ್ತು ಬಿಜೆಪಿಗೆ ಶೇ. 40ರಷ್ಟು ಮತಗಳು ಲಭಿಸುವ ಮೂಲಕ ಬಿಜೆಪಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ.

ಛತ್ತೀಸ್​ಗಢದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿಗೆ ತೀವ್ರ ಪೈಪೋಟಿ ಏರ್ಪಡಲಿದೆ. ಬಿಜೆಪಿ ಶೇ. 39 ಮತಗಳನ್ನು ಪಡೆದುಕೊಂಡರೆ ಕಾಂಗ್ರೆಸ್​ ಶೇ. 40ರಷ್ಟು ಮತಗಳನ್ನು ಪಡೆಯುವ ಮೂಲಕ ಅತ್ಯಂತ ಕಡಿಮೆ ಅಂತರದಲ್ಲಿ ಗೆಲುವು ಪಡೆಯುವ ಸಾಧ್ಯತೆಯಿದೆ ಎಂದು ಸಮೀಕ್ಷೆ ವರದಿ ತಿಳಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಶೇ. 46 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್​ ಶೇ. 36ರಷ್ಟು ಸ್ಥಾನಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಪಡೆಯಲಿದೆ. ಈ ಮೂರೂ ರಾಜ್ಯಗಳಲ್ಲಿ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರ ಕಡೆಗೆ ಜನರು ಹೆಚ್ಚಿನ ಒಲವು ತೋರಿದ್ದಾರೆ.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...