news18-kannada Updated:February 17, 2021, 3:25 PM IST
ಪಂಜಾಬ್ ಸ್ಥಳೀಯ ಚುನಾವಣೆ ಗೆಲುವಿನ ಸಂಭ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು.
ಪಂಜಾಬ್ (ಫೆಬ್ರವರಿ 17); ರೈತ ಹೋರಾಟವನ್ನು ಮುಂಚೂಣಿಯಲ್ಲಿ ನಿಂತು ನಡೆಸುತ್ತಿರುವ ಪಂಜಾಬ್ನಲ್ಲಿ ಇದೀಗ ಸ್ಥಳೀಯ ಚುನಾವಣೆಗಳ ಫಲಿತಾಂಶ ಹೊರ ಬೀಳುತ್ತಿದ್ದು, ಬಿಜೆಪಿ ಮುಗ್ಗರಿಸಿದೆ ಆದರೆ, ಕಾಂಗ್ರೆಸ್ ಬಟಿಂಡಾದಲ್ಲಿ 53 ವರ್ಷಗಳ ಬಳಿಕ ಮೇಯರ್ ಸ್ಥಾನ ಪಡೆಯುವಲ್ಲಿ ಸಫಲವಾಗಿದ್ದು, ಹೊಸ ಇತಿಹಾಸ ನಿರ್ಮಿಸಿದೆ ಎಂದು ವರದಿಯಾಗಿದೆ. 8 ಮುನ್ಸಿಪಲ್ ಕಾರ್ಪೋರೇಷನ್ಗಳ 2,302 ವಾರ್ಡ್ಗಳಲ್ಲಿ ಎಣಿಕೆಯಂತೆ ಕಾಂಗ್ರೆಸ್ ಮುಂಚೂಣಿಯಲ್ಲಿದ್ದು, ಈಗಾಗಲೇ 6 ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರವನ್ನು ಹಿಡಿದಿದೆ. ಆದರೆ, ಪಂಜಾಬ್ ಸ್ಥಳೀಯ ಚುನಾವಣೆಗಳಲ್ಲಿ ಈ ವರೆಗೆ ಪ್ರಬಲ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಕೃಷಿ ಮಸೂದೆಯ ವಿರುದ್ಧದ ರೈತ ಹೋರಾಟದಿಂದಾಗಿ ಹೇಳ ಹೆಸರಿಲ್ಲದಂತಾಗಿದ್ದರೆ, ಆಮ್ ಆದ್ಮಿ ಪಕ್ಷ (ಎಎಪಿ), ಶಿರೋಮಣಿ ಅಕಾಲಿ ದಳ ಸಹ ಗಮನಾರ್ಹ ಸಾಧನೆ ಮಾಡಿಲ್ಲ ಎನ್ನಲಾಗುತ್ತಿದೆ.
ಪಂಜಾಬಿನ ಮೊಗ್ಗ, ಹೋಶಿಯಾರ್ಪುರ್, ಕಪುರ್ಥಾಲಾ, ಅಬೋಹರ್, ಪಠಾಣ್ಕೋಟ್ ಮತ್ತು ಬಟಿಂಡಾ ಜಿಲ್ಲೆಗಳಲ್ಲಿ ಕಾಂಗ್ರೆಸ್ ಬರ್ಜರಿ ಯಶಸ್ಸು ಪಡೆದಿದೆ. ಇವುಗಳಲ್ಲಿ ಬಟಿಂಡಾ ಜಿಲ್ಲೆಯಲ್ಲಿ ಕಳೆದ 53 ವರ್ಷಗಳ ನಂತರ ಕಾಂಗ್ರೆಸ್ ಪಾಲಿಗೆ ಮೇಯರ್ ಸ್ಥಾನ ಒಲಿದಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಒಂದು ಅದ್ಭುತ ಗೆಲುವು ಎಂದು ಬಿಂಬಿಸಲಾಗುತ್ತಿದೆ.
ಬಟಿಂಡಾ ಜಿಲ್ಲೆಯಲ್ಲಿ ಕಳೆದ ಅಕ್ಟೋಬರ್ ತಿಂಗಳಿನಿಂದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಯುತ್ತಲೇ ಇದೆ. ಇಂದಿಗೂ ಅಲ್ಲಿನ ಟೋಲ್ ಪ್ಲಾಜಾ, ರೈಲು ನಿಲ್ದಾಣದಳ ಬಳಿ ಪ್ರತಿಭಟನೆ ನಡೆಯುತ್ತಿದೆ. ಅಕ್ಕ ಪಕ್ಕದ ಹಳ್ಳಿಯ ಜನರು ಜಿಲ್ಲಾ ಕೇಂದ್ರ ಮತ್ತು ರಾಮಪುರ ಪುಲ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬಟಿಂಡಾದಲ್ಲಿ ಕಾಂಗ್ರೆಸ್ಗೆ ಗೆದ್ದ ಗೆಲುವಿನ ಕುರಿತು ಟ್ವೀಟ್ ಮಾಡಿರುವ ಸಚಿವ ಮನ್ಪ್ರೀತ್ ಸಿಂಗ್ ಬಾದಲ್, "ಇಂದು ಇತಿಹಾಸ ಸೃಷ್ಟಿಯಾಗಿದೆ. 53 ವರ್ಷಗಳಲ್ಲಿ ಮೊದಲ ಬಾರಿಗೆ ಬಟಿಂಡಾ ಕಾಂಗ್ರೆಸ್ ಮೇಯರ್ ಪಡೆಯಲಿದೆ. ಅದ್ಭುತ ಗೆಲುವು ನೀಡಿದ ಬಟಿಂಡಾ ಜನರಿಗೆ ಅಭಿನಂದನೆಗಳು. ಈ ದಿನಕ್ಕಾಗಿ ಶ್ರಮಿಸಿದ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರಿಗೆ ಶುಭಾಷಯಗಳು" ಎಂದಿದ್ದಾರೆ.
ಇದನ್ನೂ ಓದಿ: ಟೂಲ್ಕಿಟ್ ಪ್ರಕರಣ; ವಕೀಲೆ ನಿಕಿತಾ ಜಾಕೋಬ್ ಬಂಧನವನ್ನು 3 ವಾರಗಳ ಕಾಲ ತಡೆಹಿಡಿದ ಮುಂಬೈ ಹೈ ಕೋರ್ಟ್
ಕಾಂಗ್ರೆಸ್ ಶಾಸಕ ಮತ್ತು ಪಂಜಾಬ್ ರಾಜ್ಯ ಹಣಕಾಸು ಸಚಿವ ಮನ್ಪ್ರೀತ್ ಸಿಂಗ್ ಬಾದಲ್ ಅವರು ಬಟಿಂಡಾ ನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮನ್ಪ್ರೀತ್ ಸಿಂಗ್ ಬಾದಲ್ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರ ಸೋದರಸಂಬಂಧಿಯಾಗಿದ್ದು, ಈ ಬಾರಿ ಪುರಸಭೆ ಚುನಾವಣೆಯನ್ನು ಪ್ರತಿಷ್ಠಿತ ಕಣವನ್ನಾಗಿಸಿಕೊಂಡಿದ್ದರು.
ಬಟಿಂಡಾ ಲೋಕಸಭಾ ಕ್ಷೇತ್ರವನ್ನು ಶಿರೋಮಣಿ ಅಕಾಲಿ ದಳದ (ಎಸ್ಎಡಿ) ಹರ್ಸಿಮ್ರತ್ ಬಾದಲ್ ಪ್ರತಿನಿಧಿಸುತ್ತಿದ್ದಾರೆ. ಅಕಾಲಿದಳ ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳಿಂದ ರಾಜ್ಯದ ರೈತರಲ್ಲಿ ಉಂಟಾದ ಪ್ರತಿಭಟನೆಯ ನಂತರ ತನ್ನ ದೀರ್ಘಕಾಲದ ಮಿತ್ರ ಬಿಜೆಪಿಯೊಂದಿಗೆ ಇತ್ತೀಚೆಗೆ ಬೇರ್ಪಟ್ಟಿದೆ.
Published by:
MAshok Kumar
First published:
February 17, 2021, 3:22 PM IST