ಜೈಪುರ(ಜುಲೈ 17): ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಮಹಾಯುದ್ಧ ನಡೆಯುತ್ತಲೇ ಇದೆ. ಇದೀಗ ಸಚಿನ್ ಪೈಲಟ್ ಸೇರಿ 19 ಶಾಸಕರು ಬಂಡೆದ್ದು ನಿಂತಿದ್ದಾರೆ. ಬಿಜೆಪಿ ಜೊತೆ ಸೇರಿ ಈ ಶಾಸಕರು ಸರ್ಕಾರ ಉರುಳಿಸಲು ಚಿತಾವಣೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಈ ಹೊತ್ತಲ್ಲೇ ಮೂರು ಆಡಿಯೋಗಳು ಬಿಡುಗಡೆ ಆಗಿವೆ. ಇದರಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ಗಜೇಂದ್ರ ಶೆಖಾವತ್ ಜೊತೆ ಕೈಪಾಳಯದ ರೆಬೆಲ್ ಶಾಸಕರು ಮಾತನಾಡಿರುವುದು ತಿಳಿದುಬಂದಿದೆ.
ಈ ಆಡಿಯೋ ಲೀಕ್ ಆದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ತನ್ನ ಇಬ್ಬರು ಶಾಸಕರನ್ನು ಅಮಾನತುಗೊಳಿಸಿದೆ. ಸಚಿನ್ ಪೈಲಟ್ ಬಣದ ಜೊತೆ ಗುರುತಿಸಿಕೊಂಡಿರುವ ಭನ್ವರ್ ಲಾಲ್ ಶರ್ಮಾ ಮತ್ತು ವಿಶ್ವೇಂದ್ರ ಸಿಂಗ್ ಅವರು ಅಮಾನತಾದ ಕಾಂಗ್ರೆಸ್ ಶಾಸಕರು.
ಇದೇ ವೇಳೆ, ರಾಜಸ್ಥಾನ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಗಜೇಂದ್ರ ಶೆಖಾವತ್ ಮತ್ತು ಆ ಇಬ್ಬರು ರೆಬೆಲ್ ಕಾಂಗ್ರೆಸ್ ಶಾಸಕರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಸೋರಿಕೆಯಾದ ಧ್ವನಿಮುದ್ರಿಕೆಯ ಆಧಾರದ ಮೇಲೆ ರಾಜಸ್ಥಾನದಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಅವರು, ಸ್ಪೆಷಲ್ ಆಪರೇಷನ್ ಗ್ರೂಪ್ನಿಂದ ತನಿಖೆ ಆಗಬೇಕೆಂದು ಒತ್ತಾಯಿಸಿದ್ದಾರೆ. ಹಾಗೆಯೇ, ಶೆಖಾವತ್ ಹಾಗೂ ಇಬ್ಬರು ಕಾಂಗ್ರೆಸ್ ಶಾಸಕರ ವಿರುದ್ಧ ಎಫ್ಐಆರ್ ದಾಖಲಾಗಬೇಕೆಂದೂ ಆಗ್ರಹಿಸಿದ್ದರು. ಅದರಂತೆ ರಾಜಸ್ಥಾನ ಪೊಲೀಸರು ಎಫ್ಐಆರ್ ಫೈಲ್ ಮಾಡಿದ್ದಾರೆ.
ಇದನ್ನೂ ಓದಿ: ದೂರವಾಣಿ ಮೂಲಕ ಸಚಿನ್ ಪೈಲಟ್‌ಗೆ ಪಿ. ಚಿದಂಬರಂ ಸಲಹೆ: ಕಾಂಗ್ರೆಸ್‌ಗೆ ಮರುಳುವರೇ ರಾಜಸ್ಥಾನದ ಯುವ ನಾಯಕ?
ಬಂಡಾಯದ ನೇತೃತ್ವ ವಹಿಸಿರುವ ಸಚಿನ್ ಪೈಲಟ್ ಅವರು ತಾವು ಸರ್ಕಾರವನ್ನು ಬೀಳಿಸುವ ಉದ್ದೇಶ ಹೊಂದಿಲ್ಲ. ಬಿಜೆಪಿಯನ್ನೂ ಸೇರುವುದಿಲ್ಲ ಎಂದು ಎರಡು ದಿನಗಳಿಂದಲೂ ಸ್ಪಷ್ಟಪಡಿಸುತ್ತಾ ಬಂದಿದ್ದಾರೆ. ಆದರೆ, ಈಗ ಸೋರಿಕೆಯಾಗಿರುವ ಆಡಿಯೋ ಹಾಗೂ ಬಿಜೆಪಿಯಿಂದ ಕುದುರೆ ವ್ಯಾಪಾರ ನಡೆಯುತ್ತಿದೆ ಎನ್ನುವ ಆಪಾದನೆ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಬೇಕೆಂದು ಸಚಿನ್ ಪೈಲಟ್ ಅವರನ್ನ ಕಾಂಗ್ರೆಸ್ ಆಗ್ರಹಿಸಿದೆ.
ಇನ್ನು, ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿರುವ ಆಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಭನ್ವರ್ ಲಾಲ್, ಇವು ನಕಲಿ ಆಡಿಯೋಗಳಾಗಿವೆ. ಅದರಲ್ಲಿರುವ ಧ್ವನಿ ನನ್ನದಲ್ಲ. ನಾನ್ಯಾವ ಮುಖಂಡರ ಜೊತೆಯೂ ಮಾತನಾಡಿಲ್ಲ. ಈ ನಕಲಿ ಆಡಿಯೋ ಬಿಡುಗಡೆ ಮಾಡಿ ನನ್ನ ಮಾನ ಹರಾಜು ಮಾಡುವ ಸಂಚು ನಡೆದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಸುಂಧರಾ ರಾಜೇ ಸ್ವತಃ ಮುಂದೆ ನಿಂತು ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಉಳಿಸಿದರೇ?; ಬಿಜೆಪಿ ಮಿತ್ರಪಕ್ಷಗಳ ಆರೋಪ
ಇದೇ ವೇಳೆ, ಪಕ್ಷಾಂತರ ಕಾಯ್ದೆ ಅಡಿ 19 ಶಾಸಕರನ್ನ ಅನರ್ಹಗೊಳಿಸಲು ರಾಜಸ್ಥಾನ ವಿಧಾನಸಭಾಧ್ಯಕ್ಷರು ನೋಟೀಸ್ ನೀಡಿರುವ ಪ್ರಕರಣ ಈಗ ಹೈಕೋರ್ಟ್ ವಿಚಾರಣೆಗೆ ಒಳಪಟ್ಟಿದೆ. ಹೈಕೋರ್ಟ್ ತೀರ್ಪಿನ ಬಳಿಕ ರಾಜಸ್ಥಾನ ರಾಜಕಾರಣದಲ್ಲಿ ಹೊಸ ತಿರುವುಪಡೆದುಕೊಳ್ಳುವ ನಿರೀಕ್ಷೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ