• Home
  • »
  • News
  • »
  • national-international
  • »
  • Congress President Election: ತನ್ನ ಕಾಲ ಮೇಲೆ ತಾನೇ ಕೊಡಲಿ ಪೆಟ್ಟು ಕೊಡುತ್ತಿದೆಯೇ ಕಾಂಗ್ರೆಸ್?

Congress President Election: ತನ್ನ ಕಾಲ ಮೇಲೆ ತಾನೇ ಕೊಡಲಿ ಪೆಟ್ಟು ಕೊಡುತ್ತಿದೆಯೇ ಕಾಂಗ್ರೆಸ್?

ಎಐಸಿಸಿ ನಾಯಕ ರಾಹುಲ್ ಗಾಂಧಿ

ಎಐಸಿಸಿ ನಾಯಕ ರಾಹುಲ್ ಗಾಂಧಿ

ಈ ಹಿಂದೆ ಕಾಂಗ್ರೆಸ್ ಪಕ್ಷವು ಇದೇ ರೀತಿಯ ದ್ವಂದ್ವ ಯುದ್ಧವನ್ನು ಪಂಜಾಬ್ ರಾಜ್ಯದಲ್ಲಿ ಅನುಭವಿಸಿತ್ತು. ಆದರೆ, ದುರದೃಷ್ಟವಶಾತ್ ಆ ಯುದ್ಧದಿಂದ ಕಾಂಗ್ರೆಸ್ ಏನೂ ಕಲಿತಿಲ್ಲವೆಂದೇ ಈ ಸಂದರ್ಭದಲ್ಲಿ ಹೇಳಲಾಗುತ್ತಿದೆ.

  • Share this:

ದೆಹಲಿ: ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ಗಮನಿಸಿದರೆ, ಹಿಂದೊಮ್ಮೆ ವೈಭವದಿಂದ ಅತಿ ದೊಡ್ಡ ಪಕ್ಷವಾಗಿ ಮೆರೆದಿರುವ ಕಾಂಗ್ರೆಸ್ (Congress) ಇಂದು ಅಕ್ಷರಶಃ ತನ್ನ ಗತ ವೈಭವವನ್ನು ಮರಳಿ ಪಡೆಯಲು ಸಾಕಷ್ಟು ಹೆಣಗಾಡುತ್ತಿದೆ ಎಂತಲೇ ಹೇಳಬಹುದು. ಆದರೂ ಈ ರಾಷ್ಟ್ರೀಯ ಪಕ್ಷವು (Congress President Election) ಕಳೆದ ಕೆಲ ಸಮಯದಿಂದ ತನ್ನ ವರ್ಚಸ್ಸನ್ನು ಮತ್ತೆ ರೂಪಗೊಳಿಸುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದು ಅದರಲ್ಲಿ ಇತ್ತೀಚೆಗೆ ಪ್ರಮುಖವಾಗಿರುವ ಭಾರತ್ ಜೋಡೋ ಯಾತ್ರಾ (Bharat Jodo Yatra) ಅಭಿಯಾನವೂ ಒಂದು.


ಒಂದೆಡೆ ಈ ಮಹತ್ವದ ಅಭಿಯಾನ ನಡೆಯುತ್ತಿರುವ ಈ ಉಚ್ಛ ಘಳಿಗೆಯಲ್ಲೇ ಇನ್ನೊಂದೆಡೆ ರಾಜಸ್ಥಾನದ ಬಿಕ್ಕಟ್ಟು ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಪಕ್ಷವು ತನ್ನ ಮಹತ್ತರ ಅಧ್ಯಕ್ಷೀಯ ಸ್ಥಾನವನ್ನು ರಣತಂತ್ರಾತ್ಮಕವಾಗಿ ರೂಪಿಸಿ ಅದಕ್ಕೊಂದು ದಿಸೆ ಕೊಡಬೇಕೆನ್ನುವಷ್ಟರಲ್ಲೇ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಉಲ್ಬಣಗೊಂಡಿರುವ ಬಿಕ್ಕಟ್ಟು ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿದೆ.


ಕಾಂಗ್ರೆಸ್ ತಂತ್ರ ಏನಾಗಿತ್ತು?
ಈಗಾಗಲೇ ಗೊತ್ತಿರುವಂತೆ ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಅವರು ಬಂಡಾಯವೆದ್ದಿದ್ದರು. ಇನ್ನೊಂದೆಡೆ ಸದ್ಯದ ಸಿಎಂ ಅಶೋಕ್ ಗೆಹ್ಲೋಟ್ ಅವರೊಡನೆ ಅವರ ಮುಸುಕಿನ ಗುದ್ದು ನಡೆಯುತ್ತಲೇ ಇದೆ. ಈ ಸಂದರ್ಭವನ್ನು ವ್ಯೂಹಾತ್ಮಕವಾಗಿ ಬಳಸಿಕೊಳ್ಳುವ ನಿಮಿತ್ತ ಕಾಂಗ್ರೆಸ್ ಪಕ್ಷವು ಗೆಹ್ಲೋಟ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ ಅತ್ತ ರಾಜಸ್ಥಾನದ ಸಿಎಂ ಹುದ್ದೆಗೆ ಸಚಿನ್ ಅವರನ್ನು ಕೂರಿಸುವ ತಂತ್ರ ರೂಪಿಸಿತ್ತು.


ತಲೆಕೆಳಗಾದ ಲೆಕ್ಕಾಚಾರ
ಆದರೆ ಈ ಲೆಕ್ಕಾಚಾರವೆಲ್ಲ ಈಗ ತಲೆ ಕೆಳಗಾಗಿ ಬಿದ್ದಿರುವಂತೆ ಸದ್ಯ ಪರಿಸ್ಥಿತಿ ನಿರ್ಮಾಣಗೊಂಡಿದೆ. ಗೆಹ್ಲೋಟ್ ಅವರು ಸಚಿನ್ ಸಿಎಂ ಸ್ಥಾನಕ್ಕೆ ಏರದಂತೆ ಪಟ್ಟು ಹಿಡಿದಿದ್ದು ಕಾಂಗ್ರೆಸ್ ನಾಯಕರನ್ನು ಗೊಂದಲಕ್ಕೀಡು ಮಾಡಿದೆ. ಅಲ್ಲದೆ, ರಾಜಸ್ಥಾನದ ಕಾಂಗ್ರೆಸ್ ಪಕ್ಷದೊಳಗೆ ಕ್ರಾಂತಿ ಏಳುವ ಸೂಚನೆಗಳು ಕಾಣಸಿಗುತ್ತಿವೆ.


ಒಂದೇ ಕಲ್ಲಿನಿಂದ ಎರಡು ಬೇಟೆ
ಗಾಂಧಿ ಕುಟುಂಬಕ್ಕೆ ಈ ಬಾರಿ ಪಕ್ಷದ ಅಧ್ಯಕ್ಷ ಸ್ಥಾನದ ನೆಚ್ಚಿನ ಅಭ್ಯರ್ಥಿ ಗೆಹ್ಲೋಟ್ ಆಗಿದ್ದರು. ಅದರಂತೆ ಅವರನ್ನು ಮೊದಲು ಈ ಬಗ್ಗೆ ಕೇಳಿಕೊಂಡಾಗ ಅವರು(ಗೆಹ್ಲೋಟ್) ಅದಕ್ಕೆ ಮೊದ ಮೊದಲು ಒಪ್ಪಿಕೊಳ್ಳದೆ ಹೋದರೂ ನಂತರ ಒಪ್ಪಿಕೊಳ್ಳುವ ಹಂತಕ್ಕೆ ಬರಬೇಕಾಯಿತು.


ಈ ಸಂದರ್ಭದಲ್ಲಿ ಗೆಹ್ಲೋಟ್ ಅವರು ಏಕಕಾಲದಲ್ಲಿಯೇ ಸಿಎಂ ಹಾಗೂ ಅಧ್ಯಕ್ಷೀಯ ಸ್ಥಾನ ಎರಡೂ ನಿಭಾಯಿಸುವುದಾಗಿಯೂ ವಾದಿಸಿದರು. ಆದರೆ, ರಾಹುಲ್ ಈ ಬಗ್ಗೆ ಮಾತನಾಡಿ ಮನವೋಲಿಸಿದಾಗ ಗೆಹ್ಲೋಟ್ ಬಳಿ ಬೇರೆ ಯಾವುದೇ ಆಯ್ಕೆ ಇರಲಿಲ್ಲ.


ಸಚಿನ್ ಪೈಲಟ್ ರಾಜಸ್ಥಾನದ ಸಿಎಂ ಆಗಬಾರ್ದಂತೆ
ಗೆಹ್ಲೋಟ್ ಅವರು ಮೊದಲಿನಿಂದಲೂ ಗಾಂಧಿ ಕುಟುಂಬದ ಅತ್ಯಾಪ್ತ ಹಾಗೂ ವಿಶ್ವಾಸಿ ವ್ಯಕ್ತಿಯಾಗಿರುವ ಕಾರಣ, ಗಾಂಧಿ ಕುಟುಂಬವು ಅವರನ್ನೇ ಅಧ್ಯಕ್ಷ ಸ್ಥಾನಕ್ಕೆ ಏರಿಸುವ ಇರಾದೆ ಹೊಂದಿತ್ತು. ಆದರೆ, ಗೆಹ್ಲೋಟ್ ಅವರು ಗಾಂಧಿ ಕುಟುಂಬಕ್ಕೆ ಎಷ್ಟು ವಿಶ್ವಾಸ ಹೊಂದಿದ್ದಾರೋ ಅಷ್ಟೇ ಪ್ರಮಾಣದಲ್ಲಿ ಅವರು ಸಚಿನ್ ಪೈಲಟ್ ರಾಜಸ್ಥಾನದ ಸಿಎಂ ಕುರ್ಚಿಗೆ ಏರಬಾರದೆಂಬ ದೃಢ ಮನಸ್ಸೂ ಹೊಂದಿದ್ದಾರೆ.


ಇನ್ನೊಂದು ಕಡೆ, ಕಳೆದ ಬಾರಿ ಅಸ್ಸೆಂಬ್ಲಿ ಚುನಾವಣೆಯ ನಂತರ ಸಿಎಂ ಹುದ್ದೆ ನೀಡುವುದಾಗಿ ಪಕ್ಷ ಭರವಸೆ ನೀಡಿತ್ತೆಂದು ಪೈಲಟ್ ಅವರು ಹೇಳಿದ್ದು ಅವರು ಈಗ ಆ ವಿಷಯದಲ್ಲಿ ಮತ್ತೆ ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ. ಈಗಾಗಲೇ ಸಚಿನ್ ಈ ಹಿಂದೆ ಬಂಡಾಯ ಎದ್ದಿದ್ದು ಗೊತ್ತೇ ಇದೆ. ಹಾಗಾಗಿ ಅವರು ತಮ್ಮ ನಿಲುವನ್ನು ಬದಲಿಸುವ ಯಾವ ಸ್ಥಿತಿಯಲ್ಲೂ ಇಲ್ಲ ಎನ್ನಲಾಗಿದೆ.


ಪಂಜಾಬ್ ಸ್ಥಿತಿ
ಈ ಹಿಂದೆ ಕಾಂಗ್ರೆಸ್ ಪಕ್ಷವು ಇದೇ ರೀತಿಯ ದ್ವಂದ್ವ ಯುದ್ಧವನ್ನು ಪಂಜಾಬ್ ರಾಜ್ಯದಲ್ಲಿ ಅನುಭವಿಸಿತ್ತು. ಆದರೆ, ದುರದೃಷ್ಟವಶಾತ್ ಆ ಯುದ್ಧದಿಂದ ಕಾಂಗ್ರೆಸ್ ಏನೂ ಕಲಿತಿಲ್ಲವೆಂದೇ ಈ ಸಂದರ್ಭದಲ್ಲಿ ಹೇಳಲಾಗುತ್ತಿದೆ.


ಇದನ್ನೂ ಓದಿ: Congress President Poll: ಕಾಂಗ್ರೆಸ್​ ಅಧ್ಯಕ್ಷ ಸ್ಥಾನದ ರೇಸ್​ಗೆ ದಿಗ್ವಿಜಯ್ ಸಿಂಗ್ ಎಂಟ್ರಿ: ಇದು ಸೋನಿಯಾ 'ಪ್ಲಾನ್​ ಬಿ'?


ಆ ಸಂದರ್ಭದಲ್ಲೂ ಆಗಿನ ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಪಕ್ಷದ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿದ್ಧು ಹಾಗೂ ಚರಣ್ ಜೀತ್ ಸಿಂಗ್ ಚನ್ನಿ ಮಧ್ಯೆ ತಿಕ್ಕಾಟ ನಡೆದಿತ್ತು. ಕೊನೆಗೆ ನಿರೀಕ್ಷಿಸಿದಂತೆ ಅಮರಿಂದರ್ ಅವರು ರಾಜೀನಾಮೆ ನೀಡಿ ಬಿಜೆಪಿ ಸೇರಿದರು, ಸಿದ್ಧು ತಮ್ಮ ಸ್ಥಾನ ಕಳೆದುಕೊಂಡು ಯಾವುದೋ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸೆರೆವಾಸ ಅನುಭವಿಸುತ್ತಿದ್ದಾರೆ.


ಪ್ರಸ್ತುತ ಇದೇ ರೀತಿಯ ಚಿಹ್ನೆಗಳು ರಾಜಸ್ಥಾನದಲ್ಲಿ ಸಹ ಕಾಣಸಿಗುತ್ತಿದೆ. ಆದರೆ, ಇಲ್ಲಿ ಗೆಹ್ಲೋಟ್ ಪಕ್ಷ ತ್ಯಜಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಅದರಂತೆ ಅವರು ಪೈಲಟ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಒಪ್ಪಿಕೊಳ್ಳುತ್ತಾರೆ ಎಂದೂ ಸಹ ಅನ್ನಲಾಗದು. ಆದರೂ ಮುಂದಿನ ಸಮಯದಲ್ಲಿ ಅವರಿಗೆ ಯಾವ ರೀತಿ ಒತ್ತಡ ತರಬಹುದು ಎಂದು ಹೇಳಲಾಗದು.


ಇದನ್ನೂ ಓದಿ: Pankaja Munde: ಮೋದಿಯೂ ನನ್ನನ್ನು ಮುಗಿಸಲು ಆಗದು! ಬಿಜೆಪಿ ನಾಯಕಿಯ ಸವಾಲು


ಆದರೆ ಇನ್ನೊಂದೆಡೆ ಪೈಲಟ್ ಅವರು ಸಿಎಂ ಸ್ಥಾನಕ್ಕೇರಿದರೂ ಸಹ ಅದನ್ನು ನಿರ್ವಹಿಸುವುದು ಅವರಿಗೆ ಅಷ್ಟೊಂದು ಸುಲಭವಾಗಿಲ್ಲ, ಏಕೆಂದರೆ ಬಹುಮತದ ಶಾಸಕರು ಸ್ಪಷ್ಟವಾಗಿ ಗೆಹ್ಲೋಟ್ ಬಳಿಯೇ ಇದ್ದಾರೆ ಎಂಬುದು ವಿಶೇಷ. ಹಾಗಾಗಿ ಪೈಲಟ್ ಅವರಿಗೆ ಇನ್ನುಳಿದ ಕಾಲಾವಧಿಯಷ್ಟೆಕ್ಕೆ ಮಾತ್ರವೇ ಸಿಎಂ ಆಗಿ ಒತ್ತಡದಲ್ಲೇ ಕಾರ್ಯ ನಿರ್ವಹಿಸಬಹುದಾದ ಸಾಧ್ಯತೆಯೇ ಹೆಚ್ಚಾಗಿದೆ.

Published by:ಗುರುಗಣೇಶ ಡಬ್ಗುಳಿ
First published: