ಹೈದರಾಬಾದ್: ಗಾಗಲೇ ದೇಶಾದ್ಯಂತ ಕೆಲವು ಮಹಾನಗರಗಳಲ್ಲಿ ‘ಭಾರತ್ ಜೋಡೋ’ ಎಂಬ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ ಕಾಂಗ್ರೆಸ್ ಪಕ್ಷವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸಮರ್ಥವಾಗಿ ಎದುರಿಸಲು ಯಾವುದೇ ಒಂದು ಅವಕಾಶವನ್ನು ಬಿಡಲು ಇಚ್ಚಿಸುತ್ತಿಲ್ಲ ಅಂತ ಹೇಳಬಹುದು. ಈಗ ತೆಲಂಗಾಣದಲ್ಲಿಯೂ ಸಹ ಕಾಂಗ್ರೆಸ್ ತನ್ನದೇ ಆದ ಒಂದು ಹೊಸ ಕಾರ್ಯತಂತ್ರವನ್ನು ರೂಪಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಈ ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ ಎಂದು ಕರೆಯಲ್ಪಡುತ್ತಿದ್ದ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಮತ್ತು ಬಿಜೆಪಿಯ ಬೆಳೆಯುತ್ತಿರುವ ಹೆಜ್ಜೆಗುರುತುಗಳನ್ನು ಎದುರಿಸಲು ಈಗಾಗಲೇ ತನ್ನ ಇಚ್ಛೆಯನ್ನು ಸೂಚಿಸಿದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಭಾನುವಾರ ಹೈದರಾಬಾದ್ ನ ಚಾರ್ಮಿನಾರ್ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಚೇರಿಯನ್ನು ತೆರೆದಿದೆ.
ಚಾರ್ಮಿನಾರ್ ನಲ್ಲಿ ಮೊದಲ ಕಚೇರಿ ತೆರೆದ ಟಿಪಿಸಿಸಿ
ಈಗಾಗಲೇ ಹೈದರಾಬಾದ್ ನ ಹಳೆ ಸಿಟಿ ಎಂದರೆ ಚಾರ್ಮಿನಾರ್ ಪ್ರದೇಶವನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಸಹ ಬಹುತೇಕ ಭಾಗದ ಮೇಲೆ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದವರು ನಿಯಂತ್ರಣ ಸಾಧಿಸಿದ್ದಾರೆ ಅನ್ನೋ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೆ ಈಗ ಕಾಂಗ್ರೆಸ್ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯು ಹಳೆ ಹೈದರಾಬಾದ್ ನಲ್ಲಿರುವ ಯುವಕರನ್ನು ತಲುಪುವ ನಿರೀಕ್ಷೆಯಿದೆ. ಎಐಎಂಐಎಂ ಆಗಾಗ್ಗೆ ಬಿಆರ್ಎಸ್ ನೊಂದಿಗೆ ರಹಸ್ಯವಾಗಿ ಮೈತ್ರಿಯಲ್ಲಿದೆ ಎಂದು ಆರೋಪಿಸಲಾಗಿದೆ.
"ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೈದರಾಬಾದ್ ನ ಓಲ್ಡ್ ಸಿಟಿಯಲ್ಲಿ ಪಕ್ಷದ ಸಂಘಟನಾತ್ಮಕ ಜಾಲವನ್ನು ಬಲಪಡಿಸುವ ಕ್ರಮ ಇದಾಗಿದೆ" ಎಂದು ಕಾಂಗ್ರೆಸ್ ನಾಯಕ ಮೊಹಮ್ಮದ್ ಅಲಿ ಶಬ್ಬೀರ್ ಸುದ್ದಿ ಮಾಧ್ಯಮವೊಂದಕ್ಕೆ ಪ್ರತ್ಯೇಕವಾಗಿ ತಿಳಿಸಿದ್ದಾರೆ.
ಮುಂಬರುವ ಚುನಾವಣೆಗೆ ಕಾರ್ಯತಂತ್ರ ರೂಪಿಸಿದ್ದಾರಂತೆ ರೇವಂತ್ ರೆಡ್ಡಿ
ತೆಲಂಗಾಣ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಎ.ರೇವಂತ್ ರೆಡ್ಡಿ ಅವರು ಮುಂಬರುವ ಚುನಾವಣೆಗಳಿಗಾಗಿ ಆಕ್ರಮಣಕಾರಿ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದ್ದಾರೆ ಎಂದು ಪಕ್ಷವು ಈಗಾಗಲೇ ಹೇಳಿಕೊಂಡಿದೆ. ಮುಂಬರುವ ವಾರಗಳಲ್ಲಿ ಈ ಪ್ರದೇಶದ ಎಲ್ಲಾ ಮುನ್ಸಿಪಲ್ ವಾರ್ಡ್ ಗಳಲ್ಲಿ ಕಚೇರಿಗಳನ್ನು ಸ್ಥಾಪಿಸಲಾಗುವುದು ಎಂದು ಪಕ್ಷವು ಹೇಳಿದೆ. ರೇವಂತ್ ರೆಡ್ಡಿ ಅವರು ಎಲ್ಲಾ ವಾರ್ಡ್ ಗಳಲ್ಲಿ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಲಾಗಿದೆ.
1967 ರಲ್ಲಿ ಮುಸ್ಲಿಂ ಪ್ರಾಬಲ್ಯದ ಚಾರ್ಮಿನಾರ್ ಪ್ರದೇಶದಲ್ಲಿ ಕಚೇರಿಯನ್ನು ತೆರೆಯಲು ಕಾಂಗ್ರೆಸ್ ಪಕ್ಷ ಬಯಸಿತ್ತು. ಆದರೆ, ಪ್ರಸ್ತುತ ಹೈದರಾಬಾದ್ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ತಂದೆ ಸುಲ್ತಾನ್ ಸಲಾಹುದ್ದೀನ್ ಓವೈಸಿ ಅವರು ಆ ವರ್ಷ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಾಗ ತನ್ನ ಯೋಜನೆಯನ್ನು ಕೈಬಿಟ್ಟಿತು ಎಂದು ರಾಜ್ಯ ಕಾಂಗ್ರೆಸ್ ನಾಯಕರೊಬ್ಬರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.
1985 ರವರೆಗೆ ಸ್ವತಂತ್ರ ಅಭ್ಯರ್ಥಿಗಳು ಈ ಕ್ಷೇತ್ರವನ್ನು ಗೆಲ್ಲುತ್ತಿದ್ದರು. ಎಐಎಂಐಎಂ 1989 ರಿಂದ ಈ ಸ್ಥಾನವನ್ನು ಗೆಲ್ಲುತ್ತಿದೆ ಮತ್ತು ಈ ಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಕಚೇರಿಯನ್ನು ತೆರೆಯಲು ಎಂದಿಗೂ ಸಾಧ್ಯವಾಗಲಿಲ್ಲ ಎಂದು ಪಕ್ಷದ ಒಳಗಿನವರು ತಿಳಿಸಿದ್ದಾರೆ.
ಚಾರ್ಮಿನಾರ್ ನಲ್ಲಿ ಕಚೇರಿ ತೆರೆಯಲು ಒಗ್ಗೂಡಿದ ಟಿಪಿಸಿಸಿ ಹಿರಿಯ ನಾಯಕರು
ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಒಗ್ಗಟ್ಟಿನ ಪ್ರದರ್ಶನದಲ್ಲಿ, ಶಬ್ಬೀರ್, ಹೈದರಾಬಾದ್ ಜಿಲ್ಲಾ ಅಧ್ಯಕ್ಷ ಸಮೀರ್ ವಲಿಯುಲ್ಲಾ, ಮಾಜಿ ಸಚಿವ ಡಾ.ಜಿ.ಚಿನ್ನಾ ರೆಡ್ಡಿ, ಟಿಪಿಸಿಸಿ ವಕ್ತಾರ ಸೈಯದ್ ನಿಜಾಮುದ್ದೀನ್, ಪ್ರಧಾನ ಕಾರ್ಯದರ್ಶಿಗಳಾದ ಫಿರೋಜ್ ಖಾನ್ ಮತ್ತು ಉಜ್ಮಾ ಶಾಕೀರ್ ಮತ್ತು ಓಲ್ಡ್ ಸಿಟಿಯ ಇತರ ಹಿರಿಯ ನಾಯಕರು ಮೂಸಾಬೌಲಿ ಅಡ್ಡರಸ್ತೆಗಳಲ್ಲಿ ಕಚೇರಿಯನ್ನು ಉದ್ಘಾಟಿಸಲು ಒಗ್ಗೂಡಿದರು.
"ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಕಾಂಗ್ರೆಸ್ ಅಧಿಕಾರಕ್ಕೆ ಮರಳಲು ಸಾಕ್ಷಿಯಾಗಲಿವೆ. ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ರೇವಂತ್ ರೆಡ್ಡಿ ಶ್ರಮಿಸುತ್ತಿದ್ದರೆ, ಇಡೀ ಹೈದರಾಬಾದ್ ಕಾಂಗ್ರೆಸ್ ತಂಡವು ನಮ್ಮ ಆಯಾ ಪ್ರದೇಶಗಳಲ್ಲಿ ನಮ್ಮ ವ್ಯಾಪ್ತಿಯನ್ನು ಹೆಚ್ಚಿಸುವ ಮೂಲಕ ಅವರ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ವಲಿಯುಲ್ಲಾ ಹೇಳಿದರು.
ಜನರೊಂದಿಗೆ ಸಂಪರ್ಕ ಸಾಧಿಸಲು ಕಚೇರಿಯನ್ನು ಬಳಸಿಕೊಳ್ಳಿ ಎಂದ ಶಬ್ಬೀರ್
"ಜನರೊಂದಿಗೆ ಸಂಪರ್ಕ ಸಾಧಿಸಲು ಹೊಸ ಪಕ್ಷದ ಕಚೇರಿಯನ್ನು ಕೇಂದ್ರವಾಗಿ ಬಳಸಿಕೊಳ್ಳಿ" ಎಂದು ಶಬ್ಬೀರ್ ಕಾಂಗ್ರೆಸ್ ಕಾರ್ಯಕರ್ತರನ್ನು ಒತ್ತಾಯಿಸಿದರು. "ಸ್ಥಳೀಯ ನಾಯಕರು ತಮ್ಮ ತಮ್ಮ ಸ್ಥಳದ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸಲು ಜನರೊಂದಿಗೆ ನಿಯಮಿತವಾಗಿ ಸಂವಹನ ನಡೆಸಬೇಕು ಮತ್ತು ಎಲೆಕ್ಷನ್-ಟು-ಎಲೆಕ್ಷನ್ ಆಧಾರಿತ ವಿಧಾನವು ಜನರನ್ನು ಎಂದಿಗೂ ಕಾಂಗ್ರೆಸ್ ಪಕ್ಷಕ್ಕೆ ಹತ್ತಿರ ತರುವುದಿಲ್ಲ. ಇಷ್ಟೇ ಅಲ್ಲದೆ ಸ್ಥಳೀಯ ನಾಯಕರು ತಮ್ಮ ಜನರ ಅಗತ್ಯತೆಗಳನ್ನು ಪೂರೈಸಲು ದಿನದ 24 ಗಂಟೆಗಳ ಕಾಲವು ಸಹ ಜನರಿಗೆ ಲಭ್ಯವಿರಬೇಕು" ಎಂದರು.
"ಓಲ್ಡ್ ಸಿಟಿಯಲ್ಲಿರುವ ಕಾಂಗ್ರೆಸ್ ಕಚೇರಿಗಳು ನಿರುದ್ಯೋಗಿ ಯುವಕರಿಗೆ ಸಬ್ಸಿಡಿ ಸಾಲ ಪಡೆಯಲು ಮಾರ್ಗದರ್ಶನ ನೀಡಬೇಕು, ಬಡ ಕುಟುಂಬಗಳಿಗೆ ಪಡಿತರ ಚೀಟಿಗಳನ್ನು ಪಡೆಯಲು ಸಹಾಯ ಮಾಡಬೇಕು, ಆರೋಗ್ಯಶ್ರೀ ಅಡಿಯಲ್ಲಿ ಆರೋಗ್ಯ ಮರುಪಾವತಿಯಲ್ಲಿ ಕುಟುಂಬಗಳಿಗೆ ಸಹಾಯ ಮಾಡಬೇಕು ಮತ್ತು ತಮ್ಮನ್ನು ಸಂಪರ್ಕಿಸುವ ಇತರರಿಗೆ ಸಹಾಯ ಮಾಡಬೇಕು" ಎಂದು ಶಬ್ಬೀರ್ ಹೇಳಿದರು.
ರಕ್ತದಾನಿಗಳ ಗುಂಪನ್ನು ಪ್ರಾರಂಭಿಸುವಂತೆ ಅವರು ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದರು ಮತ್ತು ಎನ್ಜಿಒ ಗಳು ಮತ್ತು ವಿವಿಧ ಸರ್ಕಾರಿ ಯೋಜನೆಗಳ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡಲು ಒಳಗೊಂಡಿರುವ ಕಾರ್ಯವಿಧಾನಗಳ ಬಗ್ಗೆ ತಮ್ಮನ್ನು ತಾವು ಅರಿತುಕೊಳ್ಳುವಂತೆ ತಿಳಿಸಿದರು.
"ಓಲ್ಡ್ ಸಿಟಿಯಲ್ಲಿ ಸಾಲಕ್ಕಾಗಿ ಪ್ರತಿದಿನ 10 ಪ್ರತಿಶತಕ್ಕಿಂತ ಹೆಚ್ಚು ಬಡ್ಡಿಯನ್ನು ವಿಧಿಸುತ್ತಿರುವ ಲೇವಾದೇವಿದಾರರ ಶೋಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ, "ಸಣ್ಣ ಮಾರಾಟಗಾರರು, ಆಟೋ ಚಾಲಕರು ಮತ್ತು ಇತರರಿಗೆ ಸಣ್ಣ ಬಡ್ಡಿರಹಿತ ಸಾಲಗಳನ್ನು ಒದಗಿಸಲು ಕಾಂಗ್ರೆಸ್ ವ್ಯವಸ್ಥೆ ಮಾಡುತ್ತದೆ" ಎಂದು ಕೂಡ ಸಲಹೆ ನೀಡಿದರು.
ಕಾಂಗ್ರೆಸ್ ನ ಅನೇಕ ಯೋಜನೆಗಳನ್ನು ತಾವೇ ಶುರು ಮಾಡಿದ್ದು ಅಂತ ಹೇಳಿಕೊಂಡಿದ್ದ ಬಿಆರ್ಎಸ್
"ಹಿಂದಿನ ಕಾಂಗ್ರೆಸ್ ಸರ್ಕಾರಗಳು ಬಡವರು ಮತ್ತು ದುರ್ಬಲ ವರ್ಗಗಳ ಅನುಕೂಲಕ್ಕಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿವೆ. ಆದಾಗ್ಯೂ, ಪ್ರಸ್ತುತ ಬಿಆರ್ಎಸ್ ಸರ್ಕಾರವು ಅನೇಕ ಕಲ್ಯಾಣ ಯೋಜನೆಗಳನ್ನು ದುರ್ಬಲಗೊಳಿಸುವ ಮೂಲಕ ಬಡ ಜನರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಕಾಂಗ್ರೆಸ್ ಪರಿಚಯಿಸಿದ ಕಲ್ಯಾಣ ಯೋಜನೆಗಳನ್ನು ಮರುನಾಮಕರಣ ಮಾಡಿದರು ಮತ್ತು ಟಿಆರ್ಎಸ್ ಸರ್ಕಾರವು ಅವುಗಳನ್ನು ಪ್ರಾರಂಭಿಸಿದಂತೆ ಪ್ರಚಾರ ಮಾಡಿದರು. ಕಾಂಗ್ರೆಸ್ ಸದಸ್ಯರಾಗಿ, ನಾವು ಯಾವುದೇ ಪಕ್ಷಪಾತ ಅಥವಾ ತಾರತಮ್ಯವನ್ನು ತೋರಿಸದೆ ಎಲ್ಲರಿಗೂ ಸಹಾಯ ಮಾಡಬೇಕು" ಎಂದರು.
ಹೆಚ್ಚುತ್ತಿರುವ ಬಡತನ ಮತ್ತು ನಿರುದ್ಯೋಗವನ್ನು ನಿವಾರಿಸಲು ಓಲ್ಡ್ ಸಿಟಿ ನಿವಾಸಿಗಳಿಗೆ ಮೆಟ್ರೋ ರೈಲು ಸಂಪರ್ಕ ಮತ್ತು ಮೂಲಸೌಕರ್ಯ ಯೋಜನೆಗಳ ಅಗತ್ಯವಿದೆ.. ಕಾಂಗ್ರೆಸ್ ಇವುಗಳನ್ನು ಜಾರಿಗೆ ತರುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Rahul Gandhi: ರಷ್ಯಾದಂತೆ ಚೀನಾ ಭಾರತದ ಮೇಲೆ ದಾಳಿ ಮಾಡಬಹುದು! ಕಮಲ್ ಹಾಸನ್ ಇಂಟರ್ ವ್ಯೂನಲ್ಲಿ ರಾಹುಲ್ ಗಾಂಧಿ ಆತಂಕದ ಮಾತು
ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಸಲಹೆಯಂತೆ, ಮಹಾತ್ಮಾ ಗಾಂಧಿ, ಪಂಡಿತ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಮತ್ತು ನಮ್ಮ ಹಿಂದಿನ ಹಿರಿಯ ಆಡಳಿತಗಾರರು ನೀಡಿದ ಕೊಡುಗೆಗಳ ಪ್ರಸ್ತಾಪಕ್ಕೆ ನಾವು ನಮ್ಮನ್ನು ಸೀಮಿತಗೊಳಿಸಿಕೊಳ್ಳಬಾರದು. ಜನರ ಬೆಳವಣಿಗೆಗಾಗಿ ಭವಿಷ್ಯದಲ್ಲಿ ನಾವು ಏನು ಮಾಡಲು ಉದ್ದೇಶಿಸಿದ್ದೇವೆ ಎಂಬುದನ್ನು ಸಹ ನಮ್ಮ ಜನರಿಗೆ ವಿವರವಾಗಿ ಹೇಳಬೇಕು. ಹೈದರಾಬಾದ್ ನ ಹಳೆಯ ನಗರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ನಾವು ಸಾಂಪ್ರದಾಯಿಕ ರಾಜಕೀಯವನ್ನು ಮೀರಿ ಯೋಚಿಸಬೇಕು" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜನವರಿ 26 ರಿಂದ ಪ್ರಾರಂಭವಾಗುವ ಪಕ್ಷದ ರಾಷ್ಟ್ರವ್ಯಾಪಿ "ಹಾಥ್ ಸೇ ಹಾತ್ ಜೋಡೋ" ಅಭಿಯಾನಕ್ಕಾಗಿ ವ್ಯಾಪಕ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ