ದೆಹಲಿ ಘಟಕದ ಅಧ್ಯಕ್ಷರಾಗಿ ಸುಭಾಷ್ ಛೋಪ್ರಾ, ಪ್ರಚಾರ ಸಮಿತಿ ಮುಖ್ಯಸ್ಥರಾಗಿ ಕೀರ್ತಿ ಆಜಾದ್ ಆಯ್ಕೆ ಮಾಡಿದ ಕಾಂಗ್ರೆಸ್

ಸುಭಾಷ್ ಛೋಪ್ರಾ ಆಯ್ಕೆಗೂ ಮುನ್ನ ಡಿಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೀರ್ತಿ ಆಜಾದ್​ ಅವರ ಹೆಸರು ಕೇಳಿಬರುತ್ತಿತ್ತು. ಆದರೆ, ಆಜಾದ್ ಅವರನ್ನು ಡಿಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

HR Ramesh | news18-kannada
Updated:October 24, 2019, 9:01 AM IST
ದೆಹಲಿ ಘಟಕದ ಅಧ್ಯಕ್ಷರಾಗಿ ಸುಭಾಷ್ ಛೋಪ್ರಾ, ಪ್ರಚಾರ ಸಮಿತಿ ಮುಖ್ಯಸ್ಥರಾಗಿ ಕೀರ್ತಿ ಆಜಾದ್ ಆಯ್ಕೆ ಮಾಡಿದ ಕಾಂಗ್ರೆಸ್
ಸುಭಾಷ್ ಛೋಪ್ರಾ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ (ಸಂಗ್ರಹ ಚಿತ್ರ)
  • Share this:
ನವದೆಹಲಿ: ದೆಹಲಿ ಪ್ರದೇಶ ಕಾಂಗ್ರೆಸ್​ ಸಮಿತಿ (ಡಿಪಿಸಿಸಿ) ಅಧ್ಯಕ್ಷರನ್ನಾಗಿ ಸುಭಾಷ್ ಛೋಪ್ರಾ ಅವರನ್ನು ಬುಧವಾರ ಕಾಂಗ್ರೆಸ್ ಪಕ್ಷ ನೇಮಕ ಮಾಡಿ, ಆದೇಶ ಹೊರಡಿಸಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪಕ್ಷದ ಅಧ್ಯಕ್ಷ ಸೋನಿಯಾ ಗಾಂಧಿ, ಡಿಪಿಸಿಸಿ ಅಧ್ಯಕ್ಷರ ಜೊತೆಗೆ ಡಿಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಕೀರ್ತಿ ಆಜಾದ್​ ಅವರನ್ನು ನೇಮಿಸಿದೆ.

ಡಿಪಿಸಿಸಿ ಅಧ್ಯಕ್ಷರಾಗಿದ್ದ ಶೀಲಾ ದೀಕ್ಷಿತ್ ಅವರು ಜುಲೈನಲ್ಲಿ ನಿಧನರಾದ ಕಾರಣ ಆ ಸ್ಥಾನ ತೆರವುಗೊಂಡಿತ್ತು. ಇದೀಗ ಆ ಸ್ಥಾನಕ್ಕೆ ಸುಭಾಷ್ ಛೋಪ್ರಾ ಅವರನ್ನು ಆಯ್ಕೆ ಮಾಡಲಾಗಿದೆ.
ಸುಭಾಷ್ ಛೋಪ್ರಾ ಡಿಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ 1998ರಿಂದ 2003ರ ಜೂನ್​ವರೆಗೂ ದೆಹಲಿ ಘಟಕದ ಅಧ್ಯಕ್ಷರಾಗಿದ್ದರು. ದೆಹಲಿ ವಿಧಾನಸಭೆ ಚುನಾವಣೆಗೆ ಇನ್ನು ಮೂರು ತಿಂಗಳು ಬಾಕಿ ಇರುವಂತೆ ಛೋಪ್ರಾ ಅವರನ್ನು ಡಿಪಿಸಿಸಿ ಅಧ್ಯಕ್ಷರನ್ನಾಗಿ ಎರಡನೇ ಬಾರಿಗೆ ಆಯ್ಕೆ ಮಾಡಲಾಗಿದೆ.

ಕಾಲ್ಕಾಜಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಛೋಪ್ರಾ, 1998ರಲ್ಲಿ ಮೊದಲ ಬಾರಿಗೆ ದೆಹಲಿ ವಿಧಾನಸಭೆ ಪ್ರವೇಶಿಸಿದ್ದರು. ಮತ್ತು 2003 ಮತ್ತು 2008ರಲ್ಲಿ ಶಾಸಕರಾಗಿ ಮರುಆಯ್ಕೆಯಾದರು. 2003ರ ಜೂನ್​ನಿಂದ ಡಿಸೆಂಬರ್​ ಅವಧಿವರೆಗೆ ದೆಹಲಿ ವಿಧಾನಸಭೆ ಸ್ಪೀಕರ್​ ಆಗಿಯೂ ಛೋಪ್ರಾ ಸೇವೆ ಸಲ್ಲಿಸಿದ್ದರು.

ಇದನ್ನು ಓದಿ: ದೆಹಲಿಯ ಅನಧಿಕೃತ ಕಾಲೋನಿಗಳಲ್ಲಿ ಇರುವ 40 ಲಕ್ಷ ಜನರಿಗೆ ಮಾಲೀಕತ್ವದ ಹಕ್ಕು ನೀಡುವ ಪ್ರಸ್ತಾವನೆಗೆ ಕೇಂದ್ರದ ಒಪ್ಪಿಗೆ

ಕಳೆದ ವಿಧಾನಸಭೆ ಚುನಾವಣೆ ಹಾಗೂ ಕಳೆದ ಎರಡು ಲೋಕಸಭೆ ಚುನಾವಣೆಯಲ್ಲಿ ಜಯಶೀಲರಾಗುವಲ್ಲಿ ವಿಫಲರಾದ 71 ವರ್ಷದ ಛೋಪ್ರಾ ಅವರ ಮುಂದೆ ಪಕ್ಷವನ್ನು ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ತರುವ ಕಠಿಣ ಸವಾಲು ಇದೆ. 1970ರಿಂದ 71ರವರೆಗೆ ದೆಹಲಿ ವಿಶ್ವವಿದ್ಯಾಲಯ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಛೋಪ್ರಾ ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡಿದ್ದರು.

ಸುಭಾಷ್ ಛೋಪ್ರಾ ಆಯ್ಕೆಗೂ ಮುನ್ನ ಡಿಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೀರ್ತಿ ಆಜಾದ್​ ಅವರ ಹೆಸರು ಕೇಳಿಬರುತ್ತಿತ್ತು. ಆದರೆ, ಆಜಾದ್ ಅವರನ್ನು ಡಿಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಮಾಜಿ ಕ್ರಿಕೆಟಿಗ ಮತ್ತು ಬಿಹಾರ ಮಾಜಿ ಮುಖ್ಯಮಂತ್ರಿ ಭಾಗವತ್ ಝಾ ಆಜಾದ್​ ಮಗನಾಗಿರುವ ಕೀರ್ತಿ ಆಜಾದ್ ಎರಡು ದಶಕಗಳ ಅಂತರದ ಬಳಿಕ ದೆಹಲಿ ಕಾಂಗ್ರೆಸ್​ಗೆ ಮರಳಿದ್ದಾರೆ. 1993ರಲ್ಲಿ ಗೋಲೆ ಮಾರ್ಕೆಟ್​ ಕ್ಷೇತ್ರದಿಂದ ಮೊದಲ ಬಾರಿಗೆ ಆಜಾದ್​ ಶಾಸಕರಾಗಿ ಆಯ್ಕೆಯಾದರು. ಆದರೆ, ಮುಂದಿನ ಚುನಾವಣೆಯಲ್ಲಿ ಬಿಹಾರದ ಧರ್ಭಾಗಾದಿಂದ ಸ್ಪರ್ಧಿಸಿ, ಸೋತು ಹೋದರು.

ದೆಹಲಿ ಪ್ರದೇಶ ಕಾಂಗ್ರೆಸ್​ ಸಮಿತಿ ಜೊತೆಗೆ ಮಣಿಪುರ ಪ್ರದೇಶ ಕಾಂಗ್ರೆಸ್​ ಸಮಿತಿಗೆ ಗೈಖಾಂಗಮ್ ಅವರನ್ನು ಬದಲಿಸಿ, ಎಂ. ಒಕೆಂದ್ರೊ ಅವರನ್ನು ಪಕ್ಷ ನೇಮಿಸಿದೆ.

First published: October 23, 2019, 9:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading