ನವದೆಹಲಿ: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಲೋಕಸಭೆ ಸಂಸದೆ, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ (Amarindar Singh) ಅವರ ಪತ್ನಿ ಪ್ರಣೀತ್ ಕೌರ್ (Praneet Kaur) ಅವರನ್ನು ಕಾಂಗ್ರೆಸ್ ಪಕ್ಷ ಅಮಾನತು ಮಾಡಿದೆ. ಪ್ರಣೀತ್ ಕೌರ್ ಅವರು ಬಿಜೆಪಿ (BJP) ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪಂಜಾಬ್‌ನ ಕಾಂಗ್ರೆಸ್ (Punjab Congress) ನಾಯಕರು ದೂರು ನೀಡಿರುವ ಹಿನ್ನೆಲೆ ಪಕ್ಷದ ಹೈಕಮಾಂಡ್ ಸಸ್ಪೆಂಡ್ ಮಾಡಿದೆ.
ಪಟಿಯಾಲಾ ಕ್ಷೇತ್ರದ ಲೋಕಸಭೆ ಸಂಸದರಾದ ಪ್ರಣೀತ್ ಕೌರ್ ಅವರು ಬಿಜೆಪಿಗೆ ಸಹಾಯ ಮಾಡುವ ಮೂಲಕ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಪಂಜಾಬ್ ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಸಂಸದೆ ಪ್ರಣೀತ್ ಕೌರ್ ಅವರ ವಿರುದ್ಧ ದೂರು ನೀಡಿದ್ದರು. ಈ ದೂರನ್ನು ಪರಿಗಣಿಸಿದ ಪಕ್ಷದ ಶಿಸ್ತು ಕ್ರಮ ಸಮಿತಿ ಪ್ರಣೀತ್ ಕೌರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಸಂಸದೆಯನ್ನು ಅಮಾನತುಗೊಳಿಸಿದ ಆದೇಶ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: Delhi Liquor Policy: ಮದ್ಯ ಹಗರಣದಲ್ಲಿ ದೆಹಲಿ-ಪಂಜಾಬ್-ಹೈದರಾಬಾದ್‌ನ 35 ಸ್ಥಳಗಳ ಮೇಲೆ ಇಡಿ ದಾಳಿ, ಕೇಜ್ರಿವಾಲ್ ಕಿಡಿ!
ಪ್ರಣೀತ್ ಕೌರ್ ವಿರುದ್ಧ ಹಲವು ಸಲ ದೂರು
ಪಂಜಾಬ್ ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು, ಸಂಸದೆ ಪ್ರಣೀತ್ ಕೌರ್ ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ದೂರು ನೀಡಿದ್ದರು ಎಂದು ಕಾಂಗ್ರೆಸ್ ಪಕ್ಷ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಪಂಜಾಬ್‌ನ ಇನ್ನೂ ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಕೂಡ ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ದೂರನ್ನು ಅಗತ್ಯ ಕ್ರಮಕ್ಕಾಗಿ ಎಐಸಿಸಿಯ ಶಿಸ್ತು ಕ್ರಮ ಸಮಿತಿಗೆ ವರ್ಗಾಯಿಸಲಾಗಿತ್ತು. ಅದನ್ನು ಕೂಲಂಕುಶವಾಗಿ ಪರಿಗಣಿಸಿದ ಪಕ್ಷದ ಶಿಸ್ತು ಕ್ರಮ ಸಮಿತಿ, ಪಟಿಯಾಲದ ಲೋಕಸಭೆ ಸಂಸದೆ ಪ್ರಣೀತ್ ಕೌರ್ ಅವರನ್ನು ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಹೇಳಿದೆ. ಜೊತೆಗೆ ನಿಮ್ಮನ್ನು ಕಾಂಗ್ರೆಸ್ ಪಕ್ಷದಿಂದ ಏಕೆ ಉಚ್ಛಾಟನೆ ಮಾಡಬಾರದು ಎಂದು ಮೂರು ದಿನಗಳ ಒಳಗೆ ವಿವರಣೆ ನೀಡುವಂತೆ ಪ್ರಣೀತ್ ಅವರಿಗೆ ಪಕ್ಷ ಶೋಕಾಸ್ ನೋಟಿಸ್ ನೀಡಿದೆ.
ಇದನ್ನೂ ಓದಿ: Assembly Eletion: ಖರ್ಗೆ ಕೋಟೆಯಲ್ಲಿ ಕಾಂಗ್ರೆಸ್ ಕಹಳೆ, ಕಲ್ಯಾಣ ಕರ್ನಾಟಕದಲ್ಲಿ 40 ಸ್ಥಾನ ಗೆಲ್ಲುವ ಟಾರ್ಗೆಟ್!
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ತಾರೀಕ್ ಅನ್ವರ್, ಸಂಸದೆ ಪ್ರಣೀತ್ ಕೌರ್ ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅವರ ವಿರುದ್ಧ ಪಕ್ಷಕ್ಕೆ ನಿರಂತರ ದೂರುಗಳು ಬರುತ್ತಿದ್ದವು. ಹೀಗಾಗಿ ಕೌರ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪಕ್ಷದ ರಾಜ್ಯ ಘಟಕ ಒತ್ತಾಯಿಸಿತ್ತು. ಈ ದೂರನ್ನು ಆಧರಿಸಿ ಪಕ್ಷದ ಶಿಸ್ತು ಸಮಿತಿಯು ಅವರನ್ನು ಅಮಾನತು ಮಾಡಲು ನಿರ್ಧರಿಸಿದೆ. ಅದರ ಜೊತೆಗೆ ಅವರಿಗೆ ಶೋಕಾಸ್ ನೋಟಿಸ್ ಕೂಡ ನೀಡಲಾಗಿದೆ ಹೇಳಿದ್ದಾರೆ.
ಈ ಹಿಂದೆ ಕಾಂಗ್ರೆಸ್ ತ್ಯಜಿಸಿದ್ದ ಅಮರಿಂದರ್ ಸಿಂಗ್
ಕಾಂಗ್ರೆಸ್ ಪಕ್ಷದಲ್ಲಿ ಸುದೀರ್ಘ ಅವಧಿಯಿಂದ ಪಂಜಾಬ್ ಮುಖ್ಯಮಂತ್ರಿ ಆಗಿದ್ದ ಕ್ಯಾ.ಅಮರಿಂದರ್ ಸಿಂಗ್ ಅವರು 2021 ರಲ್ಲಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಗುಡ್‌ಬೈ ಹೇಳಿದ್ದರು. ಬಳಿಕ ತಮ್ಮದೇ ಆದ ಹೊಸ ಪಕ್ಷ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ ಸ್ಥಾಪಿಸಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಅಮರಿಂದರ್ ಸಿಂಗ್ ಸೇರಿದಂತೆ ಯಾರೊಬ್ಬರೂ ಕೂಡ ಅವರ ಪಕ್ಷದಿಂದ ಗೆಲುವು ಕಂಡಿರಲಿಲ್ಲ. ಬಳಿಕ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ತಮ್ಮ ಹೊಸ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಿದ್ದರು. ಅದರ ಬಳಿಕ ಅಮರಿಂದರ್ ಸಿಂಗ್ ಅವರು ರಾಜಕೀಯವಾಗಿ ಫುಲ್ ಸೈಲೆಂಟ್ ಆಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ